PKL 2024: ಗೆಲುವಿನ ಹುಡುಕಾಟದಲ್ಲಿರುವ ಬೆಂಗಳೂರು ಬುಲ್ಸ್‌ಗೆ ಯುಪಿ ಸವಾಲು; ಪರ್ದೀಪ್ ನರ್ವಾಲ್ ಮೇಲೆ ಎಲ್ಲರ ಕಣ್ಣು
ಬೆಂಗಳೂರು ಬುಲ್ಸ್‌ಗೆ ಋತುವಿನ ಆರಂಭವು ಉತ್ತಮವಾಗಿರಲಿಲ್ಲ. ಈ ತಂಡ ಇದುವರೆಗೆ ಪಿಕೆಎಲ್ 11ರಲ್ಲಿ ಎರಡು ಪಂದ್ಯಗಳನ್ನು ಆಡಿದ್ದು, ಈ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ನಾಯಕ ಪರ್ದೀಪ್ ನರ್ವಾಲ್ ಕೂಡಾ ಮೊದಲ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಲಿಲ್ಲ.
ಪ್ರೊ ಕಬಡ್ಡಿ ಲೀಗ್‌ನಲ್ಲಿ ಅಕ್ಟೋಬರ್ 22ರ ಮಂಗಳವಾರದ ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್ ಮತ್ತು ಬೆಂಗಳೂರು ಬುಲ್ಸ್ ಮುಖಾಮುಖಿಯಾಗಲಿವೆ. ಪಿಕೆಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ರೈಡರ್ ಆಗಿರುವ ಪರ್ದೀಪ್ ನರ್ವಾಲ್‌ಗೆ ಈ ಪಂದ್ಯ ತುಂಬಾ ವಿಶೇಷವಾಗಿದೆ. ಇದಕ್ಕೆ ಕಾರಣ ಅವರು ತಮ್ಮ ಹಳೆಯ ತಂಡ ಯುಪಿ ವಿರುದ್ಧ ಆಡುವುದನ್ನು ನೋಡಬಹುದು. ಪರ್ದೀಪ್ ಕಳೆದ ಕೆಲವು ಸೀಸನ್‌ಗಳಲ್ಲಿ ಯುಪಿ ಭಾಗವಾಗಿದ್ದರು. ಆದರೆ, ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅವರನ್ನು ತಂಡ ಕೈಬಿಟ್ಟಿತ್ತು.
ಆದಾಗ್ಯೂ, ಬೆಂಗಳೂರು ಬುಲ್ಸ್‌ಗೆ ಈ ಋತುವಿನ ಆರಂಭವು ಉತ್ತಮವಾಗಿರಲಿಲ್ಲ. ಈ ತಂಡ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಈ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಪರ್ದೀಪ್ ಮೊದಲ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ 9 ಅಂಕಗಳನ್ನು ಗಳಿಸಿದ್ದರು.
ಪರ್ದೀಪ್ ಪಿಕೆಎಲ್ನಲ್ಲಿ 1700 ರೇಡ್ ಪಾಯಿಂಟ್‌ಗಳನ್ನು ಗಳಿಸಿದ ದಾಖಲೆಯನ್ನು ಸಹ ಮಾಡಿದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಇದರ ಹೊರತಾಗಿಯೂ, ಬೆಂಗಳೂರು ತಂಡವು ಈ ಪಂದ್ಯದಲ್ಲಿ ಸೋಲನ್ನು ಎದುರಿಸಬೇಕಾಯಿತು. ಈಗ ತಂಡವು ಯುಪಿ ಯೋಧಾಸ್ ವಿರುದ್ಧ ಪುನರಾಗಮನ ಮಾಡಲು ಪ್ರಯತ್ನಿಸುತ್ತದೆ.
ಕಳೆದ ಋತುವಿನಲ್ಲಿ ನೀರಸ ಪ್ರದರ್ಶನದ ನಂತರ ತಮ್ಮ ತಂಡದಲ್ಲಿ ಮೇಜರ್ ಸರ್ಜರಿ ಮಾಡಿದ ಯುಪಿ ಯೋಧಾಸ್, ತಮ್ಮ ಪಿಕೆಎಲ್ 2024 ಅಭಿಯಾನಕ್ಕೆ ಭರ್ಜರಿ ಆರಂಭ ಪಡೆಯಿತು. ಕಡಿಮೆ ಸ್ಕೋರಿಂಗ್ ಆಗಿದ್ದರೂ ದಬಾಂಗ್ ಡೆಲ್ಲಿ ವಿರುದ್ಧ 28-23 ಅಂಕಗಳ ಅಂತರದ ಗೆಲುವು ಸಾಧಿಸಿತು. ಭವಾನಿ ರಜಪೂತ್ ಅವರು ಏಳು ರೇಡ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಅಸಾಧಾರಣ ಪ್ರದರ್ಶನ ನೀಡಿದರು.
ಬುಲ್ಸ್ vs ಯೋಧಾಸ್ ಮುಖಾಮುಖಿ
ಪ್ರೊ ಕಬಡ್ಡಿ ಲೀಗ್‌ನ ಇತಿಹಾಸದಲ್ಲಿ ಇಲ್ಲಿಯವರೆಗೆ ಉಭಯ ತಂಡಗಳ ನಡುವೆ ನಡೆದ ಎಲ್ಲಾ ಪಂದ್ಯಗಳಲ್ಲಿ ಯಾರು ಮೇಲುಗೈ ಸಾಧಿಸಿದ್ದಾರೆ ಎಂಬುದನ್ನು ನೋಡುವುದಾದರೆ, ಬೆಂಗಳೂರು ಬುಲ್ಸ್ ಮತ್ತು ಯುಪಿ ಯೋಧಾಸ್ ನಡುವೆ ಇದುವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಬುಲ್ಸ್ ಮೇಲುಗೈ ಸಾಧಿಸಿದೆ. ಉಭಯ ತಂಡಗಳು ಒಟ್ಟು 15 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ ಯುಪಿ ಯೋಧಾಸ್ ಕೇವಲ 6 ಪಂದ್ಯಗಳನ್ನು ಗೆದ್ದಿದ್ದರೆ, ಬೆಂಗಳೂರು ಬುಲ್ಸ್ 9 ಪಂದ್ಯಗಳನ್ನು ಗೆದ್ದಿದೆ. ವಿಶೇಷವೆಂದರೆ ಇಲ್ಲಿಯವರೆಗೂ ಈ ಎರಡು ತಂಡಗಳ ನಡುವೆ ಒಂದೇ ಒಂದು ಪಂದ್ಯ ಟೈ ಆಗಿಲ್ಲ.
ಯುಪಿ ಯೋಧಾಸ್ ಆಡುವ ಸಂಭಾವ್ಯ ತಂಡ
ಸುರೇಂದರ್ ಗಿಲ್ (ನಾಯಕ ಮತ್ತು ರೈಡರ್), ಭವಾನಿ ರಜಪೂತ್ (ರೈಡರ್), ಭರತ್ ಹೂಡಾ (ರೈಡರ್), ಸುಮಿತ್ ಸಂಗ್ವಾನ್, (ಎಡ ಮೂಲೆ), ಅಶು ಸಿಂಗ್ (ಬಲ ಕವರ್), ಮಹೇಂದರ್ ಸಿಂಗ್ (ಎಡ ಕವರ್) ಮತ್ತು ಸಾಹುಲ್ ಕುಮಾರ್ (ಬಲ ಮೂಲೆ).
ಬೆಂಗಳೂರು ಬುಲ್ಸ್ ಆಡುವ ಸಂಭಾವ್ಯ ತಂಡ
ಪರ್ದೀಪ್ ನರ್ವಾಲ್ (ರೈಡರ್), ಜೈ ಭಗವಾನ್ (ರೈಡರ್), ಅಜಿಂಕ್ಯ ಪನ್ವಾರ್ (ರೈಡರ್), ಸುರಿಂದರ್ ಡೆಹಾಲ್ (ಡಿಫೆಂಡರ್), ಸೌರಭ್ ನಂದಲ್ (ರೈಟ್ ಕಾರ್ನರ್), ಪ್ರತೀಕ್ (ಆಲ್ರೌಂಡರ್) ಮತ್ತು ನಿತಿನ್ ರಾವಲ್ (ಆಲ್ರೌಂಡರ್).
ನೇರಪ್ರಸಾರ
ಪ್ರೊ ಕಬಡ್ಡಿ ಲೀಗ್‌ನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯಗಳ ನೇರ ಪ್ರಸಾರವನ್ನು ನೀವು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್‌ಸ್ಟಾರ್‌ನಲ್ಲಿ ಮೊಬೈಲ್‌ನಲ್ಲಿ ವೀಕ್ಷಿಸಬಹುದು. ಮೊದಲ ಪಂದ್ಯ ತೆಲುಗು ಟೈಟಾನ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವೆ ರಾತ್ರಿ 8 ರಿಂದ ನಡೆಯಲಿದ್ದು, ಎರಡನೇ ಪಂದ್ಯ ಯುಪಿ ಯೋಧಾ ಮತ್ತು ಬೆಂಗಳೂರು ಬುಲ್ಸ್ ನಡುವೆ ರಾತ್ರಿ 9 ರಿಂದ ನಡೆಯಲಿದೆ.
ವರದಿ :ವಿನಯ್ ಭಟ್
ಇದನ್ನೂ ಓದಿ | ಕ್ರಿಕೆಟ್ನಲ್ಲಿ ಆರ್ಸಿಬಿ, ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್; ಪಿಕೆಎಲ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ತಂಡ ಇದು