logo
ಕನ್ನಡ ಸುದ್ದಿ  /  ಕ್ರೀಡೆ  /  ಆಟಗಾರ್ತಿಗೆ ವೇದಿಕೆಯಲ್ಲೇ ಲಿಪ್‌ ಕಿಸ್; ಕ್ಷಮೆಯಾಚಿಸಿದ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ

ಆಟಗಾರ್ತಿಗೆ ವೇದಿಕೆಯಲ್ಲೇ ಲಿಪ್‌ ಕಿಸ್; ಕ್ಷಮೆಯಾಚಿಸಿದ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ

Jayaraj HT Kannada

Aug 22, 2023 06:53 PM IST

google News

ಆಟಗಾರ್ತಿಗೆ ಚುಂಬಿಸಿದ ಲೂಯಿಸ್ ರುಬಿಯಾಲ್ಸ್

  • Luis Rubiales: ಸ್ಪೇನ್‌ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಲೂಯಿಸ್ ರುಬಿಯಾಲ್ಸ್, ಆಟಗಾರ್ತಿ ಜೆನ್ನಿ ಹೆರ್ಮೊಸೊ ಅವರ ತುಟಿಗಳಿಗೆ ಚುಂಬಿಸಿದ್ದಾರೆ. ಆ ಬಳಿಕ ಅವರ ಬೆನ್ನುತಟ್ಟಿ ಕಳುಹಿಸಿದ್ದಾರೆ. ವ್ಯಾಪಕ ಟೀಕೆ ವ್ಯಕ್ತವಾದ ಬೆನ್ನಲ್ಲೇ ತಮ್ಮ ನಡೆಗೆ ಕ್ಷಮೆಯಾಚಿಸಿದ್ದಾರೆ.

ಆಟಗಾರ್ತಿಗೆ ಚುಂಬಿಸಿದ ಲೂಯಿಸ್ ರುಬಿಯಾಲ್ಸ್
ಆಟಗಾರ್ತಿಗೆ ಚುಂಬಿಸಿದ ಲೂಯಿಸ್ ರುಬಿಯಾಲ್ಸ್ (AFP)

ಸ್ಪೇನ್‌ನ ಫುಟ್ಬಾಲ್ ಫೆಡರೇಶನ್‌ನ (Spain soccer federation) ಅಧ್ಯಕ್ಷ ಲೂಯಿಸ್ ರುಬಿಯಾಲ್ಸ್ (Luis Rubiales) ಸಾರ್ವಜನಿಕರ ಟೀಕೆಗೆ ಒಳಗಾಗಿದ್ದಾರೆ. ಫಿಫಾ ಮಹಿಳೆಯರ ವಿಶ್ವಕಪ್‌ (Women's World Cup) ಗೆದ್ದ ಬಳಿಕ ನಡೆದ ಸಮಾರಂಭದಲ್ಲಿ ಸ್ಪೇನ್‌ನ ಆಟಗಾರ್ತಿಯೊಬ್ಬರ ತುಟಿಗಳಿಗೆ ಮುತ್ತಿಟ್ಟ ಹಿನ್ನೆಲೆಯಲ್ಲಿ ಜಾಗತಿಕವಾಗಿ ವ್ಯಾಪಕ ಟೀಕೆ ಎದುರಿಸುತ್ತಿದ್ದಾರೆ. ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಲೂಯಿಸ್ ರುಬಿಯಾಲ್ಸ್ ಕ್ಷಮೆ ಯಾಚಿಸಿದ್ದಾರೆ.

ಇತ್ತೀಚೆಗೆ ನಡೆದ ಫಿಫಾ ವನಿತೆಯರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸ್ಪೇನ್ ವನಿತೆಯರ ತಂಡವು 1-0 ಗೋಲುಗಳಿಂದ ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿತು. ಆಟದ ಬಳಿಕ ಈ ಘಟನೆ ನಡೆದಿದೆ. ಅದಾದ ಒಂದು ದಿನದ ಬಳಿಕ, ಲೂಯಿಸ್ ರುಬಿಯಾಲ್ಸ್ ಅವರ ಅನುಚಿತ ವರ್ತನೆಯನ್ನು ಸ್ಪೇನ್ ಸರ್ಕಾರ ಮತ್ತು ವಿಶ್ವ ಆಟಗಾರರ ಒಕ್ಕೂಟ ಖಂಡಿಸಿದೆ. ಅದಾದ ಬೆನ್ನಲ್ಲೇ ರುಬಿಯಾಲ್ಸ್ ಕ್ಷಮೆಯಾಚಿಸಿದ್ದು, ಆ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.

ಫೆಡರೇಶನ್ ಅಧ್ಯಕ್ಷ ಲೂಯಿಸ್ ರುಬಿಯಾಲ್ಸ್, ಸ್ಪೇನ್ ತಂಡಕ್ಕೆ ಚಿನ್ನದ ಪದಕಗಳನ್ನು ನೀಡುತ್ತಿದ್ದ ಸಂದರ್ಭದಲ್ಲಿ ಆಟಗಾರ್ತಿ ಜೆನ್ನಿ ಹೆರ್ಮೊಸೊ ಅವರ ತುಟಿಗಳಿಗೆ ಚುಂಬಿಸಿದ್ದಾರೆ. ಆ ಬಳಿಕ ಅವರ ಬೆನ್ನುತಟ್ಟಿ ಕಳುಹಿಸಿದ್ದಾರೆ. ಆದರೆ ಸಾರ್ವಜನಿಕವಾಗಿ ಚುಂಬಿಸಿರುವುದು ನೋಡುಗರಿಗೆ ಸರಿಹೋಗಿಲ್ಲ.

ನಾನು ಮಾಡಿದ್ದು ಸರಿಯಲ್ಲ

“ಖಂಡಿತವಾಗಿಯೂ ನಾನು ತಪ್ಪು ಮಾಡಿದ್ದೇನೆ, ನಾನು ತಪ್ಪನ್ನು ಒಪ್ಪಿಕೊಳ್ಳಬೇಕು” ಎಂದು ಫೆಡರೇಶನ್ ಕಳುಹಿಸಿದ ವಿಡಿಯೋ ಹೇಳಿಕೆಯಲ್ಲಿ ರುಬಿಯಾಲ್ಸ್ ಹೇಳಿದ್ದಾರೆ. “ಅದು ಆ ಕ್ಷಣದ ಸಂಭ್ರಮದಲ್ಲಿ ನಡೆದಿದ್ದು, ಅದರ ಹಿಂದೆ ಯಾವುದೇ ದುರುದ್ದೇಶವಿರಲಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ ಪಂದ್ಯ ಆಸ್ಟ್ರೇಲಿಯದ ಸಿಡ್ನಿಯಲ್ಲಿ ನಡೆದಿತ್ತು. ವಿಜಯದ ಬಳಿಕ ತಂಡವು ಸೋಮವಾರ ರಾತ್ರಿ ಮ್ಯಾಡ್ರಿಡ್‌ಗೆ ಬಂದಿಳಿಯಿತು. ಆ ಸಂದರ್ಭದಲ್ಲಿ ಘಟನೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ರೂಬಿಯಾಲ್ಸ್ ನಿರಾಕರಿಸಿದ್ದರು. “ಇದು ಸಂಭ್ರಮಿಸುವ ಮತ್ತು ಸಂಭ್ರಮಾಚರಿಸುವ ಸಮಯ. ನಾವು ವಿಶ್ವಕಪ್ ಗೆದ್ದಿದ್ದೇವೆ”, ಎಂದಷ್ಟೇ ಅವರು ಹೇಳಿದ್ದರು ಎಂದು ಸುದ್ದಿಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಆಟದ ನಂತರ ಕಿಸ್ ಮಾಡಿದ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ರೂಬಿಯಾಲ್ಸ್ ನಡೆಯನ್ನು ಸ್ಪೇನ್‌ ಸರ್ಕಾರದ ಹಲವಾರು ಸಚಿವರು ಹಾಗೂ ಮಾಧ್ಯಮ ವಿಮರ್ಶಕರು ಟೀಕಿಸಿದ್ದಾರೆ ಮತ್ತು ಖಂಡಿಸಿದ್ದಾರೆ.

ಫಿಫಾ ಮಹಿಳಾ ವಿಶ್ವಕಪ್ ಫೈನಲ್; ಇಂಗ್ಲೆಂಡ್ ಮಣಿಸಿ ಚೊಚ್ಚಲ ವಿಶ್ವಕಪ್ ಗೆದ್ದ ಸ್ಪೇನ್

ಸ್ಪೇನ್‌ ವನಿತೆಯರ ಫುಟ್ಬಾಲ್‌ ತಂಡವು ಫಿಫಾ ಮಹಿಳಾ ವಿಶ್ವಕಪ್​​ (FIFA Women's World Cup) ಟ್ರೋಫಿ ಗೆದ್ದು ಸಂಭ್ರಮಿಸಿದೆ. ಸಿಡ್ನಿಯಲ್ಲಿ ಆಗಸ್ಟ್ 20ರ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 1-0 ಗೋಲುಗಳ ರೋಚಕ ಅಂತರದಿಂದ ಮಣಿಸಿ ಚೊಚ್ಚಲ ಫಿಫಾ ಮಹಿಳಾ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಪಂದ್ಯದ ಮೊದಲಾರ್ಧದಲ್ಲಿ ಓಲ್ಗಾ ಕಾರ್ಮೋನಾ ಅವರ ಅತ್ಯಮೂಲ್ಯ ಗೋಲಿನ ನೆರವಿನಿಂದ ಸ್ಪೇನ್‌ಗೆ ಚಾಂಪಿಯನ್‌ ಪಟ್ಟ ಸಿಕ್ಕಿದೆ. ಎರಡೂ ತಂಡಗಳು ಮೊದಲ ಬಾರಿಗೆ ವಿಶ್ವಕಪ್‌ ಫೈನಲ್‌ನಲ್ಲಿ ಆಡಿದವು. ಇಂಗ್ಲೆಂಡ್‌ ಕಪ್‌ ಗೆಲ್ಲುವಲ್ಲಿ ವಿಫಲವಾದರೆ, ಸ್ಪೇನ್‌ ಸಫಲವಾಯ್ತು. ಈ ಗೆಲುವು ಸ್ಪ್ಯಾನಿಷ್ ಮಹಿಳೆಯರಿಗೆ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಟ್ರೋಫಿ. ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ