Rinku Singh: ಮುಂಬೈ ಲಾಬಿಯಿಂದ ಪ್ರತಿಭಾವಂತ ಕ್ರಿಕೆಟಿಗನಿಗೆ ಅನ್ಯಾಯ; ರಿಂಕು ಸಿಂಗ್ಗೆ ಅವಕಾಶ ನೀಡದ್ದಕ್ಕೆ ಬಿಸಿಸಿಐ, ಸೆಲೆಕ್ಟರ್ಸ್ ಟ್ರೋಲ್
Jul 06, 2023 11:35 AM IST
ಭಾರತ ತಂಡದಲ್ಲಿ ರಿಂಕು ಸಿಂಗ್ಗೆ ಅವಕಾಶ ನೀಡದ್ದಕ್ಕೆ ಬಿಸಿಸಿಐ ಅನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು
- Rinku Singh: ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಎಡಗೈ ಬ್ಯಾಟ್ಸ್ಮನ್ ರಿಂಕು ಸಿಂಗ್ ಅವರಿಗೆ ಭಾರತ ಟಿ20 ತಂಡದಲ್ಲಿ ಅವಕಾಶ ನೀಡದೇ ಇರುವುದಕ್ಕೆ ಬಿಸಿಸಿಐ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ಆಗಸ್ಟ್ 3ರಿಂದ ಪ್ರಾರಂಭವಾಗುವ ವೆಸ್ಟ್ ಇಂಡೀಸ್ (India vs West Indies) ಎದುರಿನ ಐದು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದಲ್ಲಿ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಜುಲೈ 4ರಂದು ನೂತನ ಚೀಫ್ ಸೆಲೆಕ್ಟರ್ ಆಗಿ ನೇಮಕಗೊಂಡಿರುವ ಅಜಿತ್ ಅಗರ್ಕರ್ (Ajit Agarkar) ಮುಂದಾಳತ್ವದಲ್ಲಿ ತಂಡವನ್ನು ಆಯ್ಕೆ ಮಾಡಲಾಗಿದೆ.
ರಿಂಕು ಸಿಂಗ್ಗೆ ಇಲ್ಲ ಅವಕಾಶ
ವಿಶೇಷ ಅಂದರೆ 16ನೇ ಆವೃತ್ತಿಯಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ಬಹುತೇಕ ಆಟಗಾರರಿಗೆ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಿರಿಯ ಆಟಗಾರರನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಯುವ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಐಪಿಎಲ್ನಲ್ಲಿ (IPL) ಅಮೋಘ ಪ್ರದರ್ಶನ ನೀಡಿದರ ಹೊರತಾಗಿಯೂ ಕೆಲವರಿಗೆ ಅವಕಾಶ ನೀಡಿಲ್ಲ. ಅದರಲ್ಲಿ ಐದು ಎಸೆತ 5 ಸಿಕ್ಸರ್ ಚಚ್ಚಿದ್ದ ರಿಂಕ್ ಸಿಂಗ್ (Rinku Singh) ಕೂಡ ಒಬ್ಬರು.
ಬಿಸಿಸಿಐ ವಿರುದ್ಧ ಕಿಡಿ
ತಿಲಕ್ ವರ್ಮಾ (Tilak Varma), ಯಶಸ್ವಿ ಜೈಸ್ವಾಲ್ (Yashavi Jaiswal), ಮುಕೇಶ್ ಕುಮಾರ್ (Mukesh Kumar) ಸೇರಿದಂತೆ ಹಲವರಿಗೆ ಈ ಬಾರಿ ಟಿ20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಆದರೆ ಐಪಿಎಲ್ ಟೂರ್ನಿಯುದ್ದಕ್ಕೂ ಆರ್ಭಟಿಸಿದ್ದ ರಿಂಕು ಸಿಂಗ್ಗೆ ಅವಕಾಶ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಮಿಂಚಿನ ಪ್ರದರ್ಶನ ತೋರಿದ ಪ್ರತಿಭಾವಂತ ಆಟಗಾರನಿಗೆ ಅನ್ಯಾಯ ಮಾಡಲಾಗಿದೆ ಎಂದು ನೆಟ್ಟಿಗರು, ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
ಟಿ20 ಸರಣಿಗೆ ತಂಡ ಪ್ರಕಟಕ್ಕೂ ಮುನ್ನ ರಿಂಕು ಸಿಂಗ್ ಆಯ್ಕೆಯ ನಿರೀಕ್ಷೆಯಲ್ಲಿದ್ದರು. ಪ್ರಬಲ ಸ್ಪರ್ಧಿಗಳಿದ್ದರೂ, ರಿಂಕು ಆಯ್ಕೆ ಖಚಿತ ಎಂಬ ಮಾತುಗಳೂ ಕೇಳಿಬಂದಿದ್ದವು. ಜೊತೆಗೆ ಮಾಜಿ ಕ್ರಿಕೆಟರ್ಗಳಿಂದಲೂ ಒತ್ತಾಯ ಕೇಳಿ ಬಂದಿತ್ತು. ಐದು ಎಸೆತಗಳಲ್ಲಿ 5 ಸಿಕ್ಸರ್ ಕೋಲ್ಕತ್ತಾ ನೈಟ್ ರೈಡರ್ಸ್ಗೆ ರೋಚಕ ಗೆಲುವು ತಂದುಕೊಟ್ಟಿದ್ದ ಈತನನ್ನು ಕಡೆಗಣಿಸಲಾಗಿದೆ.
ಕೆಕೆಆರ್ ತಂಡದ ಮ್ಯಾಚ್ ಫಿನಿಷರ್ ಆಗಿದ್ದ ರಿಂಕು
ಈ ಬಾರಿಯ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅತ್ಯಂತ ಕಳಪೆ ಪ್ರದರ್ಶನ ತೋರಿತು. ಘಟಾನುಘಟಿ ಬ್ಯಾಟರ್ಗಳೇ ರನ್ ಗಳಿಸಲು ವಿಫಲರಾದರು. ಆದರೆ ರಿಂಕು ಸಿಂಗ್ ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ತೋರಿದರು. ಏಕಾಂಗಿಯಾಗಿ ಹೋರಾಟ ನಡೆಸಿ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. ಮ್ಯಾಚ್ ಫಿನಿಷರ್ ಆಗಿದ್ದರು.
5 ಎಸೆತಗಳಲ್ಲಿ 5 ಸಿಕ್ಸರ್
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 5 ಎಸೆತಗಳಿಗೆ 5 ಸಿಕ್ಸರ್ ಸಿಡಿಸಿದ್ದರು. ಅಂದು ಕೆಕೆಆರ್ ಗೆಲುವಿಗೆ ಕೊನೆಯ ಓವರ್ನಲ್ಲಿ 28 ರನ್ ಬೇಕಿತ್ತು. ಆಗ ಕ್ರೀಸ್ನಲ್ಲಿದ್ದ ರಿಂಕು, ಕೊನೆಯೆ ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿ ರೋಚಕ ಗೆಲುವು ತಂದುಕೊಟ್ಟಿದ್ದರು. ಇದೇ ರೀತಿ ಪಂದ್ಯಗಳಲ್ಲಿ ಗೇಮ್ ಫಿನಿಷ್ ಮಾಡಿದ್ದಾರೆ ರಿಂಕು ಸಿಂಗ್. ಆದರೂ ಭಾರತ ತಂಡಕ್ಕೆ ಆಯ್ಕೆ ಮಾಡಲಾಗದೆ ಕಡೆಗಣಿಸಲಾಗಿದೆ.
16ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ರದರ್ಶನ
16ನೇ ಸೀಸನ್ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ರಿಂಕು ಸಿಂಗ್ ಕಣಕ್ಕಿಳಿದ 14 ಪಂದ್ಯಗಳಲ್ಲಿ 59.25ರ ಬ್ಯಾಟಿಂಗ್ ಸರಾಸರಿಯಲ್ಲಿ ಮತ್ತು 149.53 ಸ್ಟ್ರೈಕ್ರೇಟ್ನಲ್ಲಿ 474 ರನ್ ಗಳಿಸಿದ್ದರು. 4 ಅರ್ಧಶತಕಗಳು ಸಿಡಿಸಿದ್ದ 31 ಫೋರ್ ಹಾಗೂ 29 ಸಿಕ್ಸರ್ ಚಚ್ಚಿದ್ದರು.
ಮುಂಬೈ ಲಾಬಿ ಎಂದ ನೆಟಿಜನ್ಸ್
ವೆಸ್ಟ್ ಇಂಡೀಸ್ ಟಿ20 ಸರಣಿಗೆ ಕೆಕೆಆರ್ ತಾರೆ ರಿಂಕು ಸಿಂಗ್ ಅವರನ್ನು ಆಯ್ಕೆಗಾರರು ನಿರ್ಲಕ್ಷಿಸಿದ ನಂತರ ಅಭಿಮಾನಿಗಳು ಸ್ಫೋಟಗೊಂಡಿದ್ದಾರೆ. ಇದೆಲ್ಲವೂ ಮುಂಬೈ ಲಾಬಿ, ಮುಂಬೈ ಪಾಲಿಟಿಕ್ಸ್ ಎಂದು ಕೆಂಡಕಾರುತ್ತಿದ್ದಾರೆ. ಪ್ರತಿಭಾವಂತ ಕ್ರಿಕೆಟಿಗನಿಗೆ ಕಡೆಗಣೆಸುತ್ತಿದ್ದಂತೆ ಅಭಿಮಾನಿಗಳು ತೀವ್ರ ನಿರಾಶೆಗೊಂಡಿದ್ದಾರೆ. ಟ್ವಿಟರ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿ ನ್ಯಾಯಬೇಕಿದೆ. ಹೊಸ ಚೀಫ್ ಸೆಲೆಕ್ಟರ್ ಹೊಸಬರಾದರೂ, ಅದೇ ಹಳೆ ಕಥೆ ಎಂದು ಟ್ರೋಲ್ ಮಾಡುತ್ತಿದ್ದಾರೆ.
ಭಾರತ ಟಿ20 ತಂಡ
ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಲ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್, ಆರ್ಷದೀಪ್ ಸಿಂಗ್, ಮುಕೇಶ್ ಕುಮಾರ್, ಆವೇಶ್ ಖಾನ್.
ಟಿ20 ಸರಣಿ
- ಮೊದಲ ಟಿ20 ಪಂದ್ಯ: ಆಗಸ್ಟ್ 3 - ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್ (ಪಂದ್ಯ ಆರಂಭದ ಸಮಯ ರಾತ್ರಿ 8ಕ್ಕೆ)
- 2ನೇ ಟಿ20 ಪಂದ್ಯ: ಆಗಸ್ಟ್ 6- ರಾಷ್ಟ್ರೀಯ ಕ್ರೀಡಾಂಗಣ, ಗಯಾನಾ (ಪಂದ್ಯ ಆರಂಭದ ಸಮಯ ರಾತ್ರಿ 8ಕ್ಕೆ)
- 3ನೇ ಟಿ20 ಪಂದ್ಯ: ಆಗಸ್ಟ್ 8-ರಾಷ್ಟ್ರೀಯ ಕ್ರೀಡಾಂಗಣ, ಗಯಾನಾ (ಪಂದ್ಯ ಆರಂಭದ ಸಮಯ ರಾತ್ರಿ 8ಕ್ಕೆ)
- 4ನೇ ಟಿ20 ಪಂದ್ಯ: ಆಗಸ್ಟ್ 12- ಬ್ರೋವರ್ಡ್ ಕೌಂಟಿ ಸ್ಟೇಡಿಯಂ, ಫ್ಲೋರಿಡಾ (ಪಂದ್ಯ ಆರಂಭದ ಸಮಯ ರಾತ್ರಿ 8ಕ್ಕೆ)
- 5ನೇ ಟಿ20 ಪಂದ್ಯ: ಆಗಸ್ಟ್ 13- ಬ್ರೋವರ್ಡ್ ಕೌಂಟಿ ಸ್ಟೇಡಿಯಂ, ಫ್ಲೋರಿಡಾ (ಪಂದ್ಯ ಆರಂಭದ ಸಮಯ ರಾತ್ರಿ 8ಕ್ಕೆ)