Covid updates: 5 ವಾರದ ನಂತರ ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ : ಕರ್ನಾಟಕದಲ್ಲೂ ಕಡಿಮೆ
Jan 15, 2024 04:15 PM IST
ಭಾರತದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
- Covid Cases ಭಾರತದಲ್ಲಿ ವಾರದ ಅವಧಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.
ದೆಹಲಿ: ಭಾರತದಲ್ಲಿ 40 ದಿನದಲ್ಲಿ ಏರಿಕೆ ಕಾಣುತ್ತಲೇ ಇದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಈ ವಾರ ಕಡಿಮೆಯಾಗಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ 24 ಗಂಟೆಗಳ ಕೋವಿಡ್ ಪ್ರಕರಣ ಹಾಗೂ ಸಾವಿನ ಸಂಖ್ಯೆಯ ವರದಿಯಲ್ಲಿ ನಿಧಾನವಾಗಿ ಪ್ರಕರಣಗಳು ಇಳಿಕೆಯಾಗಿರುವುದನ್ನು ಉಲ್ಲೇಖಿಸಿದೆ. 24 ಗಂಟೆಗಳ ಅವಧಿಯಲ್ಲಿ 272 ಕೋವಿಡ್ ಸಕ್ರಿಯ ಪ್ರಕರಣಗಳು ಭಾನುವಾರದಿಂದ ಸೋಮವಾರ ಬೆಳಿಗ್ಗೆಯವರೆಗೆ ದಾಖಲಾಗಿವೆ. ಈವರೆಗೂ ದೇಶದಲ್ಲಿ 2,990 ಸಕ್ರಿಯ ಪ್ರಕರಣಗಳಿವೆ. ಇದೇ ಅವಧಿಯಲ್ಲಿ ಯಾವುದೇ ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಸಚಿವಾಲಯವು ಮಾಹಿತಿ ನೀಡಿದೆ.
2023ರ ಡಿಸೆಂಬರ್ 5ರಂದು ಜೆಎನ್ 1 ಉಪತಳಿಯ ಪ್ರಕರಣ ಕಾಣಿಸಿಕೊಂಡ ನಂತರ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಲೇ ಇತ್ತು. ಒಂದೆರಡು ದಿನ ಇಳಿಕೆಯಾದರೂ ಒಟ್ಟಾರೆ ಪ್ರಕರಣ ಹೆಚ್ಚಿದ್ದವು. ಅದರಲ್ಲೂ ಡಿಸೆಂಬರ್ 31ರಂದು ಒಂದೇ ದಿನದಲ್ಲಿ ಭಾರತದಲ್ಲಿ 841 ಪ್ರಕರಣಗಳು ಕಂಡು ಬಂದಿದ್ದವು. ಇದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 4 ಸಾವಿರ ದಾಟಿತ್ತು. ಒಂದು ವಾರದ ಅವಧಿಯಲ್ಲಿ ಪ್ರಕರಣಗಳು ಇಳಿಮುಖವಾಗಿವೆ. ಪ್ರಕರಣ 3 ಸಾವಿರದ ಒಳಗೆ ಕುಸಿದಿವೆ. ದಿನ ವರದಿಯಾಗುವ ಪ್ರಕರಣಗಳೂ ಕಡಿಮೆಯಾಗಿವೆ. ಸಾವಿನ ಪ್ರಕರಣಗಳು ಕಳೆದ ವಾರ 33 ಇದ್ದರೆ ಈ ವಾರ ಅದು 21 ಕುಸಿತ ಕಂಡಿದೆ. ಒಟ್ಟಾರೆ ಶೇ. 25ರಷ್ಟು ಪ್ರಕರಣದಲ್ಲಿ ಇಳಿಕೆ ಕಂಡು ಬಂದಿದೆ. ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ರಾಜ್ಯಗಳಲ್ಲಿಯೂ ಅತ್ಯಧಿಕವಾಗಿದ್ದ ಕೇರಳದಲ್ಲೂ ಶೇ. 60ರಷ್ಟು ಪ್ರಕರಣಗಳು ಇಳಿಕೆಯಾಗಿವೆ. ಹಿಂದಿನ ವಾರ ಸಕ್ರಿಯ ಪ್ರಕರಣಗಳು ಕೇರಳದಲ್ಲಿ 1,109 ಪ್ರಕರಣಗಳಿಂದ ಈಗ 452 ಕ್ಕೆ ಇಳಿಕೆಯಾಗಿದೆ.
ಕರ್ನಾಟಕದಲ್ಲೂ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಹಿಂದಿನ ವಾರದಲ್ಲಿ 1,856 ಕೋವಿಡ್ ಪ್ರಕರಣಗಳಿದ್ದವು. ಸದ್ಯ 1,583 ಪ್ರಕರಣಗಳಿವೆ. ಆದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಮಹಾರಾಷಾರ ರಾಜ್ಯದಲ್ಲೂ ಪ್ರಕರಣಗಳು ಕಡಿಮೆಯಾಗಿವೆ. 915 ರಿಂದ 709 ಕ್ಕೆ ಇಳಿಮುಖವಾಗಿವೆ. ಮುಂಬೈ ಸಹಿತ ಕೆಲವು ಮಹಾನಗರಗಳಲ್ಲಿ ಮುನ್ನೆಚ್ಚರಿಕೆಯನ್ನು ಆರೋಗ್ಯ ಇಲಾಖೆ ವಹಿಸಿದೆ.