Ind vs Pak: ನಮ್ಮ ಸರ್ಕಾರ ಒಪ್ಪಿದ್ದರಷ್ಟೇ ಭಾರತಕ್ಕೆ ವಿಶ್ವಕಪ್ ಆಡಲು ಬರುತ್ತೇವೆ; ಪಿಸಿಬಿ ಅಧ್ಯಕ್ಷ ನಜಂ ಸೇಥಿ ಹೊಸ ತಗಾದೆ
Jun 17, 2023 01:15 PM IST
ಪಿಸಿಬಿ ಅಧ್ಯಕ್ಷ ನಜಂ ಸೇಥಿ
- ನಮ್ಮ ಸರ್ಕಾರ ಒಪ್ಪಿಗೆ ಕೊಟ್ಟರೆ ಮಾತ್ರ, ಭಾರತಕ್ಕೆ ವಿಶ್ವಕಪ್ ಆಡಲು ಬರುತ್ತೇವೆ ಎಂದು ಸ್ವತಃ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ನಜಂ ಸೇಥಿ ಸ್ಪಷ್ಟಪಡಿಸಿದ್ದಾರೆ.
ಏಷ್ಯಾಕಪ್-2023 ಟೂರ್ನಿಗೆ (Asia Cup 2023) ಹೈಬ್ರಿಡ್ ಮಾದರಿಗೆ ಬಿಸಿಸಿಐ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಆತಿಥ್ಯ ವಿವಾದಕ್ಕೆ ಪೂರ್ಣಗೊಂಡರೂ, ಭಾರತದಲ್ಲೇ ಜರುಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ODI World Cup) ಪಾಕಿಸ್ತಾನ ತಂಡ (Pakistan Team) ಭಾಗವಹಿಸುವ ಕುರಿತು ಇನ್ನೂ ಅಂತಿಮಗೊಂಡಿಲ್ಲ. ನಮ್ಮ ಸರ್ಕಾರ ಒಪ್ಪಿಗೆ ಕೊಟ್ಟರೆ ಮಾತ್ರ, ಭಾರತಕ್ಕೆ ವಿಶ್ವಕಪ್ ಆಡಲು ಬರುತ್ತೇವೆ ಎಂದು ಸ್ವತಃ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ನಜಂ ಸೇಥಿ (PCB Cheif Najam Sethi) ಸ್ಪಷ್ಟಪಡಿಸಿದ್ದಾರೆ.
ಸರ್ಕಾರವೇ ನಿರ್ಧರಿಸಲಿದೆ
ಈ ಕುರಿತು ಮಾತನಾಡಿದ ನಜಂ ಸೇಥಿ ಅವರು, ಏಕದಿನ ವಿಶ್ವಕಪ್ ಟೂರ್ನಿಯ ಶೆಡ್ಯೂಲ್ (ODI World Cup Schedule) ಬಿಡುಗಡೆಯಾಗಿ ನಮ್ಮ ಪಂದ್ಯಗಳನ್ನು ಇಂತಹದ್ದೇ ಮೈದಾನದಲ್ಲಿ ಆಯೋಜಿಸಲು ತೀರ್ಮಾನ ತೆಗೆದುಕೊಂಡಿದ್ದರೂ ನಾವು ಭಾರತಕ್ಕೆ ಹೋಗಬೇಕೇ ಬೇಡವೇ ಎಂಬುದನ್ನು ನಮ್ಮ ಸರ್ಕಾರ ನಿರ್ಧರಿಸಲಿದೆ. ಸರ್ಕಾರದ ನಿರ್ಧಾರವೇ ಅಂತಿಮ ನಿರ್ಧಾರ ಎಂದು ಮಾಹಿತಿ ಕೊಟ್ಟಿದ್ದಾರೆ.
2016ರಲ್ಲೂ ಪಂದ್ಯ ಸ್ಥಳಾಂತರ
ಸದ್ಯ ನಮ್ಮ ಪಂದ್ಯಗಳನ್ನು ಅಹ್ಮದಾಬಾದ್ನಲ್ಲಿ ಆಯೋಜಿಸಲು ಬಿಸಿಸಿಐ ಯೋಜಿಸುತ್ತಿದೆ. ಆದರೆ ನಾವು ಆ ಮೈದಾನದಲ್ಲಿ ಆಡುವುದಿಲ್ಲ. ಅದಕ್ಕೂ ನಮ್ಮ ಸರ್ಕಾರ ಒಪ್ಪಿಗೆ ನೀಡಿದರೆ ಖಂಡಿತವಾಗಿ ಆಡುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಆಯೋಜನೆಯ ಸಂದರ್ಭದಲ್ಲಿ ಪಾಕ್ ಪಾಂದ್ಯವನ್ನು ಧರ್ಮಶಾಲಾದಿಂದ ಕೋಲ್ಕತ್ತಾದ ಈಡನ್ ಗಾರ್ಡನ್ಗೆ ಸ್ಥಳಾಂತರವಾಗಿಸಿದ್ದಕ್ಕೂ ಇಲ್ಲಿ ನೆನಪಿಸಿದ್ದಾರೆ.
ಉಭಯ ಸರ್ಕಾರಗಳ ನಿರ್ಧಾರ ಅಂತಿಮ
ನಮ್ಮ ಮತ್ತು ಭಾರತ ಕ್ರಿಕೆಟ್ ತಂಡಗಳು ಉಭಯ ದೇಶಗಳಿಗೂ ಪ್ರವಾಸ ಕೈಗೊಳ್ಳಬೇಕು ಅಂದರೆ, ಕ್ರಿಕೆಟ್ ಮಂಡಳಿ ಮಂಡಳಿಗಳು ನಿರ್ಧಾರ ಕೈಗೊಳ್ಳುವುದಿಲ್ಲ. ಅದರ ಬದಲಿಗೆ ಆಯಾ ದೇಶಗಳ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಲಿವೆ. ಕೇವಲ ಭಾರತ ಮಾತ್ರವಲ್ಲ, ನಮ್ಮ ಸರ್ಕಾರವೂ ಭಾರತ ಪ್ರವಾಸಕ್ಕೆ ನಿರ್ಧಾರ ಪಡೆಯಲಿದೆ ಎಂದು ಪಿಸಿಬಿ ಅಧ್ಯಕ್ಷ ನಜಂ ಸೇಥಿ ಹೇಳಿದ್ದಾರೆ.
ಮೋದಿ ಸ್ಟೇಡಿಯಂನಲ್ಲಿ ಆಡುತ್ತಾ?
ಭಾರತದಲ್ಲಿ ನಡೆಯುವ ಒಡಿಐ ವರ್ಲ್ಡ್ಕಪ್ನಲ್ಲಿ ನಾವು ಭಾಗವಹಿಸಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಪಾಕ್ ಸರ್ಕಾರ ನಿರ್ಧರಿಸಲಿದೆ. ಆ ನಂತರವಷ್ಟೇ ಎಲ್ಲಿ ಆಡಬೇಕು ಅಥವಾ ಆಡಬಾರದು ಎಂಬ ಕುರಿತು ನಿರ್ಧರಿಸುತ್ತೇವೆ. ಹಾಗಾಗಿ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಂಡ ಆಡಬೇಕೇ ಬೇಡವೇ ಎಂಬುದನ್ನು ಈಗಲೇ ಹೇಳಲು ಆಗಲ್ಲ ಎಂದು ಸೇಥಿ ಹೇಳಿದ್ದಾರೆ.
ಆಗಸ್ಟ್ 31ರಿಂದ ಏಷ್ಯಾಕಪ್
2023ರಲ್ಲಿ ನಡೆಯುವ ಏಕದಿನ ಏಷ್ಯಾಕಪ್ ಟೂರ್ನಿ ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಜರುಗಲಿದೆ. ಪಾಕಿಸ್ತಾನ ಹಾಗೂ ಶ್ರೀಲಂಕಾ ದೇಶಗಳು ಜಂಟಿ ಆತಿಥ್ಯವನ್ನು ಈ ಟೂರ್ನಿಗೆ ವಹಿಸಲಿವೆ. ಟೂರ್ನಿಯ ಆತಿಥ್ಯದ ಹಕ್ಕು ಪಾಕಿಸ್ತಾನಕ್ಕಿದ್ದರೂ ಟೀಮ್ ಇಂಡಿಯಾ, ಪಾಕ್ಗೆ ತೆರಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಏಷ್ಯಾಕಪ್ ಅನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ನಿರ್ಧರಿಸಿತು.
ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಏಷ್ಯಾಕಪ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಾವಳಿಯು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಸೆಪ್ಟೆಂಬರ್ 17ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಒಟ್ಟು ಆರು ತಂಡಗಳು ಪಂದ್ಯಾವಳಿಯಲ್ಲಿ ಭಾಗಿಯಾಗಲಿವೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಒಟ್ಟು 13 ಏಕದಿನ ಪಂದ್ಯಗಳನ್ನು ಆಡಲಿವೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಾಹಿತಿ ನೀಡಿದೆ. ಆತಿಥ್ಯ ಹಕ್ಕು ಹೊಂದಿರುವ ಪಾಕಿಸ್ಥಾನದಲ್ಲಿ ಹೆಚ್ಚು ಪಂದ್ಯಗಳು ನಡೆಯಬೇಕಿತ್ತು. ಆದರೆ, ಹೈಬ್ರಿಡ್ ಮಾದರಿಯಲ್ಲಿ ನಡೆಯುವ ಕಾರಣ ಏಷ್ಯಾಕಪ್‌ನ 4 ಪಂದ್ಯಗಳು ಮಾತ್ರ ಪಾಕಿಸ್ತಾನದಲ್ಲಿ ನಡೆಯಲಿದೆ. ಉಳಿದಂತೆ ಹಾಲಿ ಚಾಂಪಿಯನ್ ಶ್ರೀಲಂಕಾದಲ್ಲಿ ಒಟ್ಟು 9 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ.