ಕೂಚ್ ಬೆಹಾರ್ ಟ್ರೋಫಿಯಲ್ಲಿ ಅಬ್ಬರಿಸಿದ ದ್ರಾವಿಡ್ ಪುತ್ರ; ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಜಯ, ವಿಡಿಯೋ
Rahul Dravids elder son Samit: ಪ್ರಸ್ತುತ ಕೂಚ್ ಬೆಹಾರ್ ಟ್ರೋಫಿಯಲ್ಲಿ ಕರ್ನಾಟಕ ತಂಡದ ಪರ ರಾಹುಲ್ ದ್ರಾವಿಡ್ ಪುತ್ರ ಸಮಿತ್, ಭರ್ಜರಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದಾರೆ.
ಟೀಮ್ ಇಂಡಿಯಾ ಹೆಡ್ಕೋಚ್ ರಾಹುಲ್ ದ್ರಾವಿಡ್ (Head Coach Rahul Dravid) ಅವರ ಪುತ್ರ ಸಮಿತ್ (Samit) ಬ್ಯಾಟಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ದ್ರಾವಿಡ್ ಅವರ ಹಿರಿಯ ಪುತ್ರ ಸಮಿತ್, 2005ರಲ್ಲಿ ಜನಿಸಿದ್ದಾರೆ. ಕರ್ನಾಟಕದ ಅಂಡರ್-19 ತಂಡದ ಭಾಗವಾಗಿರುವ ಸಮಿತ್, ಪ್ರಸ್ತುತ ಕೂಚ್ ಬೆಹಾರ್ ಟ್ರೋಫಿಯಲ್ಲಿ (Cooch Behar Trophy) ತಮ್ಮ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿರುದ್ಧ ಜಮ್ಮು ಮತ್ತು ಕಾಶ್ಮೀರದ ಹಾಸ್ಟೆಲ್ ಗ್ರೌಂಡ್ ಜೆಕೆಸಿಎನಲ್ಲಿ ನಡೆದ ಪಂದ್ಯದಲ್ಲಿ ಸಮಿತ್ ಭರ್ಜರಿ 98 ರನ್ ಗಳಿಸಿ ಕರ್ನಾಟಕ ತಂಡಕ್ಕೆ (Karnataka vs Jammu and Kashmir) ಇನಿಂಗ್ಸ್ ಮತ್ತು 130 ರನ್ಗಳ ಗೆಲುವು ತಂದುಕೊಟ್ಟರು. ಜಮ್ಮು ಮತ್ತು ಕಾಶ್ಮೀರ ಮೊದಲ ಇನ್ನಿಂಗ್ಸ್‌ನಲ್ಲಿ 170 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಕರ್ನಾಟಕ 5 ವಿಕೆಟ್ ನಷ್ಟಕ್ಕೆ 480 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು.
98 ರನ್ ಗಳಿಸಿದ ಸಮಿತ್
ದ್ರಾವಿಡ್ ಪುತ್ರ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಕ್ರೀಸ್ಗೆ ಬಂದು ಅದ್ಭುತ ಆಟದ ಮೂಲಕ ಗಮನ ಸೆಳದರು. 159 ಎಸೆತಗಳಲ್ಲಿ 98 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಅವರ ಸೊಗಸಾದ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ, ಮತ್ತು 1 ಸಿಕ್ಸರ್ ಇದೆ. ಸಮಿತ್ 4ನೇ ವಿಕೆಟ್‌ಗೆ 233 ರನ್ ಸೇರಿಸಲು ನೆರವಾದರು. 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಪಿ ಕಾರ್ತಿಕೇಯ ಕರ್ನಾಟಕ ಪರ ಗರಿಷ್ಠ ಸ್ಕೋರರ್ ಆದರು.
ಕಾರ್ತಿಕೇಯ 163
ಕಾರ್ತಿಕೇಯ 175 ಎಸೆತಗಳಲ್ಲಿ 163 ರನ್ ಗಳಿಸುವ ಮೂಲಕ ಕರ್ನಾಟಕ ಪರ ಅಗ್ರ ಸ್ಕೋರರ್. ಇವರಿಬ್ಬರ ಅಮೋಘ ಬ್ಯಾಟಿಂಗ್ನಿಂದ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 100 ಓವರ್‌ಗಳಲ್ಲಿ 5 ವಿಕೆಟ್‌ಗೆ 480 ರನ್ಗಳ ಬೃಹತ್ ಮೊತ್ತ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತು. 2ನೇ ಇನ್ನಿಂಗ್ಸ್ ಆರಂಭಿಸಿದ ಜಮ್ಮು ಮತ್ತು ಕಾಶ್ಮೀರ ಸ್ಕೋರ್ ಸಮಗೊಳಿಸಲು ವಿಫಲವಾಯಿತು.
ಬ್ಯಾಟಿಂಗ್ ವಿಡಿಯೋ ವೈರಲ್
ಅಂತಿಮವಾಗಿ ಕರ್ನಾಟಕ ಇನ್ನಿಂಗ್ಸ್ ಮತ್ತು 130 ರನ್ ಅಂತರದಿಂದ ಗೆದ್ದು ಬೀಗಿತು. ಜಮ್ಮುವಿನಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಿದ್ದ ಸ್ಥಳೀಯ ಅಭಿಮಾನಿಗಳು ದ್ರಾವಿಡ್ ಪುತ್ರ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶ ವಿರುದ್ಧದ ಕರ್ನಾಟಕ ಕೊನೆಯ ಪಂದ್ಯದಲ್ಲಿ ಸಮಿತ್ ಎರಡು ಇನ್ನಿಂಗ್ಸ್‌ಗಳಲ್ಲಿ 27 ಮತ್ತು 28 ರನ್‌ಗಳಿಗೆ ಔಟಾಗಿದ್ದರು.
ಪಂದ್ಯ ವೀಕ್ಷಿಸಿದ್ದ ದ್ರಾವಿಡ್
ಸೌತ್ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡದೊಂದಿಗೆ ಪ್ರಯಾಣಿಸುವ ಮೊದಲು ರಾಹುಲ್ ದ್ರಾವಿಡ್ ಮತ್ತು ಅವರ ಪತ್ನಿ ವಿಜೇತಾ ಮೈಸೂರಿನ ಎಸ್‌ಡಿಎನ್‌ಆರ್‌ಡಬ್ಲ್ಯೂ ಮೈದಾನದಲ್ಲಿ ಉತ್ತರಾಖಂಡ ವಿರುದ್ಧ ಕೂಚ್ ಬೆಹಾರ್ ಟ್ರೋಫಿ ಪಂದ್ಯದಲ್ಲಿ ಸಮಿತ್ ಆಡುವುದನ್ನು ವೀಕ್ಷಿಸಿದರು. ದ್ರಾವಿಡ್ ದಂಪತಿ ಪಂದ್ಯವನ್ನು ವೀಕ್ಷಿಸುತ್ತಿರುವ ವಿಡಿಯೋ, ಫೋಟೋಗಳು ಸಖತ್ ವೈರಲ್ ಆಗಿದ್ದವು.