ಪಲ್ಟನ್ಸ್ ವಿರುದ್ಧ ಪಲ್ಟಿ ಹೊಡೆದ ಬೆಂಗಳೂರು ಬುಲ್ಸ್ಗೆ 5ನೇ ಸೋಲು; ಯುಪಿ ಯೋಧಾಸ್ ಮಣಿಸಿದ ಜೈಪುರ
Pro Kabaddi League 2023: ಡಿಸೆಂಬರ್ 20ರಂದು ನಡೆದ ಪ್ರೊ ಕಬಡ್ಡಿ ಲೀಗ್ನ ಡಬಲ್ ಹೆಡ್ಡರ್ನಲ್ಲಿ ಪುಣೇರಿ ಪಲ್ಟನ್, ಜೈಪುರ ಪಿಂಕ್ ಪ್ಯಾಂಥರ್ಸ್ ಗೆಲುವಿನ ನಗೆ ಬೀರಿವೆ. ಬೆಂಗಳೂರು ಬುಲ್ಸ್, ಯುಪಿ ಯೋಧಾಸ್ ಸೋಲಿನ ನಿರಾಸೆ ಅನುಭವಿಸಿದವು.
ಬರೋಬ್ಬರಿ ಒಂದು ವಾರದ ಬಳಿಕ ಕಣಕ್ಕಿಳಿದ ಬೆಂಗಳೂರು ಬುಲ್ಸ್, ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಐದನೇ ಸೋಲಿಗೆ ಶರಣಾಗಿದೆ. ಪುಣೇರಿ ಪಲ್ಟನ್ಸ್ ಎದುರು 25 ಅಂಕಗಳ (43-18) ಭಾರಿ ಅಂತರದಿಂದ ಮಕಾಡೆ ಮಲಗಿರುವ ಬುಲ್ಸ್ (Puneri Paltan vs Bengaluru Bulls), ಪಾಯಿಂಟ್ಸ್ ಟೇಬಲ್ನಲ್ಲಿ ಕೆಳಕ್ಕೆ ಜಾರಿದೆ. ಭರ್ಜರಿ ಗೆಲುವು ದಾಖಲಿಸಿದ ಪಲ್ಟನ್ಸ್ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದೆ.
ಡಿಸೆಂಬರ್ 20ರ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ಬೆಂಗಳೂರು ಹೀನಾಯ ಸೋಲು ಕಂಡರೆ, ದಿನದ ಮೊದಲ ಪಂದ್ಯದಲ್ಲಿ ಯುಪಿ ಯೋಧಾಸ್ ತಂಡದ ವಿರುದ್ಧ 17 ಪಾಯಿಂಟ್ಸ್ಗಳ (41-24) ಅಂತರದಿಂದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ (Jaipur Pink Panthers vs UP Yoddhas) ಗೆದ್ದು ಬೀಗಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ನಿರಾಸೆ ಮೂಡಿಸಿದ ಬುಲ್ಸ್ ಆಟಗಾರರು
ಆರಂಭಿಕ 4 ಪಂದ್ಯಗಳಲ್ಲಿ ಸೋತಿದ್ದ ಬೆಂಗಳೂರು ಬುಲ್ಸ್ ಬಳಿಕ ಸತತ 2ರಲ್ಲಿ ಗೆಲುವು ಸಾಧಿಸಿ ಲಯಕ್ಕೆ ಮರಳಿತ್ತು. ವಿಶ್ವಾಸ ಹೆಚ್ಚಿಸಿಕೊಂಡ ಬುಲ್ಸ್ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಮತ್ತೆ ಸೋಲನುಭವಿಸಿತು. ರೋಹಿತ್ ನಂದಲ್, ವಿಕಾಸ್ ಖಂಡೋಲಾ, ಭರತ್ ಸೇರಿದಂತೆ ಯಾರೂ ಸಹ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಈ ಸೋಲಿನಿಂದ ಅಂಕ ಪಟ್ಟಿಯಲ್ಲಿ ಕುಸಿದಿದೆ. 14 ಅಂಕ ಪಡೆದು 8ನೇ ಸ್ಥಾನದಲ್ಲಿದೆ.
ಮತ್ತೊಂದೆಡೆ ಖಡಕ್ ಆಟ ಪ್ರದರ್ಶಿಸಿದ ಪುಣೇರಿ, ಲೀಗ್ನಲ್ಲಿ 5ನೇ ಗೆಲುವಿಗೆ ಮುತ್ತಿಕ್ಕಿದೆ. ಮೋಹಿತ್ ಗೋಯತ್ (8), ಮೊಹಮ್ಮದ್ರೇಜಾ ಶಾಡ್ಲೂಯಿ (7), ಅಸ್ಲಂ ಇನಾಮದಾರ (6) ಸೇರಿ ಎಲ್ಲರೂ ಅದ್ಭುತ ನಿರ್ವಹಣೆ ತೋರಿದರು. ಅಲ್ಲದೆ, ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದರು. ಹೀಗಾಗಿ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ಸಾಧಿಸಲು ನೆರವಾಯಿತು. ಅಂಕಪಟ್ಟಿಯಲ್ಲಿ 26 ಪಾಯಿಂಟ್ಸ್ಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಪಿಂಕ್ ಪ್ಯಾಂಥರ್ಸ್ಗೆ 3ನೇ ಗೆಲುವು
ಯುಪಿ ಯೋಧಾಸ್ ಎದುರು ಅಮೋಘ ಆಟವಾಡಿದ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್, ಲೀಗ್ನಲ್ಲಿ ಮೂರು ಪಂದ್ಯಗಳಲ್ಲಿ ಜಯದ ನಗೆ ಬೀರಿದೆ. ಅಲ್ಲದೆ, 20 ಅಂಕಗಳೊಂದಿಗೆ ಏಳನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಮತ್ತೊಂದೆಡೆ ಯೋಧಾಸ್ 15 ಪಾಯಿಂಟ್ಸ್ ಗಳಿಸಿ 7ನೇ ಸ್ಥಾನದಲ್ಲಿದೆ. ಯೋಧಾಸ್ ತಂಡದಿಂದಲೂ ಅಂದುಕೊಂಡಂತೆ ಪ್ರದರ್ಶನ ಬರಲಿಲ್ಲ.
ಪ್ರೊ ಕಬಡ್ಡಿ -10ರ ಅಂಕಪಟ್ಟಿ (ಡಿ.20ರ ಅಂತ್ಯಕ್ಕೆ) | |||||
---|---|---|---|---|---|
ತಂಡಗಳು | ಪಂದ್ಯ | ಗೆಲುವು | ಸೋಲು | ಡ್ರಾ | ಅಂಕ |
ಪುಣೇರಿ ಪಲ್ಟನ್ | 6 | 5 | 1 | 0 | 26 |
ಬೆಂಗಾಲ್ ವಾರಿಯರ್ಸ್ | 6 | 3 | 1 | 2 | 21 |
ಜೈಪುರ ಪಿಂಕ್ ಪ್ಯಾಂಥರ್ಸ್ | 6 | 3 | 2 | 1 | 20 |
ಹರಿಯಾಣ ಸ್ಟೀಲರ್ಸ್ | 5 | 4 | 1 | 0 | 20 |
ಗುಜರಾತ್ ಜೈಂಟ್ಸ್ | 6 | 3 | 3 | 0 | 18 |
ಯು ಮುಂಬಾ | 5 | 3 | 2 | 0 | 16 |
ಯುಪಿ ಯೋಧಾಸ್ | 6 | 2 | 3 | 1 | 15 |
ಬೆಂಗಳೂರು ಬುಲ್ಸ್ | 7 | 2 | 5 | 0 | 14 |
ಪಾಟ್ನಾ ಪೈರೇಟ್ಸ್ | 5 | 2 | 3 | 0 | 12 |
ದಬಾಂಗ್ ದೆಹಲಿ KC | 5 | 2 | 3 | 0 | 12 |
ತಮಿಳು ತಲೈವಾಸ್ | 4 | 2 | 2 | 0 | 10 |
ತೆಲುಗು ಟೈಟಾನ್ಸ್ | 5 | 0 | 5 | 0 | 2 |