ಪದಕ ಗೆಲ್ಲುವ ನೆಚ್ಚಿನವರಾಗಿ ಪ್ಯಾರಿಸ್ ಒಲಂಪಿಕ್ಸ್​ಗೆ ಅರ್ಹತೆ ಪಡೆಯದ​ ಭಾರತದ ಸ್ಟಾರ್ ಕ್ರೀಡಾಪಟುಗಳು
ಕನ್ನಡ ಸುದ್ದಿ  /  ಕ್ರೀಡೆ  /  ಪದಕ ಗೆಲ್ಲುವ ನೆಚ್ಚಿನವರಾಗಿ ಪ್ಯಾರಿಸ್ ಒಲಂಪಿಕ್ಸ್​ಗೆ ಅರ್ಹತೆ ಪಡೆಯದ​ ಭಾರತದ ಸ್ಟಾರ್ ಕ್ರೀಡಾಪಟುಗಳು

ಪದಕ ಗೆಲ್ಲುವ ನೆಚ್ಚಿನವರಾಗಿ ಪ್ಯಾರಿಸ್ ಒಲಂಪಿಕ್ಸ್​ಗೆ ಅರ್ಹತೆ ಪಡೆಯದ​ ಭಾರತದ ಸ್ಟಾರ್ ಕ್ರೀಡಾಪಟುಗಳು

Paris Olympics 2024: ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದಿದ್ದ ಇಬ್ಬರು ಸೇರಿ ಪ್ರಮುಖ ಕ್ರೀಡಾಪಟುಗಳು ಪ್ಯಾರಿಸ್ ಒಲಿಂಪಿಕ್ಸ್​​ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಅವರ ಪಟ್ಟಿ ಇಂತಿದೆ.

ಪದಕ ಗೆಲ್ಲುವ ನೆಚ್ಚಿನವರಾಗಿ ಪ್ಯಾರಿಸ್ ಒಲಂಪಿಕ್ಸ್​​ ಟಿಕೆಟ್ ಕಳೆದುಕೊಂಡ ಭಾರತದ ಸ್ಟಾರ್ ಕ್ರೀಡಾಪಟುಗಳು
ಪದಕ ಗೆಲ್ಲುವ ನೆಚ್ಚಿನವರಾಗಿ ಪ್ಯಾರಿಸ್ ಒಲಂಪಿಕ್ಸ್​​ ಟಿಕೆಟ್ ಕಳೆದುಕೊಂಡ ಭಾರತದ ಸ್ಟಾರ್ ಕ್ರೀಡಾಪಟುಗಳು

ಜುಲೈ 26 ರಿಂದ ಪ್ಯಾರಿಸ್ ಒಲಿಂಪಿಕ್ಸ್​​ ಕ್ರೀಡಾಕೂಟದಲ್ಲಿ ಭಾರತದ ಪರ 117 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಟೊಕಿಯೊ ಒಲಿಂಪಿಕ್ಸ್​ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳ ಸಂಖ್ಯೆಗಿಂತಲೂ ಈ ಬಾರಿ ಕಡಿಮೆ. ಕಳೆದ ಒಲಿಂಪಿಕ್ಸ್​​​ನಲ್ಲಿ 7 ಮೆಡಲ್ಸ್ ಗೆದ್ದ ಭಾರತ, ಈ ಬಾರಿ ಅದರ ಸಂಖ್ಯೆ ಎರಡಂಕಿ ದಾಟಿಸುವ ಧ್ಯೇಯ ಹೊಂದಿದೆ. ಆದರೆ ಪ್ಯಾರಿಸ್ ಒಲಿಂಪಿಕ್ಸ್​ಗೆ ಟಿಕೆಟ್ ಪಡೆಯಲು ವಿಫಲರಾದ ಟಾಪ್​-5 ತಾರಾ ಕ್ರೀಡಾಪಟುಗಳು ಯಾರು ಎಂಬುದನ್ನು ಈ ಮುಂದೆ ನೋಡಿ.

ಕಿಡಂಬಿ ಶ್ರೀಕಾಂತ್: ವಿಶ್ವದ ಮಾಜಿ ನಂಬರ್​ 1 ಬ್ಯಾಡ್ಮಿಂಟನ್​ ಆಟಗಾರ ಕಿಡಂಬಿ ಶ್ರೀಕಾಂತ್ ಸತತ 2ನೇ ಬಾರಿಗೆ ಒಲಿಂಪಿಕ್ಸ್​​ಗೆ ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಶ್ರೀಕಾಂತ್ ಕಳೆದ ಆಲ್ ಇಂಗ್ಲೆಂಡ್ ಓಪನ್ ಸೇರಿದಂತೆ 11 ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್​​ಗಳ ಪೈಕಿ 10 ರಲ್ಲಿ ಮೊದಲ ಅಥವಾ 2ನೇ ಸುತ್ತುಗಳಲ್ಲೇ ಸೋತಿದ್ದಾರೆ. ಹಾಗಾಗಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ನಿಗದಿಪಡಿಸಿದ್ದ ಕನಿಷ್ಠ 16ರ ರೊಳಗಿನ ರ್ಯಾಂಕಿಂಗ್ ಪಟ್ಟಿಯಿಂದ ಅವಕಾಶ ಪಡೆಯಲು ವಿಫಲರಾಗಿದ್ದರು. ಒಂದು ವೇಳೆ ಅವರು ಈ ಸಾಧನೆ ಮಾಡಿದ್ದರೆ, ಪುರುಷರ ಸಿಂಗಲ್ಸ್​​ನಲ್ಲಿ ಸ್ಪರ್ಧಿಸಬಲ್ಲ ಎರಡನೇ ಆಟಗಾರ ಆಗುತ್ತಿದ್ದರು. ಎಚ್​ಎಸ್ ಪ್ರಣಯ್ ಮಾತ್ರ ಸಿಂಗಲ್ಸ್​ನಲ್ಲಿ ಆಯ್ಕೆಯಾಗಿದ್ದಾರೆ.

ಬಜರಂಗ್ ಪೂನಿಯಾ: 2020ರ ಟೊಕಿಯೊ ಒಲಿಂಪಿಕ್ಸ್​​ನಲ್ಲಿ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದ ಬಜರಂಗ್ ಪೂನಿಯಾ, ಈ ವರ್ ಮಾರ್ಚ್​​ನಲ್ಲಿ ನಡೆದ ಆಯ್ಕೆ ಟ್ರಯಲ್ಸ್​​ನಲ್ಲಿ ನಿರಾಸೆ ಅನುಭವಿಸಿದರು. ಈ ಬಾರಿ ಚಿನ್ನ ಗೆಲ್ಲುವ ಪ್ರಮುಖ ಆಟಗಾರ ಆಗಿದ್ದ ಪೂನಿಯಾ, ಟ್ರಯಲ್ಸ್​​ನಲ್ಲಿ ಪುರುಷರ ಫ್ರೀಸ್ಟೈಲ್ 65 ಕೆಜಿ ಸೆಮಿಫೈನಲ್​​ನಲ್ಲಿ ರೋಹಿತ್ ಕುಮಾರ್ ವಿರುದ್ಧ 1-9 ಅಂತರದಿಂದ ಮುಖಭಂಗಕ್ಕೆ ಒಳಗಾಗಿದ್ದರು. ಹೀಗಾಗಿ ಒಲಿಂಪಿಕ್ ಅರ್ಹತಾ ಪಂದ್ಯಗಳ ನಂತರ ಮತ್ತೆ ಟ್ರಯಲ್ ನಡೆಸದಿರಲು ಡಬ್ಲ್ಯುಎಫ್ಐ ನಿರ್ಧರಿಸಿದ ಕಾರಣ ಪೂನಿಯಾ ಕನಸು ಭಗ್ನಗೊಂಡಿತು. ಡಬ್ಲ್ಯುಎಫ್ಐ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಪ್ರತಿಭಟನೆಯಲ್ಲಿ ಪೂನಿಯಾ ಭಾಗವಹಿಸಿದ್ರು.

ರವಿ ದಹಿಯಾ: ಟೊಕಿಯೊ ಒಲಿಂಪಿಕ್ಸ್-2020​​ರಲ್ಲಿ ಭಾರತದ 2ನೇ ಬೆಳ್ಳಿ ಪದಕ ವಿಜೇತ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದ ರವಿ ದಹಿಯಾ, ಏಷ್ಯನ್ ಒಲಿಂಪಿಕ್ ಅರ್ಹತಾ ಪಂದ್ಯಗಳಿಗೆ ಈ ವರ್ಷದ ಮಾರ್ಚ್‌ನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಸೋತು ನಿರಾಸೆ ಅನುಭವಿಸಿದರು. ದೀರ್ಘಕಾಲದ ಗಾಯದಿಂದ ಹಿಂತಿರುಗುತ್ತಿದ್ದ ದಹಿಯಾ, ಅಮನ್ ಶೆಹ್ರಾವತ್ ವಿರುದ್ಧ ಸೋತು ಶರಣಾಗಿದ್ದರು. ಆದರೆ, 2023ರಲ್ಲಿ ಸ್ಪರ್ಧಿಸಿದ ಪ್ರತಿ ಟೂರ್ನಿಯಲ್ಲೂ ಸೋತಿದ್ದ ಅಮನ್ ಶೆಹ್ರಾವತ್ 57 ಕೆಜಿ ಪುರುಷರ ಫ್ರೀಸ್ಟೈಲ್​​ನಲ್ಲಿ ಗೆದ್ದು ಅವಕಾಶ ಪಡೆದರು.

ಮುರಳಿ ಶ್ರೀಶಂಕರ್‌: ಕಳೆದ ವರ್ಷ ಥೈಲ್ಯಾಂಡ್​ನ ಬ್ಯಾಂಕಾಕ್​ನಲ್ಲಿ ಜರುಗಿದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​​-2023ರಲ್ಲಿ ಪುರುಷರ ಒಲಿಂಪಿಕ್ಸ್ ಲಾಂಗ್ ಜಂಪ್ ಅರ್ಹತಾ ಮಾನದಂಡದ 8.27 ಮೀಟರ್​​ ಜಿಗಿದಿದ್ದ ಮುರಳಿ ಶ್ರೀಶಂಕರ್ ಒಲಿಂಪಿಕ್ಸ್​ಗೆ ಆಯ್ಕೆಯಾಗಿದ್ದರು. ಕೂಟದಲ್ಲಿ ಅವರು 8.27 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದಿದ್ದರು. ಆದಾಗ್ಯೂ, ಈ ವರ್ಷದ ಏಪ್ರಿಲ್​ನಲ್ಲಿ ಅಭ್ಯಾಸದ ನಡೆಸುತ್ತಿದ್ದ ವೇಳೆ ಗಾಯಗೊಂಡು 2024ರ ಪ್ಯಾರಿಸ್​ ಒಲಿಂಪಿಕ್ಸ್​ನಿಂದ ಹೊರ ಬಿದ್ದರು.

ಅಭಾ ಖತುವಾ: ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಂಡಿದ್ದ ಶಾಟ್ ಪುಟ್ ಸ್ಪರ್ಧಿ ಅಭಾ ಖತುವಾ ಅವರ ಹೆಸರು ಅಂತಿಮ ಪಟ್ಟಿಯಲ್ಲಿಲ್ಲ. ಇತ್ತೀಚೆಗೆ ಪ್ರಕಟವಾದ 117 ಕ್ರೀಡಾಪಟುಗಳ ಪಟ್ಟಿಯಲ್ಲಿ ಅಭಾ ಹೆಸರು ಕಾಣೆಯಾಗಿದೆ. ಅವರ ಹೆಸರನ್ನು ಏಕೆ ತೆಗೆದುಹಾಕಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ.

ಮಹಿಳಾ ಹಾಕಿ ತಂಡ: ಟೊಕಿಯೊ ಒಲಿಂಪಿಕ್ಸ್​ ನಂತರ ನಾಯಕಿ ರಾಣಿ ರಾಂಪಾಲ್ ಅವರನ್ನು ಕೋಚ್​ ಜನ್ನೆಕ್ ಸ್ಕೋಪ್ಮನ್ ಅವರು ತಂಡದಿಂದ ಹೊರಗಿಟ್ಟರು. ಇದು ಹಾಕಿ ತಂಡದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಲು ಕಾರಣವಾಯಿತು. ಏಷ್ಯನ್ ಗೇಮ್ಸ್​​ನಲ್ಲಿ ಚಿನ್ನ ಕಳೆದುಕೊಂಡಿದ್ದ ಭಾರತ ಮಹಿಳಾ ಹಾಕಿ ತಂಡ, ಪ್ಯಾರಿಸ್​ಗೆ ಟಿಕೆಟ್ ಕಾಯ್ದಿರಿಸಲು ಒಲಿಂಪಿಕ್ ಅರ್ಹತಾ ಪಂದ್ಯ ಎದುರಿಸಿತು. ಆದರೂ, ಭಾರತ ತಂಡವು ಜರ್ಮನಿ ವಿರುದ್ಧ ಪೆನಾಲ್ಟಿ ಶೂಟೌಟ್​​​ನಲ್ಲಿ ಸೋತು ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ವಿಫಲವಾಯಿತು. ಈ ಅರ್ಹತಾ ಸುತ್ತಿನಲ್ಲಿ ಅಗ್ರ-3 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದರೊಂದಿಗೆ ಒಲಿಂಪಿಕ್ಸ್ ಕನಸು ಭಗ್ನಗೊಂಡಿತು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.