World Gulab Jamun Day: ರುಚಿಕರ ಗುಲಾಬ್ ಜಾಮೂನ್‌ಗೂ ಇದೆ ಒಂದು ದಿನ; ಇದರ ಇತಿಹಾಸ ತಿಳ್ಕೊಳಿ
Oct 10, 2024 10:30 AM IST
ರುಚಿಕರ ಗುಲಾಬ್ ಜಾಮೂನ್‌ಗೂ ಇದೆ ಒಂದು ದಿನ; ಇದರ ಇತಿಹಾಸ ತಿಳ್ಕೊಳಿ
- ವಿಶ್ವ ಗುಲಾಬ್ ಜಾಮೂನ್ ದಿನದಂದು ಬಗೆಬಗೆಯ ಫ್ಲೇವರ್‌ನ ಜಾಮೂನು ಸವಿಯೋದೆ ಸಂಭ್ರಮ. ಮನೆಯಲ್ಲೇ ಸುಲಭವಾಗಿ ಗುಲಾಬ್ ಜಾಮೂನು ಮಾಡಿಕೊಂಡು ಸವಿಯಬಹುದು. ಅದಕ್ಕೂ ಮೊದಲು ಗುಲಾಬ್ ಜಾಮೂನು ದಿನದ ಇತಿಹಾಸ ತಿಳ್ಕೊಂಡಿರಿ.
ಸಿಹಿ ಸಿಹಿ ಗುಲಾಬ್ ಜಾಮೂನು ಯಾರಿಗೆ ಇಷ್ಟ ಆಗಲ್ಲ ಹೇಳಿ. ಬಾಯಿಗಿಟ್ಟರೆ ಕರಗುವ ಸಕ್ಕರೆ ಪಾಕ ಸಿಹಿಪ್ರಿಯರ ನೆಚ್ಚಿನ ತಿಂಡಿ. ಈ ಗುಲಾಬ್ ಜಾಮೂನಿಗೆ ಒಂದು ದಿನ ಇದೆ ಅನ್ನೋದು ನಿಮಗೆ ಗೊತ್ತಿತ್ತಾ? ಹೌದು, ಇವತ್ತು (ಅಕ್ಟೋಬರ್ 10) ವಿಶ್ವ ಗುಲಾಬ್ ಜಾಮೂನು ದಿನ (World Gulab Jamun Day) . ಈ ರುಚಿಕರ ಸಿಹಿತಿಂಡಿಗೆ ಮೆಚ್ಚುಗೆ ವ್ಯಕ್ತಪಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ. ಭಾರತ ಮಾತ್ರವಲ್ಲದೆ ಗುಲಾಬ್ ಜಾಮೂನಿಗೆ ಜಾಗತಿಕ ಮಟ್ಟದಲ್ಲಿ ಫ್ಯಾನ್ಸ್ ಇದ್ದಾರೆ. ಪ್ರಮುಖ ಹಬ್ಬಗಳಲ್ಲಿ ಡೆಸರ್ಟ್ ಪಟ್ಟಿಯಲ್ಲಿ ಬಹುತೇಕ ಕಾಯಂ ಸ್ಥಾನ ಪಡೆದಿರುವ ಈ ಸಿಹಿ ತಿಂಡಿಯ ದಿನದ ವಿಶೇಷಗಳ ಬಗ್ಗೆ ನೋಡೋಣ.
ವಿಶ್ವ ಗುಲಾಬ್ ಜಾಮೂನ್ ದಿನದ ಇತಿಹಾಸ
ಭಾರತೀಯರಿಗೆ ಗುಲಾಬ್ ಜಾಮೂನ್ ಹೊಸದೇನಲ್ಲ. ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಈ ಸಿಹಿ ತಿಂಡಿ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ದಕ್ಷಿಣ ಏಷ್ಯಾದ ಹಲವು ದೇಶಗಳಲ್ಲಿ ಜನಪ್ರಿಯ. ಹಲವು ಹಬ್ಬಗಳು ಹಾಗೂ ಸಾಂಪ್ರದಾಯಿಕ ಆಚರಣೆಗಳ ಸಂದರ್ಭಗಳಲ್ಲಿ ಇದಕ್ಕೆ ಉನ್ನತ ಸ್ಥಾನವಿದೆ. ಹಲವರು ನೆಚ್ಚಿನ ಸಿಹಿತಿಂಡಿ ಆಗಿರುವ ಕಾರಣದಿಂದ, ಈ ನೆಚ್ಚಿನ ಸಿಹಿಭಕ್ಷ್ಯಕ್ಕಾಗಿಯೂ ಒಂದು ದಿನ ಎಂಬುದನ್ನು ಆಚರಿಸಲಾಗುತ್ತಿದೆ. ಜನರು ತಮ್ಮದೇ ಆದ ರೀತಿಯಲ್ಲಿ ಈ ದಿನವನ್ನು ಸಂಭ್ರಮಿಸುತ್ತಾರೆ.
ನಿಂಬೆಗಾತ್ರದ ಜಾಮೂನ್ ಅನ್ನು ಗುಲಾಬಿ ಸುವಾಸನೆಯ ಸಕ್ಕರೆ ಪಾಕದಲ್ಲಿ ನೆನೆಸಿ ಗುಲಾಬ್ ಜಾಮೂನ್ ತಯಾರಿಸಲಾಗುತ್ತದೆ. ಎಣ್ಣೆಯಲ್ಲಿ ಕರಿದಾಗ ಜಾಮೂನು ಗಟ್ಟಿ ಇರುತ್ತದೆ. ಆದರೆ, ಸಕ್ಕರೆ ಪಾಕದಲ್ಲಿ ನೆನೆಸಿದಾಗ ಅದು ಮೈದುವಾಗುತ್ತದೆ. ಕೆಲವು ಕಡೆ ಮೃದು ಗುಲಾಬ್ ಜಾಮೂನು ಸರ್ವ್ ಮಾಡುವಾಗ ಗೋಡಂಬಿ ಅಥವಾ ಬಾದಾಮಿಗಳಿಂದ ಅಲಂಕರಿಸಲಾಗುತ್ತದೆ.
ವಿಶ್ವ ಗುಲಾಬ್ ಜಾಮೂನ್ ದಿನದ ಆಚರಣೆ ಹೇಗೆ?
ವಿಶ್ವ ಗುಲಾಬ್ ಜಾಮೂನ್ ದಿನವನ್ನು ಆಚರಿಸಲು ನಿರ್ಧಿಷ್ಟ ವಿಧಾನಗಳೇನೂ ಇಲ್ಲ. ನೀವು ನಿಮ್ಮ ಇಷ್ಟದಂತೆ ಜಾಮೂನು ಸವಿಯುವ ಮೂಲಕ ಆಚರಿಸಬಹುದು.
ವಿಶ್ವ ಗುಲಾಬ್ ಜಾಮೂನ್ ದಿನದಂದು ಮೊದಲನೇ ಆದ್ಯತೆಯೇ ಜಾಮೂನು ತಿನ್ನುವುದು. ಈ ದಿನ ರೆಸ್ಟೋರೆಂಟ್‌ಗಳ ಡೆಸರ್ಟ್‌ನಲ್ಲಿ ಬಗೆಬಗೆಯ ಗುಲಾಬ್ ಜಾಮೂನಿಗೆ ಅಗ್ರಸ್ಥಾನ. ನೀವು ಗುಲಾಬ್ ಜಾಮೂನು ಸಿಗುವ ರೆಸ್ಟೋರೆಂಟ್ ಅಥವಾ ಬೇಕರಿಗೆ ಹೋಗಿ ನಿಮಗಿಷ್ಠ ತಿಂಡಿಯನ್ನು ಆರ್ಡರ್ ಮಾಡಿ.
ವಿಶೇಷ ದಿನದ ಆಚರಣೆಯ ಸಲುವಾಗಿ ಮನೆಯಲ್ಲಿಯೇ ಗುಲಾಬ್ ಜಾಮೂನ್ ಮಾಡಿ ಆನಂದಿಸಬಹುದು. ಇದನ್ನು ಮಾಡಿ ಅಂದೇ ತಿನ್ನಬೇಕೆಂದೇನಿಲ್ಲ. ಫ್ರಿಜ್‌ನಲ್ಲಿಟ್ಟು ತಿಂದರೂ ರುಚಿಯಾಗುತ್ತದೆ. ಮನೆಯವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಬೆರೆತು ಗುಲಾಬ್ ಜಾಮೂನ್ ಸವಿಯುವುದೇ ರುಚಿ.
ಆಧುನಿಕ ಕಾಲದಲ್ಲಿ ಗುಲಾಬ್ ಜಾಮೂನ್ ಹಲವು ರೂಪ ಪಡೆದಿದೆ. ಅಡುಗೆ ಪ್ರಿಯರು ಸೃಜನಶೀಲತೆಯೊಂದಿಗೆ ವೈವಿಧ್ಯಮಯ ಜಾಮೂನು ಪಾಕವಿಧಾನ ಪ್ರಯೋಗ ಮಾಡುತ್ತಾರೆ. ಕೆಲವು ಬಾಣಸಿಗರು ವೈವಿಧ್ಯಮಯ ಗುಲಾಬ್ ಜಾಮೂನು ಖಾದ್ಯಗಳನ್ನು ತಯಾರಿಸುತ್ತಾರೆ. ಐಸ್‌ಕ್ರೀಮ್ ಸೇರಿದಂತೆ ಕೆಲವೊಂದು ತಿನಿಸುಗಳೊಂದಿಗೆ ಕಾಂಬಿನೇಶನ್ ಆಗಿಯೂ ಸವಿಯಲು ರುಚಿಯಾಗುತ್ತದೆ.
ರೆಸಿಪಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ