logo
ಕನ್ನಡ ಸುದ್ದಿ  /  ಕ್ರೀಡೆ  /  Ms Dhoni Record: ಚಾಂಪಿಯನ್​ ಪಟ್ಟ ಅಲಂಕರಿಸಿ ಐಪಿಎಲ್​​ನಲ್ಲಿ ಚರಿತ್ರೆ ಸೃಷ್ಟಿಸಿದ ಎಂಎಸ್​ ಧೋನಿ; ಈಗ ಹಲವು ದಾಖಲೆಗಳ ಒಡೆಯ ಚೆನ್ನೈ ನಾಯಕ

MS Dhoni Record: ಚಾಂಪಿಯನ್​ ಪಟ್ಟ ಅಲಂಕರಿಸಿ ಐಪಿಎಲ್​​ನಲ್ಲಿ ಚರಿತ್ರೆ ಸೃಷ್ಟಿಸಿದ ಎಂಎಸ್​ ಧೋನಿ; ಈಗ ಹಲವು ದಾಖಲೆಗಳ ಒಡೆಯ ಚೆನ್ನೈ ನಾಯಕ

Prasanna Kumar P N HT Kannada

May 30, 2023 06:00 AM IST

google News

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿ

    • 16ನೇ ಆವೃತ್ತಿಯ ಐಪಿಎಲ್​ನ ಫೈನಲ್​​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಎದುರು ಕಣಕ್ಕಿಳಿಯುವ ಮೂಲಕ ಎಂಎಸ್​ ಧೋನಿ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಆ ದಾಖಲೆಗಳು ಯಾವುದು ಎಂಬುದನ್ನು ಈ ಮುಂದೆ ನೋಡೋಣ.
ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿ
ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಎಂಎಸ್​ ಧೋನಿ

ಇಂಡಿಯನ್​ ಪ್ರೀಮಿಯರ್​ ಲೀಗ್ (IPL)​ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ನಾಯಕ ಎಂಎಸ್​ ಧೋನಿ (MS Dhoni), ಯಾರೂ ಮಾಡದ ದಾಖಲೆ ಬರೆದಿದ್ದಾರೆ. ಮೇ 29ರಂದು ಅಹ್ಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium, Ahmedabad) ನಡೆದ 16ನೇ ಆವೃತ್ತಿಯ ಐಪಿಎಲ್​ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಇತಿಹಾಸ ನಿರ್ಮಿಸಿದೆ. 5ನೇ ಬಾರಿ ಎಂಎಸ್​ ಧೋನಿ ನಾಯಕತ್ವದಲ್ಲಿ ಟ್ರೋಫಿ ಒಲಿದು ಬಂದಿದೆ. ಈ ಪಂದ್ಯದಲ್ಲಿ ಧೋನಿ ಹಲವು ವಿಶೇಷ ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಅವುಗಳನ್ನು ಈ ಮುಂದೆ ನೋಡೋಣ.

ಮುಂಬೈ ದಾಖಲೆ ಸರಿಗಟ್ಟಿದ ಸಿಎಸ್​ಕೆ

ಮೇ 29ರಂದು ಗುಜರಾತ್​ ಟೈಟಾನ್ಸ್​​ ವಿರುದ್ಧ ಐಪಿಎಲ್​ ಫೈನಲ್​​ನಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್​​ 5ನೇ ಬಾರಿಗೆ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಆ ಮೂಲಕ ಈಗಾಗಲೇ 5 ಸಲ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್​​ ದಾಖಲೆ ಸಮಗೊಳಿಸಿದೆ.

5ನೇ ಟ್ರೋಫಿ ಗೆದ್ದ ಧೋನಿ

ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಫೈನಲ್​​ನಲ್ಲಿ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಹಾರ್ದಿಕ್​ ಪಾಂಡ್ಯ, ಕಿರನ್​ ಪೊಲಾರ್ಡ್​ ಕೂಡ 5 ಬಾರಿ ಟ್ರೋಫಿ ಗೆದ್ದಿದ್ದಾರೆ. ಇದೀಗ ಇವರ ಸಾಲಿಗೆ ಧೋನಿ ಸೇರಿದ್ದಾರೆ. ರೋಹಿತ್​ ಶರ್ಮಾ ಮತ್ತು ಅಂಬಟಿ ರಾಯಡು ತಲಾ 6 ಬಾರಿ ಫೈನಲ್​ ಗೆದ್ದ ತಂಡದ ಭಾಗವಾಗಿದ್ದಾರೆ.

ದಾಖಲೆಯ 250ನೇ ಪಂದ್ಯ

ಫೈನಲ್​ನಲ್ಲಿ ಗುಜರಾತ್​ ಟೈಟಾನ್ಸ್​​ ವಿರುದ್ಧ ಮೈದಾನಕ್ಕೆ ಬರುತ್ತಿದ್ದಂತೆ ಚರಿತ್ರೆ ಬರೆದರು. ಐಪಿಎಲ್ ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾದರು. ರೋಹಿತ್​ ಶರ್ಮಾ 243 ಪಂದ್ಯಗಳು, ದಿನೇಶ್​ ಕಾರ್ತಿಕ್​ 242 ಪಂದ್ಯದಲ್ಲಿ ಕಣಕ್ಕಿಳಿದು ಧೋನಿ ನಂತರದ ಸ್ಥಾನದಲ್ಲಿದ್ದಾರೆ. 237 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿರಾಟ್​ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ (226) 5ನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಫೈನಲ್​ ಪಂದ್ಯಗಳು

ಗುಜರಾತ್​ ವಿರುದ್ಧ ಫೈನಲ್​ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಮತ್ತೊಂದು ದಾಖಲೆ ಕೂಡ ಬರೆದರು. ಅತಿಹೆಚ್ಚು ಐಪಿಎಲ್ ಫೈನಲ್ ಪಂದ್ಯಗಳನ್ನಾಡಿದ ಆಟಗಾರ​ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​​ ಪರ ಒಟ್ಟು 10 ಫೈನಲ್​ ಪಂದ್ಯಗಳನ್ನಾಡಿರುವ ಧೋನಿ, ರೈಸಿಂಗ್ ಪುಣೆ ಜೈಂಟ್ಸ್​ ಪರವೂ ಒಂದು ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

ಅತಿ ಹೆಚ್ಚು ಪ್ಲೇ ಆಫ್​ ಪಂದ್ಯಗಳು

ಕೇವಲ ಐಪಿಎಲ್​ ಫೈನಲ್​​ಗಳಲ್ಲಿ ಮಾತ್ರವಲ್ಲ ಪ್ಲೇ ಆಫ್​​ ಪಂದ್ಯಗಳಲ್ಲೂ ಎಂಎಸ್​ ಧೋನಿ ದಾಖಲೆ ಬರೆದಿದ್ದಾರೆ. ಧೋನಿ ಈವರೆಗೂ ಒಟ್ಟು 28 ಪ್ಲೇ ಆಫ್​ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 2ನೇ ಸ್ಥಾನದಲ್ಲಿ ಸುರೇಶ್​ ರೈನಾ ಇದ್ದಾರೆ. ಅವರು 24 ಪ್ಲೇ ಆಫ್​ ಪಂದ್ಯಗಳನ್ನು ಆಡಿದ್ದಾರೆ.

ನಾಯಕನಾಗಿ 10 ಫೈನಲ್​​​​​ ಆಡಿದ ದಾಖಲೆ

16 ಸೀಸನ್​ಗಳ ಐಪಿಎಲ್​ ಚರಿತ್ರೆಯಲ್ಲಿ ಅಧಿ ಬಾರಿ ಫೈನಲ್​ ಆಡಿದ ನಾಯಕ ಎಂಬ ಎಂಬ ರೆಕಾರ್ಡ್​ ಅನ್ನೂ ಧೋನಿ ಸ್ವಂತ ಮಾಡಿಕೊಂಡಿದ್ದಾರೆ. ಎಂಎಸ್​ಡಿ ಒಟ್ಟು 10 ಬಾರಿ ಚೆನ್ನೈ ಸೂಪರ್ ಕಿಂಗ್ಸ್​​ ತಂಡವನ್ನು ಫೈನಲ್ ಪಂದ್ಯದಲ್ಲಿ ಮುನ್ನಡೆಸಿದ್ದಾರೆ ಎಂಬ ದಾಖಲೆ ಬರೆದಿದ್ದಾರೆ.

ವಿಕೆಟ್​ ಹಿಂದೆ ಅತಿ ಹೆಚ್ಚು ಬಲಿ

ಇನ್ನು ಟಿ20 ಕ್ರಿಕೆಟ್​​ನಲ್ಲಿ ವಿಕೆಟ್​ ಹಿಂದೆ ನಿಂತು ಅತಿ ಹೆಚ್ಚು ಬಲಿ ಪಡೆದ ಆಟಗಾರ ಎಂಬ ದಾಖಲೆಯನ್ನೂ ಧೋನಿ ತಮ್ಮದಾಗಿಸಿಕೊಂಡಿದ್ದಾರೆ. ಶುಭ್ಮನ್​ ಗಿಲ್​ ಅವರನ್ನು ಸ್ಟಂಪ್​ ಮಾಡಿದ ಬಳಿಕ ಈ ಸಾಧನೆ ಮಾಡಿದರು. ಈವರೆಗೂ 301 ಬಲಿ ಪಡೆದಿದ್ದಾರೆ. ಅದರಲ್ಲಿ 214 ಕ್ಯಾಚ್​ಗಳು ಮತ್ತು 87 ಸ್ಟಂಪ್ಸ್​ಗಳು ದಾಖಲಾಗಿವೆ. ಇನ್ನು ಐಪಿಎಲ್​ನಲ್ಲಿ 243 ಇನ್ನಿಂಗ್ಸ್​​ಗಳಲ್ಲಿ 180 ಮಂದಿಯನ್ನು ವಿಕೆಟ್​ ಹಿಂದೆ ನಿಂತು ಔಟ್​ ಮಾಡಿದ್ದಾರೆ. ಅದರಲ್ಲಿ 138 ಕ್ಯಾಚ್​ಗಳು, 42 ಸ್ಟಂಪ್​​ಗಳಿವೆ. ಫೈನಲ್​​​​ನಲ್ಲಿ ಸ್ಟಂಪ್​ ಜೊತೆ ಒಂದು ಕ್ಯಾಚ್​ ಅನ್ನು ಪಡೆದರು ಧೋನಿ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ