Sarfaraz Khan: ಸರ್ಫರಾಜ್ ಖಾನ್ ಕಡೆಗಣನೆಗೆ ಪ್ರದರ್ಶನ ಕಾರಣವಲ್ಲ; ಫಿಟ್‌ನೆಸ್, ನಡವಳಿಕೆ ಕೂಡಾ ಎಂದ ಬಿಸಿಸಿಐ ಅಧಿಕಾರಿ
Jan 09, 2024 08:06 PM IST
ಸರ್ಫರಾಜ್ ಖಾನ್
- ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡದಲ್ಲಿ ಸರ್ಫರಾಜ್‌ಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಕೂಡಾ ಹುಸಿಯಾಗಿದೆ. ಸದ್ಯ, ಸರ್ಫರಾಜ್ ಆಯ್ಕೆಯಾಗದಿರುವುದಕ್ಕೆ ಬಿಸಿಸಿಐನ ಅಧಿಕಾರಿಯೊಬ್ಬರು ಕಾರಣ ತಿಳಿಸಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹೊರತಾಗಿಯೂ, ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡುವ ಅವಕಾಶವನ್ನು ಸರ್ಫರಾಜ್ ಖಾನ್ (Sarfaraz Khan) ಪಡೆಯುತ್ತಿಲ್ಲ. ರಣಜಿ ಟ್ರೋಫಿಯ ಮೂರು ಋತುಗಳಲ್ಲಿ ಸ್ಥಿರ ಪ್ರದರ್ಶನ ನೀಡುವುದರ ಜೊತೆಗೆ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಎರಡನೇ ಅತ್ಯುತ್ತಮ ಸರಾಸರಿ ಕಾಯ್ದುಕೊಂಡ ಸರ್ಫರಾಜ್ ಆಯ್ಕೆದಾರರ ಮನಗೆದ್ದಿಲ್ಲ. ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಡಾನ್ ಬ್ರಾಡ್ಮನ್ (ಕನಿಷ್ಠ 2000 ರನ್ ಗಳಿಸಿದ ಬ್ಯಾಟರ್‌ಗಳ ಪೈಕಿ) ಬಳಿಕ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ಸರಾಸರಿ ಕಾಯ್ದುಕೊಂಡಿರುವ ವಿಶ್ವದ ಎರಡನೇ ಬ್ಯಾಟರ್ ಸರ್ಫರಾಜ್. ಆದರೂ ಟೀಮ್ ಇಂಡಿಯಾಗೆ ಇವರು ಆಯ್ಕೆಯಾಗಿದಿರುವುದು ಹಲವು ದಿಗ್ಗಜ ಕ್ರಿಕೆಟಿಗರ ಅಚ್ಚರಿಗೆ ಕಾರಣವಾಗಿದೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ 16 ಸದಸ್ಯರ ಭಾರತ ಟೆಸ್ಟ್ ತಂಡದಲ್ಲಿ ಸರ್ಫರಾಜ್‌ಗೆ ಅವಕಾಶ ಸಿಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಕೂಡಾ ಹುಸಿಯಾಗಿದೆ. ವಿಂಡೀಸ್ ಪ್ರವಾಸಕ್ಕೆ ಭಾರತ ತಂಡ ಆಯ್ಕೆಯಾಗುತ್ತಿದ್ದಂತೆಯೇ ಆಯ್ಕೆಗಾರರ ನಿರ್ಧಾರವನ್ನು ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ದಿಗ್ಗಜರು ಟೀಕಿಸಿದ್ದಾರೆ. ಸದ್ಯ, ಸರ್ಫರಾಜ್ ಆಯ್ಕೆಯಾಗದಿರುವುದಕ್ಕೆ ಬಿಸಿಸಿಐನ ಅಧಿಕಾರಿಯೊಬ್ಬರು ಕಾರಣ ತಿಳಿಸಿದ್ದಾರೆ.
ಆಯ್ಕೆ ಬೆಳವಣಿಗೆಗಳ ಬಗ್ಗೆ ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿರುವ ಹೆಸರು ಹೇಳಲು ಇಚ್ಛಿಸದ ಬಿಸಿಸಿಐ ಅಧಿಕಾರಿಯೊಬ್ಬರು, ಸರ್ಫರಾಜ್ ಅವರನ್ನು ಆಯ್ಕೆ ಮಾಡದಿರುವುದಕ್ಕೆ ಅವರ ಪ್ರದರ್ಶನದ ಹೊರತಾದ ಕಾರಣವನ್ನು ತಿಳಿಸಿದ್ದಾರೆ. ಅದರಲ್ಲ ಪ್ರಮುಖ ಅಂಶವೆಂದರೆ ಅವರ ಫಿಟ್ನೆಸ್.
"ಆಯ್ಕೆಯಾಗದ್ದಕ್ಕೆ ಸಮಾಜದಿಂದ ಆಕ್ರೋಶದ ಪ್ರತಿಕ್ರಿಯೆ ವ್ಯಕ್ತವಾಗುವುದು ಅರ್ಥವಾಗುತ್ತಿದೆ. ಆದರೆ ಸರ್ಫರಾಜ್ ಅವರನ್ನು ಪದೇ ಪದೇ ನಿರ್ಲಕ್ಷಿಸುವುದರ ಹಿಂದೆ ಬಲವಾದ ಕಾರಣವಿದೆ. ಅದಕ್ಕೆ ಕಾರಣ ಕ್ರಿಕೆಟ್ ಮಾತ್ರ ಅಲ್ಲ ಎಂಬುದನ್ನು ನಾನು ಸ್ವಲ್ಪ ಖಚಿತವಾಗಿ ಹೇಳಬಲ್ಲೆ. ಹಲವಾರು ಕಾರಣಗಳಿಗಾಗಿ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ" ಎಂದು ಅಧಿಕಾರಿ ಹೇಳಿದರು.
“ರಣಜಿ ಕ್ರಿಕೆಟ್‌ನಲ್ಲಿ ಸತತವಾಗಿ 900ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರನನ್ನು ಪರಿಗಣಿಸದಿರುವ ಆಯ್ಕೆದಾರರೇನಾದರೂ ಮೂರ್ಖರೇ? ಅಲ್ಲ. ಅದಕ್ಕೆ ಆಟಗಾರನ ಫಿಟ್ನೆಸ್ ಒಂದು ಪ್ರಮುಖ ಕಾರಣ. ಖಂಡಿತವಾಗಿಯೂ ಅವರ ಆಟದ ಗುಣಮಟ್ಟದ ಕೊರತೆ ಅಲ್ಲ,” ಎಂದು ಅವರು ಹೇಳಿದ್ದಾರೆ.
ಆಯ್ಕೆದಾರರು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸರ್ಫರಾಜ್ ಅವರ "ಆಫ್-ಫೀಲ್ಡ್ ನಡವಳಿಕೆ" ಕೂಡಾ ಹೆಚ್ಚು ಮಹತ್ವದ್ದು ಎಂದು ಅಧಿಕಾರಿಯು ಬೊಟ್ಟು ಮಾಡಿ ತೋರಿಸಿದರು. ಈ ಹಿಂದೆ ರಣಜಿ ಪಂದ್ಯದಲ್ಲಿ ದೆಹಲಿ ವಿರುದ್ಧ ಶತಕ ಬಾರಿಸಿದ ಬಳಿಕ ಅವರ ಸಂಭ್ರಮಾಚರಣೆಯ ಬಗ್ಗೆ ಎತ್ತಿ ತೋರಿಸಿದರು. “ಮೈದಾನದ ಒಳಗೆ ಮತ್ತು ಹೊರಗೆ ಅವರ ನಡವಳಿಕೆಯ ಅಷ್ಟೊಂದು ಸಮರ್ಪಕವಾಗಿಲ್ಲ. ವರ್ತನೆ ಹಾಗೂ ಕೆಲವು ಸನ್ನೆಗಳನ್ನು ಮಾಡುವುದು ಸಲ್ಲದು. ಹೆಚ್ಚು ಶಿಸ್ತಿನಿಂದಿದ್ದರೆ ಅವರಿಗೆ ಒಳ್ಳೆಯದು” ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.
ಸರ್ಫರಾಜ್ ತಮ್ಮ ಕೊನೆಯ ಮೂರು ರಣಜಿ ಟ್ರೋಫಿ ಆವೃತ್ತಿಗಳಿಂದ ಬರೋಬ್ಬರಿ 2566 ರನ್ ಕಲೆ ಹಾಕಿದ್ದಾರೆ. 2019/20 ಋತುವಿನಲ್ಲಿ 928 ರನ್, 2022-23ರಲ್ಲಿ 982 ರನ್ ಮತ್ತು 2022-23 ಋತುವಿನಲ್ಲಿ 656 ರನ್ ಪೇರಿಸಿದ್ದಾರೆ. ರಣಜಿ ಋತುಗಳ ಹ್ಯಾಟ್ರಿಕ್ ಸಾಧನೆಯಿಂದ ವೃತ್ತಿಜೀವನದ ಪ್ರಥಮ ದರ್ಜೆಯ ಸರಾಸರಿ 79.65 ಇದೆ. ಇದು ಭಾರತದ ಇತರ ಯಾವುದೇ ಬ್ಯಾಟರ್‌ಗಳಿಂದ ಉತ್ತಮ ಸಾಧನೆ.