ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬರೋಬ್ಬರಿ 3 ಲಕ್ಷ ಕಾಂಡೋಮ್ ವಿತರಣೆ; ರತಿಕ್ರೀಡೆಯ ಹಿಂದಿದೆ ದಶಕಗಳ ಇತಿಹಾಸ
Oct 07, 2024 10:45 AM IST
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬರೋಬ್ಬರಿ 3 ಲಕ್ಷ ಕಾಂಡೋಮ್ ವಿತರಣೆ; ರತಿಕ್ರೀಡೆಯ ಹಿಂದಿದೆ ದಶಕಗಳ ಇತಿಹಾಸ
Paris 2024 Olympics: ಪ್ಯಾರಿಸ್ ಒಲಿಂಪಿಕ್ಸ್-2024ರಲ್ಲಿ ಭಾಗವಹಿಸುವ 206 ದೇಶಗಳ 10500 ಕ್ರೀಡಾಪಟುಗಳಿಗೆ 3 ಲಕ್ಷ ಕಾಂಡೋಮ್ಗಳನ್ನು ವಿತರಿಸುವುದಾಗಿ ಕ್ರೀಡಾ ಆಯೋಜಕರು ಸಜ್ಜಾಗಿದ್ದಾರೆ.
ಸಿಟಿ ಆಫ್ ಲವ್ ಎಂದೇ ಖ್ಯಾತಿ ಪಡೆದ ಪ್ಯಾರಿಸ್ನಲ್ಲಿ ಜುಲೈ 26ರಿಂದ ಶುರುವಾಗುವ ಒಲಿಂಪಿಕ್ಸ್ಗೆ ದಿನಗಣನೆ ಶುರುವಾಗಿದೆ. ಆದರೆ, 33ನೇ ಒಲಿಂಪಿಕ್ಸ್ ಕುರಿತು ದಿನದಿಂದ ದಿನಕ್ಕೆ ಒಂದೊಂದು ಮಾಹಿತಿ ಬಯಲಿಗೆ ಬರುತ್ತಿದೆ. ಇದೇ ವೇಳೆ ಕ್ರೀಡಾಪಟುಗಳ ನಡುವಿನ ದೈಹಿಕ ಅನ್ಯೋನ್ಯತೆಯ ಮೇಲಿನ ನಿಷೇಧವನ್ನು ಸರ್ಕಾರ ತೆಗೆದುಹಾಕಿದೆ. 206 ದೇಶಗಳಿಂದ 10,500 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದು, ಈ ಎಲ್ಲಾ ಅಥ್ಲೀಟ್ಗಳಿಗೆ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಕಾಂಡೋಮ್ ವಿತರಿಸಲು ಕ್ರೀಡಾ ಆಯೋಜಕರು ಸಜ್ಜಾಗಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳ ಲೈಂಗಿಕ ಪ್ರಕ್ರಿಯೆ ಸಾಮಾನ್ಯ. ಇದು ಕ್ರೀಡಾಪಟುಗಳನ್ನು ಒತ್ತಡ ಮುಕ್ತರನ್ನಾಗಿ ಮಾಡುವುದಲ್ಲದೆ, ಲೈಂಗಿಕ ಕ್ರಿಯೆಯಲ್ಲಿ ತೊಡಗುವವರಿಗೆ ಮತ್ತು ಎಚ್‌ಐವಿಯಂತಹ ರೋಗ ತಡೆಗಟ್ಟಲು ತುಂಬಾ ಸಹಾಯ ಮಾಡುತ್ತದೆ. ಆದರೆ, 2020ರ ಟೊಕಿಯೊ ಒಲಿಂಪಿಕ್ಸ್ನಲ್ಲಿ (2021ರಲ್ಲಿ ಟೂರ್ನಿ ನಡೆದಿತ್ತು) ಲೈಂಗಿಕ ಕ್ರಿಯೆಗೆ ನಿರ್ಬಂಧ ಹೇರಲಾಗಿತ್ತು. ಮಹಾಮಾರಿ ಕೊರೊನಾ ಆತಂಕದ ಕಾರಣ ಕಾಂಡೋಮ್ ವಿತರಿಸಲು ಅವಕಾಶ ನೀಡಿರಲಿಲ್ಲ.
ಕಳೆದ ಬಾರಿಯ ಒಲಿಂಪಿಕ್ಸ್ನಲ್ಲಿ ಅನ್ಯೋನ್ಯತೆ ಮೇಲೆ ಹೇರಲಾಗಿದ್ದ ನಿಷೇಧವನ್ನು ಈ ಬಾರಿ ತೆಗೆದು ಹಾಕಲಾಗಿದೆ ಎಂದು ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ತಿಳಿಸಿದ್ದಾರೆ. ಈ ವೇಳೆ ಉಚಿತವಾಗಿ ಕಾಂಡೋಮ್ ವಿತರಿಸಲಿದ್ದೇವೆ. ಕ್ರೀಡಾಪಟುಗಳ ಬೇಡಿಕೆಗೆ ಅನುಗುಣವಾಗಿ ವಿತರಣೆ ಮಾಡಲಾಗುವುದು ಎಂದು ಒಲಿಂಪಿಕ್ ಕ್ರೀಡಾಗ್ರಾಮದ ನಿರ್ದೇಶಕ ಲಾರೆಂಟ್ ಮಿಚೌಡ್ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಆದರೆ ಕಾಂಡೋಮ್ ವಿತರಣೆಗೆ ಇತಿಹಾಸವೇ ಇದೆ. ಕಾಂಡೋಮ್ ವಿತರಣೆ ಶುರುವಾಗಿದ್ಹೇಗೆ?
ಕಾಂಡೋಮ್ ವಿತರಣೆ ಇತಿಹಾಸ ಹೀಗಿದೆ
ಒಲಿಂಪಿಕ್ಸ್ನಲ್ಲಿ ಕಾಂಡೋಮ್ ವಿತರಿಸುವ ಅಭ್ಯಾಸ ಹೊಸದೇನಲ್ಲ. ಇದಕ್ಕೊಂದು ಇತಿಹಾಸವೇ ಇದೆ. ಎಚ್ಐವಿ ಮತ್ತು ಏಡ್ಸ್ ಬಗ್ಗೆ ಜಾಗೃತಿ ಮೂಡಿಸಲು 1988ರ ಸಿಯೋಲ್ ಒಲಿಂಪಿಕ್ಸ್ನಲ್ಲಿ ಸುಮಾರು 8,500 ಕಾಂಡೋಮ್ಗಳನ್ನು ವಿತರಿಸಲಾಗಿತ್ತು. ಆದಾಗ್ಯೂ, ಈ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2000ರ ಸಿಡ್ನಿ ಒಲಿಂಪಿಕ್ಸ್ನಲ್ಲಿ ಆಯೋಜಕರು 70,000 ಕಾಂಡೋಮ್ಗಳ ವ್ಯವಸ್ಥೆ ಮಾಡಿದ್ದರು. ಆದರೂ ಇವು ಕೊರತೆಯಾಯಿತು. ಹಾಗಾಗಿ ಹೆಚ್ಚುವರಿ 20,000 ಕಾಂಡೋಮ್ ತರಬೇಕಾಯಿತು.
4.50 ಲಕ್ಷ ಕಾಂಡೋಮ್ ವಿತರಣೆ
2016ರ ರಿಯೋ ಒಲಿಂಪಿಕ್ಸ್ನಲ್ಲಿ 4,50,000 ಪುರುಷ ಮತ್ತು ಮಹಿಳಾ ಕಾಂಡೋಮ್ಗಳನ್ನು ವಿತರಿಸಲಾಗಿತ್ತು. ಟೊಕಿಯೊದಲ್ಲಿ ಲೈಂಗಿಕ ಕ್ರಿಯೆ ನಿಷೇಧದ ಹೊರತಾಗಿಯೂ, ಸಂಘಟಕರು 150,000 ಕಾಂಡೋಮ್ಗಳನ್ನು ವಿತರಿಸಿದ್ದರು. ಆದರೆ ಈ ಕಾಂಡೋಮ್ಗಳನ್ನು ಕ್ರೀಡಾ ಗ್ರಾಮದಲ್ಲಿ ಬಳಸುವಂತಿರಲಿಲ್ಲ. ಆದರೆ ಕ್ರೀಡಾಗ್ರಾಮದ ಹೊರಗೆ ಬಳಸಲು ಈ ವ್ಯವಸ್ಥೆ ಮಾಡಲಾಗಿತ್ತು. ಆ ಮೂಲಕ ಕೊರೊನಾ ಹರಡದಂತೆ ಸಾಕಷ್ಟು ಎಚ್ಚರಿಕೆ ವಹಿಸಲಾಗಿತ್ತು ಎಂದು ರಾಯಿಟರ್ಸ್ ವರದಿ ಮಾಡಿತ್ತು.
ಆದರೆ ಈ ಬಾರಿ ಕ್ರೀಡಾಪಟುಗಳು ತುಂಬಾ ಉತ್ಸಾಹ ಮತ್ತು ಆರಾಮದಾಯಕವಾಗಿರುವ ಕೆಲವು ಸ್ಥಳಗಳನ್ನು ರಚಿಸಲು ನಾವು ಬಯಸಿದ್ದೇವೆ ಎಂದು ಲಾರೆಂಟ್ ಮಿಚೌಡ್ ಹೇಳಿದ್ದಾರೆ. ಕ್ರೀಡಾಪಟುಗಳಿಗೆ ನೀಡಲಾಗುವ ಆಹಾರದ ಬಗ್ಗೆಯೂ ಮಿಚೌಡ್ ಹಂಚಿಕೊಂಡಿದ್ದಾರೆ. ಇಲ್ಲಿನ ವಿಶೇಷತೆ ಊಟದ ವ್ಯವಸ್ಥೆಯನ್ನು ಕ್ರೀಡಾಪಟುಗಳು ಇಷ್ಟಪಡುತ್ತಾರೆ. ಪೌಷ್ಠಿಕಾಂಶ ಮತ್ತು ಅವರ ಕಾರ್ಯಕ್ಷಮತೆಯ ಅಗತ್ಯಗಳಿಗೆ ತಕ್ಕಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ಸ್ಕೈ ನ್ಯೂಸ್ಗೆ ತಿಳಿಸಿದ್ದಾರೆ.