Sanju Samson: ಸ್ಯಾಮ್ಸನ್ ಪ್ರತಿಭೆಯನ್ನು ರೋಹಿತ್ ಹಂತ ಹಂತವಾಗಿ ನಾಶ ಮಾಡುತ್ತಿದ್ದಾರೆ; ಸೂರ್ಯಕುಮಾರ್ ವೈಫಲ್ಯ ಬೆನ್ನಲ್ಲೇ ಫ್ಯಾನ್ಸ್ ಆಕ್ರೋಶ
Rohit Sharma: ಸೂರ್ಯಕುಮಾರ್ ಯಾದವ್‌ಗೆ ಏಕದಿನ ತಂಡದಲ್ಲಿ ಮಣೆ ಹಾಕಿರುವ ಲಾಜಿಕ್ ಅರ್ಥವಾಗುತ್ತಿಲ್ಲ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಬಾರ್ಬಡೋಸ್‌ನ ಕೆನ್ಸಿಂಗ್‌ಟನ್ ಓವಲ್‌ನಲ್ಲಿ ಗುರುವಾರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೊದಲ ಏಕದಿನ (West Indies vs India 1st ODI) ಪಂದ್ಯದಲ್ಲಿ ಭಾರತವು ಐದು ವಿಕೆಟ್‌ಗಳಿಂದ ಗೆದ್ದಿತು. ಆ ಮೂಲಕ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿತು. ವಿಂಡೀಸ್ ವಿರುದ್ಧ ಗೆಲುವಿನ ದಾಖಲೆಯನ್ನು ಮುಂದುವರೆಸಿದ ಭಾರತವು ಟೆಸ್ಟ್ ಸರಣಿ ಬಳಿಕ ಏಕದಿನ ಪಂದ್ಯದಲ್ಲೂ ಸಂಪೂರ್ಣ ಪ್ರಾಬಲ್ಯ ಮೆರೆಯಿತು.
ವೆಸ್ಟ್ ಇಂಡೀಸ್ ನೀಡಿದ 115 ರನ್‌ಗಳ ಸರಳ ಗುರಿ ಬೆನ್ನಟ್ಟಿದ ಭಾರತ, ಕೇವಲ 22.5 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು. ಇಶಾನ್ ಕಿಶನ್ 46 ಎಸೆತಗಳಲ್ಲಿ 52 ರನ್ ಗಳಿಸಿ ಬ್ಯಾಟಿಂಗ್‌ನಲ್ಲಿ ಮಿಂಚಿದರೆ, ಕುಲದೀಪ್ ಯಾದವ್ ಆರು ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದು ಮಿಂಚಿದರು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಭಾರತವು ಪಂದ್ಯದಲ್ಲಿ ಗೆದ್ದರೂ, ತಂಡದ ಆಯ್ಕೆ ಬಗ್ಗೆ ಅಭಿಮಾನಿಗಳು ಮತ್ತೆ ಆಕ್ರೋಶ ಹೊರಹಾಕಿದ್ದಾರೆ. ಟಿ20ಯಲ್ಲಿ ಅಬ್ಬರಿಸಿದರೂ ಏಕದಿನ ಕ್ರಿಕೆಟ್‌ನಲ್ಲಿ ಮೇಲಿಂದ ಮೇಲೆ ವಿಫಲರಾಗುತ್ತಿರುವ ಸೂರ್ಯಕುಮಾರ್ ಯಾದವ್‌ಗೆ ತಂಡದಲ್ಲಿ ಸ್ಥಾನ ನೀಡುತ್ತಿರುವ ಕುರಿತು ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸಂಜು ಸ್ಯಾಮ್ಸನ್ ಬದಿಗಿಟ್ಟು ಮುಂಬೈಯವರಾದ ಯಾದವ್‌ಗೆ ತಂಡದಲ್ಲಿ ಮಣೆ ಹಾಕಿರುವ ಲಾಜಿಕ್ ಅರ್ಥವಾಗುತ್ತಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದೇ ವಿಚಾರವಾಗಿ ನಾಯಕ ರೋಹಿತ್ ಶರ್ಮಾ ಅವರ ಮೇಲೆ ಆಕ್ರೋಶ ಹೊರಹಾಕಿದ್ದಾರೆ.
ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಭಾರತದ ಬಹುತೇಕ ಹೆಚ್ಚಿನ ಆಟಗಾರರು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಸ್ಯಾಮ್ಸನ್ ಕೂಡಾ ಒಬ್ಬರು. ವಿಶ್ವಕಪ್ ತಂಡದಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಳ್ಳುವ ಸಲುವಾಗಿ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಈ ಸರಣಿ ಅವರಿಗೆ ಕೊನೆಯ ಅವಕಾಶ. ಗಾಯದಿಂದಾಗಿ ಈ ವರ್ಷದ ಆರಂಭದಲ್ಲಿ ಪಂದ್ಯಗಳಿಂದ ಹೊರಬಿದ್ದಿದ್ದ ಸ್ಯಾಮ್ಸನ್, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾದರು. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ಆದರೆ, ಇಶಾನ್ ಕಿಶನ್ ಕೀಪರ್ ಆಗಿ ಆಯ್ಕೆಯಾದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಸೂರ್ಯಕುಮಾರ್ ಆಯ್ಕೆಯಾದರು. ಹೀಗಾಗಿ ಸ್ಯಾಮ್ಸನ್ ಆಯ್ಕೆಗೆ ಅವಕಾಶವೇ ಇಲ್ಲವಾಯ್ತು.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ ಮೂರೂ ಪಂದ್ಯಗಳಲ್ಲಿ ಗೋಲ್ಡನ್ ಡಕ್ ಆಗಿದ್ದ ಸೂರ್ಯಕುಮಾರ್, ಮತ್ತೊಮ್ಮೆ ಏಕದಿನ ಸ್ವರೂಪದಲ್ಲಿ ಸಾಮರ್ಥ್ಯ ಪ್ರದರ್ಶಿಸಲು ವಿಫಲರಾದರು. ಹೀಗಾಗಿ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ಕುರಿತು ವ್ಯಾಪಕ ಟೀಕೆಗಳು ಕೇಳಿ ಬಂದಿವೆ. ವಿಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೂ ಸೂರ್ಯ ಕೇವಲ 25 ಬಾಲ್‌ಗಳಲ್ಲಿ 19 ರನ್ ಗಳಿಸಿ ಔಟಾದರು.
ಶನಿವಾರ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಸ್ಯಾಮ್ಸನ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.