logo
ಕನ್ನಡ ಸುದ್ದಿ  /  ಕ್ರೀಡೆ  /  Sadhguru On Csk: ಧೋನಿ ಸಿಎಸ್‌ಕೆ ತಂಡವನ್ನು ಇತರರಿಗಿಂತ ಭಿನ್ನವಾಗಿಸಿದ್ದಾರೆ; ಸದ್ಗುರು ಮಾತು ವೈರಲ್

Sadhguru on CSK: ಧೋನಿ ಸಿಎಸ್‌ಕೆ ತಂಡವನ್ನು ಇತರರಿಗಿಂತ ಭಿನ್ನವಾಗಿಸಿದ್ದಾರೆ; ಸದ್ಗುರು ಮಾತು ವೈರಲ್

Jayaraj HT Kannada

May 28, 2023 10:08 PM IST

google News

ಎಂಎಸ್ ಧೋನಿ; ಸದ್ಗುರು

    • ನೆಚ್ಚಿನ ಐಪಿಎಲ್ ತಂಡ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಸದ್ಗುರು, ಖಂಡಿತವಾಗಿಯೂ ಸಿಎಸ್‌ಕೆ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ.
ಎಂಎಸ್ ಧೋನಿ; ಸದ್ಗುರು
ಎಂಎಸ್ ಧೋನಿ; ಸದ್ಗುರು

ಐಪಿಎಲ್‌ನ ಪ್ರಸಕ್ತ ಆವೃತ್ತಿಯ ಫೈನಲ್‌ ಪಂದ್ಯಕ್ಕೂ ಮುನ್ನ, ಸದ್ಗುರು (Sadhguru) ಅವರು ತಮ್ಮ ಫೇವರೆಟ್‌ ತಂಡ ಯಾವುದೆಂದು ಹೇಳಿರುವ ವಿಡಿಯೋ ವೈರಲ್‌ ಆಗಿದೆ. ತಮ್ಮ ನೆಚ್ಚಿನ ತಂಡ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಎಂದು ಸದ್ಗುರು ಹೇಳಿರುವ ಹಳೆಯ ವಿಡಿಯೋ ಇದಾಗಿದ್ದು, ಫೈನಲ್‌ ಪಂದ್ಯಕ್ಕೂ ಮುಂಚಿತವಾಗಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವೆಸ್ಟ್ ಇಂಡೀಸ್‌ ದೈತ್ಯ, 'ದಿ ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ (Chris Gayle) ಅವರು ಸದ್ಗುರು ಅವರನ್ನು ಮಾತನಾಡಿಸಿದ್ದಾರೆ. "ನಿಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದು?" ಎಂದು ಆರ್‌ಸಿಬಿಯ ಮಾಜಿ ಆಟಗಾರ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸದ್ಗುರು, "ಖಂಡಿತವಾಗಿಯೂ ಚೆನ್ನೈ ತಂಡ" ಎಂದು ಹೇಳಿದ್ದಾರೆ.

ಇದೇ ವೇಳೆ ಕೆಕೆಆರ್‌ ತಂಡವು ತಮ್ಮ ಆಶೀರ್ವಾದವನ್ನು ಕೋರಿದ ಘಟನೆಯ ಕುರಿತು ಮೆಲುಕು ಹಾಕಿದ ಸದ್ಗುರು ಅವರು, ತಮಾಷೆಯ ಪ್ರಸಂಗವನ್ನು ವಿವರಿಸಿದ್ದಾರೆ. “ಕಳೆದ ಬಾರಿ ಕೆಕೆಆರ್‌ ತಂಡವು ಫೈನಲ್‌ಗೆ ಬಂದಾಗ ನನಗೆ ಕರೆ ಮಾಡಿದ್ದರು. 'ಸದ್ಗುರು, ನೀವು ನಮ್ಮ ತಂಡವನ್ನು ಆಶೀರ್ವದಿಸಬೇಕು' ಎಂದು ಹೇಳಿದರು. ಅದಕ್ಕೆ ನಾನು 'ನಿಮ್ಮ ಎದುರಾಳಿ ತಂಡ ಯಾವುದು ಎಂದು ಕೇಳಿದೆ'. ಅವರು ‘ಚೆನ್ನೈ’ ಎಂದರು. ಅದಕ್ಕೆ ನಾನು ‘ನೋಡಿ, ಇದು ನನ್ನಿಂದ ಸಾಧ್ಯವಾಗದ ಕೆಲಸʼ ಎಂದು ಹೇಳಿದೆ” ಎಂದು ಸದ್ಗುರು ಗೇಲ್‌ ಅವರೊಂದಿಗೆ ಹೇಳಿದ್ದಾರೆ. ಈ ವೇಳೆ ಗೇಲ್ ಮತ್ತು ಸದ್ಗುರು ಇಬ್ಬರೂ ನಗೆಗಡಲಲ್ಲಿ ತೇಲುತ್ತಾರೆ.

ಕ್ರಿಸ್ ಗೇಲ್ ಅವರು ‘ಚೆನ್ನೈ ನಂಬರ್ ವನ್ ತಂಡ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದಾಗ, ಸದ್ಗುರು‌ ಗಮನಾರ್ಹ ಹೇಳಿಕೆಯೊಂದನ್ನು ನೀಡುತ್ತಾರೆ. ಖಂಡಿತವಾಗಿಯೂ ಐಪಿಎಲ್‌ನಲ್ಲಿ ‘ಧೋನಿ ಈ ವ್ಯತ್ಯಾಸವನ್ನು ಮಾಡಿದ್ದಾರೆ’ ಎಂದು ಸದ್ಗುರು ಧೋನಿಯನ್ನು ಹೊಗಳಿದ್ದಾರೆ.

ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಸಿಎಸ್‌ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಭಾನುವಾರದ ಪಂದ್ಯಕ್ಕೂ ಮುನ್ನ ಸದ್ಗುರುಗಳ ಆಶೀರ್ವಾದ ಸಿಕ್ಕಿದೆ ಎಂದು ಅಭಿಮಾನಿಗಳು ಸಂತಸಗೊಂಡಿದ್ದಾರೆ.

ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ, ಸದ್ಗುರು ಅವರು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯದ ವೇಳೆ ಚಿನ್ನಸ್ವಾಮಿ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಿದ್ದರು.

ಐಪಿಎಲ್ 2023ರ ಆವೃತ್ತಿಯ ಫೈನಲ್‌ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ನಡುವೆ ಬ್ಲಾಕ್‌ ಬಸ್ಟರ್‌ ಪಂದ್ಯ ನಡೆಯುತ್ತಿದೆ. ಮಳೆಯಿಂದಾಗಿ ಪಂದ್ಯವನ್ನು ಮುಂದೂಡಲಾಗಿದ್ದು, ಮಳೆ ನಿಂತ ಬೆನ್ನಲ್ಲೇ ಪಂದ್ಯ ನಡೆಸಲಾಗುತ್ತದೆ. ಒಂದು ವೇಳೆ ತಡರಾತ್ರಿಯವರೆಗೂ ಮಳೆ ಮುಂದುವರೆದರೆ, ಮೀಸಲು ದಿನವಾದ ನಾಳೆ ಪಂದ್ಯ ನಡೆಯಲಿದೆ.

ಒಂದು ವೇಳೆ ಮೀಸಲು ದಿನವೂ ಮಳೆಯಿಂದ ಸಂಪೂರ್ಣ ಪಂದ್ಯ ನಡೆಯದೇ ರದ್ದುಗೊಂಡರೆ ಆಗ ಲೀಗ್​ ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ಚಾಂಪಿಯನ್​ ಎಂದು ಘೋಷಿಸಲಾಗುತ್ತದೆ. ಹೀಗಾದರೆ, ಸತತ 2ನೇ ಬಾರಿಗೆ ಗುಜರಾತ್​ ತಂಡವು ಐಪಿಎಲ್​ ಟ್ರೋಫಿಗೆ ಮುತ್ತಿಕ್ಕಲಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ