Explainer: ಏಷ್ಯನ್ ಗೇಮ್ಸ್ ಕಬಡ್ಡಿ; ಒಂದು ಗಂಟೆ ವಿವಾದ, ರದ್ದು ಬಳಿಕವೂ ಇರಾನ್ ವಿರುದ್ಧ ಭಾರತ ಚಿನ್ನ ಗೆದ್ದಿದ್ದು ಹೇಗೆ?
Oct 07, 2023 05:24 PM IST
ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ವಿವಾದ
- India vs Iran Asian Games kabaddi: ಏಷ್ಯನ್ ಗೇಮ್ಸ್ ಕಬಡ್ಡಿ ಫೈನಲ್ ಪಂದ್ಯವು ವಿವಾದ ಮತ್ತು ಗೊಂದಲದ ಗೂಡಾಯಿತು. ಅಂತಿಮವಾಗಿ ಭಾರತ ತಂಡ ಇರಾನ್ ಮಣಿಸಿ ಚಿನ್ನ ಗೆದ್ದುಕೊಂಡಿತು. ಒಂದು ಹಂತದಲ್ಲಿ ರದ್ದುಗೊಂಡ ಪಂದ್ಯದಲ್ಲಿ ಅಂತಿಮವಾಗಿ ಭಾರತ ಗೆದ್ದಿದ್ದು ಹೇಗೆ ಎಂಬ ವಿವರ ಇಲ್ಲಿದೆ.
ವಿವಾದ, ಪ್ರತಿಭಟನೆ ಹಾಗೂ ಸುಮಾರು ಒಂದು ಗಂಟೆ ಕಾಲ ಸಾಗಿದ ಗೊಂದಲದ ವಾತಾವರಣದ ಬಳಿಕ, ಕೊನೆಗೂ ಭಾರತ ಪುರುಷರ ಕಬಡ್ಡಿ ತಂಡವು ಏಷ್ಯನ್ ಗೇಮ್ಸ್‌ನಲ್ಲಿ (Asian Games) ಚಿನ್ನ ಗೆದ್ದಿದೆ. ಭಾರತ ಮತ್ತು ಇರಾನ್ (India vs Iran kabaddi) ತಂಡಗಳ ನಡುವಿನ ರೋಚಕ ಫೈನಲ್ ಪಂದ್ಯವು ಗೊಂದಲದಲ್ಲಿ ಅಂತ್ಯವಾಯ್ತು. ಒಂದು ಹಂತದಲ್ಲಿ ಪಂದ್ಯವನ್ನು ರದ್ದುಪಡಿಸಲಾಯಿತಾದರೂ, ಪಟ್ಟು ಬಿಡದ ಭಾರತದ ಆಟಗಾರರ ನ್ಯಾಯಯುತ ಗೆಲುವಿಗೆ ವಾದಕ್ಕಿಳಿದರು. ಅಂತಿಮವಾಗಿ ಭಾರತವು ಅರ್ಹ ಗೆಲುವು ಸಾಧಿಸಿ ಬಂಗಾರದ ಪದಕ ಗೆದ್ದು ಬೀಗಿತು.
ಕಳೆದ ಆವೃತ್ತಿಯ ಏಷ್ಯನ್ ಗೇಮ್ಸ್‌ನಲ್ಲಿ ಇದೇ ಇರಾನ್ ತಂಡದ ವಿರುದ್ಧ ಸೋತು ಬಂಗಾರ ಮಿಸ್ ಮಾಡಿಕೊಂಡಿದ್ದ ಭಾರತ, ಈ ಬಾರಿ ಹ್ಯಾಂಗ್‌ಝೌನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮತ್ತೆ ಹಳೆಯ ಖದರ್ ತೋರಿಸಿ, ಚಿನ್ನವನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಆದರೆ, ಪಂದ್ಯವು ವಿವಾದಾತ್ಮಕ ಅಂತ್ಯ ಕಂಡಿದ್ದು, ಭಾರತ ಹಾಗೂ ಇರಾನ್ ತಂಡಗಳ ಅಸಮಾಧಾನಕ್ಕೆ ಕಾರಣವಾಯ್ತು.
ಆಗಿದ್ದೇನು?
ಅಂತಿಮ ಕ್ಷಣದಲ್ಲಿ ಭಾರತದ ನಾಯಕ ಪವನ್ ಸೆಹ್ರಾವತ್ ನಿರ್ಣಾಯಕ ರೇಡ್ ಮಾಡಿದಾಗ ವಿವಾದ ಎದ್ದಿತು. ಆ ಹಂತದಲ್ಲಿ ಉಭಯ ತಂಡಗಳ ಅಂಕ 28-28ರಲ್ಲಿ ಸಮಬಲಗೊಂಡಿತ್ತು. ಈ ವೇಳೆ ಪವನ್ ಅವರ ರೈಡ್, ಕಬಡ್ಡಿಯ ನಿಯಮ ಬದಲಾವಣೆಯಿಂದಾಗಿ ಗೊಂದಲಕ್ಕೆ ಕಾರಣವಾಯ್ತು. ಅಂಕಗಳು 28-28ರಿಂದ ಸಮಬಲದಲ್ಲಿದ್ದಾಗ, ಭಾರತಕ್ಕೆ ಮಾಡು ಇಲ್ಲವೇ ಮಡಿ (do-or-die raid ) ರೈಡ್ ಎದುರಾಯ್ತು. ನಾಯಕ ಪವನ್ ಒತ್ತಡದಲ್ಲಿ ರೈಡಿಂಗ್‌ಗೆ ಹೆಜ್ಜೆ ಇಟ್ಟರು. ಈ ವೇಳೆ ಪವನ್ ಡ್ಯಾಶ್ ಔಟ್ ಆದ ಕಾರಣ ಇರಾನ್‌ಗೆ ಪಾಯಿಂಟ್ ನೀಡಲಾಯ್ತು. ಇದು ವಿವಾದಕ್ಕೆ ಎಡೆ ಮಾಡಿ ಕೊಟ್ಟಿತು.
ರೆಫ್ರಿ ನಿರ್ಧಾರಕ್ಕೆ ಪವನ್ ಅಸಮಾಧಾನ ಹೊರಹಾಕಿದರು. ಯಾವುದೇ ಟಚ್ ಇಲ್ಲದೆ ಆಂತರಿಕ ಲಾಬಿಯಿಂದ ಹೊರಬಂದಿದ್ದಾಗಿ ಪವನ್ ವಾದಿಸಿದರು. ಅಂಥಾ ಸನ್ನಿವೇಶದಲ್ಲಿ, ರೈಡರ್ ಜೊತೆಗೆ ಹೊರಬಂದಿದ್ದ ಇರಾನ್‌ನ ಕೆಲವು ಡಿಫೆಂಡರ್‌ಗಳು ಕೂಡಾ ಔಟ್ ಆಗಿ ಭಾರತಕ್ಕೆ ಅಂಕಗಳು ಬರಬೇಕು ಎಂದು ಪವನ್ ವಾದಿಸಿದರು. ಇದೇ ವಿಷಯದ ಕುರಿತು ಕಬಡ್ಡಿ ಮೈದಾನದಲ್ಲಿ ಸುಮಾರು ಒಂದು ಗಂಟೆ ಕಾಲ ಗೊಂದಲ, ಚರ್ಚೆ ಮುಂದುವರೆಯಿತು. ಉಭಯ ತಂಡಗಳ ಆಟಗಾರರು ಕಬಡ್ಡಿ ಅಂಕಣದಲ್ಲೇ ಕುಳಿತರು. ಯಾವ ತಂಡಕ್ಕೆ ಅಂಕ ನೀಡುವುದು ಎಂಬುದರ ಕುರಿತು ಸೂಕ್ತ ತೀರ್ಮಾನಕ್ಕೆ ಬರಲು ಅಧಿಕಾರಿಗಳು ವಿಫಲರಾದರು.
ಉಭಯ ತಂಡಗಳ ಪ್ರತಿಭಟನೆ, ವಾದ-ವಿವಾದ
ಆರಂಭದಲ್ಲಿ ಇರಾನ್‌ಗೆ ಅಂಕ ನೀಡಿದಾಗ, ಭಾರತ ತಂಡ ಪ್ರತಿಭಟಿಸಿತು. ಆ ಬಳಿಕ ಭಾರತದ ಪರವಾಗಿ ತೀರ್ಪು ನೀಡಿದಾಗ ಇರಾನ್ ವಿರೋಧಿಸಿತು. ಕೊನೆಗೆ ವಿಡಿಯೊ ರಿವ್ಯೂ ನೋಡಲು ಅಧಿಕಾರಿಗಳು ಮುಂದಾದರು. ಉಭಯ ತಂಡಗಳ ಮನವೊಲಿಕೆ ಸಾಧ್ಯವಾಗದ ಕಾರಣ, ಫೈನಲ್ ಪಂದ್ಯವನ್ನು ಅಮಾನತುಗೊಳಿಸಲು ನಿರ್ಧರಿಸಲಾಯ್ತು. ಇದಕ್ಕೆ ಉಭಯ ತಂಡಗಳು ವಿರೋಧ ವ್ಯಕ್ತಪಡಿಸಿದವು.
ಗೊಂದಲಕ್ಕೆ ಕಾರಣವಾದ ಎರಡು ನಿಯಮಗಳು
ಕಬಡ್ಡಿಯಲ್ಲಿ ಎರಡು ನಿಯಮಗಳಿವೆ. ಈ ಪ್ರತ್ಯೇಕ ಪ್ರಕರಣದಲ್ಲಿ ಯಾವ ನಿಯಮ ಅನ್ವಯಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಲು ಅಧಿಕಾರಗಳು ವಿಫಲರಾದರು. ಹಳೆ ನಿಯಮ (IKF rule) ಅಥವಾ ಹೊಸ ನಿಯಮ (PKL rule). ಈ ಪಂದ್ಯದಲ್ಲಿ ಯಾವ ನಿಯಮ ಅನ್ವಯಿಸುತ್ತದೆ ಎಂಬುದರ ಕುರಿತು ಮತ್ತೆ ಚರ್ಚೆ ನಡೆಯಿತು. ಹಳೆಯ ನಿಯಮದ ಪ್ರಕಾರ ಭಾರತಕ್ಕೆ ನಾಲ್ಕು (ಅಥವಾ ಐದು) ಅಂಕಗಳು ಸಿಗಬೇಕಾಗಿತ್ತು. ಅದೇ ಹೊಸ ನಿಯಮದ ಪ್ರಕಾರ ಉಭಯ ತಂಡಗಳಿಗೂ ತಲಾ ಒಂದು ಅಂಕ ಹೋಗಬೇಕು. ಇದಕ್ಕೆ ಕಾರಣವಿದೆ. ಇರಾನ್‌ನ ಒಬ್ಬ ಡಿಫೆಂಡರ್ ಲೈನ್‌ನಿಂದ ಹೊರಗೆ ಹೋಗಿ ಸೆಲ್ಫ್ ಔಟ್ ಆಗಿದ್ದರು.
ಏಷ್ಯನ್ ಗೇಮ್ಸ್‌ನಲ್ಲಿ ಹೊಸ ನಿಯಮ ಅನ್ವಯವಾಗುವುದಿಲ್ಲ. ಹೀಗಾಗಿ ಹಳೆಯ ನಿಯಮವೇ ಅನ್ವಯವಾಗಲಿದೆ ಎಂಬುದಾಗಿ ಭಾರತ ತಂಡವು ಖಡಕ್ ಆಗಿ ತನ್ನ ನಿಲುವನ್ನು ಸಮರ್ಥಿಸಿಕೊಂಡಿತು. ಈವರೆಗೆ ಪ್ರೊ ಕಬಡ್ಡಿ ಲೀಗ್‌ನ 9ನೇ ಸೀಸನ್‌ನಲ್ಲಿ ಮಾತ್ರ ಬಳಸಲಾಗಿರುವ ಕಬಡ್ಡಿಯ ಹೊಸ ನಿಯಮವನ್ನು, ಈವರೆಗೆ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಬಳಸಿಲ್ಲ. ಹೀಗಾಗಿ ಈ ನಿಯಮ ಏಷ್ಯನ್ ಗೇಮ್ಸ್‌ನಲ್ಲಿ ಬಳಸುವುದಕ್ಕೂ ಮುನ್ನ, ಅದನ್ನು ಅಂತಾರಾಷ್ಟ್ರೀಯ ಮತ್ತು ಏಷ್ಯನ್ ಕಬಡ್ಡಿ ಫೆಡರೇಶನ್‌ಗಳು ಅಂಗೀಕರಿಸಬೇಕು. ಅದು ಈವರೆಗೂ ಆಗಿಲ್ಲ. ಹೀಗಾಗಿ ಹಳೆಯ ನಿಯಮವೇ ಏಷ್ಯನ್ ಗೇಮ್ಸ್‌ನಲ್ಲಿ ಅನ್ವಯವಾಗುತ್ತದೆ. ಇದು ಭಾರತದ ವಾದವಾಗಿತ್ತು.
ಭಾರತಕ್ಕೆ ನ್ಯಾಯಯುತ ಗೆಲುವು
ಅಂತಿಮವಾಗಿ, ಹಳೆಯ ನಿಯಮದ ಪ್ರಕಾರ ಭಾರತಕ್ಕೆ 4 ಅಂಕ ನೀಡಲು ಅಧಿಕಾರಿಗಳು ನಿರ್ಧರಿಸಿದರು. ನಿಯಮ ಪ್ರಕಾರವೇ ನ್ಯಾಯಯುತವಾಗಿ ವಾದ ಮಂಡಿಸಿದ ಭಾರತವು ಅಂತಿಮವಾಗಿ ಪಂದ್ಯ ಗೆದ್ದಿತು. ಹಾಲಿ ಚಾಂಪಿಯನ್ ಇರಾನ್ ವಿರುದ್ಧ 33-29 ಅಂತರದಿಂದ ಗೆದ್ದು ಚಿನ್ನದ ಪದಕ ತನ್ನದಾಗಿಸಿಕೊಂಡಿತು. ದಿನದ ಮೊದಲ ಪಂದ್ಯದಲ್ಲಿ ಭಾರತ ವನಿತೆಯರ ಕಬಡ್ಡಿ ತಂಡ ಕೂಡಾ ಬಂಗಾರ ಗೆದ್ದಿತ್ತು.
1990ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಕಬಡ್ಡಿ ಆರಂಭವಾದಾಗಿನಿಂದ ಭಾರತ ಪುರುಷರ ತಂಡವು ಚಿನ್ನ ಗೆಲ್ಲುತ್ತಾ ಬಂದಿದೆ. 2018ರಲ್ಲಿ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಮಾತ್ರ ಇರಾನ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿ ಪಟ್ಟಿತ್ತು. ಈ ಬಾರಿ ಭಾರತ ಮತ್ತೆ ಚಿನ್ನವನ್ನು ಮರಳಿ ಪಡೆದಿದೆ.