logo
ಕನ್ನಡ ಸುದ್ದಿ  /  ಕ್ರೀಡೆ  /  Sachin Tendulkar 50th Birthday: ದಾಖಲೆಗಳ ಮಹಾರಾಜ ಸಚಿನ್​ ತೆಂಡೂಲ್ಕರ್​​ಗೆ 50ನೇ ಜನ್ಮದಿನದ ಸಂಭ್ರಮ; ಸಾಧನೆಗಳ ಕಿರು ಪರಿಚಯ ಇಲ್ಲಿದೆ!

Sachin Tendulkar 50th birthday: ದಾಖಲೆಗಳ ಮಹಾರಾಜ ಸಚಿನ್​ ತೆಂಡೂಲ್ಕರ್​​ಗೆ 50ನೇ ಜನ್ಮದಿನದ ಸಂಭ್ರಮ; ಸಾಧನೆಗಳ ಕಿರು ಪರಿಚಯ ಇಲ್ಲಿದೆ!

Prasanna Kumar P N HT Kannada

Apr 24, 2023 07:00 AM IST

ಸಚಿನ್​ ತೆಂಡೂಲ್ಕರ್‌

    • ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ರ 50ನೇ ಹುಟ್ಟುಹಬ್ಬವನ್ನು 2 ದಿನ ಮೊದಲೇ ಮುಂಬೈ ಇಂಡಿಯನ್ಸ್‌ ತಂಡ ವಾಂಖೆಡೆ ಮೈದಾನದಲ್ಲಿ ವಿಶೇಷವಾಗಿ ಆಚರಿಸಲಾಗಿತ್ತು. ಪಂಜಾಬ್‌ ಕಿಂಗ್ಸ್​​ ಎದುರಿನ ಪಂದ್ಯದ ನಡುವೆಯೇ 2ನೇ ಟೈಮ್‌ ಔಟ್‌ ಸಂದರ್ಭದಲ್ಲಿ ಮುಂಬೈ ತಂಡದ ಡಗೌಟ್‌ ಬಳಿ ಸಚಿನ್‌ ಕೇಕ್‌ ಕತ್ತರಿಸಿದ್ದರು.
ಸಚಿನ್​ ತೆಂಡೂಲ್ಕರ್‌
ಸಚಿನ್​ ತೆಂಡೂಲ್ಕರ್‌

ಬ್ಯಾಟಿಂಗ್​ ದಿಗ್ಗಜ, ಲಿಟಲ್​ ಮಾಸ್ಟರ್​​​​, ಕ್ರಿಕೆಟ್ ಕ್ಷೇತ್ರದಲ್ಲಿ ದೇವರು ಎಂದೇ ಪರಿಗಣಿತವಾಗಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಇಂದು (ಏಪ್ರಿಲ್​​ 24) ತಮ್ಮ 50ನೇ ಜನ್ಮದಿನದ (Sachin Tendulkar 50th birthday) ಸಂಭ್ರಮ. 1973ರ ಏಪ್ರಿಲ್ 24 ರಂದು ಜನಿಸಿದ ಮಹಾರಾಷ್ಟ್ರದ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದು 16ನೇ ವಯಸ್ಸಿನಲ್ಲಿ. 24 ವರ್ಷಗಳ ಕಾಲ ಕ್ರಿಕೆಟ್​​ ಜಗತನ್ನು ಆಳಿದ ಕಿರೀಟವಿಲ್ಲದ ಮಹಾರಾಜರಾದರು ಸಚಿನ್​​. ಅವರ ಜನ್ಮದಿನಕ್ಕೆ ಹಾಲಿ-ಮಾಜಿ ಕ್ರಿಕೆಟರ್ಸ್​, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಕ್ರಿಕೆಟ್​ನ ದಂತಕತೆ​ ಸಚಿನ್ ಪ್ರಸ್ತುತ ಮುಂಬೈನಲ್ಲೇ ನೆಲೆಸಿದ್ದಾರೆ. ಆದರೆ, 50ನೇ ಹುಟ್ಟುಹಬ್ಬವನ್ನು ಕುಟುಂಬದವರೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಐಪಿಎಲ್ 2023ರಲ್ಲಿ ಮುಂಬೈ ತಂಡದ ಮೆಂಟರ್​​​​​ ಆಗಿರುವ ಸಚಿನ್​​​, ಕುಟುಂಬದ ಜೊತೆಗೆ ಗೋವಾಗೆ ಬಂದಿಳಿದಿದ್ದಾರೆ. ಅವರ ವಿಶೇಷ 50ನೇ ಜನ್ಮದಿನ ಸ್ಮರಣೀಯವಾಗಿರಲು ಕುಟುಂಬ ಬಯಸಿದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಚಿನ್​​ ಅರ್ಧಶತಕದ ಹುಟ್ಟುಹಬ್ಬ ಪ್ರಯುಕ್ತದ ಹಿನ್ನೆಲೆ ಎಂದಿಗೂ ಮುರಿಯದ ಅವರ ಅಮೋಘ ಸಾಧನೆ, ದಾಖಲೆಗಳ ಕಿರು ಪರಿಚಯ ಇಲ್ಲಿದೆ. 1989ರ ನವೆಂಬರ್​​ 15ರ ಪಾಕಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಅದೇ ವರ್ಷ ಡಿಸೆಂಬರ್​ 18ರಂದು ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು. 2013ರಲ್ಲಿ ವೆಸ್ಟ್​​ ವಿಂಡೀಸ್​ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್​ಗೆ ಹಾಗೂ 2012ರಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​​ ಲೋಕಕ್ಕೆ ಗುಡ್ ಬೈ ಹೇಳಿದ್ದರು.

ತೆಂಡೂಲ್ಕರ್​ ಭಾರತದ ಪರ 200 ಟೆಸ್ಟ್ ಪಂದ್ಯಗಳು (Tests), 463 ಏಕದಿನ ಪಂದ್ಯಗಳು (ODI) ಮತ್ತು ಏಕೈಕ ಟಿ20 ಪಂದ್ಯ (T20I) ಆಡಿದ್ದಾರೆ. ಕ್ರಿಕೆಟ್​​ ಜಗತ್ತಿನ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ 100 ಶತಕ ಬಾರಿಸಿರುವ ವಿಶ್ವದ ಏಕೈಕ ಕ್ರಿಕೆಟಿಗ ಅವರೊಬ್ಬರೇ! ಸುಮಾರು ಎರಡೂವರೆ ದಶಕಗಳ ಕಾಲ ಮಾಸ್ಟರ್‌ ಬ್ಲಾಸ್ಟರ್ ಕ್ರಿಕೆಟ್ ಜಗತ್ತನ್ನು ಆಳಿದ್ದಾರೆ. ಅವರ ಹೆಸರಿನಲ್ಲಿ ಗರಿಷ್ಠ ಟೆಸ್ಟ್ ಹಾಗೂ ಏಕದಿನ ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ ಎಂಗ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

200 ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ 15,921 ರನ್, ಬಾರಿಸಿದ್ದಾರೆ. ಇದರಲ್ಲಿ 51 ಶತಕಗಳಿವೆ. 463 ಏಕದಿನ ಪಂದ್ಯಗಳನ್ನಾಡಿದ 49 ಶತಕ ಹಾಗೂ 96 ಅರ್ಧಶತಕ ಸಹಿತ 18,426 ರನ್ ಸಿಡಿಸಿದ್ದಾರೆ. ಸಚಿನ್ ತೆಂಡುಲ್ಕರ್ 6 ಬಾರಿ ಏಕದಿನ ವಿಶ್ವಕಪ್​​ಗಳಲ್ಲಿ ಭಾರತ ತಂಡದ ಸದಸ್ಯರಾಗಿದ್ದಾರೆ. MS ಧೋನಿ ನೇತೃತ್ವದ ಭಾರತ 2011ರಲ್ಲಿ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಸಚಿನ್​ ಕೂಡ ಮಹತ್ವದ ಪಾತ್ರ ವಹಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಎನ್ನುವ ಶ್ರೇಯ ಕೂಡ ತೆಂಡುಲ್ಕರ್​ಗೆ ಸಲ್ಲಲಿದೆ.

ಸಚಿನ್ ದಾಖಲೆಗಳ ಸರದಾರ. ಅಸಾಧ್ಯವಾದದ್ದನ್ನೂ ನೀರು ಕುಡಿದಷ್ಟೇ ಸುಲಭವಾಗಿ ಸಾಧಿಸುತ್ತಿದ್ದ ಛಲಗಾರ. ಅವರ ಹೆಸರಿನಲ್ಲಿ ದಾಖಲೆಗಳ ಸರಮಾಲೆಯೇ ಇದೆ. 24 ವರ್ಷಗಳ ಸುದೀರ್ಘ ಕ್ರಿಕೆಟ್ ಕರಿಯರ್​ನಲ್ಲಿ ಸಚಿನ್ ಒಟ್ಟಾರೆ ಆಡಿದ 664 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 34,357 ರನ್ ಸಿಡಿಸಿದ್ದಾರೆ. ಬೌಲಿಂಗ್‌ನಲ್ಲೂ ಮಿಂಚಿದ್ದು, 201 ವಿಕೆಟ್​​ ಪಡೆದಿದ್ದಾರೆ. ಅಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಪರ 2,334 ರನ್ ಬಾರಿಸಿದ್ದಾರೆ. 

 ಟೆಸ್ಟ್ (15,921) ಮತ್ತು ಏಕದಿನ ಕ್ರಿಕೆಟ್​​​​​ನಲ್ಲಿ (18,426) ಅತಿ ಹೆಚ್ಚು ರನ್, ಟೆಸ್ಟ್ (50) ಮತ್ತು ಏಕದಿನ (49) ಕ್ರಿಕೆಟ್​​ನಲ್ಲಿ ಹೆಚ್ಚು ಶತಕಗಳು, ಅತಿ ಹೆಚ್ಚು ಟೆಸ್ಟ್ (200) ಪಂದ್ಯಗಳು, ಅತಿ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು (463), ಅತಿ ಹೆಚ್ಚು ಪಂದ್ಯಶ್ರೇಷ್ಠ (62) ಪ್ರಶಸ್ತಿ, ಹೆಚ್ಚು ಸರಣಿ ಶ್ರೇಷ್ಠ (15) ಪ್ರಶಸ್ತಿ, ಏಕದಿನ ಪಂದ್ಯದಲ್ಲಿ 200 ರನ್ ಸಿಡಿಸಿದ ಮೊದಲ ಆಟಗಾರ, ವಿಶ್ವಕಪ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್, ಟೆಸ್ಟ್ ಪಂದ್ಯಗಳಲ್ಲಿ 50 ಶತಕ ಗಳಿಸಿದ ಮೊದಲ ಆಟಗಾರ.

ಟೆಸ್ಟ್‌ನಲ್ಲಿ ವೇಗವಾಗಿ 10,000 ರನ್‌ (195 ಇನ್ನಿಂಗ್ಸ್) 14,000 ರನ್‌ ( 279 ಇನ್ನಿಂಗ್ಸ್) 15,000 ರನ್ (300 ಇನಿಂಗ್ಸ್​) ಪೂರೈಸಿದ್ದಾರೆ. ಹೆಚ್ಚು ಬಾರಿ 90ಕ್ಕಿಂತ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆ ಸಚಿನ್ ಹೆಸರಿನಲ್ಲಿದೆ. ಒಂದೇ ಏಕದಿನ ವಿಶ್ವಕಪ್‌ನಲ್ಲಿ (2003ರಲ್ಲಿ) ಹೆಚ್ಚು ರನ್ ಸಿಡಿಸಿದ ಸಾಧನೆಯೂ ಅವರ ಹೆಸರಲ್ಲಿದೆ. 11 ಪಂದ್ಯಗಳಿಂದ ಸರಾಸರಿಯಲ್ಲಿ 673 ರನ್ ಗಳಿಸಿದ್ದರು. ಐಸಿಸಿ ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸಿದ್ದು, 45 ಪಂದ್ಯಗಳಿಂದ 56.95 ಸರಾಸರಿಯಲ್ಲಿ 2278 ರನ್ ಬಾರಿಸಿದ್ದಾರೆ.

ಸಚಿನ್ ಅವರ ಸಾಧನೆಗೆ ಪದ್ಮವಿಭೂಷಣ ಪ್ರಶಸ್ತಿ, ಭಾರತ ರತ್ನ, ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮಶ್ರೀ ಪ್ರಶಸ್ತಿ, ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ 2020 ಸೇರಿದಂತೆ ಅನೇಕ ಪ್ರಶಸ್ತಿಗಳು ದೊರಕಿವೆ.

    ಹಂಚಿಕೊಳ್ಳಲು ಲೇಖನಗಳು