logo
ಕನ್ನಡ ಸುದ್ದಿ  /  ಕ್ರೀಡೆ  /  Ab De Villiers: ಜ್ವರ ಬಂದಿದ್ದರೂ, ಎಬ್ಬಿಸಿ ಬ್ಯಾಟಿಂಗ್​​ಗೆ ಕಳುಹಿಸಿದ್ರು; 66 ಎಸೆತಗಳಲ್ಲಿ 162 ರನ್​ ಗಳಿಸಿದ ರಹಸ್ಯ ಬಿಚ್ಚಿಟ್ಟ ಎಬಿಡಿ

AB De Villiers: ಜ್ವರ ಬಂದಿದ್ದರೂ, ಎಬ್ಬಿಸಿ ಬ್ಯಾಟಿಂಗ್​​ಗೆ ಕಳುಹಿಸಿದ್ರು; 66 ಎಸೆತಗಳಲ್ಲಿ 162 ರನ್​ ಗಳಿಸಿದ ರಹಸ್ಯ ಬಿಚ್ಚಿಟ್ಟ ಎಬಿಡಿ

Prasanna Kumar P N HT Kannada

Jul 01, 2023 02:41 PM IST

google News

ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​

    • AB De Villiers: 2015ರ ಏಕದಿನ ವಿಶ್ವಕಪ್​​ನಲ್ಲಿ 66 ಎಸೆತಗಳಲ್ಲಿ ಅಜೇಯ 166 ರನ್​ ಸಿಡಿಸಿದ್ದೇಗೆಂಬ ರಹಸ್ಯವನ್ನು ಎಬಿ ಡಿವಿಲಿಯರ್ಸ್​ ಬಹಿರಂಗಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​

ಎಬಿ ಡಿವಿಲಿಯರ್ಸ್​​.. ವಿಶ್ವ ಕ್ರಿಕೆಟ್​ನ ಅತ್ಯಂತ ಭಯಾನಕ ಆಟಗಾರ, ಸೋಲುವ ಹಂತದಲ್ಲೂ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದ ಹೋರಾಟಗಾರ, ಘಟಾನುಘಟಿ ಬೌಲರ್​ಗಳಿಗೆ ಬೆವರಿಳಿಸಿ, ರನ್​ ಪರ್ವತವನ್ನೇ ನಿರ್ಮಿಸುತ್ತಿದ್ದ ಈ 360 ಡಿಗ್ರಿ ಬ್ಯಾಟರ್​​, ಎಲ್ಲಾ ಕ್ರಿಕೆಟ್​ ಶಾಟ್​ಗಳನ್ನೂ ಆಡಿರುವ ಏಕೈಕ ಆಟಗಾರ. ಅವರು ಕ್ರೀಸ್​​ನಲ್ಲಿ ಇದ್ದರೆ, ಎದುರಾಳಿ ಬೌಲರ್​ಗಳು ನಡುಗುತ್ತಿದ್ದರು.

ಎಬಿಡಿ ಅವರ ಅದ್ಭುತ ಇನ್ನಿಂಗ್ಸ್​​ಗಳು ಸಾಕಷ್ಟಿವೆ. ಅದರಲ್ಲಿ 2015ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 162 ರನ್ ಗಳಿಸಿದ್ದು ಒಂದು. ಈ ಇನ್ನಿಂಗ್ಸ್​​ ಎಬಿಡಿ ವೃತ್ತಿ ಜೀವನದ ಅತ್ಯುತ್ತಮ ಇನ್ನಿಂಗ್ಸ್‌. ಫೆಬ್ರವರಿ 27ರಂದು ಸಿಡ್ನಿಯಲ್ಲಿ ನಡೆದ ವಿಂಡೀಸ್​ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 408 ರನ್ ಗಳಿಸಿತು. ಕ್ವಿಂಟನ್ ಡಿ ಕಾಕ್ 12 ರನ್, ಹಾಶಿಮ್ ಆಮ್ಲಾ 65 ರನ್, ಫಾಫ್ ಡು ಪ್ಲೆಸಿಸ್ 62 ರನ್ ಮತ್ತು ರಿಲೆ ರೊಸೊ 61 ರನ್ ಗಳಿಸಿದರು.

ವೇಗದ ಶತಕ ಸಿಡಿಸಿದ್ದ ಎಬಿಡಿ

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​ಗಿಳಿದ ವಿಲಿಯರ್ಸ್, 66 ಎಸೆತಗಳಲ್ಲಿ 17 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ ಅಜೇಯ 162 ರನ್ ಗಳಿಸಿ ವಿಶ್ವ ದಾಖಲೆ ಬರೆದರು. ಕೇವಲ 31 ಎಸೆತಗಳಲ್ಲಿ ದಾಖಲೆಯ ವೇಗದ ಶತಕ ಸಿಡಿಸಿದ ಎಬಿಡಿ ಭರ್ಜರಿ ಆಟಕ್ಕೆ ದಕ್ಷಿಣ ಆಫ್ರಿಕಾ ಕೊನೆಯ 20 ಓವರ್‌ಗಳಲ್ಲಿ 264 ರನ್ ಗಳಿಸಿತು.

ವೆಸ್ಟ್ ಇಂಡೀಸ್ ಈ ಪಂದ್ಯದಲ್ಲಿ 151 ರನ್‌ಗಳಿಗೆ ಆಲೌಟ್ ಆಯಿತು. ಇಮ್ರಾನ್ ತಾಹಿರ್ 5 ವಿಕೆಟ್ ಪಡೆದು ಮಿಂಚಿದರು. ದಕ್ಷಿಣ ಆಫ್ರಿಕಾ 257 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇದೀಗ ಎಬಿಡಿ ಈ ಪಂದ್ಯದ ಕುರಿತು ಮಾತನಾಡಿದ್ದು, ಈ ಪಂದ್ಯಕ್ಕೂ ಮೊದಲು ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆದರೂ ಇಂಜೆಕ್ಷನ್​ ಪಡೆದು ಆಡಿದ್ದರಂತೆ.

'ಇಂಜೆಕ್ಷನ್​ ತೆಗೆದುಕೊಂಡಿದ್ದೆ'

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೂ ಮುನ್ನ ನಾನು ಸಾಕಷ್ಟು ತೊಂದರೆ ಅನುಭವಿಸಿದ್ದೆ. ಇದು ನಮಗೆ ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಬೆಳಗಿನ ಜಾವ 3 ಗಂಟೆಗೆ ನನಗೆ ಜ್ವರ ಬಂದಿತ್ತು. ಮೂರು ಅಥವಾ ನಾಲ್ಕು ಚುಚ್ಚುಮದ್ದು ತೆಗೆದುಕೊಂಡಿದ್ದೆ ಎಂದು ಅಂದಿನ ಘಟನೆಯ ಕುರಿತು ವಿವರಿಸಿದ್ದಾರೆ.

'ಮಲಗಲು ಹೋಗಿದ್ದೆ'

ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ. ಪಂದ್ಯಕ್ಕೂ ಮುನ್ನ ನಾನು ಸಿಡ್ನಿ ಮೈದಾನಕ್ಕೆ ಹೋಗುತ್ತಿದ್ದಂತೆ ನಾನು ಪ್ರಾಕ್ಟೀಸ್​​ ಕೂಡ ಮಾಡಲು ಸಾಧ್ಯವಾಗದೆ ಮಲಗಲು ಹೋಗುತ್ತಿದ್ದೇನೆ ಎಂದು ಕೋಚ್​ಗೆ ಹೇಳಿದ್ದೆ. ಒಂದು ವೇಳೆ ಆಟವಾಡಲು ಆಗದಿದ್ದರೆ ವಿಶ್ರಾಂತಿ ಪಡೆಯಿರಿ ಎಂದಿದ್ದರು. ಆದರೆ, ಈ ಪಂದ್ಯ ತುಂಬಾ ಮಹತ್ವದ್ದೆಂದು ಗೊತ್ತಿದ್ದರೂ ಬಿಟ್ಟುಬಿಡುವುದು ಸರಿಯಲ್ಲ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.

ನಮ್ಮ ತಂಡವೇ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದರಿಂದ ನನ್ನ ಬ್ಯಾಟಿಂಗ್ ಬರುವವರೆಗೂ ಮಲಗಿದ್ದೆ. ಡು ಪ್ಲೆಸಿಸ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ನನ್ನನ್ನು ಎಬ್ಬಿಸಿದರು. ಆಗಿನ್ನೂ ನಾನು ನಿದ್ದೆಯಲ್ಲಿದ್ದೆ. ಕ್ರೀಸ್‌ಗೆ ನಡೆಯುತ್ತೇನಾ? ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಾ ಎಂದೆನಿಸಿತ್ತು ಎಂದು ಹೇಳಿದ್ದಾರೆ.

‘ಚೆಂಡು ಕಣ್ಣಿಗೆ ಕಾಣಲೇ ಇಲ್ಲ’

ಆದರೆ, ಹಠ ಸಾಧಿಸಿ ಎದ್ದು ಹೊರಟೆ. ಆದರೆ ಕ್ರೀಸ್​ನಲ್ಲಿದ್ದಾಗ ನಾನು ನನ್ನ ಮೊದಲ ಎಸೆತವನ್ನು ಎದುರಿಸಿದಾಗ, ಅದು ಯಾವಾಗ ಬಂತು ಎಂದು ನನಗೆ ತಿಳಿದಿರಲಿಲ್ಲ. 2ನೇ ಚೆಂಡು ನಿಧಾನಗತಿಯಲ್ಲಿ ಬಂದಂತೆ ತೋರಿತು. ಆಗ ಔಟಾದರೂ ಪರವಾಗಿಲ್ಲ ಎಂದು ಚೆಂಡನ್ನು ಬಿಟ್ಟು ಬಿಟ್ಟಿದ್ದೆ. ಒಂದೆಡೆ ಬಿಸಿಲು ಉರಿಯುತ್ತಿತ್ತು. ನಿಂತು ಆಡುವಷ್ಟು ತಾಳ್ಮೆ ಇರಲಿಲ್ಲ. ಒಂದು ಕ್ಷಣ ಕಣ್ಣು ಮುಚ್ಚಿದೆ. ಸುತ್ತಲೂ ಅಭಿಮಾನಿಗಳು ಕಿರುಚುತ್ತಿದ್ದರು. ಮೊದಲಿಗೆ ನಿಧಾನವಾಗಿ ಆಟ ಕುದುರಿಸಿಕೊಂಡು, ನಂತರ ಹೊಡೆಯಲು ಪ್ರಾರಂಭಿಸಿದೆ ಎಂದು ಹೇಳಿದ್ದಾರೆ.

ನಿಜ ಹೇಳಬೇಕೆಂದರೆ ಆ ದಿನ ನಾನು ಔಟಾಗುತ್ತೇನೆಂಬ ಭಯ ಇರಲಿಲ್ಲ. ಔಟಾದರೂ ಸರಿ ಎಂದು ತುಂಬಾ ಮುಕ್ತವಾಗಿ ಆಡಿದೆ. ಅದೇ ಆ ಇನ್ನಿಂಗ್ಸ್​ಗೆ ಕಾರಣವಾಗಿತ್ತು. ಆದರೆ ಪಂದ್ಯದ ನಂತರ ಸ್ಕೋರ್​ಬೋರ್ಡ್​ ನೋಡಿ ಆಶ್ಚರ್ಯವಾಯಿತು. ಅದೇಗೆ ಆಡಿದೆ ಎಂಬುದನ್ನು ನೆನೆಸಿಕೊಂಡರೆ ಆಶ್ಚರ್ಯವಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ