SRH vs DC: ವಾಷಿಂಗ್ಟನ್ ಸ್ಪಿನ್ ಮೋಡಿಗೆ ಕುಸಿತ ಕಂಡ ಡೆಲ್ಲಿ ಬ್ಯಾಟಿಂಗ್ ಲೈನಪ್; ಹೈದರಾಬಾದ್‌ಗೆ ಸುಲಭ ಗುರಿ
Apr 24, 2023 09:22 PM IST
ವಾಷಿಂಗ್ಟನ್ ಸುಂದರ್ ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸಿದರು.
- ಬೃಹತ್ ಮೊತ್ತ ಕಲೆ ಹಾಕಿ ಆತಿಥೇಯರ ವಿರುದ್ಧ ಗೆಲ್ಲುವ ಡೆಲ್ಲಿ ತಂಡದ ಆಸೆಗೆ ವಾಷಿಂಗ್ಟನ್ ಸುಂದರ್ ಅಡ್ಡಿಯಾದರು. ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ, ದೊಡ್ಡ ಮೊತ್ತ ಗಳಿಸುವ ಡೆಲ್ಲಿ ಆಸೆಗೆ ತಣ್ಣೀರೆರಚಿದರು.
ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಸವಾಲಿನ ಗುರಿ ನೀಡಿದೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡವು, ಕನ್ನಡಿಗ ಮನೀಶ್ ಪಾಂಡೆ ತಾಳ್ಮೆಯ ಆಟದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 144 ರನ್ ಕಲೆ ಹಾಕಿದೆ. ಆ ಮೂಲಕ ಎಸ್‌ಆರ್‌ಹೆಚ್ ತಂಡಕ್ಕೆ 145 ರನ್‌ಗಳ ಸರಳ ಗುರಿ ನೀಡಿದೆ.
ಪ್ರಮುಖ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬೃಹತ್ ಮೊತ್ತ ಕಲೆ ಹಾಕಿ ಆತಿಥೇಯರ ವಿರುದ್ಧ ಗೆಲ್ಲುವ ಡೆಲ್ಲಿ ತಂಡದ ಆಸೆಗೆ ವಾಷಿಂಗ್ಟನ್ ಸುಂದರ್ ಸೇರಿದಂತೆ ಪ್ರಮುಖ ಬೌಲರ್‌ಗಳು ಅಡ್ಡಿಯಾದರು. ಒಂದೇ ಓವರ್‌ನಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ, ದೊಡ್ಡ ಮೊತ್ತ ಗಳಿಸುವ ಡೆಲ್ಲಿ ಆಸೆಗೆ ವಾಷಿಂಗ್ಟನ್ ಸುಂದರ್ ತಣ್ಣೀರೆರಚಿದರು.
ಆರಂಭಿಕರಾಗಿ ಕಣಕ್ಕಿಳಿದ ಫಿಲಿಪ್ ಸಾಲ್ಟ್ ಗೋಲ್ಡನ್ ಡಕ್‌ಗೆ ಬಲಿಯಾದರು. ಭುವಿ ಎಸೆತದಲ್ಲಿ ವಿಕೆಟ್ ಕೀಪರ್ ಕ್ಲಾಸೆನ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಈ ವೇಳೆ ಬಂದ ಮಾರ್ಷ್, ನಾಯಕ ವಾರ್ನರ್ ಜೊತೆಗೂಡಿ ಕೆಲಕಾಲ ಅಬ್ಬರಿಸಿದರು. ಆದರೆ, 25 ರನ್ ಗಳಿಸಿದ್ದಾಗ ನಟರಾಜನ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.
ಈವರೆಗಿನ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ನಾಯಕ ವಾರ್ನರ್, 21 ರನ್ ಗಳಿಸಿದ್ದಾಗ ಕ್ಯಾಚ್ ನೀಡಿ ಔಟಾದರು. ಆ ಓವರ್ ಎಸೆದ ವಾಷಿಂಗ್ಟನ್ ಸುಂದರ್, ಮೇಲಿಂದ ಮೇಲೆ ಮೂರು ವಿಕೆಟ್ ಕಿತ್ತರು. ಡೇವಿಡ್ ವಾರ್ನರ್ ಔಟಾದ ಬೆನ್ನಲ್ಲೇ ಸರ್ಫರಾಜ್ ಖಾನ್ ಮತ್ತು ಅಮನ್ ಹಕಿಮ್ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಸೇರಿಕೊಂಡರು.
ಈ ವೇಳೆ ತಂಡವನ್ನು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವತ್ತ ಮುನ್ನಡೆಸುವ ಜವಾಬ್ದಾರಿ ಮನೀಶ್ ಪಾಂಡೆ ಮತ್ತು ಅಕ್ಷರ್ ಪಟೇಲ್ ಮೇಲೆ ಬಂತು. ಕ್ರೀಸ್‌ಕಚ್ಚಿ ಆಡಿ ಉತ್ತಮ ಜೊತೆಯಾಟವಾಡಿದ ಇವರಿಬ್ಬರು, 59 ಎಸೆತಗಳಲ್ಲಿ 69 ರನ್ ಕಲೆ ಹಾಕಿದರು. ಎಸೆತಕ್ಕೊಂದರಂತೆ 34 ರನ್ ಗಳಿಸಿದ ಅಕ್ಷರ್ ಪಟೇಲ್, ಭುವನೇಶ್ವರ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. 27 ಎಸೆತಗಳಲ್ಲಿ 34 ರನ್ ಗಳಿಸಿದ್ದ ಮನೀಶ್ ಪಾಂಡೆ, ಅನಗತ್ಯ ರನ್ ಕದಿಯಲು ಹೋಗಿ ರನೌಟ್ ಆದರು. ಡೆತ್ ಓವರ್‌ಗಳಲ್ಲಿ ಬೌಲರ್‌ಗಳಿಂದ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ಹೊರಬರಲಿಲ್ಲ. ಹೀಗಾಗಿ ತಂಡದ ಮೊತ್ತ ಹೆಚ್ಚಲಿಲ್ಲ.
ಹೈದರಾಬಾದ್ ಆಡುವ ಬಳಗ
ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್, ಐಡೆನ್ ಮಾರ್ಕ್ರಾಮ್ (ನಾಯಕ), ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಾಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್.
ಡೆಲ್ಲಿ ಆಡುವ ಬಳಗ
ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಅಕ್ಸರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪಾಲ್ ಪಟೇಲ್, ಅನ್ರಿಚ್ ನಾರ್ಟ್ಜೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ.