ವಿಶ್ವಕಪ್ ಹೀರೋ ಶಮಿಗೆ ಅರ್ಜುನ ಪ್ರಶಸ್ತಿ; ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್, ಚಿರಾಗ್‌ಗೆ ಖೇಲ್ ರತ್ನ
Dec 21, 2023 03:20 PM IST
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕ್ರೀಡಾಪಟುಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
- Arjuna award: ಭಾರತದ ಕ್ರೀಡಾ ಸಚಿವಾಲಯ ಬುಧವಾರ 2023ರ ವಾರ್ಷಿಕ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಘೋಷಿಸಿದೆ. ಜನವರಿ 9 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ವಿತರಿಸಲಿದ್ದಾರೆ.
ಏಕದಿನ ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ, ನಿರೀಕ್ಷೆಯಂತೆಯೇ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇದೇ ವೇಳೆ ಭಾರತದ ಡೈನಾಮಿಕ್ ಬ್ಯಾಡ್ಮಿಂಟನ್ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಅವರು ಕ್ರೀಡಾಪಟುಗಳಿಗೆ ಕೊಡಮಾಡುವ ಭಾರತದ ಅತ್ಯುನ್ನತ ಗೌರವವಾದ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಭಾರತದ ಕ್ರೀಡಾ ಸಚಿವಾಲಯ ಬುಧವಾರ (ಡಿಸೆಂಬರ್ 20) ರಂದು ವಾರ್ಷಿಕ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ಘೋಷಿಸಿದೆ. ಸರ್ಕಾರ ನೇಮಿಸಿದ ಸಮಿತಿಯ ಶಿಫಾರಸುಗಳ ಆಧಾರದಲ್ಲಿ, ವೇಗಿ ಮೊಹಮ್ಮದ್ ಶಮಿ ಸೇರಿದಂತೆ ಒಟ್ಟು ದೇಶದ 26 ಕ್ರೀಡಾ ಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡಲು ಸಚಿವಾಲಯ ಮುಂದಾಗಿದೆ.
ಜನವರಿ 9ರಂದು ರಾಷ್ಟ್ರ ರಾಜಧಾನಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.
ಇದನ್ನೂ ಓದಿ | ಕೂಚ್ ಬೆಹಾರ್ ಟ್ರೋಫಿಯಲ್ಲಿ ಅಬ್ಬರಿಸಿದ ದ್ರಾವಿಡ್ ಪುತ್ರ; ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಜಯ, ವಿಡಿಯೋ
ಬ್ಯಾಡ್ಮಿಂಟನ್‌ನಲ್ಲಿ ಅಪಾರ ಸಾಧನೆ ಮಾಡಿದ ಚಿರಾಗ್ ಮತ್ತು ಸಾತ್ವಿಕ್ ಅವರಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಈ ಜೋಡಿಯು ಈ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದರು. ಅಲ್ಲದೆ ಏಷ್ಯನ್ ಚಾಂಪಿಯನ್‌ಶಿಪ್, ಸ್ವಿಸ್ ಓಪನ್, ಇಂಡೋನೇಷ್ಯಾ ಓಪನ್ ಮತ್ತು ಕೊರಿಯಾ ಓಪನ್‌ನಲ್ಲಿ ಪ್ರಶಸ್ತಿ ಗೆದ್ದು ಮಿಂಚಿದ್ದಾರೆ. ಅಲ್ಲದೆ ಚೀನಾ ಮಾಸ್ಟರ್ಸ್ ಫೈನಲ್ ತಲುಪಿದ್ದರು. ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವ ಮೂಲಕ, ನಂಬರ್ ವನ್ ಸ್ಥಾನ ಪಡೆದ ಭಾರತದ ಮೊದಲ ಡಬಲ್ಸ್ ಜೋಡಿ ಎಂಬ ಖ್ಯಾತಿ ಪಡೆದರು.
ಶಮಿ ಜೊತೆಗೆ ಮತ್ತೊಬ್ಬ ಕ್ರಿಕೆಟಿಗನಿಗೆ ಅರ್ಜುನ ಪ್ರಶಸ್ತಿ ಘೋಷನೆಯಾಗಿದೆ. ಇನ್ನೊಬ್ಬರು ಅಂಧ ಕ್ರಿಕೆಟಿಗ ಅಜಯ್ ಕುಮಾರ್ ರೆಡ್ಡಿ. 33 ವರ್ಷ ವಯಸ್ಸಿನ ವೇಗದ ಬೌಲರ್ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ 24 ವಿಕೆಟ್ ಪಡೆಯುವುದರೊಂದಿಗೆ ಟೂರ್ನಿಯ ಅತಿ ಹೆಚ್ಚು ವಿಕೆಟ್ ಕಬಳಿಸಿದ ಆಟಗಾರ ಎಂಬ ದಾಖಲೆ ಮಾಡಿದರು.
ಇತರ ಅರ್ಜುನ ಪ್ರಶಸ್ತಿ ಪುರಸ್ಕೃತರು
ಅಥ್ಲೀಟ್‌ಗಳಾದ ಮುರಳಿ ಶ್ರೀಶಂಕರ್ ಮತ್ತು ಪಾರುಲ್ ಚೌಧರಿ, ಬಿಲ್ಲುಗಾರಿಕೆಯ ಅದಿತಿ ಸ್ವಾಮಿ ಮತ್ತು ಓಜಸ್ ಪ್ರವೀಣ್ ಡಿಯೋಟಾಲೆ, ಶೂಟರ್‌ಗಳಾದ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಇಶಾ ಸಿಂಗ್, ಕುಸ್ತಿಪಟುಗಳಾದ ಸುನಿಲ್ ಕುಮಾರ್ (ಗ್ರೀಕೋ-ರೋಮನ್) ಮತ್ತು ಆಂಟಿಮ್ ಪಂಘಲ್, ಪ್ಯಾಡ್ಲರ್ ಐಹಿಕಾ ಮುಖರ್ಜಿ, ಸ್ಕ್ವಾಷ್ ಆಟಗಾರ ಹರಿಂದರ್ ಪಾಲ್ ಸಿಂಗ್ ಸಂಧು, ರೋಶಿಬಿನಾ ದೇವಿ (ವುಶು) ಅವರಿಗೂ ಪ್ರಶಸ್ತಿ ಘೋಷಣೆಯಾಗಿದೆ. ಇವರೆಲ್ಲರೂ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದಾರೆ.
ಗಾಲ್ಫ್ ಆಟಗಾರ್ತಿ ದೀಕ್ಷಾ ಡಾಗರ್ ಮತ್ತು ಆರ್ ವೈಶಾಲಿ (ಇತ್ತೀಚೆಗೆ ಗ್ರ್ಯಾಂಡ್ ಮಾಸ್ಟರ್ ಆದ ಪ್ರಜ್ಞಾನಂದ ಸಹೋದರಿ, ಪ್ಯಾರಾ ಅಥ್ಲೀಟ್‌ಗಳಾದ ಶೀತಲ್ ದೇವಿ (ಆರ್ಚರಿ) ಮತ್ತು ಪ್ರಾಚಿ ಯಾದವ್ (ಕ್ಯಾನೋಯಿಂಗ್) ಕೂಡ ಅರ್ಜುನ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ | ಪಲ್ಟನ್ಸ್ ವಿರುದ್ಧ ಪಲ್ಟಿ ಹೊಡೆದ ಬೆಂಗಳೂರು ಬುಲ್ಸ್ಗೆ 5ನೇ ಸೋಲು; ಯುಪಿ ಯೋಧಾಸ್ ಮಣಿಸಿದ ಜೈಪುರ
ಒಟ್ಟು ಐವರು ತರಬೇತುದಾರರು ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇತರ ಮೂವರಿಗೆ ಜೀವಮಾನದ ಸಾಧನೆ ವಿಭಾಗದಲ್ಲಿ ಇದೇ ಗೌರವವನ್ನು ನೀಡಲಾಗುತ್ತಿದೆ. ಸಣ್ಣ ವಯಸ್ಸಿನಲ್ಲೇ ಚೆಸ್ ಲೋಕದಲ್ಲೇ ಅಪಾರ ಸಾಧನೆ ಮಾಡಿದ ಪ್ರಜ್ಞಾನಂದ ಅವರ ವೃತ್ತಿಜೀವನವನ್ನು ರೂಪಿಸಿದ ಕೋಚ್ ಆರ್‌ಬಿ ರಮೇಶ್ ಸೇರಿದಂತೆ ಇತರ ನಾಲ್ವರು ದ್ರೋಣಾಚಾರ್ಯ ಪ್ರಶಸ್ತಿ ಪಡೆಯುತ್ತಿದ್ದಾರೆ.
ಲಲಿತ್ ಕುಮಾರ್ (ಕುಸ್ತಿ), ಮಹಾವೀರ್ ಪ್ರಸಾದ್ ಸೈನಿ (ಪ್ಯಾರಾ ಅಥ್ಲೆಟಿಕ್ಸ್), ಶಿವೇಂದ್ರ ಸಿಂಗ್ (ಹಾಕಿ) ಮತ್ತು ಗಣೇಶ್ ಪ್ರಭಾಕರ್ ದೇವುರುಖ್ಕರ್ (ಮಲ್ಲಕಂಬ) ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಘೋಷಿಸಲಾಗಿದೆ. ಜೀವಮಾನ ವಿಭಾಗದಲ್ಲಿ ಗಾಲ್ಫ್ ಕೋಚ್ ಜಸ್ಕಿರತ್ ಸಿಂಗ್ ಗ್ರೆವಾಲ್ ಮತ್ತು ಭಾಸ್ಕರನ್ ಇ (ಕಬಡ್ಡಿ) ಮತ್ತು ಜಯಂತ ಕುಮಾರ್ ಪುಶಿಲಾಲ್ (ಟೇಬಲ್ ಟೆನಿಸ್) ಅವರಿಗೂ ದ್ರೋಣಾಚಾರ್ಯ ಪ್ರಶಸ್ತಿ ಸಿಗಲಿದೆ.