IND vs WI Day 2: ಚೊಚ್ಚಲ ಪಂದ್ಯದಲ್ಲೇ ಜೈಸ್ವಾಲ್ ದಾಖಲೆಯ ಶತಕ, ರೋಹಿತ್ ಕ್ಲಾಸಿಕ್ ಸೆಂಚುರಿ; ವಿಂಡೀಸ್ ಪರದಾಟ, ಬೃಹತ್ ಮೊತ್ತದತ್ತ ಭಾರತ
Jul 14, 2023 07:02 AM IST
ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಶತಕ ಸಿಡಿಸಿ ಸಂಭ್ರಮಿಸಿದರು.
- IND vs WI Day 2: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ, ಭರ್ಜರಿ ಪ್ರದರ್ಶನ ನೀಡುತ್ತಿದೆ. ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ ತಲಾ ಶತಕ ಸಿಡಿಸಿ, ಟೀಮ್ ಇಂಡಿಯಾಗೆ 162 ರನ್ಗಳ ಮುನ್ನಡೆ ತಂದುಕೊಟ್ಟಿದ್ದಾರೆ. 2ನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದ್ದು, 3ನೇ ದಿನವೂ ಬ್ಯಾಟಿಂಗ್ ನಡೆಸಲಿದೆ.
ಮೊದಲ ದಿನದಾಟದಲ್ಲಿ ಬೊಂಬಾಟ್ ಬೌಲಿಂಗ್-ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಟೀಮ್ ಇಂಡಿಯಾ (Team India), 2ನೇ ದಿನದಾಟದಲ್ಲೂ ಅದೇ ಪ್ರದರ್ಶನ ಮುಂದುವರೆಸಿದೆ. ಆರಂಭಿಕರಾದ ರೋಹಿತ್ ಶರ್ಮಾ (Rohit Sharma) ಮತ್ತು ಯಶಸ್ವಿ ಜೈಸ್ವಾಲ್ (Yashasvi Jaiswal) ತಲಾ ಭರ್ಜರಿ ಶತಕ ಸಿಡಿಸಿ ದಾಖಲೆಯ ಜೊತೆಯಾಟದ ನೆರವಿನಿಂದ ಭಾರತ, ಬೃಹತ್ ಮೊತ್ತದ ಲೆಕ್ಕಾಚಾರ ಹಾಕಿಕೊಂಡಿದೆ. ಪರಿಣಾಮ 162 ರನ್ಗಳ ಮುನ್ನಡೆ ಪಡೆದಿದೆ. ಇವರ ಅದ್ಭುತ ಆಟಕ್ಕೆ ಬೆಕ್ಕಸ ಬೆರಗಾದ ವಿಂಡೀಸ್, ವಿಕೆಟ್ಗಾಗಿ ಪರದಾಡಿತು.
23 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 80 ರನ್ ಗಳಿಂದ 2ನೇ ದಿನದಾಟ ಪ್ರಾರಂಭಿಸಿದ ಭಾರತ, ಮತ್ತೆ ಆರಂಭವನ್ನೇ ಪಡೆಯಿತು. ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ, ತಮ್ಮ ಜವಾಬ್ದಾರಿಯುತ ಆಟದ ಮೂಲಕ ವೆಸ್ಟ್ ಇಂಡೀಸ್ ಬೌಲರ್ಗಳಿಗೆ ಸವಾಲಾಗಿ ಕಾಡಿದರು. ಅದರಲ್ಲೂ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ನಿರ್ಭೀತವಾಗಿ ಬ್ಯಾಟ್ ಬೀಸಿದ ಯಶಸ್ವಿ ಜೈಸ್ವಾಲ್, ಮನಮೋಹಕ ಇನ್ನಿಂಗ್ಸ್ ಕಟ್ಟಿದರು. ಜೈಸ್ವಾಲ್ 40 ಮತ್ತು ರೋಹಿತ್ 30 ರನ್ಗಳಿಂದ 2ನೇ ದಿನದಾಟ ಮುಂದುವರೆಸಿದರು.
ಚೊಚ್ಚಲ ಪಂದ್ಯ, ಚೊಚ್ಚಲ ಶತಕ
ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್, ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದರು. ಪದಾರ್ಪಣೆ ಪಂದ್ಯದಲ್ಲೇ ಶತಕ ಬಾರಿಸಿದ ಭಾರತದ 17ನೇ ಆಟಗಾರ ಎಂಬ ದಾಖಲೆ ಬರೆದರು. ತಾಳ್ಮೆಯುತ ಬ್ಯಾಟಿಂಗ್ ನಡೆಸುವ ಮೂಲಕ ಬರೋಬ್ಬರಿ 350 ಎಸೆತಗಳನ್ನು ಎದುರಿಸಿರುವ ಜೈಸ್ವಾಲ್, 14 ಬೌಂಡರಿಗಳ ಸಹಾಯದಿಂದ ಅಜೇಯ 143 ರನ್ ಚಚ್ಚಿದ್ದಾರೆ. 3ನೇ ದಿನದಾಟಕ್ಕೂ ಕ್ರೀಸ್ ಕಾಯ್ದುಕೊಂಡಿದ್ದು ದ್ವಿಶತಕ ಸಿಡಿಸುವ ಲೆಕ್ಕಾಚಾರದಲ್ಲಿದ್ದಾರೆ. ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ 3ನೇ ಕಿರಿಯ ಆಟಗಾರ. 1959ರ ಬಳಿಕ ವಿದೇಶದಲ್ಲಿ ಡೆಬ್ಯೂ ಪಂದ್ಯದಲ್ಲಿ 100 ಬಾರಿಸಿದ ಭಾರತದ 5ನೇ ಆಟಗಾರ.
ರೋಹಿತ್ ಶರ್ಮಾ ಸೆಂಚುರಿ
ಹಿಟ್ಮ್ಯಾನ್ ರೋಹಿತ್ ಶರ್ಮಾ ಕೂಡ ಭರ್ಜರಿ ಶತಕ ಸಿಡಿಸಿದರು. ಇದೇ ವರ್ಷ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದ ನಾಯಕ, ಇದೀಗ ಮತ್ತೆ ಮೂರಂಕಿ ದಾಟಿದ್ದಾರೆ. ಇದು ಅವರ 10ನೇ ಟೆಸ್ಟ್ ಶತಕವಾಗಿದೆ. 224 ಎಸೆತಗಳನ್ನು ಎದುರಿಸಿದ ರೋಹಿತ್ 10 ಬೌಂಡರಿ, 2 ಸಿಕ್ಸರ್ ಸಹಿತ 104 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ವಿದೇಶಿ ನೆಲದಲ್ಲಿ ರೋಹಿತ್ರ 2ನೇ ಶತಕ ಇದಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್ನಲ್ಲಿ 100ರ ಗಡಿ ದಾಟಿದ್ದರು. ಹಾಗೆಯೇ 44ನೇ ಅಂತಾರಾಷ್ಟ್ರೀಯ ಶತಕವೂ ಹೌದು.
ದ್ವಿಶತಕದ ಜೊತೆಯಾಟ, ಸೃಷ್ಟಿಯಾದ ದಾಖಲೆಗಳು
ವೆಸ್ಟ್ ಇಂಡೀಸ್ ಬೌಲರ್ಗಳಿಗೆ ಪಂದ್ಯದ ಆರಂಭದಿಂದಲೂ ಕಾಡಿದ ಭಾರತ ಆರಂಭಿಕರು ತಲಾ ಶತಕ ಸಿಡಿಸಿ ಗಮನ ಸೆಳೆದರು. ಮೊದಲ ವಿಕೆಟ್ಗೆ 229 ರನ್ಗಳ ಭರ್ಜರಿ ಜೊತೆಯಾಟದ ಮೂಲಕ ಇತಿಹಾಸ ನಿರ್ಮಿಸಿದರು. 17 ವರ್ಷಗಳ ಬಳಿಕ ಕೆರಿಬಿಯನ್ನರ ನಾಡಿನಲ್ಲಿ ಆರಂಭಿಕ ಶತಕದ ಜೊತೆಯಾಟವಾಡಿದೆ. 2006ರಲ್ಲಿ ಟೀಮ್ ಇಂಡಿಯಾ ಓಪನರ್ಸ್ ವಾಸಿಂ ಜಾಫರ್ ಹಾಗೂ ವೀರೇಂದ್ರ ಸೆಹ್ವಾಗ್ ಕೊನೆಯ ಬಾರಿ ವೆಸ್ಟ್ ಇಂಡೀಸ್ನಲ್ಲಿ ಸೆಂಚುರಿ ಪಾಲುದಾರಿಕೆ ನೀಡಿದ್ದರು.
163 ರನ್ಗಳ ಜೊತೆಯಾಟವಾಡಿದ್ದ ಈ ಜೋಡಿಯ ದಾಖಲೆಯನ್ನು ರೋಹಿತ್-ಯಶಸ್ವಿ ಸೇರಿ ಮುರಿದಿದ್ದಾರೆ. ಮತ್ತೊಂದು ದಾಖಲೆಯ ಅಂದರೆ, 2021ರ ಬಳಿಕ ಇದೇ ಮೊದಲ ಬಾರಿಗೆ ಶತಕಕ್ಕೂ ಹೆಚ್ಚು ಜೊತೆಯಾಟವಾಡಿದೆ. ವಿಂಡೀಸ್ ನಾಡಲ್ಲಿ 229 ರನ್ಗಳ ಜೊತೆಯಾಟ ಆಡಿ ದಾಖಲೆ ಬರೆದಿದ್ದಾರೆ ರೋಹಿತ್-ಯಶಸ್ವಿ. ಅಲ್ಲದೆ, ಯಾವುದೇ ವಿಕೆಟ್ ಇಲ್ಲದೆ ಮೊದಲ ಇನ್ನಿಂಗ್ಸ್ನಲ್ಲಿ ಲೀಡ್ ಪಡೆದಿದ್ದು ಟೆಸ್ಟ್ ಇತಿಹಾಸದಲ್ಲೇ ಮೊದಲು.
ಗಿಲ್ ನಿರಾಸೆ, ಕ್ರೀಸ್ನಲ್ಲಿ ಕೊಹ್ಲಿ
ರೋಹಿತ್ ಶರ್ಮಾ ಔಟಾದ ಬಳಿಕ ಚೇತೇಶ್ವರ್ ಪೂಜಾರ ಸ್ಥಾನದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್, ತಮ್ಮ ಮೇಲಿದ್ದ ನಿರೀಕ್ಷೆಯನ್ನು ಹುಸಿಗೊಳಿಸಿದರು. 6 ರನ್ ಗಳಿಸಿ ಹೊರ ನಡೆದರು. ಆ ನಂತರ ಕ್ರೀಸ್ಗೆ ಬಂದ ಕೊಹ್ಲಿ, ತಾಳ್ಮೆಯುತವಾಡಿ ಅಚ್ಚುಕಟ್ಟಾದ ಇನ್ನಿಂಗ್ಸ್ ಕಟ್ಟಿದರು. 96 ಎಸೆತಗಳನ್ನು ಎದುರಿಸಿರುವ ಕೊಹ್ಲಿ, 36 ರನ್ ಬಾರಿಸಿ 3ನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಟೆಸ್ಟ್ ಕ್ರಿಕೆಟ್ನಲ್ಲಿ 8500 ರನ್ಗಳ ಗಡಿ ದಾಟಿದರು. ಅಂತಿಮವಾಗಿ ಭಾರತ 2 ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿದ್ದು, 162 ರನ್ಗಳ ಮುನ್ನಡೆ ಸಾಧಿಸಿದೆ.