Tirumala temple gold plating: ತಿರುಪತಿ ತಿರುಮಲ ದೇಗುಲಕ್ಕೆ ಚಿನ್ನದ ಲೇಪನ ಮುಂದೂಡಿಕೆ, ತಿಮ್ಮಪ್ಪನ ದರ್ಶನ ಸದ್ಯ ಬಂದ್ ಇಲ್ಲ!
Jan 28, 2023 07:16 PM IST
Tirumala temple gold plating: ತಿರುಪತಿ ತಿರುಮಲ ದೇಗುಲಕ್ಕೆ ಚಿನ್ನದ ಲೇಪನ ಮುಂದೂಡಿಕೆ
- Tirumala temple gold plating postpones: ತಿರುಮಲ ದೇಗುಲಕ್ಕೆ ಚಿನ್ನದ ಲೇಪನ ಮಾಡುವ ಕೆಲಸವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅನಿರ್ದಿಷ್ಟ ಅವಧಿಗೆ ಮುಂದೂಡಿದೆ.
ತಿರುಪತಿ: ತಿರುಮಲ ದೇಗುಲಕ್ಕೆ ಚಿನ್ನದ ಲೇಪನ ಮಾಡುವ ಕೆಲಸವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅನಿರ್ದಿಷ್ಟ ಅವಧಿಗೆ ಮುಂದೂಡಿದೆ. "ಚಿನ್ನದ ಲೇಪನದ ಕೆಲಸಕ್ಕಾಗಿ ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ. ನಿರ್ದಿಷ್ಟ ಸಮಯದೊಳಗೆ ಚಿನ್ನದ ಲೇಪನ ಕಾರ್ಯ ಮುಗಿಯುವಂತಾಗಲು ಮತ್ತು ಯಾವುದೇ ವಿಳಂಬ ತಪ್ಪಿಸುವ ಸಲುವಾಗಿ ಜಾಗತಿಕ ಟೆಂಡರ್ ಕರೆಯಲಾಗುತ್ತದೆʼʼ ಎಂದು ಟಿಟಿಡಿ ಆಡಳಿತವು ಮಾಹಿತಿ ನೀಡಿದೆ.
"ಚಿನ್ನದ ಲೇಪನ ಕಾರ್ಯವು ಟಿಟಿಡಯ ಗೋವಿಂದರಾಜ ಸ್ವಾಮಿ ಟೆಂಪಲ್‌ನಲ್ಲಿ ನಡೆಯಲಿದೆ. ತಿರುಮಲ ದೇಗುಲದಲ್ಲಿ ಈ ಸಮಯದಲ್ಲಿ ಸುಮಾರು ಎರಡೂ ವರ್ಷಕ್ಕಿಂತಲೂ ಹೆಚ್ಚು ಸಮಯ ತಿರುಪತಿ ವೆಂಕಟೇಶ್ವರನ ಮೂಲ ಮೂರ್ತಿಯ ದರ್ಶನ ಮಾಡಲು ಭಕ್ತರಿಗೆ ಅವಕಾಶ ದೊರಕುವುದಿಲ್ಲ. ಸದ್ಯ ಚಿನ್ನದ ಲೇಪನ ಮಾಡುವ ಕಾರ್ಯವನ್ನು ಮುಂದೂಡಲಾಗಿದೆʼʼ ಎಂದು ಟಿಟಿಡಿ ಮಾಹಿತಿ ನೀಡಿದೆ.
ಇಂದಿನಿಂದ ಐದಾರು ತಿಂಗಳೊಳಗೆ ಆನಂದ ನಿಲಯಂಗೆ ಚಿನ್ನದ ಲೇಪನ ಕಾರ್ಯಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಗುವುದು ಎಂದು ಟಿಟಿಡಿ ಮಾಹಿತಿ ನೀಡಿದೆ. ಫೆಬ್ರವರಿ ಕೊನೆಯ ವಾರದಲ್ಲಿ ತಿರುಮಲ ದೇಗುಲದಲ್ಲಿ ಚಿನ್ನದ ಲೇಪನ ಕಾರ್ಯ ಮಾಡಲು ಈ ಹಿಂದೆ ಉದ್ದೇಶಿಸಲಾಗಿತ್ತು. ಬಾಲಾಲಯಂನಲ್ಲಿ ತಿರುಪತಿ ತಿಮ್ಮಪ್ಪನ ತದ್ರೂಪಿ ಮೂರ್ತಿ ಪ್ರತಿಷ್ಠಾಪಿಸಿ ಅಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲು ಉದ್ದೇಶಿಸಲಾಗಿತ್ತು.
ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರುಪತಿ ತಿಮ್ಮಪ್ಪನ ದೇಗುಲದ ಆನಂದ ನಿಲಯಂನ ಚಿನ್ನದ ಲೇಪನವನ್ನು ಬದಲಾಯಿಸುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಆನಂದ ನಿಲಯಂ ಅಂದರೆ ಗರ್ಭಗುಡಿಯ ಮೇಲಿರುವ ಮೂರು ಅಂತಸ್ತಿನ "ವಿಮಾನ" (ಗುಮ್ಮಟದ ಆಕಾರದ ಗೋಪುರ). ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುವುದರಿಂದ ಈ ಕಾರ್ಯದಲ್ಲಿ ಯಾವುದೇ ವಿಳಂಬವಾಗುವುದನ್ನು ಟಿಟಿಡಿ ಇಚ್ಚಿಸುವುದಿಲ್ಲ.
ಇದಕ್ಕೂ ಮುನ್ನ 1958 ರಲ್ಲಿ ಆನಂದ ನಿಲಯಕ್ಕೆ ಚಿನ್ನದ ಲೇಪನ ಮಾಡಲಾಗಿದೆ. ಆ ಸಮಯದಲ್ಲಿ ಚಿನ್ನದ ಲೇಪನ ಮಾಡಲು ಸುಮಾರು ಎಂಟು ವರ್ಷ ಬೇಕಾಗಿತ್ತು. ಕ್ರಿ.ಶ 839 ರಲ್ಲಿ ಪಲ್ಲವ ರಾಜ ವಿಜಯ ದಂತಿವರ್ಮನ್ ಅವರು ಮೊದಲ ಬಾರಿಗೆ ಚಿನ್ನದ ಲೇಪನವನ್ನು ಮಾಡಿದ್ದರು. ಲಭ್ಯವಿರುವ ದಾಖಲೆಗಳ ಪ್ರಕಾರ, ಅಂದಿನಿಂದ, 1958 ರ ಪ್ರಯತ್ನವನ್ನು ಒಳಗೊಂಡಂತೆ, ಇಲ್ಲಿನ ಗೋಪುರದ ಚಿನ್ನದ ಲೇಪನವನ್ನು ಏಳು ಬಾರಿ ಬದಲಾಯಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ.
2018 ರಲ್ಲಿ ಟಿಟಿಡಿ ಪ್ರಕಟಿಸಿದ ತಮಿಳು ವಿದ್ವಾಂಸ ಎಂ ವರದರಾಜನ್ ಅವರು ಬರೆದ “ಆನಂದ ನಿಲಯಂ ವಿಮಾನದ ಮಹತ್ವ” ಎಂಬ ಲೇಖನದ ಪ್ರಕಾರ, ತಿರುಮಲ ದೇವಸ್ಥಾನದ ಗೋಪುರವು ಮೂರು ಅಂತಸ್ತಿನ ರಚನೆಯಾಗಿದ್ದು, ಅದರ ಚೌಕದ ತಳವು 27.4 ಅಡಿ ಮತ್ತು ಪರಿಧಿಯು 37.8 ಅಡಿ. ಎತ್ತರವಿದೆ. ವರದರಾಜನ್ ಪ್ರಕಾರ, ಮೊದಲ ಎರಡು ಹಂತಗಳು ಆಯತಾಕಾರದಲ್ಲಿವೆ ಮತ್ತು ಮೂರನೆಯ ಹಂತವು ವೃತ್ತಾಕಾರದಲ್ಲಿದೆ.
"ಈಗಿನ ದೇಗುಲದ ಸಮೀಪದಲ್ಲಿ ತಾತ್ಕಾಲಿಕ ದೇವಾಲಯ "ಬಾಲಾಲಯʼʼ ನಿರ್ಮಿಸಲಾಗುವುದು. ಭಕ್ತರಿಗೆ ದೇವರ ದರ್ಶನಕ್ಕೆ ತಡೆಯಾಗದಂತೆ ವೆಂಕಟೇಶ್ವರ ದೇವರ ಪ್ರತಿಕೃತಿ ಮೂರ್ತಿಯನ್ನು ಸ್ಥಾಪಿಸಲಾಗುವುದುʼʼ ಎಂದು ಟಿಟಿಡಿ ಅಧ್ಯಕ್ಷರಾದ ವೈವಿ ಸುಬ್ಬಾ ರೆಡ್ಡಿ ಈ ಹಿಂದೆ ಹೇಳಿದ್ದರು.
"ಧಾರ್ಮಿಕ ನಿಯಮಗಳಂತೆ ಈ ತಾತ್ಕಾಲಿಕ ದೇವಾಲಯ ನಿರ್ಮಿಸಲಾಗುತ್ತದೆ. ಮೂಲ ದೇವಾಲಯದ ಮೇಲಿನ ಆನಂದ ನಿಲಯದ ಚಿನ್ನದ ಲೇಪನ ಪೂರ್ಣಗೊಳ್ಳುವ ತನಕ ಈ ವ್ಯವಸ್ಥೆ ಮುಂದುವರೆಯುತ್ತದೆ. ಇದಕ್ಕೆ ಆರರಿಂದ ಎಂಟು ತಿಂಗಳು ಬೇಕಾಗಬಹುದುʼʼ ಎಂದು ಸುಬ್ಬಾ ರೆಡ್ಡಿಯವರು ಮಾಹಿತಿ ನೀಡಿದ್ದರು. ಈ ಕುರಿತ ವಿವರವಾದ ಸುದ್ದಿ ಇಲ್ಲಿದೆ.