PKL 11 Playoff: ಸತತ ಸೋಲುಗಳಿಂದ ಕಂಗೆಟ್ಟ ಬೆಂಗಳೂರು ಬುಲ್ಸ್ ಪ್ಲೇಆಫ್ ಅವಕಾಶ ಎಷ್ಟಿದೆ? ಮುಂದಾದರೂ ನಡೆಯುತ್ತಾ ಪವಾಡ?
Nov 25, 2024 06:33 AM IST
ಸತತ ಸೋಲುಗಳಿಂದ ಕಂಗೆಟ್ಟ ಬೆಂಗಳೂರು ಬುಲ್ಸ್ ಪ್ಲೇಆಫ್ ಅವಕಾಶ ಎಷ್ಟಿದೆ? ಮುಂದಾದರೂ ನಡೆಯುತ್ತಾ ಪವಾಡ?
- Bengaluru Bulls: ಪ್ರೊ ಕಬಡ್ಡಿ ಲೀಗ್ ಸೀಸನ್ 11ರಲ್ಲಿ ಬೆಂಗಳೂರು ಬುಲ್ಸ್ ಸತತ ಸೋಲುಗಳಿಂದ ಕಂಗೆಟ್ಟಿದೆ. ಗೆಲುವಿಗೆ ಪರದಾಟ ನಡೆಸುತ್ತಿದೆ. ಆದರೆ ಬುಲ್ಸ್ ಪ್ಲೇಆಫ್ ಹಾದಿ ಕಠಿಣವಾಗಿದ್ದು, ಮುಂದೆ ಏನು ಮಾಡಬೇಕು? ಇಲ್ಲಿದೆ ವಿವರ.
ಪ್ರೊ ಕಬಡ್ಡಿ ಲೀಗ್ 11ನೇ ಸೀಸನ್ ಮೊದಲಾರ್ಧ ಮುಕ್ತಾಯಗೊಂಡು ದ್ವಿತಿಯಾರ್ಧಕ್ಕೆ ಕಾಲಿಟ್ಟಿದೆ. ಆದರೂ ಬೆಂಗಳೂರು ಬುಲ್ಸ್ ತಂಡದ ಅದೃಷ್ಟ ಬದಲಾಗಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿದ್ದು, ಗೆಲುವಿನ ಲಯ ಕಂಡುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಒಂದಲ್ಲ, ಎರಡಲ್ಲ, ಆಡಿರುವ 13 ಪಂದ್ಯಗಳಲ್ಲಿ 11 ಸೋಲುಗಳನ್ನು ಕಂಡಿದೆ. ಆದರೆ ಉಳಿದಿರುವ ಪಂದ್ಯಗಳು ಕೇವಲ 9 ಮಾತ್ರ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಬುಲ್ಸ್, ಪ್ರಸ್ತುತ ಮೇಲೇರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಆದರೆ ಪವಾಡವೇ ನಡೆಯಬೇಕು.
ಸದ್ಯದ ತಂಡದ ಘೋರ ಪರಿಸ್ಥಿತಿ ನೋಡುತ್ತಿದ್ದರೆ ಗೂಳಿಗಳು ಪ್ಲೇ ಆಫ್ ಪ್ರವೇಶಿಸುವುದು ಬಹುತೇಕ ಕಷ್ಟ ಎಂದೇ ಹೇಳಲಾಗುತ್ತಿದೆ. ಸೀಸನ್ಗಳು ಬದಲಾದರೂ, ಆಟಗಾರರು ಬದಲಾದರೂ ಆಟದಲ್ಲಿ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ ಎಂಬುದು ಅಭಿಮಾನಿಗಳ ಆರೋಪ. ಉಳಿದ ಎಲ್ಲಾ 9 ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ 6ರೊಳಗೆ ಸ್ಥಾನ ಪಡೆಯಬೇಕು. ಬುಲ್ಸ್ ಹಣೆಬರಹ ಬದಲಾಗಬೇಕೆಂದರೆ ಎಲ್ಲಾ ಪಂದ್ಯ ಗೆಲ್ಲೋದದರ ಜತೆಗೆ ಉಳಿದ ತಂಡಗಳ ಫಲಿತಾಂಶವೂ ಮಹತ್ವದ ಪಾತ್ರವಹಿಸಲಿದೆ.
ಬದಲಾಗಬೇಕು ಆಟದ ತಂತ್ರಗಳು
ಬೆಂಗಳೂರು ಈವರೆಗೂ 13 ಪಂದ್ಯಗಳಲ್ಲಿ ಆಡಿದ್ದು 2 ಗೆಲುವು, 13 ಸೋಲು ಕಂಡಿದೆ. ಕೇವಲ 15 ಅಂಕ ಪಡೆದಿದೆ. ಅಂಕಗಳ ವ್ಯತ್ಯಾಸದಲ್ಲಿ ಮೈನಸ್ 103 ಇರುವುದು ಅಚ್ಚರಿ ಮೂಡಿಸಿದೆ. ಹರಿಯಾಣ ಸ್ಟೀಲರ್ಸ್ ಇಷ್ಟೇ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 10 ಗೆಲುವು ಸಾಧಿಸಿ 51 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಬೆಂಗಳೂರು ಎಲ್ಲಾ ಪಂದ್ಯಗಳನ್ನೂ ಬೃಹತ್ ಅಂತರದಲ್ಲಿ ಗೆಲ್ಲಲೇಬೇಕು. ಹೀಗಾದರೆ ಪ್ಲೇಆಫ್ ಆಸೆ ಜೀವಂತವಾಗಿರಲಿದೆ. ಅದಕ್ಕಾಗಿ, ಗೇಮ್ ಪ್ಲಾನ್ಸ್, ಆಟದ ತಂತ್ರಗಳು.. ಎಲ್ಲವೂ ಬದಲಾಗಬೇಕಿದೆ. ಎಲ್ಲಾ ಪಂದ್ಯಗಳನ್ನು ಮಾಡು ಇಲ್ಲವೆ ಮಡಿ ಎನ್ನುವಂತೆ ಆಡಬೇಕಿದೆ.
ಪ್ರಸ್ತುತ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ಪ್ರದರ್ಶನ
ತೆಲುಗು ಟೈಟಾನ್ಸ್ ವಿರುದ್ಧ 37-29 ರಿಂದ ಸೋಲು
ಗುಜರಾತ್ ಜೈಂಟ್ಸ್ ವಿರುದ್ಧ 36-32 ರಿಂದ ಸೋಲು
ಯುಪಿ ಯೋಧಾಸ್ ವಿರುದ್ಧ 57-36 ರಿಂದ ಸೋಲು
ಪುಣೇರಿ ಪಲ್ಟನ್ ವಿರುದ್ಧ 22-36 ರಿಂದ ಸೋಲು
ದಬಾಂಗ್ ಡೆಲ್ಲಿ ವಿರುದ್ಧ 34-32 ರಿಂದ ಗೆಲುವು
ತೆಲುಗು ಟೈಟಾನ್ಸ್ ವಿರುದ್ಧ 35-38 ರಿಂದ ಸೋಲು
ತಮಿಳ್ ತಲೈವಾಸ್ ವಿರುದ್ಧ 36-32 ರಿಂದ ಗೆಲುವು
ಬೆಂಗಾಲ್ ವಾರಿಯರ್ಸ್ ವಿರುದ್ಧ 29-40 ರಿಂದ ಸೋಲು
ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 32-39 ರಿಂದ ಸೋಲು
ದಬಾಂಗ್ ಡೆಲ್ಲಿ ವಿರುದ್ಧ 35-25 ರಿಂದ ಸೋಲು
ಯು ಮುಂಬಾ ವಿರುದ್ಧ 37-38 ರಿಂದ ಪರಾಭವ
ಪಾಟ್ನಾ ಪೈರೇಟ್ಸ್ ಎದುರು 31-54 ರಿಂದ ಬೃಹತ್ ಸೋಲು
ಹರಿಯಾಣ ಸ್ಟೀಲರ್ಸ್ ವಿರುದ್ಧ 26-32 ರಿಂದ ಸೋಲು