ಪ್ಯಾರಿಸ್ ಒಲಿಂಪಿಕ್ಸ್ಗೆ ಇಂದು ಚಾಲನೆ; 3,000 ಕಲಾವಿದರಿಂದ ಸಾಂಸ್ಕೃತಿಕ ವೈಭವ, ಹತ್ರತ್ರ 1 ಕೋಟಿ ಟಿಕೆಟ್ ಮಾರಾಟ
Paris Olympics 2024: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ಗೆ ಇಂದು ವರ್ಣರಂಜಿತ ಚಾಲನೆ ಸಿಗಲಿದೆ. ಉದ್ಘಾಟನಾ ಸಮಾರಂಭ ರಾತ್ರಿ 11 ಗಂಟೆಗೆ ಆರಂಭವಾಗಲಿದ್ದು, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಬರುವ ಜಾಗತಿಕ ಕ್ರೀಡಾ ಜಾತ್ರೆಗೆ ಕ್ಷಣಗಣನೆ ಶುರುವಾಗಿದೆ. ಪ್ರೇಮನಗರಿ ಪ್ಯಾರಿಸ್ 33ನೇ ಆವೃತ್ತಿಯ ಒಲಿಂಪಿಕ್ಸ್ಗೆ (Paris Olympics 2024) ವೇದಿಕೆಯಾಗುತ್ತಿದೆ. ಇಂದು (ಜುಲೈ 26) ರಾತ್ರಿ 11 ಗಂಟೆಗೆ ಮಹೋನ್ನತ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ ಸಿಗಲಿದೆ. ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ಆರಂಭೋತ್ಸವ ನಡೆಯಲಿದೆ. ಫ್ರಾನ್ಸ್ನ ಮಹಾನದಿ ಸೀನ್ ನದಿಯ (Seine River) ಮೇಲೆ 10,500ಕ್ಕೂ ಹೆಚ್ಚು ಕ್ರೀಡಾಪಟುಗಳನ್ನು 6 ಕಿಲೋ ಮೀಟರ್ ದೂರ 100 ಬೋಟ್ಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.
3 ಸಾವಿರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
ವಿಶ್ವ ವಿಖ್ಯಾತ ಐಫೆಲ್ ಟವರ್ (Eiffel Tower) ಎದುರಿನ ಟ್ರೋಕಾಡೆರೊದಲ್ಲಿ ನಿರ್ಮಿಸಿರುವ ಚಾಂಪಿಯನ್ಸ್ ಪಾರ್ಕ್ ಎಂಬ ತಾತ್ಕಾಲಿಕ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. 13 ಸಾಮರ್ಥ್ಯ ಹೊಂದಿರುವ ಈ ಕ್ರೀಡಾಂಗಣದಲ್ಲಿ ಕ್ರೀಡಾ ಹಬ್ಬಕ್ಕೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ (Emmanuel Macron) ಅವರು ಒಲಿಂಪಿಕ್ಸ್ಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ಯಾರಿಸ್ನ ಪ್ರತಿ ಸೇತುವೆ ಮೇಲೂ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂಬುದು ವಿಶೇಷ. 3 ಗಂಟೆಗೂ ಹೆಚ್ಚು ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಬರೋಬ್ಬರಿ 4 ಲಕ್ಷ ಪ್ರೇಕ್ಷಕರು
ಸ್ಟೇಡಿಯಂನಲ್ಲಿ ಸಾವಿರಾರು ಪ್ರೇಕ್ಷಕರ ಮುಂದೆ ಉದ್ಘಾಟನಾ ಕಾರ್ಯಕ್ರಮ ನಡೆಸುವುದರ ಬದಲಿಗೆ ಲಕ್ಷಾಂತರ ಜನರು ಈ ಸಮಾರಂಭ ಕಣ್ತುಂಬಿಕೊಳ್ಳಲು ಫ್ರಾನ್ಸ್ ಯೋಜನೆ ರೂಪಿಸಿದೆ. ನದಿಯಲ್ಲಿ 6 ಕಿಮೀ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ನದಿಯ ಎರಡೂ ಬದಿಯ ದಂಡೆಗಳಲ್ಲಿ ತಾತ್ಕಾಲಿಕ ಸ್ಟ್ಯಾಂಡ್ಗಳನ್ನು ನಿರ್ಮಿಸಲಾಗಿದೆ. ಸುಮಾರು 4 ಲಕ್ಷಕ್ಕೂ ಅಧಿಕ ಜನರು ನೇರವಾಗಿ ಸಮಾರಂಭದ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. 2 ಲಕ್ಷ ಟಿಕೆಟ್ಗಳನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ. 34 ಸೇತುವೆಗಳ ಬಳಿಯೂ ಸಾವಿರಾರು ಕ್ರೀಡಾ ಪ್ರೇಮಿಗಳು ಸೇರಲಿದ್ದಾರೆ. ಪ್ಯಾರಿಸ್ನ ಹಲವೆಡೆ ಬೃಹತ್ ಪರದೆಗಳನ್ನು ಅಳವಡಿಸಲಾಗಿದೆ.
ಕಾರ್ಯಕ್ರಮ ಆಯೋಜನೆಗೆ ಪ್ಲಾನ್ ಬಿ-ಸಿ ಸಿದ್ಧ
ಸ್ಟೇಡಿಯಂನಲ್ಲಿ ಹೊರಗೆ ಅಂದರೆ ತೆರೆದ ವಾತಾವರಣದಲ್ಲಿ ಸಮಾರಂಭ ನಡೆಯುತ್ತಿರುವ ಕಾರಣ ಭದ್ರತಾ ಆಯೋಜನೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿ ಫ್ರಾನ್ಸ್ ಸರ್ಕಾರ ಭಾರಿ ಬಿಗಿ ಭದ್ರತೆ ಕೈಗೊಂಡಿದೆ. ಆದರೆ, ಈ ಹಿಂದೆ ಭಯೋತ್ಪಾದಕರು ರಕ್ತದೋಕುಳಿ ಹರಿಸುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಅಂತಹ ಸನ್ನಿವೇಶ ಎದುರಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಪ್ಲಾನ್ ಬಿ ಮತ್ತು ಸಿ ಸಿದ್ಧಪಡಿಸಿದೆ. ಹಾಗಾಗಿ ಐಫೆಲ್ ಎದುರಿನ ಟ್ರೋಕಾಡೆರೋನಲ್ಲೇ ಸಮಾರಂಭವನ್ನು ಸೀಮಿತಗೊಳಿಸುವುದು ಎರಡನೇ ಆಯ್ಕೆಯಾಗಿದೆ. ಸಮಾರೋಪ ಸಮಾರಂಭ ನಡೆಯುವ ಸ್ಟೆಡ್ ಡಿ ಫ್ರಾನ್ಸ್ ಸ್ಟೇಡಿಯಂಗೆ ವರ್ಗಾಯಿಸುವುದು ಮೂರನೇ ಆಯ್ಕೆಯಾಗಿದೆ.
1 ಕೋಟಿ ಟಿಕೆಟ್ ಸೇಲ್
ಪ್ಯಾರಿಸ್ ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಹತ್ರತ್ರ 1 ಕೋಟಿ (97 ಲಕ್ಷ) ಟಿಕೆಟ್ಗಳು ಮಾರಾಟವಾಗಿವೆ ಎಂದು ಒಲಿಂಪಿಕ್ಸ್ ಆಯೋಜಕರು ಮಾಹಿತಿ ನೀಡಿದ್ದಾರೆ. ಇದು ಒಲಿಂಪಿಕ್ಸ್ ಇತಿಹಾಸದಲ್ಲೇ ಗರಿಷ್ಠ ಟಿಕೆಟ್ಗಳ ಮಾರಾಟವಾಗಿದೆ. 1998ರ ಅಟ್ಲಾಂಟಾ ಕ್ರೀಡಾಕೂಟದ ಸಮಯದಲ್ಲಿ 83 ಲಕ್ಷ ಟಿಕೆಟ್ಗಳು ಸೇಲ್ ಆಗಿದ್ದವು. ಪ್ರಸ್ತುತ ಉದ್ಘಾಟನೆ ನಂತರ ಸ್ಪರ್ಧೆಗಳು ಹೆಚ್ಚಾಗಲಿದ್ದು, ಮಾರಾಟವಾಗುವ ಟಿಕೆಟ್ಗಳ ಸಂಖ್ಯೆಯೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.