logo
ಕನ್ನಡ ಸುದ್ದಿ  /  ಕ್ರೀಡೆ  /  Wtc Final: ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ರಾಹುಲ್ ಬದಲಿ ಆಟಗಾರನ ಘೋಷಿಸಿದ ಬಿಸಿಸಿಐ; ಮೂವರು ಸ್ಟ್ಯಾಂಡ್ ಬೈ ಆಟಗಾರರು ಫಿಕ್ಸ್

WTC final: ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ರಾಹುಲ್ ಬದಲಿ ಆಟಗಾರನ ಘೋಷಿಸಿದ ಬಿಸಿಸಿಐ; ಮೂವರು ಸ್ಟ್ಯಾಂಡ್ ಬೈ ಆಟಗಾರರು ಫಿಕ್ಸ್

Jayaraj HT Kannada

May 08, 2023 06:22 PM IST

google News

ಕೆಎಲ್‌ ರಾಹುಲ್

    • ಬಿಸಿಸಿಐ ಆಯ್ಕೆಗಾರರು ಡಬ್ಲ್ಯೂಟಿಸಿ ಫೈನಲ್‌ಗೆ ಮೂವರು ಸ್ಟ್ಯಾಂಡ್-ಬೈ ಆಟಗಾರರನ್ನು ಹೆಸರಿಸಿದ್ದಾರೆ. ಅವರೇ ರುತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್ ಮತ್ತು ಸೂರ್ಯಕುಮಾರ್ ಯಾದವ್.
ಕೆಎಲ್‌ ರಾಹುಲ್
ಕೆಎಲ್‌ ರಾಹುಲ್ (Getty)

ಐಪಿಎಲ್‌ನಲ್ಲಿ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಕನ್ನಡಿಗ ಕೆಎಲ್‌ ರಾಹುಲ್, ಪ್ರಸಕ್ತ ಆವೃತ್ತಿಯಿಂದಲೇ ಹೊರಬಿದ್ದಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗುತ್ತರುವ ಅವರು, ಮುಂದಿನ ತಿಂಗಳು ಇಂಗ್ಲೆಂಡ್‌ನ ದಿ ಓವಲ್‌ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದದಿಂದಲೂ ಹೊರಬಿದ್ದಿದ್ದಾರೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತವಾಗಿ ತಿಳಿಸಿದೆ. ಸದ್ಯ ಕನ್ನಡಿಗನಿಗೆ ಬದಲಿಯಾಗಿ ಡಬ್ಲ್ಯೂಟಿಸಿ ಫೈನಲ್‌ಗೆ ಮತ್ತೋರ್ವ ಆಟಗಾರನನ್ನು ಆಯ್ಕೆ ಮಾಡಲಾಗಿದೆ.

ಬಿಸಿಸಿಐ ಆಯ್ಕೆದಾರರು, ವಿಕೆಟ್‌ ಕೀಪರ್ ಇಶಾನ್ ಕಿಶನ್ ಅವರನ್ನು ಕೆಎಲ್‌ ಬದಲಿ ಆಟಗಾರನಾಗಿ ಹೆಸರಿಸಿದ್ದಾರೆ. ಬಹು ನಿರೀಕ್ಷಿತ ಫೈನಲ್‌ ಪಂದ್ಯಕ್ಕೂ ಮುಂಚಿತವಾಗಿ, ಮತ್ತಿಬ್ಬರು ಗಾಯಾಳುಗಳಾದ ಜಯದೇವ್ ಉನದ್ಕತ್ ಮತ್ತು ಉಮೇಶ್ ಯಾದವ್ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.

ಮೇ 1ರಂದು, ಲಖನೌನ ಏಕನಾ ಕ್ರೀಡಾಂಗಣದಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯದಲ್ಲಿ, ಫೀಲ್ಡಿಂಗ್ ಮಾಡುವಾಗ ರಾಹುಲ್ ಅವರ ಬಲ ತೊಡೆಗೆ ಗಾಯವಾಗಿತ್ತು. ಹೀಗಾಗಿ ಅವರು ಪಂದ್ಯಾವಳಿಯ ಉಳಿದ ಪಂದ್ಯಗಳಿಂದ ಹೊರಬಿದ್ದರು. “ತಜ್ಞರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ರಾಹುಲ್ ಶೀಘ್ರದಲ್ಲಿಯೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಅಲ್ಲದೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿಗೆ ಒಳಗಾಗುತ್ತಾರೆ ಎಂದು ನಿರ್ಧರಿಸಲಾಗಿದೆ. ಹೀಗಾಗಿ ಮುಂಬರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಿಂದ ಅವರನ್ನು ಹೊರಗಿಡಲಾಗಿದೆ,” ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಬಿಸಿಸಿಐನ ಅಧಿಕೃತ ಘೋಷಣೆಗಿಂತ ಮೂರು ದಿನಗಳ ಮೊದಲು, ತಾನು ಇಂಗ್ಲೆಂಡ್‌ಗೆ ಪ್ರಯಾಣಿಸುತ್ತಿಲ್ಲ ಎಂಬುದಾಗಿ ಖುದ್ದು ಕೆಎಲ್ ರಾಹುಲ್ ತಿಳಿಸಿದ್ದರು. ಇನ್ಸ್ಟಾಗ್ರಾಂ ಮೂಲಕ ಮಾಹಿತಿ ನೀಡಿದ್ದ ಅವರು, ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಬಗ್ಗೆ ಬರೆದುಕೊಂಡಿದ್ದರು.

“ವೈದ್ಯಕೀಯ ತಂಡದೊಂದಿಗೆ ಸಮಾಲೋಚಿಸಿದ ನಂತರ, ಮುನ್ನೆಚ್ಚರಿಕಾ ಕ್ರಮವಾಗಿ ನಾನು ಶೀಘ್ರದಲ್ಲೇ ನನ್ನ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ ಎಂದು ತೀರ್ಮಾನಿಸಲಾಗಿದೆ. ಮುಂಬರುವ ವಾರಗಳಲ್ಲಿ ನನ್ನ ಪುನರ್ವಸತಿ ಮತ್ತು ಚೇತರಿಕೆಯ ಮೇಲೆ ನನ್ನ ಗಮನವಿರುತ್ತದೆ. ಈ ನಿರ್ಧಾರಕ್ಕೆ ಬರಲು ತುಂಬಾ ಕಷ್ಟವಾಗುತ್ತಿದೆ. ಆದರೆ ನಾನು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಇದು ಸರಿಯಾದ ಮಾರ್ಗ ಎಂಬುದು ಸತ್ಯ” ಎಂದು ರಾಹುಲ್ ತಮ್ಮ ಟಿಪ್ಪಣಿಯಲ್ಲಿ ಬರೆದುಕೊಂಡಿದ್ದಾರೆ.

“ಮುಂದಿನ ತಿಂಗಳು ಓವಲ್‌ನಲ್ಲಿ ನಡೆಯುವ ಪಂದ್ಯಕ್ಕೂ ನಾನು ಟೀಮ್ ಇಂಡಿಯಾದೊಂದಿಗೆ ಇರುವುದಿಲ್ಲ. ನೀಲಿ ಬಣ್ಣದ ಜೆರ್ಸಿ ತೊಡಲು ಮತ್ತು ನನ್ನ ದೇಶದ ಪರ ಆಡಲು ನನ್ನಿಂದ ಸಾಧ್ಯವಾಗುವ ಎಲ್ಲವನ್ನೂ ಮಾಡುತ್ತೇನೆ. ಭಾರತದ ಪರ ಆಡುವುದೇ ನನ್ನ ಪ್ರಧಾನ ಆದ್ಯತೆ” ಎಂದು ರಾಹುಲ್‌ ತಿಳಿಸಿದ್ದಾರೆ.

ಈ ಮಧ್ಯೆ ಬಿಸಿಸಿಐ ಆಯ್ಕೆಗಾರರು ಡಬ್ಲ್ಯೂಟಿಸಿ ಫೈನಲ್‌ಗೆ ಮೂವರು ಸ್ಟ್ಯಾಂಡ್-ಬೈ ಆಟಗಾರರನ್ನು ಹೆಸರಿಸಿದ್ದಾರೆ. ಅವರೇ ರುತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್ ಮತ್ತು ಸೂರ್ಯಕುಮಾರ್ ಯಾದವ್.

ಇದೇ ವೇಳೆ ಬಿಸಿಸಿಐ, ಜಯದೇವ್ ಉನದ್ಕತ್ ಮತ್ತು ಉಮೇಶ್ ಯಾದವ್ ಗಾಯಗಳ ಬಗ್ಗೆ ಪ್ರಮುಖ ಮಾಹಿತಿ ನೀಡಿದೆ. ಲಖನೌ ವೇಗದ ಬೌಲರ್ ಉನದ್ಕತ್‌, ನೆಟ್‌ನಲ್ಲಿ ಅಭ್ಯಾಸದ ವೇಳೆ ಭುಜದ ಭಾಗಕ್ಕೆ ಗಾಯ ಮಾಡಿಕೊಂಡಿದ್ದರು. ಇದೀಗ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA)ಗೆ ಕಳುಹಿಸಲಾಗಿದ್ದು, ಅವರಿಗೆ ಬದಲಿ ಆಟಗಾರನನ್ನು ಘೋಷಿಸುವುದಕ್ಕೂ ಮುನ್ನ ಅವರ ಚೇತರಿಕೆ ಮೇಲೆ ಬಿಸಿಸಿಐ ನಿಗಾ ವಹಿಸಿದೆ.

“ಎಡಗೈ ವೇಗದ ಬೌಲರ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಅವಧಿಗೆ ಒಳಗಾಗುತ್ತಿದ್ದಾರೆ. ಅವರು ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾಗವಹಿಸುವ ಬಗ್ಗೆ ನಂತರದ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ.

ಡಬ್ಲ್ಯೂಟಿಸಿ ಫೈನಲ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್‌ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್‌ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಇಶಾನ್ ಕಿಶನ್ (ವಿಕೆಟ್‌ ಕೀಪರ್).

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ