ವಿಶ್ವ ಗುಲಾಬ್ ಜಾಮೂನ್ ದಿನಕ್ಕೆ ವಿಶೇಷ ರೆಸಿಪಿ; ನವರಾತ್ರಿ ಸಂಭ್ರಮ ಹೆಚ್ಚಿಸಲು ಪನೀರ್ ಗುಲಾಬ್ ಜಾಮೂನ್
Oct 10, 2024 12:32 PM IST
ವಿಶ್ವ ಗುಲಾಬ್ ಜಾಮೂನ್ ದಿನಕ್ಕೆ ವಿಶೇಷ ರೆಸಿಪಿ ಪನೀರ್ ಗುಲಾಬ್ ಜಾಮೂನ್
- Paneer Gulab Jamun Recipe: ನವರಾತ್ರಿ ಸಂಭ್ರಮಕ್ಕೆ ಹಬ್ಬದಡುಗೆ ಇದ್ದೇ ಇದೆ. ದಿನಕ್ಕೊಂದು ಸಿಹಿ ಅಡುಗೆ ಅಡುಗೆ ಮಾಡುವ ಯೋಜನೆ ಇದ್ದರೆ, ಇವತ್ತು ನೀವು ಈ ರೆಸಿಪಿ ಟ್ರೈ ಮಾಡಲೇ ಬೇಕು. ಇಂದು ವಿಶ್ವ ಗುಲಾಬ್ ಜಾಮೂನ್ ದಿನ. ಹೀಗಾಗಿ ಜಾಮೂನ್‌ನಲ್ಲಿ ಸ್ವಲ್ಪ ಭಿನ್ನ ಡಿಶ್ ಟ್ರೈ ಮಾಡಿ ನೋಡಿ.
ಇಂದು ವಿಶ್ವ ಗುಲಾಬ್ ಜಾಮೂನ್ ದಿನ. ಜಾಮೂನು ಪ್ರಿಯರು ಖುಷಿಯಿಂದ ಆಚರಿಸುವ ದಿನ. ಜಾಗತಿಕವಾಗಿ ಹಲವು ದೇಶಗಳಲ್ಲಿ ಗುಲಾಬ್ ಜಾಮೂನ್ ಫೇಮಸ್. ಈ ಸಿಹಿತಿಂಡಿಗೆ ಅದರದ್ದೇ ಆದ ಆಭಿಮಾನಿ ಬಳಗವಿದೆ. ಡೆಸರ್ಟ್ ಪ್ರಿಯರ ನೆಚ್ಚಿನ ತಿನಿಸನ್ನು ತಿಂದು ಸಂಭ್ರಮಿಸಲು ಇರುವ ದಿನವೇ ಗುಲಾಬ್ ಜಾಮೂನು ದಿನ. ಸಾಮಾನ್ಯ ಗುಲಾಬ್ ಜಾಮೂನ್ ಹೇಗಿರುತ್ತೆ, ಅದನ್ನು ಹೇಗೆ ಮಾಡುವುದು ಎನ್ನುವುದು ಎಲ್ಲರಿಗೂ ತಿಳಿದಿರುತ್ತೆ. ಯಾಕಂದ್ರೆ ಗುಲಾಬ್ ಜಾಮೂನ್ ಹೊಸ ರೆಸಿಪಿಯೇನಲ್ಲ. ಅಲ್ಲದೆ ಮಾರುಕಟ್ಟೆಯಲ್ಲೂ ಗುಲಾಬ್ ಜಾಮೂನ್ ಮಿಕ್ಸ್ ಸಿಗುತ್ತದೆ. ಅದನ್ನು ಬಳಸಿ ಮನೆಯಲ್ಲಿ ಸುಲಭವಾಗಿ ಜಾಮೂನ್ ಮಾಡಬಹುದು. ನಾವಿಂದು ಹೊಸ ರೆಸಿಪಿಯನ್ನು ನಿಮಗೆ ಹೇಳುತ್ತೇವೆ. ಈ ವಿಶೇಷ ದಿನದಂದು ಮನೆಯಲ್ಲೇ ಮಾಡಿ ತಿನ್ನಿ.
ಇದು ಪನೀರ್ ಗುಲಾಬ್ ಜಾಮೂನ್. ಹೊರಗಡೆ ಸಿಗುವ ಸಿಹಿತಿನಿಸಿಗಿಂತ ಮನೆಯಲ್ಲೇ ಹೊಸ ರೆಸಿಪಿ ಟ್ರೈ ಮಾಡಿ ನೋಡಿ. ಹೇಗೂ ನವರಾತ್ರಿ ಮತ್ತು ದಸರಾ ಸಂಭ್ರಮದ ಸಮಯವಿದು. ಹಬ್ಬದ ದಿನದ ಸಿಹಿ ಅಡುಗೆಯಲ್ಲಿ ಪನೀರ್ ಗುಲಾಬ್ ಜಾಮೂನ್‌ಗೆ ಸ್ಥಾನ ಕೊಟ್ಟು ನೋಡಿ. ಈ ರುಚಿಕರ ಹಾಗೂ ತ್ವರಿತ ಪನೀರ್ ಗುಲಾಬ್ ಜಾಮೂನ್ ರೆಸಿಪಿ ಇಲ್ಲಿದೆ.
ಪನೀರ್ ಗುಲಾಬ್ ಜಾಮೂನ್ ಮಾಡಲು ಬೇಕಾಗುವ ಸಾಮಗ್ರಿಗಳು
- 300 ಗ್ರಾಂ - ಖೋವಾ
- 100 ಗ್ರಾಂ - ಪನೀರ್
- 50 ಗ್ರಾಂ - ಮೈದಾ
- 600 ಗ್ರಾಂ - ಸಕ್ಕರೆ
- 2ರಿಂದ 3 - ಏಲಕ್ಕಿ
- ತುಪ್ಪ ಅಥವಾ ಎಣ್ಣೆ -ಕರಿಯಲು
ಪನೀರ್ ಗುಲಾಬ್ ಜಾಮೂನ್ ಮಾಡುವ ವಿಧಾನ
ಪನೀರ್ ಗುಲಾಬ್ ಜಾಮೂನ್ ಮಾಡಲು ಮೊದಲಿಗೆ ಸಿರಪ್ ತಯಾರಿಸಬೇಕು. ಹೀಗಾಗಿ 2 ಕಪ್ ನೀರಿಗೆ ಸಕ್ಕರೆ ಹಾಕಿ ಅದು ಪಾಕ ಬರುವವರೆಗೆ ಕುದಿಸಿ ಬೇಯಿಸಿ. ಪಾಕ ತುಂಬಾ ದಪ್ಪಗಾಗುವುದು ಬೇಡ. ಈ ಸಿರಪ್‌ಗೆ ಏಲಕ್ಕಿ ಪುಡಿ ಸೇರಿಸಿ.
ಅತ್ತ ಖೋವಾವನ್ನು ಸ್ವಲ್ಪ ಬಿಸಿ ಮಾಡಿ. ಮತ್ತೊಂದೆಡೆ ಪನೀರ್ ಅನ್ನು ಒಂದು ತಟ್ಟೆಗೆ ವರ್ಗಾಯಿಸಿ ಅದನ್ನು ಅಂಗೈಯಿಂದ ಮ್ಯಾಶ್ ಮಾಡಿ. ಈಗ ಖೋವಾ ಮತ್ತು ಪನೀರ್ ಅನ್ನು ಮಿಶ್ರಣ ಮಾಡಿ ಮೃದುವಾಗುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಅದು ಹಿಟ್ಟಿನ ಹಂತಕ್ಕೆ ಬರಬೇಕು. ಈಗ ಅದಕ್ಕೆ ಮೈದಾ ಹಿಟ್ಟನ್ನು ಬೆರೆಸಿ ನಯವಾದ ಮಿಶ್ರಣ ಮಾಡಿಕೊಳ್ಳಿ. ಮಿಶ್ರಣವನ್ನು ಎರಡು ಕೈ ಬಳಸಿ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ. ಎಲ್ಲಾ ಗುಲಾಬ್ ಜಾಮೂನ್ ಒಂದೇ ಗಾತ್ರದಲ್ಲಿರಲಿ.
ಗುಲಾಬ್ ಜಾಮೂನ್ ಅನ್ನು ಡೀಪ್ ಫ್ರೈ ಮಾಡಲು ಬಾಣಲೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಎಣ್ಣೆ ಕಾದ ನಂತರ, ಗುಲಾಬ್ ಜಾಮೂನ್ ಒಂದೊಂದಾಗಿಯೇ ಹಾಕಿ ಮಧ್ಯಮ ಉರಿಯಲ್ಲಿ ಕರಿಯಿರಿ. ತುಸು ಕಂದು ಬಣ್ಣ ಬರುವವರೆಗೆ ಕರಿದು ಸಿರಪ್‌ನಲ್ಲಿ ಹಾಕಿಡಿ. ಎಲ್ಲಾ ಗುಲಾಬ್ ಜಾಮೂನ್‌ಗಳನ್ನು ಸಕ್ಕರೆ ಪಾಕದಲ್ಲಿ ಹಾಕಿ ಕನಿಷ್ಠ 10 ನಿಮಿಷಗಳವರೆಗೆ ಹಾಗೆಯೇ ಬಿಡಿ. ಹೆಚ್ಚು ಹೊತ್ತು ಇದ್ದರೆ ಇನ್ನೂ ಮೃದುವಾಗಿ ರುಚಿಯಾಗುತ್ತದೆ. ಈಗ ರುಚಿಕರವಾದ ಪನೀರ್ ಗುಲಾಬ್ ಜಾಮೂನ್ ಸವಿಯಲು ಸಿದ್ಧವಾಗುತ್ತದೆ. ಹಬ್ಬದ ದಿನ ಮನೆಗೆ ಬರುವ ಅತಿಥಿಗಳು ಹಾಗೂ ಮನೆಯ ಮಕ್ಕಳಿಗೂ ಸರ್ವ್ ಮಾಡಿ.
ಇನ್ನಷ್ಟು ರೆಸಿಪಿಗಳಿಗೆ ಇಲ್ಲಿ ಕ್ಲಿಕ್ ಮಾಡಿ