ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ; ಶರತ್ ಕಮಲ್-ಪಿವಿ ಸಿಂಧು ಭಾರತದ ಧ್ವಜಧಾರಿಗಳು, ಲಿಂಗಸಮಾನತೆಗೆ ಒತ್ತು
Jul 26, 2024 02:41 PM IST
ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ; ಶರತ್ ಕಮಲ್-ಪಿವಿ ಸಿಂಧು ಭಾರತದ ಧ್ವಜಧಾರಿಗಳು
- ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಟೇಬಲ್ ಟೆನಿಸ್ ದಿಗ್ಗಜ ಶರತ್ ಕಮಲ್, ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿದ್ದಾರೆ. ಇಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸಾಂಪ್ರದಾಯಿಕ ಉಡುಗೆಯೊಂದಿಗೆ ಇವರು ಸಮಾರಂಭದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಇಂದು ವರ್ಣರಂಜಿತ ಚಾಲನೆ ಸಿಗಲಿದೆ. ಫ್ರಾನ್ಸ್‌ನ ರಾಜಧಾನಿಯ ಜೀವನದಿ ಸೀನ್ ನದಿ ಮೇಲೆ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಗತ್ತಿನ 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ದೋಣಿಯ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅಧಿಕೃತವಾಗಿ ಕಾಲಿಡಲಿದ್ದಾರೆ. ಜುಲೈ 26ರ ಶುಕ್ರವಾರ ರಾತ್ರಿ ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ ನಿಗದಿಯಾಗಿದೆ. ಭಾರತದ ಕಾಲಮಾನದ ಪ್ರಕಾರ ರಾತ್ರಿ 11 ಗಂಟೆಗೆ ಕೂಟಕ್ಕೆ ಚಾಲನೆ ದೊರಕಲಿದೆ. ಈ ಬಾರಿ ಭಾರತ ದೇಶವನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಪರ ಧ್ವಜಧಾರಿಗಳಾಗುವ ಅವಕಾಶ ಇಬ್ಬರಿಗೆ ಸಿಕ್ಕಿದೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಲಿಂಗಸಮಾನತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಪ್ರತಿ ದೇಶಗಳಿಂದಲೂ ತಲಾ ಒಬ್ಬರು ಪುರುಷ ಮತ್ತು ಸ್ತ್ರೀ ಧ್ವಜಧಾರಿಗಳಾಗಬೇಕಿದೆ. ಹೀಗಾಗಿ ಭಾರತದಿಂದಲೂ ಒಬ್ಬರೂ ಧ್ವಜ ಹಿಡಿದು ಭಾರತೀಯರನ್ನು ಪ್ರತಿನಿಧಿಸಲಿದ್ದಾರೆ.
ಭಾರತದ ದಿಗ್ಗಜ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಹಾಗೂ ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದ ಶಟ್ಲರ್ ಪಿವಿ ಸಿಂಧು ಧ್ವಜ ಹಿಡಿದು ಸಾಗಲಿದ್ದಾರೆ. ದಾಖಲೆಯ ಐದನೇ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿರುವ ಶರತ್ ಕಮಲ್, ಈ ವರ್ಷದ ಮಾರ್ಚ್ ತಿಂಗಳಲ್ಲಿಯೇ ಭಾರತದ ಧ್ವಜಧಾರಿಯಾಗಿ ಆಯ್ಕೆಯಾಗಿದ್ದರು. ಆ ಬಳಿಕ ಸಿಂಧು ಅವರನ್ನು ಮಹಿಳಾ ಧ್ವಜಧಾರಿಯಾಗಿ ಆಯ್ಕೆ ಮಾಡಲಾಯ್ತು. ಒಲಿಂಪಿಕ್ಸ್‌ನಲ್ಲಿ ಧ್ವಜಧಾರಿಯಾಗಿ ಗುರುತಿಸಿಕೊಳ್ಳುವುದು ಉನ್ನತ ಗೌರವ. ಹೀಗಾಗಿ ಉಭಯ ಆಟಗಾರರು ಈ ಗೌರವ ಸಂದಿದ್ದಕ್ಕಾಗಿ ಖುಷಿಯಾಗಿದ್ದಾರೆ.
2020ರಲ್ಲಿ, ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯು (IOC) ತನ್ನ ಪ್ರೋಟೋಕಾಲ್ ನವೀಕರಿಸಿತು. ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಪ್ರತಿ ಒಲಿಂಪಿಕ್ ಸಮಿತಿಯಿಂದಲೂ ಒಬ್ಬ ಮಹಿಳಾ ಮತ್ತು ಒಬ್ಬ ಪುರುಷ ಅಥ್ಲೀಟ್ ಜಂಟಿಯಾಗಿ ಧ್ವಜಧಾರಿಯಾಗಬೇಕೆಂದು ಹೇಳಿತು. ಜಾಗತಿಕ ಕ್ರೀಡಾಕೂಟದಲ್ಲಿ ಲಿಂಗ ಸಮಾನತೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಯ್ತು.
“ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ನಾವು ಭಾರತೀಯ ತಂಡವನ್ನು ಮುನ್ನಡೆಸಲಿದ್ದೇವೆ. ಕಳೆದ 3-4 ತಿಂಗಳುಗಳಿಂದ ನಾನು ಆ ದೃಶ್ಯಗಳನ್ನೇ ಕನಸಿನಲ್ಲಿ ಕಾಣುತ್ತಿದ್ದೆ. ಆ ಕನಸು ನನಸಾಗುತ್ತಿದೆ ಎಂಬುದಕ್ಕೆ ಖುಷಿಯಾಗುತ್ತಿದೆ. ವಿಶೇಷವಾಗಿ ಪಿವಿ ಸಿಂಧು ಅವರೊಂದಿಗೆ ನಾನು ಧ್ವಜಧಾರಿಯಾಗಿ ಮುನ್ನಡೆಯಲಿದ್ದೇನೆ ಎಂಬುದಕ್ಕೆ ತುಂಬಾ ಉತ್ಸುಕನಾಗಿದ್ದೇನೆ. ಇದು ನಿಜಕ್ಕೂ ಅದ್ಭುತ ಕ್ಷಣವಾಗಿದೆ,” ಎಂದು ಶರತ್ ಕಮಲ್ ಹೇಳಿದ್ದಾರೆ.
ಎರಡು ಪದಕ ಗೆದ್ದ ಪಿವಿ ಸಿಂಧು ಸಂತಸ
ಒಲಿಂಪಿಕ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದ ಭಾರತದ ಏಕೈಕ ಮಹಿಳಾ ಅಥ್ಲೀಟ್ ಪಿವಿ ಸಿಂಧು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳಾ ಸಿಂಗಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅವರು, 2020ರ ಟೋಕಿಯೊ ಕ್ರೀಡಾಕೂಟದಲ್ಲಿ ಕಂಚು ಗೆದ್ದಿದ್ದರು. ಈ ಬಾರಿ ಪ್ಯಾರಿಸ್‌ನಲ್ಲಿ ತ್ರಿವರ್ಣ ಧಗವಜ ಹಿಡಿದು ಮುನ್ನಡೆಯುವ ಕುರಿತು ಸಂತಸ ಹಂಚಿಕೊಂಡ ಅವರು, “ಹೌದು, ಮತ್ತೋರ್ವ ಭಾರತೀಯ ಶರತ್ ಕಮಲ್ ಅವರೊಂದಿಗೆ ಧ್ವಜಧಾರಿಯಾಗಲು ನನಗೆ ತುಂಬಾ ಸಂತೋಷವಾಗುತ್ತಿದೆ. ಇದು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ. ಹೀಗಾಗಿ ನಮ್ಮಿಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ. ಅವರು ನನಗೆ ಸೂಪರ್ ಸೀನಿಯರ್ ಇದ್ದಂತೆ. ಹೀಗಾಗಿ ಸಹಭಾರತೀಯರೊಂದಿಗೆ ಧ್ವಜವನ್ನು ಹಿಡಿದಿರುವುದು ಸಂತೋಷ ಕೊಡುತ್ತದೆ” ಎಂದು ಸಿಂಧು ಹೇಳಿದ್ದಾರೆ.
ಇನ್ನಷ್ಟು ಒಲಿಂಪಿಕ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಮಹಿಳೆಯರ ಆರ್ಚರಿಯಲ್ಲಿ ಮೊದಲ ದಿನವೇ ವಿಶ್ವದಾಖಲೆ; ವೈಯಕ್ತಿಕ ಶ್ರೇಯಾಂಕ ಸುತ್ತಿನಲ್ಲಿ ಲಿಮ್ ಸಿ-ಹೈಯಾನ್ ಇತಿಹಾಸ ಸೃಷ್ಟಿ