logo
ಕನ್ನಡ ಸುದ್ದಿ  /  ಕ್ರೀಡೆ  /  Pv Sindhu: ಮತ್ತೊಮ್ಮೆ ಮೊದಲನೇ ಸುತ್ತಿನಲ್ಲೇ ಸೋತು ಹೊರಬಿದ್ದ ಪಿವಿ ಸಿಂಧು; ಜಪಾನ್ ಓಪನ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಗೆಲುವು

PV Sindhu: ಮತ್ತೊಮ್ಮೆ ಮೊದಲನೇ ಸುತ್ತಿನಲ್ಲೇ ಸೋತು ಹೊರಬಿದ್ದ ಪಿವಿ ಸಿಂಧು; ಜಪಾನ್ ಓಪನ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಗೆಲುವು

Jayaraj HT Kannada

Jan 09, 2024 07:43 PM IST

google News

ಪಿವಿ ಸಿಂಧು

    • Japan Open: ಪಿವಿ ಸಿಂಧು ಜಪಾನ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಇದೇ ವೇಳೆ ಭಾರತದ ಇನ್ ಫಾರ್ಮ್ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಮತ್ತೊಮ್ಮೆ ಶುಭಾರಂಭ ಮಾಡಿದ್ದಾರೆ.
ಪಿವಿ ಸಿಂಧು
ಪಿವಿ ಸಿಂಧು

ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಭಾರತದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿವಿ ಸಿಂಧು (PV Sindhu), ಬುಧವಾರ ನಡೆದ ಜಪಾನ್ ಓಪನ್‌ನಲ್ಲಿ (Japan Open) ಚೀನಾದ ಜಾಂಗ್ ಯಿ ಮಾನ್ ವಿರುದ್ಧ ನೇರ ಗೇಮ್‌ಗಳಲ್ಲಿ ಸೋತು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ. ಕೇವಲ 32 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಿಂಧು 12-21 13-21ರಿಂದ ಸುಲಭವಾಗಿ ಪರಾಭವಗೊಂಡಿದ್ದಾರೆ.

ಈ ವರ್ಷ ನಡೆದ ಒಟ್ಟು 13 ಬಿಡಬ್ಲ್ಯೂಎಫ್‌ ವರ್ಲ್ಡ್ ಟೂರ್ (BWF World Tour) ಈವೆಂಟ್‌ಗಳಲ್ಲಿ ಇದು ಏಳನೇ ಬಾರಿಗೆ ಮೊದಲ ಸುತ್ತಿನಲ್ಲೇ ಸೋತು ಸಿಂಧು ನಿರ್ಗಮಿಸಿದ್ದಾರೆ.

ಮಾಜಿ ವಿಶ್ವ ಚಾಂಪಿಯನ್, ಗಾಯದಿಂದ ಗುಣಮುಖರಾದ ಬಳಿಕ ಆಟದಲ್ಲಿ ಪಾರ್ಮ್‌ ಕಳೆದುಕೊಂಡಿದ್ದಾರೆ. ಹಲವು ಪಂದ್ಯಗಳಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಬಳಿಕ ವಿಶ್ವ ಶ್ರೇಯಾಂಕದಲ್ಲಿ 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ತಮ್ಮ ಆಟದಲ್ಲಿ ಹಳೆಯ ಖದರ್‌ ತೋರಿಸಲು ವಿಫಲರಾಗುತ್ತಿರುವ ಸಿಂಧು, ತಮಗಿಂತ ಕಡಿಮೆ ಶ್ರೇಯಾಂಕದ ಆಟಗಾರರ ವಿರುದ್ಧವೂ ಅಂಕಗಳನ್ನು ಗಳಿಸಲು ಹೆಣಗಾಡುತ್ತಿದ್ದಾರೆ.

ಇತ್ತೀಚೆಗಷ್ಟೇ 2003ರ ಆಲ್-ಇಂಗ್ಲೆಂಡ್ ಚಾಂಪಿಯನ್ ಆಗಿರುವ ಉನ್ನತ ಮಟ್ಟದ ಹೊಸ ಕೋಚ್ ಆಗಿ ಮುಹಮ್ಮದ್ ಹಫೀಜ್ ಹಾಶಿಮ್ (Muhammad Hafiz Hashim) ಅವರ ಮಾರ್ಗದರ್ಶನದಲ್ಲಿ ಸಿಂಧು ಆಡಲು ಅನುಮತಿ ಪಡೆದಿದ್ದಾರೆ. ಮುಂದೆ ಅವರ ಕೋಚಿಂಗ್‌ನಲ್ಲಿ ತಮ್ಮ ಅದೃಷ್ಟವನ್ನು ಬದಲಾಯಿಸುವ ಭರವಸೆಯಲ್ಲಿದ್ದಾರೆ.

ಸಾತ್ವಿಕ್-ಚಿರಾಗ್ ಮತ್ತು ಲಕ್ಷ್ಯ ಸೇನ್ ಗೆಲುವು

ಒಂದು ಕಡೆ ಸಿಂಧು ಸೋತು ಹೊರಬಿದ್ದರೂ, ಭಾರತ ಇನ್ ಫಾರ್ಮ್ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ (Satwiksairaj Rankireddy) ಮತ್ತು ಚಿರಾಗ್ ಶೆಟ್ಟಿ (Chirag Shetty) ಮತ್ತೊಂದು ಶುಭಾರಂಭ ಮಾಡಿದ್ದಾರೆ. ಇತ್ತೀಚೆಗಷ್ಟೇ ಕೊರಿಯಾ ಓಪನ್‌ ಗೆದ್ದ ಸ್ಟಾರ್‌ ಜೋಡಿ, ಇಂಡೋನೇಷ್ಯಾದ ಲಿಯೊ ರೋಲಿ ಕಾರ್ನಾಂಡೋ ಮತ್ತು ಡೇನಿಯಲ್ ಮಾರ್ಟಿನ್ ಜೋಡಿಯನ್ನು 21-16 11-21 21-13 ರಿಂದ ಸೋಲಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಎರಡನೇ ಸುತ್ತಿನಲ್ಲಿ ಅವರು ಡೆನ್ಮಾರ್ಕ್‌ನ ಜೆಪ್ಪೆ ಬೇ ಮತ್ತು ಲಾಸ್ಸೆ ಮೊಲ್ಹೆಡೆ ಅವರನ್ನು ಎದುರಿಸಲಿದ್ದಾರೆ.

ಅತ್ತ ಲಕ್ಷ್ಯ ಸೇನ್ ಕೂಡಾ ಬಿಡಬ್ಲ್ಯೂಎಫ್ ಸೂಪರ್ 750 ಪಂದ್ಯಾವಳಿಯಲ್ಲಿ 21-15 12-21 24-22ರಲ್ಲಿ ಭಾರತದವರೇ ಆದ ಪ್ರಿಯಾಂಶು ರಾಜಾವತ್ ವಿರುದ್ಧ ಗೆಲುವಿನ ಆರಂಭ ಪಡೆದರು. ಅವರು ಎರಡನೇ ಸುತ್ತಿನಲ್ಲಿ ಜಪಾನ್‌ನ ಕಾಂತಾ ತ್ಸುನೇಯಾಮಾ ಅವರನ್ನು ಎದುರಿಸಲಿದ್ದಾರೆ.

ಮತ್ತೊಂದೆಡೆ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಮಿಥುನ್ ಮಂಜುನಾಥ್ ಅವರು ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧ 21-13 22-24 18-21ರ ಕಠಿಣ ಹೋರಾಟದಲ್ಲಿ ಸೋತರು. ಪಂದ್ಯವು ಬರೋಬ್ಬರಿ ಒಂದು ಗಂಟೆ 25 ನಿಮಿಷಗಳ ಕಾಲ ನಡೆಯಿತು.

Korea Open 2023: ಚೊಚ್ಚಲ ಕೊರಿಯಾ ಓಪನ್ ಪ್ರಶಸ್ತಿ ಗೆದ್ದ ಭಾರತದ ಸಾತ್ವಿಕ್-ಚಿರಾಗ್; ತಾರಾ ಜೋಡಿಗಿದು ವರ್ಷದ 3ನೇ ಪ್ರತಿಷ್ಠಿತ ಚಿನ್ನದ ಪದಕ

ಕಳೆದ ತಿಂಗಳಷ್ಟೇ ಇಂಡೋನೇಷ್ಯಾ ಚಾಂಪಿಯನ್​​ಗಳಾಗಿದ್ದ ಭಾರತದ ಸ್ಟಾರ್​ ಷಟ್ಲರ್‌ಗಳಾದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ, ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಕೊರಿಯ ಓಪನ್ 500 ಪ್ರಶಸ್ತಿಗೆ (Korean Open 2023) ಮುತ್ತಿಟ್ಟಿದ್ದಾರೆ. ಈ ಸಾಧನೆಯೊಂದಿಗೆ ಈ ವರ್ಷದಲ್ಲಿ ಮೂರನೇ ಬಿಡಬ್ಲ್ಯುಎಫ್​ ವಿಶ್ವ ಟೂರ್​ ಪ್ರಶಸ್ತಿ ಗೆದ್ದು ಅಮೋಘ ದಾಖಲೆ ಬರೆದಿದ್ದಾರೆ. ಜುಲೈ 23ರ ಭಾನುವಾರ ನಡೆದ ರೋಚಕ ಫೈನಲ್​ ಹೋರಾಟದಲ್ಲಿ ವಿಶ್ವದ ನಂ.1 ಶ್ರೇಯಾಂಕದ ಇಂಡೋನೇಷ್ಯಾದ ಜೋಡಿ ಫಜರ್ ಅಲ್ಫಿಯಾನ್ ಮತ್ತು ಮುಹಮ್ಮದ್ ರಿಯಾನ್ ಆರ್ಡಿಯಾಂಟೊಗೆ ಆಘಾತ ನೀಡಿದ ಭಾರತದ ಸಾತ್ವಿಕ್-ಚಿರಾಗ್, 17-21, 21-13, 21-14 ಅಂತರದ ಗೇಮ್​ಗಳಿಂದ ಪ್ರಶಸ್ತಿಗೆ ಕೊರೊಳೊಡ್ಡಿದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ