ಫಿಫಾ ಮಹಿಳಾ ವಿಶ್ವಕಪ್ ಫೈನಲ್; ಇಂಗ್ಲೆಂಡ್ ಮಣಿಸಿ ಚೊಚ್ಚಲ ವಿಶ್ವಕಪ್ ಗೆದ್ದ ಸ್ಪೇನ್
ಕನ್ನಡ ಸುದ್ದಿ  /  ಕ್ರೀಡೆ  /  ಫಿಫಾ ಮಹಿಳಾ ವಿಶ್ವಕಪ್ ಫೈನಲ್; ಇಂಗ್ಲೆಂಡ್ ಮಣಿಸಿ ಚೊಚ್ಚಲ ವಿಶ್ವಕಪ್ ಗೆದ್ದ ಸ್ಪೇನ್

ಫಿಫಾ ಮಹಿಳಾ ವಿಶ್ವಕಪ್ ಫೈನಲ್; ಇಂಗ್ಲೆಂಡ್ ಮಣಿಸಿ ಚೊಚ್ಚಲ ವಿಶ್ವಕಪ್ ಗೆದ್ದ ಸ್ಪೇನ್

FIFA Women's World Cup: ಫಿಫಾ ಮಹಿಳಾ ವಿಶ್ವಕಪ್​​ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 1-0 ಗೋಲುಗಳ ಅಂತರದಿಂದ ಮಣಿಸಿ ಸ್ಪೇನ್‌ ಟ್ರೋಫಿ ಗೆದ್ದಿದೆ.

ವಿಶ್ವಕಪ್‌ ಗೆದ್ದ ಸ್ಪೇನ್‌ ವನಿತೆಯರ ಸಂಭ್ರಮ
ವಿಶ್ವಕಪ್‌ ಗೆದ್ದ ಸ್ಪೇನ್‌ ವನಿತೆಯರ ಸಂಭ್ರಮ (AFP)

ಸ್ಪೇನ್‌ ವನಿತೆಯರ ಫುಟ್ಬಾಲ್‌ ತಂಡವು ಫಿಫಾ ಮಹಿಳಾ ವಿಶ್ವಕಪ್​​ (FIFA Women's World Cup) ಟ್ರೋಫಿ ಗೆದ್ದು ಸಂಭ್ರಮಿಸಿದೆ. ಸಿಡ್ನಿಯಲ್ಲಿ ಆಗಸ್ಟ್ 20ರ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು 1-0 ಗೋಲುಗಳ ರೋಚಕ ಅಂತರದಿಂದ ಮಣಿಸಿ ಚೊಚ್ಚಲ ಫಿಫಾ ಮಹಿಳಾ ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ.

ಪಂದ್ಯದ ಮೊದಲಾರ್ಧದಲ್ಲಿ ಓಲ್ಗಾ ಕಾರ್ಮೋನಾ ಅವರ ಅತ್ಯಮೂಲ್ಯ ಗೋಲಿನ ನೆರವಿನಿಂದ ಸ್ಪೇನ್‌ಗೆ ಚಾಂಪಿಯನ್‌ ಪಟ್ಟ ಸಿಕ್ಕಿದೆ. ಎರಡೂ ತಂಡಗಳು ಮೊದಲ ಬಾರಿಗೆ ವಿಶ್ವಕಪ್‌ ಫೈನಲ್‌ನಲ್ಲಿ ಆಡಿದವು. ಇಂಗ್ಲೆಂಡ್‌ ಕಪ್‌ ಗೆಲ್ಲುವಲ್ಲಿ ವಿಫಲವಾದರೆ, ಸ್ಪೇನ್‌ ಸಫಲವಾಯ್ತು. ಈ ಗೆಲುವು ಸ್ಪ್ಯಾನಿಷ್ ಮಹಿಳೆಯರಿಗೆ ಮೊದಲ ಪ್ರಮುಖ ಅಂತಾರಾಷ್ಟ್ರೀಯ ಟ್ರೋಫಿ.

ಸ್ಪೇನ್‌ ಗೆಲುವಿನ ಹಾದಿ

ಗುಂಪು ಹಂತದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡ ಸ್ಪೇನ್ ಕೂಡಾ ಸುಲಭವಾಗಿ 16ರ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್ ಅನ್ನು 5-1 ಗೋಲುಗಳಿಂದ ಸೋಲಿಸಿದ ಸ್ಪೇನ್‌, ಕ್ವಾರ್ಟರ್ ಫೈನಲ್‌ನಲ್ಲಿ ಸಿಕ್ಕ ಹೆಚ್ಚುವರಿ ಸಮಯದಲ್ಲಿ ಒಂದು ಗೋಲು ಗಳಿಸಿ ಗೆಲುವು ಸಾಧಿಸಿತು. ಆ ಬಳಿಕ ಸೆಮಿಫೈನಲ್‌ನಲ್ಲಿ ಓಲ್ಗಾ ಕಾರ್ಮೋನಾ 89ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ 2-1 ಗೋಲುಗಳಿಂದ ಸ್ವೀಡನ್ ವಿರುದ್ಧ ಗೆದ್ದು ಫೈನಲ್‌ಗೆ ಅರ್ಹತೆ ಪಡೆಯಿತು.

ಆಸ್ಟ್ರೇಲಿಯಾದ ಸಿಡ್ನಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯಕ್ಕೆ ಬರೋಬ್ಬರಿ 75,784 ಅಭಿಮಾನಿಗಳು ಸಾಕ್ಷಿಯಾದರು.

ಯಾರು ಹೆಚ್ಚು ಪ್ರಶಸ್ತಿ ಗೆದ್ದಿದ್ದಾರೆ?

1991ರಿಂದ ಶುರುವಾದ ಮಹಿಳಾ ವಿಶ್ವಕಪ್​​ ಇತಿಹಾಸದಲ್ಲಿ ಅಮೆರಿಕ ತಂಡವು ಹೆಚ್ಚು ಬಾರಿ ಟ್ರೋಫಿ ಜಯಿಸಿದೆ. 1991, 1999, 2015, 2019ರಲ್ಲಿ ಅಮೆರಿಕ ತಂಡವು ಚಾಂಪಿಯನ್ ಪಟ್ಟಕ್ಕೇರಿದೆ. 2003 ಮತ್ತು 2007ರಲ್ಲಿ ಜರ್ಮನಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. 1995ರಲ್ಲಿ ನಾರ್ವೆ, 2011ರಲ್ಲಿ ಜಪಾನ್​ ಪ್ರಶಸ್ತಿ ಗೆದ್ದಿದೆ.

ಫಿಫಾ ಮಹಿಳಾ ವಿಶ್ವಕಪ್ ಗೆದ್ದ ದೇಶಗಳ ಪಟ್ಟಿ

1991 : ಯುನೈಟೆಡ್ ಸ್ಟೇಟ್ಸ್

1995 : ನಾರ್ವೆ

1999 : ಯುನೈಟೆಡ್ ಸ್ಟೇಟ್ಸ್

2003 : ಜರ್ಮನಿ

2007 : ಜರ್ಮನಿ

2011 : ಜಪಾನ್

2015 : ಯುನೈಟೆಡ್ ಸ್ಟೇಟ್ಸ್

2019 : ಯುನೈಟೆಡ್ ಸ್ಟೇಟ್ಸ್

2023 : ಸ್ಪೇನ್

(ಸುದ್ದಿ ಅಪ್ಡೇಟ್‌ ಆಗುತ್ತಿದೆ)

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.