2025ರ ಫಿಫಾ ಕ್ಲಬ್ ವಿಶ್ವಕಫ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಭಾಗವಹಿಸುತ್ತಿಲ್ಲ ಏಕೆ? ಅಲ್ ನಾಸರ್ ಆಡದಿರಲು ಕಾರಣವಿದು
Oct 22, 2024 08:24 PM IST
2025ರ ಫಿಫಾ ಕ್ಲಬ್ ವಿಶ್ವಕಫ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಭಾಗವಹಿಸುತ್ತಿಲ್ಲ ಏಕೆ
- ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಮುಂದಿನ ವರ್ಷ ನಡೆಯಲಿರುವ ಕ್ಲಬ್ ವಿಶ್ವಕಪ್‌ನಲ್ಲಿ ಆಡುತ್ತಿಲ್ಲ. ಅತ್ತ ಮತ್ತೊಬ್ಬ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ ಆಡುತ್ತಿದ್ದಾರೆ. ರೊನಾಲ್ಡೊ ಪ್ರತಿನಿಧಿಸುವ ತಂಡ, ಕ್ಲಬ್ ವಿಶ್ವಕಪ್‌ನಲ್ಲಿ ಆಡುತ್ತಿಲ್ಲ ಏಕೆ ಎಂಬುದನ್ನು ನೋಡೋಣ.
ಫಿಫಾ ಕ್ಲಬ್ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯು 2025ರ ಜುಲೈ ತಿಂಗಳಲ್ಲಿ ನಡೆಯಲಿದೆ. ವಿವಿಧ ಕ್ಲಬ್‌ಗಳು ಭಾಗವಹಿಸುವ ಕ್ಲಬ್ ವಿಶ್ವಕಪ್‌ನಲ್ಲಿ ಮುಂದಿನ ವರ್ಷ ಒಟ್ಟು 32 ತಂಡಗಳು ಕಾಣಿಸಿಕೊಳ್ಳಲಿವೆ. ಪಂದ್ಯಾವಳಿಯಲ್ಲಿ ಅರ್ಜೆಂಟೀನಾ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಅವರ ಇಂಟರ್ ಮಿಯಾಮಿ ತಂಡಕೂಡಾ ಭಾಗವಹಿಸಲಿದೆ. ಆದರೆ, ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅಭಿಮಾನಿಗಳಿಗೆ ನಿರಾಶೆಯಾಗಲಿದೆ. ಅವರು ಕ್ಲಬ್ ವಿಶ್ವಕಪ್‌ನಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ. ಅಂದರೆ ರೊನಾಲ್ಡೊ ಪ್ರತಿನಿಧಿಸುವ ಕ್ಲಬ್ ಅಲ್ ನಾಸರ್ ಕ್ಲಬ್ ವಿಶ್ವಕಪ್‌ನಲ್ಲಿ ಆಡುತ್ತಿಲ್ಲ.
ರೊನಾಲ್ಡೊ ಈ ಹಿಂದೆ ಎಂಟು ಬಾರಿ ಕ್ಲಬ್ ವಿಶ್ವಕಪ್‌ನಲ್ಲಿ ಆಡಿದ್ದಾರೆ. ಅದರಲ್ಲಿ ನಾಲ್ಕು ಬಾರಿ ಗೆದ್ದಿದ್ದಾರೆ. ಇದೇ ವೇಳೆ ಮೆಸ್ಸಿ ಕೂಡ ಮೂರು ಬಾರಿ ವಿನ್ ಆಗಿದ್ದಾರೆ. ಈ ಬಾರಿ ರೊನಾಲ್ಡೊ ಆಡದಿರುವ ಕಾರಣ, ಅವರು ಗೆದ್ದಿರುವ ಪ್ರಶಸ್ತಿಗಳ ಸಂಖ್ಯೆಯನ್ನು ಸರಿಗಟ್ಟಲು ಮೆಸ್ಸಿಗೆ ಅವಕಾಶವಾಗಲಿದೆ.
ಕ್ಲಬ್ ವಿಶ್ವಕಪ್ ಅರ್ಹತಾ ಮಾನದಂಡವೇನು? ಈ ಬಾರಿ ಅಲ್ ನಾಸರ್ ಆಡುತ್ತಿಲ್ಲವೇಕೆ?
ಕ್ಲಬ್ ವಿಶ್ವಕಪ್ 2025ರ ಪರಿಷ್ಕರಿಸಿದ ಆವೃತ್ತಿಯಲ್ಲಿ, ಆರು ವಿಭಿನ್ನ ಫೆಡರೇಶನ್‌ಗಳ 32 ತಂಡಗಳು ವಿಶ್ವಕಪ್‌ನಲ್ಲಿ ಆಡಲಿವೆ. ಯುಸಿಎಲ್, ಕೋಪಾ ಲಿಬರ್ಟೇಡರ್ಸ್ ಸೇರಿದಂತೆ ವಿವಿಧ ಫೆಡರೇಶನ್‌ಗಳ ಪ್ರೀಮಿಯರ್ ಕ್ಲಬ್ ಸ್ಪರ್ಧೆಗಳ ಹಿಂದಿನ ನಾಲ್ಕು ಋತುಗಳಲ್ಲಿನ ಪ್ರದರ್ಶನಗಳ ಆಧಾರದಲ್ಲಿ ತಂಡಗಳು ಅರ್ಹತೆ ಪಡೆಯುತ್ತವೆ. ತಂಡಗಳ ಪ್ರದರ್ಶನಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತದೆ.
ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಶನ್‌ಗೆ ಫುಟ್ಬಾಲ್ ಕ್ಲಬ್ ವಿಶ್ವಕಪ್‌ನಲ್ಲಿ ನಾಲ್ಕು ಸ್ಥಾನಗಳನ್ನು ನಿಗದಿಪಡಿಸಿದೆ. ಹೀಗಾಗಿ 2021 ಮತ್ತು 2022ರ ವಿಜೇತರಾದ ಅಲ್ ಹಿಲಾಲ್ ಮತ್ತು ಉರಾವಾ ರೆಡ್ ಡೈಮಂಡ್ಸ್ ಕ್ಲಬ್‌ಗಳು ಸ್ವಯಂಚಾಲಿತವಾಗಿ ಅರ್ಹತೆ ಪಡೆದಿವೆ. ಕೊನೆಯ ಎರಡು ಸ್ಥಾನಗಳಿಗಾಗಿ, ಜಿಯೋನ್‌ಬುಕ್, ಉಲ್ಸಾನ್ ಮತ್ತು ಅಲ್ ನಾಸರ್ ನಡುವೆ ಭಾರಿ ಪೈಪೋಟಿ ಇತ್ತು. ಇದನ್ನು ಎಎಫ್‌ಸಿ ಕ್ಲಬ್ ಶ್ರೇಯಾಂಕ ಮತ್ತು ಈ ಋತುವಿನ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನ ವಿಜೇತರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
ಅಲ್ ನಾಸರ್ ತಂಡವು ಈ ವರ್ಷದ ಆರಂಭದಲ್ಲಿ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನಲ್ಲಿ ಅಲ್ ಐನ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋತು ಹೊರಬಿತ್ತು. ಅಲ್ಲದೆ ಎಎಫ್‌ಸಿ ಶ್ರೇಯಾಂಕಕ್ಕೆ ಏರಲು ವಿಫಲವಾಯ್ತು. ಇದರ ಪರಿಣಾಮವಾಗಿ ಫುಟ್ಬಾಲ್ ಕ್ಲಬ್ ವಿಶ್ವಕಪ್‌ನಲ್ಲಿ ಆಡಲು ಆರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಯ್ತು. ಹೀಗಾಗಿ ಇದೇ ತಂಡದ ಭಾಗವಾದ ರೊನಾಲ್ಡೊ ಅವರನ್ನು ನೋಡಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ.