Bhuvneshwar Kumar: ಇನ್‌ಸ್ಟಾಗ್ರಾಮ್ ಬಯೋದಿಂದ 'ಕ್ರಿಕೆಟಿಗ' ಪದ ಅಳಿಸಿದ ಭುವನೇಶ್ವರ್; ಕಾಳ್ಗಿಚ್ಚಿನಂತೆ ಹರಡಿತು ನಿವೃತ್ತಿ ವದಂತಿ
Jul 28, 2023 02:35 PM IST
ಭುವನೇಶ್ವರ್ ಕುಮಾರ್
- Bhuvneshwar Kumar Instagram bio: ಇನ್‌ಸ್ಟಾಗ್ರಾಮ್ ಖಾತೆಯ ಬಯೋದಿಂದ ಕ್ರಿಕೆಟಿಗ ಎಂಬ ಪದ ತೆಗೆದುಹಾಕಿದರೂ, ಟ್ವಿಟ್ಟರ್ ಖಾತೆಯಲ್ಲಿ ಹೆಸರಿನ ಮುಂದೆ ಇನ್ನೂ 'ಭಾರತೀಯ ಕ್ರಿಕೆಟಿಗ' ಎಂದೇ ಇದೆ. ಹೀಗಾಗಿ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ.
ಭಾರತ ಕ್ರಿಕೆಟ್ ತಂಡದ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar) ಅವರ ನಡೆ, ಅಭಿಮಾನಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಭುವಿ ನಿವೃತ್ತಿಯಾಗುವ ಸೂಚನೆ ನೀಡಿದ್ದಾರೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಇದಕ್ಕೆ ಕಾರಣ, ಭುವನೇಶ್ವರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಯೋದಿಂದ 'ಕ್ರಿಕೆಟರ್' ಪದವನ್ನು ತೆಗೆದುಹಾಕಿರುವುದು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಭಾರತದ ಪ್ರಬಲ ಸ್ವಿಂಗ್ ಅಸ್ತ್ರವಾಗಿರುವ ಭುವನೇಶ್ವರ್ ಕುಮಾರ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಲಿದ್ದಾರೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. 33 ವರ್ಷದ ಕ್ರಿಕೆಟಿಗ ಇನ್‌ಸ್ಟಾಗ್ರಾಮ್ ಬಯೋದಿಂದ 'ಇಂಡಿಯನ್ ಕ್ರಿಕೆಟರ್' (Indian Cricketer) ಎಂಬ ಪದವನ್ನು ತೆಗೆದುಹಾಕಿದ್ದಾರೆ. ಬದಲಿಗೆ ಈಗ ಆ ಜಾಗದಲ್ಲಿ'ಭಾರತೀಯ' (Indian) ಎಂದು ಮಾತ್ರ ಬರೆದಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚಾಗಿ ಆಡಲಾಗದ ಹಿನ್ನೆಲೆಯಲ್ಲಿ ಭುವಿ ಬೇಸರಗೊಂಡಿದ್ದಾರೆ. ಹೀಗಾಗಿ ತಮ್ಮ ಬೇಸರವನ್ನು ಇನ್ಸ್ಟಾದಲ್ಲಿ ತೋರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ಟ್ವಿಟರ್‌ನಲ್ಲಿ ಬದಲಾವಣೆ ಇಲ್ಲ
ಇನ್‌ಸ್ಟಾಗ್ರಾಮ್ ಖಾತೆಯ ಬಯೋದಿಂದ 'ಕ್ರಿಕೆಟಿಗ' ಎಂಬ ಪದ ತೆಗೆದುಹಾಕಿದರೂ, ಟ್ವಿಟ್ಟರ್ ಖಾತೆಯಲ್ಲಿ ಹೆಸರಿನ ಮುಂದೆ ಇನ್ನೂ 'ಭಾರತೀಯ ಕ್ರಿಕೆಟಿಗ' ಎಂದೇ ಇದೆ. ಹೀಗಾಗಿ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಯುಪಿ ಕ್ರಿಕೆಟಿಗನ ಒಂದು ಚಿಕ್ಕ ಬಯೋ ಅಪ್‌ಡೇಟ್‌ನಿಂದಾಗಿ ಆಟಗಾರ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ವದಂತಿಗಳನ್ನು ಹುಟ್ಟುಹಾಕಿದೆ. ಆದರೆ, ಇದು ಎಷ್ಟರಮಟ್ಟಿಗೆ ಸತ್ಯ ಎನ್ನುವುದನ್ನು ಖುದ್ದು ಭುವಿ ಅವರೇ ಸ್ಪಷ್ಟಪಡಿಸಬೇಕು.
ಭುವನೇಶ್ವರ್ ಕುಮಾರ್ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿಯೂ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ, ಗಾಯದಿಂದಾಗಿ ಅವರಿಗೆ ಹಚ್ಚು ಪಂದ್ಯಗಳನ್ನು ಆಡಲು ಸಾಧ್ಯವಾಗಿಲ್ಲ. ಉದಯೋನ್ಮುಖ ಬೌಲರ್‌ಗಳು ತಂಡದಲ್ಲಿ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಭುವಿ ತಂಡಕ್ಕೆ ಕಂಬ್ಯಾಕ್ ಮಾಡುವುದು ಸಾಧ್ಯವಾಗಲಿಲ್ಲ. 2018ರಲ್ಲಿ ಕೊನೆಯ ಬಾರಿಗೆ ಭುವಿ ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡಿದರು. 2022ರ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಪರ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿದ್ದರು. ಪ್ರಸಕ್ತ ವರ್ಷ ಏಷ್ಯಾಕಪ್ ಹಾಗೂ ಏಕದಿನ ವಿಶ್ವಕಪ್ ಕೂಡಾ ನಡೆಯುತ್ತಿದ್ದು, ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಭುವಿ ಇದ್ದಾರೆ.
ಸ್ಯಾಮ್ಸನ್ ಪ್ರತಿಭೆಯನ್ನು ರೋಹಿತ್ ಹಂತ ಹಂತವಾಗಿ ನಾಶ ಮಾಡುತ್ತಿದ್ದಾರೆ; ಸೂರ್ಯಕುಮಾರ್ ವೈಫಲ್ಯ ಬೆನ್ನಲ್ಲೇ ಫ್ಯಾನ್ಸ್ ಆಕ್ರೋಶ
ಭಾರತವು ಪಂದ್ಯದಲ್ಲಿ ಗೆದ್ದರೂ, ತಂಡದ ಆಯ್ಕೆ ಬಗ್ಗೆ ಅಭಿಮಾನಿಗಳು ಮತ್ತೆ ಆಕ್ರೋಶ ಹೊರಹಾಕಿದ್ದಾರೆ. ಟಿ20ಯಲ್ಲಿ ಅಬ್ಬರಿಸಿದರೂ ಏಕದಿನ ಕ್ರಿಕೆಟ್‌ನಲ್ಲಿ ಮೇಲಿಂದ ಮೇಲೆ ವಿಫಲರಾಗುತ್ತಿರುವ ಸೂರ್ಯಕುಮಾರ್ ಯಾದವ್‌ಗೆ ತಂಡದಲ್ಲಿ ಸ್ಥಾನ ನೀಡುತ್ತಿರುವ ಕುರಿತು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್ ಬದಿಗಿಟ್ಟು ಮುಂಬೈಯವರಾದ ಯಾದವ್‌ಗೆ ತಂಡದಲ್ಲಿ ಮಣೆ ಹಾಕಿರುವ ಲಾಜಿಕ್ ಅರ್ಥವಾಗುತ್ತಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದೇ ವಿಚಾರವಾಗಿ ನಾಯಕ ರೋಹಿತ್ ಶರ್ಮಾ ಅವರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ