Suraj Randiv: ನೋ ಬಾಲ್ ಹಾಕಿ ಸೆಹ್ವಾಗ್ಗೆ ಶತಕ ತಪ್ಪಿಸಿದ್ದ ಶ್ರೀಲಂಕಾ ಬೌಲರ್ ಈಗ ಆಸ್ಟ್ರೇಲಿಯಾದಲ್ಲಿ ಬಸ್ ಡ್ರೈವರ್; ಏನಿದು ಸೂರಜ್ ಕಥೆ
Jun 21, 2023 01:39 PM IST
ಸೆಹ್ವಾಗ್ಗೆ ನೋ ಬಾಲ್ ಹಾಕಿ ಶತಕ ತಪ್ಪಿಸಿದ್ದ ಶ್ರೀಲಂಕಾದ ಸೂರಜ್ ರಣದೀವ್ ಈಗ ಆಸ್ಟ್ರೇಲಿಯಾದಲ್ಲಿ ಬಸ್ ಡ್ರೈವರ್.
- Suraj Randiv: ಅಂದು ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದ ಸ್ಪಿನ್ನರ್ ಸೂರಜ್ ರಣದೀವ್, ಇಂದು ಬಸ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕ್ರಿಕೆಟ್ನಲ್ಲಿ ಆಟಗಾರರಿಗೆ ಸಿಕ್ಕಾಪಟ್ಟೆ ಕ್ರೇಜ್ ಸಿಗಬಹುದು. ಸಾಕಷ್ಟು ಹಣ ಗಳಿಸಬಹುದು. ಸೆಲೆಬ್ರೆಟಿಗಳೂ ಆಗುತ್ತಾರೆ. ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಆದರೆ, ಅದೃಷ್ಟ ಅಡ್ಡ ತಿರುಗಿದರೆ ಎಂಥಹ ಪ್ರಸಿದ್ಧ ವ್ಯಕ್ತಿಯ ಜೀವನವಾದರೂ ಅಯೋಮಯ ಆಗುತ್ತದೆ. ಆಗ ಜೀವನೋಪಾಯಕ್ಕಾಗಿ ಏನಾದರೂ ಮಾಡಿ ಬದುಕು ಸಾಗಿಸುವ ಅಗತ್ಯ ಕೂಡ ಬರಬಹುದು. ಇದಕ್ಕೆ ನೇರ ಉದಾಹರಣೆ ಎಂದರೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸೂರಜ್ ರಣದೀವ್ (Suraj Randiv).
2011ರ ಏಕದಿನ ವಿಶ್ವಕಪ್ ಫೈನಲ್ ಆಡಿದ್ದ ಸ್ಪಿನ್ನರ್ ಸೂರಜ್ ರಣದೀವ್, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೆಜೆಂಡರಿ ನಾಯಕ ಎಂಎಸ್ ಧೋನಿ ಆಟಗಾರ. ಆದರೆ ಈಗ ಮೆಲ್ಬೋರ್ನ್‌ನಲ್ಲಿ (ಆಸ್ಟ್ರೇಲಿಯಾ) ಜೀವನೋಪಾಯಕ್ಕೆ ಬಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2009ರಲ್ಲಿ ರಣದೀವ್ ಭಾರತದ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ತಂಡದ ದಿಗ್ಗಜರಾದ ಮುತ್ತಯ್ಯ ಮುರಳೀಧರನ್, ರಂಗನಾ ಹೆರಾತ್ ಅವರನ್ನೇ ಮೀರಿಸುತ್ತಾರೆ ಎಂಬ ಹೆಸರು ಪಡೆದರು. ಆದರೆ, ಫ್ರಾಂಚೈಸಿ ಲೀಗ್ಗಳಿಗಾಗಿ ಶ್ರೀಲಂಕಾವನ್ನೇ ತೊರೆದು ಈಗ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತ ವಿರುದ್ಧ ವೃತ್ತಿ ಜೀವನ ಪ್ರಾರಂಭ
2009-10ರಲ್ಲಿ ಸೂರಜ್, ಭಾರತ ಪ್ರವಾಸ ಮಾಡಿದ ಶ್ರೀಲಂಕಾ ತಂಡದ ಸದಸ್ಯರಾಗಿದ್ದರು. ಅದೇ ವರ್ಷ ಭಾರತದ ವಿರುದ್ಧವೇ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ಗೆ ಪ್ರವೇಶಿಸಿದ್ದರು. ಲಂಕಾ ಪರ 12 ಟೆಸ್ಟ್ (43 ವಿಕೆಟ್), 31 ಏಕದಿನ (36 ವಿಕೆಟ್) ಮತ್ತು 7 ಟಿ20 (7 ವಿಕೆಟ್) ಆಡಿದ್ದಾರೆ. 2011ರ ಭಾರತ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಫೈನಲ್‌ನಲ್ಲಿ ಆಡಿದ್ದ ಸೂರಜ್, 9 ಓವರ್ ಬೌಲ್ ಮಾಡಿ, 43 ರನ್ ಬಿಟ್ಟುಕೊಟ್ಟಿದ್ದರು.
ಐಪಿಎಲ್ನಲ್ಲಿ ಪ್ರದರ್ಶನ
ಐಪಿಎಲ್ನಲ್ಲಿ ಸೂರಜ್ 2011ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಧೋನಿ ನಾಯಕತ್ವದಲ್ಲಿ 8 ಪಂದ್ಯಗಳನ್ನು ಆಡಿದ್ದು, ಅವರು ಆರು ವಿಕೆಟ್‌ಗಳನ್ನು ಸಹ ಪಡೆದಿದ್ದರು. ಆದರೆ ಅದೇ ಕೊನೆಯ ಐಪಿಎಲ್.
ನೋ ಬಾಲ್ ಹಾಕಿ ವಿವಾದ
2010ರಲ್ಲಿ ನಡೆದ ಭಾರತ-ಶ್ರೀಲಂಕಾ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ 99 ರನ್ ಗಳಿಸಿದ್ದರು. ಭಾರತದ ಗೆಲುವಿಗೆ ಒಂದು ರನ್ ಬೇಕಿತ್ತು. ಆ ಸಮಯದಲ್ಲಿ ಸೂರಜ್ ಉದ್ದೇಶಪೂರ್ವಕವಾಗಿ ನೋಬಾಲ್ ಬೌಲ್ ಹಾಕಿದ್ದರು. ಈ ಹಿಂದೆಯೂ ವಿವಾದಕ್ಕೆ ಒಳಗಾಗಿದ್ದರು. ಲಂಕಾ ಮಂಡಳಿಯು ಸೂರಜ್‌ಗೆ ಒಂದು ಪಂದ್ಯದ ನಿಷೇಧ ವಿಧಿಸಿತ್ತು.
ಲೀಗ್ಗಳ ಮೋಹಕ್ಕೆ ಕ್ರಿಕೆಟ್ ಜೀವನ ಅಂತ್ಯ
2009, 2010.. ಹೀಗೆ ಆ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿ20 ಕ್ರೇಜ್ ಹೆಚ್ಚಾಯಿತು. ಫ್ರಾಂಚೈಸಿ ಲೀಗ್ಗಳು ಕೂಡ ಹೆಚ್ಚಾದವು. ಹೀಗಾಗಿ ಸೂರಜ್ ರಾಷ್ಟ್ರೀಯ ತಂಡವನ್ನು ತೊರೆದು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಅಲ್ಲಿನ ಜಿಲ್ಲಾ ಕ್ಲಬ್ ಒಂದರಲ್ಲಿ ಕೆಲ ವರ್ಷಗಳ ಕಾಲ ಕ್ರಿಕೆಟ್ ಆಡಿದ್ದರು. ಆದರೆ ಪರಿಸ್ಥಿತಿಗಳು ಅವರಿಗೆ ಸರಿಹೊಂದಲಿಲ್ಲ. ಜೊತೆಗೆ ಫಾರ್ಮ್ ಅನ್ನು ಕಳೆದುಕೊಂಡರು.
ನಂತರ ಲಂಕಾ ತಂಡದಲ್ಲಿ ಮತ್ತೊಮ್ಮೆ ಪ್ರಯತ್ನಿಸಿದರೂ ಅವಕಾಶ ಸಿಗಲಿಲ್ಲ. ಪರಿಣಾಮ ಮೆಲ್ಬೋರ್ನ್‌ನ ಟ್ರಾನ್ಸ್‌ದೇವ್ ಎಂಬ ಕಂಪನಿಯ ಉದ್ಯೋಗಿಯಾದರು. ಅದೊಂದು ಸಾರಿಗೆ ಸಂಸ್ಥೆ. ಸೂರಜ್ ಈ ಕಂಪನಿಯಲ್ಲಿ ಡ್ರೈವರ್ ಆಗಿ ಸೇರಿಕೊಂಡರು. ಸೂರಜ್ ಜೊತೆಗೆ ಲಂಕಾದ ಮಾಜಿ ಆಟಗಾರ ಚಿಂತಕ ಜಯಸಿಂಗ್ ಮತ್ತು ಜಿಂಬಾಬ್ವೆಯ ಮಾಜಿ ಆಟಗಾರ ವಾಡಿಂಗ್ಟನ್ ಮ್ವೆಂಗಾ ಕೂಡ ಇಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಲಂಕಾ ತಂಡದಲ್ಲೇ ಉಳಿದಿದ್ದರೆ, ರಣದೀವ್ಗೆ ಈ ಸ್ಥಿತಿ ಬರುತ್ತಿರಲಿಲ್ಲ.
ಆಸಿಸ್ಗೆ ನೆಟ್ ಬೌಲರ್
ಜೀವನೋಪಾಯಕ್ಕಾಗಿ ಡ್ರೈವರ್ ಆಗಿದ್ದರೂ ಸೂರಜ್ ಕ್ರಿಕೆಟ್ ಮೇಲಿನ ಮೋಹವನ್ನು ಕಳೆದುಕೊಳ್ಳಲಿಲ್ಲ. ಸ್ಪಿನ್ನರ್ ಸೂರಜ್ರನ್ನು ನೆಟ್ ಬೌಲರ್ ಆಗಿ ನೇಮಿಸಿಕೊಂಡಿತ್ತು. 2020ರಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಭಾಗವಾಗಿ, ತಮ್ಮ ದೇಶಕ್ಕೆ ಬಂದ ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸಲು ಆಸೀಸ್, ಸೂರಜ್ರನ್ನು ನೆಟ್ ಬೌಲರ್ ಆಗಿ ತೆಗೆದುಕೊಂಡಿತ್ತು. ಈ ವರ್ಷವೂ ಅವರು ಜನವರಿಯಲ್ಲಿ ಆಸೀಸ್ ಪರ ನೆಟ್ ಬೌಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ.