ರಾತ್ರಿ ಮಲಗುವಾಗ ಚಳಿ ತಡೆಯೋಕೆ ಆಗದೆ ಸ್ವೆಟರ್, ಸಾಕ್ಸ್ ಧರಿಸುತ್ತೀರಾ: ಈ ಅಡ್ಡಪರಿಣಾಮಗಳು ಉಂಟಾಗಬಹುದು, ಇರಲಿ ಎಚ್ಚರ
Dec 02, 2024 10:24 AM IST
ರಾತ್ರಿ ಮಲಗುವಾಗ ಚಳಿ ತಡೆಯೋಕೆ ಆಗದೆ ಸ್ವೆಟರ್, ಸಾಕ್ಸ್ ಧರಿಸುತ್ತೀರಾ: ಈ ಅಡ್ಡಪರಿಣಾಮಗಳು ಉಂಟಾಗಬಹುದು, ಇರಲಿ ಎಚ್ಚರ
ಚಳಿ ತುಂಬಾ ಹೆಚ್ಚಾಗುತ್ತಿದ್ದು, ರಾತ್ರಿ ವೇಳೆ ಮಲಗುವಾಗ ಹೊದಿಕೆ ಸಾಲದೆ ಸ್ವೆಟರ್ ಹಾಗೂ ಪಾದಕ್ಕೆ ಸಾಕ್ಸ್ ಧರಿಸಿ ಅನೇಕರು ಮಲಗುತ್ತಾರೆ. ಚಳಿಯಿಂದ ರಕ್ಷಣೆ ಪಡೆಯಲು ಇದು ಉತ್ತಮ ವಿಧಾನವಾದರೂ ಸಹ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರಬಹುದು. ರಾತ್ರಿ ಮಲಗುವಾಗ ಈ ಅಭ್ಯಾಸ ಇದ್ದಲ್ಲಿ ಏನೆಲ್ಲಾ ಅಡ್ಡಪರಿಣಾಮ ಬೀರಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಚಳಿ ತುಂಬಾ ಹೆಚ್ಚಾಗುತ್ತಿದೆ. ಸೂರ್ಯನನ್ನು ಕಾಣದೆ ಕೆಲವು ದಿನಗಳಾಗಿವೆ. ಈ ಚಳಿಯಲ್ಲಿ ಬಹುತೇಕರು ದಿನವಿಡೀ ಸ್ವೆಟರ್, ಸಾಕ್ಸ್ ಧರಿಸಿಕೊಂಡೇ ಇರುತ್ತಾರೆ. ರಾತ್ರಿ ಮಲಗುವಾಗ ಕೂಡ ಹೊದಿಕೆ ಸಾಲದೆ, ಸ್ವೆಟರ್, ಕಾಲಿಗೆ ಸಾಕ್ಸ್ ಧರಿಸಿ ಮಲಗುತ್ತಾರೆ. ಇದರಿಂದ ಚಳಿಗೆ ದೇಹವನ್ನು ಬೆಚ್ಚಗಾಗಿರಿಸುತ್ತದೆ. ಅಲ್ಲದೆ ಉತ್ತಮ ನಿದ್ದೆ ಪಡೆಯಲು ಸಾಧ್ಯ. ಆದರೆ, ರಾತ್ರಿ ಮಲಗುವಾಗ ಸ್ವೆಟರ್, ಸಾಕ್ಸ್ ಧರಿಸಿಕೊಂಡು ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನಿದ್ದೆ ಮಾಡುವಾಗ ಸ್ವೆಟರ್ ಹಾಗೂ ಸಾಕ್ಸ್ ಧರಿಸುವ ಅಭ್ಯಾಸ ನಿಮಗೂ ಇದ್ದರೆ ಈ ದುಷ್ಪರಿಣಾಮಗಳ ಬಗ್ಗೆ ಖಂಡಿತ ನೀವು ತಿಳಿದಿರಲೇಬೇಕು. ಈ ಅಭ್ಯಾಸದಿಂದ ಉಂಟಾಗುವ ಹಾನಿಯೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಸ್ವೆಟರ್ ಧರಿಸಿ ಮಲಗುವ ಅನಾನುಕೂಲಗಳು
ಚಳಿಯಿಂದ ರಕ್ಷಿಸಿಕೊಳ್ಳಲು ಕೆಲವರು ಎರಡು ಅಥವಾ ಅದಕ್ಕಿಂತ ಹೆಚ್ಚು ಹೊದಿಕೆ ಹಾಕಿ ಮಲಗುತ್ತಾರೆ. ಆದರೂ, ಚಳಿ ಚಳಿಯಾಗಬಹುದು, ಅಥವಾ ಎರಡು-ಮೂರು ಹೊದಿಕೆ ಹಾಕುವುದರಿಂದ ಕಿರಿಕಿರಿ ಉಂಟಾಗಬಹುದು. ಈ ಕಾರಣಕ್ಕಾಗಿ ಉಣ್ಣೆ ಬಟ್ಟೆ ಅಥವಾ ಸ್ವೆಟರ್ ಧರಿಸಿ ಮಲಗುತ್ತಾರೆ. ಸ್ವೆಟರ್ ಧರಿಸಿ ಮಲಗುವುದರಿಂದ ಕೆಲವೊಮ್ಮೆ ತುರಿಕೆ, ದದ್ದುಗಳು ಹಾಗೂ ಚರ್ಮದ ಸೋಂಕುಗಳು, ಎಸ್ಜಿಮಾ ಮುಂತಾದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.
ಅಲ್ಲದೆ, ಸ್ವೆಟರ್ ಧರಿಸಿ ಮಲಗುವುದರಿಂದ ರಾತ್ರಿ ವೇಳೆ ಬೆವರಲೂ ಕಾರಣವಾಗಬಹುದು. ಇದು ರಕ್ತದೊತ್ತಡದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಹೃದಯದ ಆರೋಗ್ಯಕ್ಕೂ ಇದು ಉತ್ತಮವಲ್ಲ. ಯಾಕೆಂದರೆ ಸ್ವೆಟರ್ ಧರಿಸಿ ಮಲಗುವುದರಿಂದ ದೇಹದ ಉಷ್ಣತೆಯು ಕೆಲವೊಮ್ಮೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದರಿಂದ ಹೃದ್ರೋಗದ ಅಪಾಯವೂ ಹೆಚ್ಚಾಗಬಹುದು. ಹೀಗಾಗಿ ಸ್ವೆಟರ್ ಬದಲಿಗೆ ಪೂರ್ಣ ತೋಳಿನ ಸಾಮಾನ್ಯ ಉಡುಪುಗಳನ್ನು ಧರಿಸುವುದು ಉತ್ತಮ.
ಸಾಕ್ಸ್ ಧರಿಸಿ ಮಲಗುವ ಅನಾನುಕೂಲಗಳು
ಅನೇಕ ಬಾರಿ ಪಾದಗಳು ತುಂಬಾ ತಣ್ಣಗಿರುತ್ತವೆ. ಹೀಗಾಗಿ ಜನರು ಸಾಕ್ಸ್ ಧರಿಸಿ ಮಲಗುತ್ತಾರೆ. ಆದರೆ, ಈ ಅಭ್ಯಾಸವು ಒಳ್ಳೆಯದಲ್ಲ. ರಾತ್ರಿ ವೇಳೆ ಸಾಕ್ಸ್ ಧರಿಸಿ ಮಲಗುವುದರಿಂದ ಅಧಿಕ ಬಿಸಿಯಾಗಲು ಕಾರಣವಾಗಬಹುದು. ಇದು ಅಹಿತಕರ ಭಾವನೆಯನ್ನು ಉಂಟುಮಾಡಬಹುದು. ಅಲ್ಲದೆ, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ತುರಿಕೆ, ದದ್ದುಗಳು ಹಾಗೂ ಬ್ಯಾಕ್ಟೀರಿಯಾಗಳೂ ಉಂಟಾಗಬಹುದು.
ಸಾಕ್ಸ್‌ಗಳು ಬಿಗಿಯಾಗಿದ್ದರೆ, ಅವು ರಕ್ತಪರಿಚಲನೆಯನ್ನು ನಿಧಾನಗೊಳಿಸಬಹುದು. ಇದಲ್ಲದೆ, ಸಾಕ್ಸ್ ಧರಿಸಿ ಮಲಗುವುದು ಹೃದಯದ ಆರೋಗ್ಯಕ್ಕೂ ಅಪಾಯಕಾರಿಯಾಗಿದೆ. ಬಿಗಿಯಾದ ಸಾಕ್ಸ್ ಧರಿಸಿ ಮಲಗಿದಾಗ, ಅದು ಪಾದಗಳ ನರಗಳ ಮೇಲೆ ಒತ್ತಡವನ್ನು ಬೀರುತ್ತದೆ. ಈ ಕಾರಣದಿಂದಾಗಿ, ರಕ್ತವನ್ನು ಪಂಪ್ ಮಾಡುವಾಗ ಹೃದಯವು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಕೆಲವೊಮ್ಮೆ ಉಸಿರಾಟದ ತೊಂದರೆ ಮತ್ತು ಚಡಪಡಿಕೆ ಉಂಟಾಗಬಹುದು. ಹೀಗಾಗಿ ಸಾಕ್ಸ್ ಧರಿಸಿ ಮಲಗುವಾಗ ಹಗುರ ಹಾಗೂ ಸಡಿಲವಾದ ಬಟ್ಟೆ ಮತ್ತು ಸಾಕ್ಸ್ ಧರಿಸಿ ಮಲಗಬಹುದು.