Shikha Pandey: ಬಾಂಗ್ಲಾದೇಶ ವಿರುದ್ಧದ ಸರಣಿಗೆ ಕಡೆಗಣನೆ; ಕ್ಯಾಮರಾ ಮುಂದೆ ಭಾವುಕರಾದ ಶಿಖಾ ಪಾಂಡೆ
Jan 09, 2024 07:58 PM IST
ಶಿಖಾ ಪಾಂಡೆ
- India squad for Bangladesh ODIs and T20Is: ಬಾಂಗ್ಲಾದೇಶ ಪ್ರವಾಸಕ್ಕೆ ಆಯ್ಕೆಯಾಗದಿರುವ ಬಗ್ಗೆ ಮಾತನಾಡಿರುವ ಶಿಖಾ ಪಾಂಡೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾವುಕರಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಟೀಮ್ ಇಂಡಿಯಾ ಆಟಗಾರರ ಪಟ್ಟಿಯಿಂದ ಕಾಣೆಯಾದ ಪ್ರಮುಖರಲ್ಲಿ ಶಿಖಾ ಪಾಂಡೆ (Shikha Pandey ಪ್ರಮುಖರು. ಭಾರತ ವನಿತೆಯರ ಕ್ರಿಕೆಟ್ ತಂಡದಲ್ಲಿ ಹೆಚ್ಚು ಅನುಭವಿ ಆಟಗಾರ್ತಿಯರಲ್ಲಿ ಒಬ್ಬರಾಗಿರುವ ಶಿಖಾ, ಚೊಚ್ಚಲ ವಿಮೆನ್ಸ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಪ್ರಮುಖ ವಿಕೆಟ್ ಟೇಕರ್ ಆಗಿ ಗುರುತಿಸಿಕೊಂಡಿದ್ದರು. ಅವರ ಬೌಲಿಂಗ್ ಪರಾಕ್ರಮದಂತೆಯೇ ಡೆಲ್ಲಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಫೈನಲ್‌ಗೆ ಲಗ್ಗೆ ಹಾಕಿತ್ತು.
ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಭಾರತ ತಂಡಕ್ಕೆ ಮರಳಿದ್ದ ಬಲಗೈ ವೇಗಿ, ಆ ಬಳಿಕ ಬಿಸಿಸಿಐನ ಕೇಂದ್ರೀಯ ಒಪ್ಪಂದದಿಂದ ಹೊರಗುಳಿದರು. ಅದರ ಬೆನ್ನಲ್ಲೇ ಬಾಂಗ್ಲಾದೇಶ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೂ ಅವರನ್ನು ಪರಿಗಣಿಸಿಲ್ಲ.
ಭಾರತ ತಂಡದಿಂದ ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಶಿಖಾ ಬೇಸರಗೊಂಡಿದ್ದಾರೆ. ಈ ಕುರಿತಾಗಿ ಭಾರತದ ಮಾಜಿ ಮುಖ್ಯ ಕೋಚ್ ರಾಮನ್ ಅವರೊಂದಿಗಿನ ಸ್ಪೋರ್ಟ್‌ಸ್ಟಾರ್ ಸಂದರ್ಶನದಲ್ಲಿ ಶಿಖಾ ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಶಿಖಾ, “ಭಾರತ ತಂಡಕ್ಕೆ ಆಯ್ಕೆಯಾಗದ್ದಕ್ಕೆ ನಾನು ಹತಾಶೆಗೊಂಡಿಲ್ಲ ಮತ್ತು ಕೋಪಗೊಂಡಿಲ್ಲ ಎಂದು ಹೇಳಿದರೆ, ನಾನು ಮನುಷ್ಯಳೇ ಅಲ್ಲ” ಎಂದು 34 ವರ್ಷ ವಯಸ್ಸಿನ ಅನುಭವಿ ಆಟಗಾರ್ತಿ ಹೇಳಿದ್ದಾರೆ. “ಮಾಡಿದ ಪ್ರಯತ್ನಕ್ಕೆ ಉತ್ತಮ ಫಲಿತಾಂಶ ಪಡೆಯದಿದ್ದಾಗ ಅದನ್ನು ಸ್ವೀಕರಿಸುವುದು ಕಷ್ಟ,” ಎಂದು ಅವರು ಬೇಸರದಿಂದ ಹೇಳಿದ್ದಾರೆ. ಈ ವೇಳೆ ಅವರ ಕಣ್ಣಾಲಿಗಳು ಒದ್ದೆಯಾಗಿದೆ.
“ಇದರ ಹಿಂದೆ ನನಗೆ ತಿಳಿಯದ ಕಾರಣವಿದೆ ಎಂಬುದು ನನಗೆ ಖಚಿತವಿದೆ. ಕಠಿಣ ಪ್ರಯತ್ನ ಮಾಡುವುದು ಮಾತ್ರ ನನ್ನ ಕೈಯಲ್ಲಿದೆ. ಅದರ ಮೇಲೆ ನನಗೆ ಬಲವಾದ ನಂಬಿಕೆಯಿದೆ. ಹಾಗಾಗಿ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢನಾಗುವವರೆಗೆ ಕಷ್ಟಪಟ್ಟು ಕೆಲಸ ಮಾಡುವೆ” ಎಂದು ಶಿಖಾ ಹೇಳಿದ್ದಾರೆ.
ವೃತ್ತಿಜೀವನದಲ್ಲಿ 120 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿಸಿರುವ ಶಿಖಾ, ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ನಿರ್ಮಿಸಿದ್ದಾರೆ. 2022ರ ವಿಶ್ವಕಪ್‌ಗೆ ಅವರು ಆಯ್ಕೆಯಾಗದಿರುವುದು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆದ ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದರು.
ಬಾಂಗ್ಲಾದೇಶ ಪ್ರವಾಸಕ್ಕೆ ರೇಣುಕಾ ಸಿಂಗ್ ಮತ್ತು ರಿಚಾ ಘೋಷ್ ಕೂಡಾ ಭಾರತ ತಂಡದಲ್ಲಿ ಆಯ್ಕೆಯಾಗಿಲ್ಲ. ಡಬ್ಲ್ಯುಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ತಂಡಕ್ಕೆ ಆಯ್ಕೆಯಾಗದಿರುವ ಬಗ್ಗೆ ಶಿಖಾ ಪಾಂಡೆ ನಿರಾಶೆಗೊಂಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ವಿರುದ್ಧದ ಎಲ್ಲಾ ಮಾದರಿಯ ಸರಣಿಯಲ್ಲಿ ತಂಡಕ್ಕೆ ಮರಳುವ ವಿಶ್ವಾಸದಲ್ಲಿ ಅವರಿದ್ದಾರೆ.
ಬಾಂಗ್ಲಾದೇಶ ಪ್ರವಾಸಕ್ಕೆ ಭಾರತದ ಟಿ20 ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಎಸ್ ಮೇಘನಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬಾರೆಡ್ಡಿ, ಮಿನ್ನು ಮಣಿ.
ಭಾರತ ಏಕದಿನ ತಂಡ
ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ (ಉಪನಾಯಕಿ), ದೀಪ್ತಿ ಶರ್ಮಾ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಚೆಟ್ರಿ (ವಿಕೆಟ್ ಕೀಪರ್), ಅಮನ್ಜೋತ್ ಕೌರ್, ಪ್ರಿಯಾ ಪುನಿಯಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾಣಿ, ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬಾರೆಡ್ಡಿ, ಸ್ನೇಹ ರಾಣಾ.