BWF Rankings: ಸಾಲು ಸಾಲು ಗೆಲುವು, 2ನೇ ಶ್ರೇಯಾಂಕಕ್ಕೆ ನೆಗೆದ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿ
Jul 25, 2023 03:40 PM IST
ಪದಕದೊಂದಿಗೆ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ
- Satwiksairaj Rankireddy and Chirag Shetty: ಪ್ರಸಕ್ತ ಋತುವಿನಲ್ಲಿ ಕೊರಿಯಾ ಓಪನ್, ಸ್ವಿಸ್ ಓಪನ್ ಮತ್ತು ಇಂಡೋನೇಷ್ಯಾ ಓಪನ್ ಪ್ರಶಸ್ತಿಗಳನ್ನು ಗೆದ್ದ ಸ್ಟಾರ್ ಜೋಡಿ ಈಗ 87,211 ಅಂಕಗಳನ್ನು ಪಡೆದಿದ್ದಾರೆ.
ಇತ್ತೀಚೆಗಷ್ಟೇ ಪ್ರತಿಷ್ಠಿತ ಕೊರಿಯ ಓಪನ್ 500 ಪ್ರಶಸ್ತಿ(Korean Open 2023) ಗೆದ್ದ ಭಾರತದ ಸ್ಟಾರ್ ಷಟ್ಲರ್‌ಗಳಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (Satwiksairaj Rankireddy and Chirag Shetty) ಜೋಡಿ, ಮತ್ತೊಂದು ಸಾಧನೆ ಮಾಡಿದ್ದಾರೆ. ಮಂಗಳವಾರ ಪ್ರಕಟಗೊಂಡ ಬಿಡಬ್ಲ್ಯೂಎಫ್ (BWF) ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಇದು ಇವರ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವಾಗಿದೆ.
ಕೊರಿಯ ಓಪನ್ ಟೂರ್ನಿಯಲ್ಲಿ ಗೆಲ್ಲುವುದಕ್ಕೂ ಮುನ್ನ ಅಗ್ರ ನಾಲ್ಕನೇ ಶ್ರೇಯಾಂಕಿತರಾಗಿ ಟೂರ್ನಿಗೆ ಪ್ರವೇಶಿಸಿದ್ದ ಈ ಜೋಡಿ, ಇದೀಗ ಪ್ರತಿಷ್ಠಿತ ಟ್ರೋಫಿ ಗೆಲುವಿನೊಂದಿಗೆ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದಾರೆ. ಪುರುಷರ ಡಬಲ್ಸ್ ಸರ್ಕ್ಯೂಟ್‌ನಲ್ಲಿ ವೃತ್ತಿಜೀವನದ ಉನ್ನತ ಶ್ರೇಯಾಂಕ ಪಡೆದಿದ್ದಾರೆ. ಸಾತ್ವಿಕ್ ಮತ್ತು ಚಿರಾಗ್ ಕಳೆದ ವಾರ ಕೊರಿಯಾ ಓಪನ್ ಸೆಮಿಫೈನಲ್‌ನಲ್ಲಿ ಸೋಲಿಸಿದ್ದ ಚೀನಾದ ಜೋಡಿಯಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ಶ್ರೇಯಾಂಕದಲ್ಲಿ ಹಿಂದೆ ಬಿದ್ದಿದ್ದಾರೆ.
ಈ ಜೋಡಿಯು ಪ್ರಸಕ್ತ ವರ್ಷದಲ್ಲಿ ಮೂರನೇ ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿ ಗೆದ್ದಿದ್ದಾರೆ. ಪ್ರಸಕ್ತ ಋತುವಿನಲ್ಲಿ ಕೊರಿಯಾ ಓಪನ್ ಸೂಪರ್ 500, ಸ್ವಿಸ್ ಓಪನ್ ಸೂಪರ್ 300 ಮತ್ತು ಇಂಡೋನೇಷ್ಯಾ ಓಪನ್ ಸೂಪರ್ 1000 ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಒಟ್ಟು 87,211 ಅಂಕಗಳನ್ನು ಸಂಪಾದಿಸಿದ್ದಾರೆ.
ಅಜೇಯ ಓಟ
ಕೊರಿಯಾ ಓಪನ್ ಮೂಲಕ ಈ ವರ್ಷದ ನಾಲ್ಕನೇ ಫೈನಲ್ ಪಂದ್ಯದಲ್ಲಿ ಆಡಿದ ಸಾತ್ವಿಕ್ ಮತ್ತು ಚಿರಾಗ್, ವಿಶ್ವದ ನಂಬರ್ ವನ್ ಜೋಡಿಯಾದ ಫಜರ್ ಅಲ್ಫಿಯಾನ್ ಮತ್ತು ಮುಹಮದ್ ರಿಯಾನ್ ಅರ್ಡಿಯಾಂಟೊ ಅವರನ್ನು ಸೋಲಿಸಿ, ಪ್ರತಿಷ್ಠಿತ ಟ್ರೋಫಿಗೆ ಮುತ್ತಿಟ್ಟರು. ಇವರಿಬ್ಬರೂ ಈ ಋತುವಿನಲ್ಲಿ ಒಂದೇ ಒಂದು ಫೈನಲ್ ಪಂದ್ಯದಲ್ಲಿಯೂ ಸೋತಿಲ್ಲ. ಅಲ್ಲದೆ BWF ವರ್ಲ್ಡ್ ಟೂರ್‌ನಲ್ಲಿ ಸತತ 10 ಪಂದ್ಯಗಳನ್ನು ಅಜೇಯವಾಗಿ ಗೆದ್ದಿದ್ದಾರೆ.
ಜುಲೈ 23ರ ಭಾನುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಶ್ರೇಯಾಂಕದ ಇಂಡೋನೇಷ್ಯಾದ ಜೋಡಿಯನ್ನು 17-21, 21-13, 21-14 ಅಂತರದಿಂದ ಸೋಲಿಸಿ ಇವರಿಬ್ಬರೂ ಪ್ರಶಸ್ತಿಗೆ ಕೊರೊಳೊಡ್ಡಿದರು. ಮೊದಲ ಸೆಟ್ ಸೋತರೂ ನಂತರದ ಗೇಮ್‌ಗಳಲ್ಲಿ ಪುಟಿದೆದ್ದು ಗೆದ್ದರು.
17ನೇ ಸ್ಥಾನದಲ್ಲಿ ಸಿಂಧು
ಅತ್ತ ಕೊರಿಯಾ ಓಪನ್‌ನಿಂದ ಬೇಗನೆ ನಿರ್ಗಮಿಸಿದ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು, ಸಿಂಗಲ್ಸ್ ಪಟ್ಟಿಯಲ್ಲಿ 17ನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಒಂದು ಸ್ಥಾನ ಕುಸಿತ ಕಂಡು 37ರಲ್ಲಿದ್ದಾರೆ.
ಪುರುಷರ ಸಿಂಗಲ್ಸ್ ಶ್ರೇಯಾಂಕದಲ್ಲಿ ಎಚ್‌ಎಸ್ ಪ್ರಣಯ್ 10ನೇ ಸ್ಥಾನವನ್ನು ಪಡೆದುಕೊಂಡು ಭಾರತದ ಅಗ್ರ ಶ್ರೇಯಾಂಕದ ಶಟ್ಲರ್ ಆಗಿ ಮುಂದುವರೆದಿದ್ದಾರೆ. ಇದೇ ವೇಳೆ ಕೆನಡಾ ಓಪನ್ ವಿಜೇತ ಲಕ್ಷ್ಯ ಸೇನ್ ಕೊರಿಯಾ ಓಪನ್‌ನಿಂದ ವಂಚಿತರಾಗಿ, 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮತ್ತೊಂದೆಡೆ ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ಕಿಡಂಬಿ ಶ್ರೀಕಾಂತ್ 20ನೇ ಸ್ಥಾನದಲ್ಲಿದ್ದಾರೆ.