logo
ಕನ್ನಡ ಸುದ್ದಿ  /  ಕ್ರೀಡೆ  /  ನವದೆಹಲಿ ಮ್ಯಾರಥಾನ್‌: 00.01 ಸೆಕೆಂಡ್‌ ಅಂತರದಲ್ಲಿ ಚಿನ್ನ ಗೆದ್ದ ಗೋಪಿ ಥೋನಕಲ್‌; ಮಹಿಳಾ ವಿಭಾಗದಲ್ಲಿ ಅಶ್ವಿನಿಗೆ ಸ್ವರ್ಣ

ನವದೆಹಲಿ ಮ್ಯಾರಥಾನ್‌: 00.01 ಸೆಕೆಂಡ್‌ ಅಂತರದಲ್ಲಿ ಚಿನ್ನ ಗೆದ್ದ ಗೋಪಿ ಥೋನಕಲ್‌; ಮಹಿಳಾ ವಿಭಾಗದಲ್ಲಿ ಅಶ್ವಿನಿಗೆ ಸ್ವರ್ಣ

Prasanna Kumar P N HT Kannada

Feb 26, 2024 07:00 AM IST

google News

ನವದೆಹಲಿ ಮ್ಯಾರಥಾನ್‌: 00.01 ಸೆಕೆಂಡ್‌ ಅಂತರದಲ್ಲಿ ಚಿನ್ನ ಗೆದ್ದ ಗೋಪಿ ಥೋನಕಲ್‌; ಮಹಿಳಾ ವಿಭಾಗದಲ್ಲಿ ಅಶ್ವಿನಿಗೆ ಸ್ವರ್ಣ

    • New Delhi Marathon : ನವದೆಹಲಿ ಮ್ಯಾರಥಾನ್​​ನಲ್ಲಿ ಗೋಪಿ ಥೋನಕಲ್‌ ಅವರು ಕೇವಲ 00.01 ಸೆಕೆಂಡ್ ಅಂತರದಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ನವದೆಹಲಿ ಮ್ಯಾರಥಾನ್‌: 00.01 ಸೆಕೆಂಡ್‌ ಅಂತರದಲ್ಲಿ ಚಿನ್ನ ಗೆದ್ದ ಗೋಪಿ ಥೋನಕಲ್‌; ಮಹಿಳಾ ವಿಭಾಗದಲ್ಲಿ ಅಶ್ವಿನಿಗೆ ಸ್ವರ್ಣ
ನವದೆಹಲಿ ಮ್ಯಾರಥಾನ್‌: 00.01 ಸೆಕೆಂಡ್‌ ಅಂತರದಲ್ಲಿ ಚಿನ್ನ ಗೆದ್ದ ಗೋಪಿ ಥೋನಕಲ್‌; ಮಹಿಳಾ ವಿಭಾಗದಲ್ಲಿ ಅಶ್ವಿನಿಗೆ ಸ್ವರ್ಣ

ನವದೆಹಲಿ: ಭಾರೀ ರೋಚಕತೆಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಶ್ರೀನಿ ಬುಗತಾರನ್ನು ಹಿಂದಿಕ್ಕಿದ ಗೋಪಿ ಥೋನಕಲ್‌, ಅಪೋಲೋ ಟೈಯರ್ಸ್‌ ನವದೆಹಲಿ ಮ್ಯಾರಥಾನ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನವಾರ ನಡೆದ ಸ್ಪರ್ಧೆಯಲ್ಲಿ 1978ರಲ್ಲಿ ಶಿವ್‌ನಾಥ್‌ ಸಿಂಗ್‌ ನಿರ್ಮಸಿದ್ದ ರಾಷ್ಟ್ರೀಯ ದಾಖಲೆ (2 ಗಂಟೆ 12 ನಿಮಿಷ) ಮೇಲೆ ಕಣ್ಣಿಟ್ಟಿದ್ದ ಗೋಪಿ, 2 ಗಂಟೆ 14 ನಿಮಿಷ 40 ಸೆಕೆಂಡ್‌ಗಳಲ್ಲಿ ಓಟ ಪೂರೈಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

ತಮ್ಮ ವೈಯಕ್ತಿಕ ಶ್ರೇಷ್ಠ 2 ಗಂಟೆ 13 ನಿಮಿಷ 39 ಸೆಕೆಂಡ್‌ಗಳ ದಾಖಲೆಯನ್ನು ಉತ್ತಮಗೊಳಿಸಿಕೊಳ್ಳಲು ಗೋಪಿ ಯಶಸ್ವಿಯಾಗದಿದ್ದರೂ ಅವರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಗೋಪಿ ಜೊತೆ ತೀವ್ರ ಸ್ಪರ್ಧೆಗಿಳಿದಿದ್ದ ಶ್ರೀನು ಬುಗತಾ 2 ಗಂಟೆ 14 ನಿಮಿಷ 41 ಸೆಕೆಂಡ್‌ಗಳಲ್ಲಿ ತಮ್ಮ ಓಟ ಮುಗಿಸಿ, ವೈಯಕ್ತಿಕ ಶ್ರೇಷ್ಠ ದಾಖಲೆ ಸಾಧಿಸಿದರು. ಇದಕ್ಕೂ ಮುನ್ನ 2 ಗಂಟೆ 14 ನಿಮಿಷ 59 ಸಕೆಂಡ್‌ ಅವರ ವೈಯಕ್ತಿಕ ಬೆಸ್ಟ್‌ ಎನಿಸಿತ್ತು.

'ಅಕ್ಷಯ್​ಗೆ ಕಂಚು, ಅಶ್ವಿನಿಗೆ ಚಿನ್ನ

2 ಗಂಟೆ 15 ನಿಮಿಷ 27 ಸೆಕೆಂಡ್‌ಗಳಲ್ಲಿ ಓಟ ಪೂರೈಸಿದ ಅಕ್ಷಯ್‌ ಸೈನಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ರಾಷ್ಟ್ರೀಯ ಮ್ಯಾರಥಾನ್‌ ಇತ್ತೀಚೆಗೆ ನಡೆದ ಎಲೈಟ್‌ ಮ್ಯಾರಥಾನ್‌ಗಳ ಸಾಲಿಗೆ ಸೇರ್ಪಡೆಗೊಂಡಿತು. ಮಹಿಳಾ ವಿಭಾಗದಲ್ಲಿ ಅಶ್ವಿನಿ ಜಾಧವ್‌ ತಮ್ಮ ಹಿಂದಿನ ವೈಯಕ್ತಿಕ ಶ್ರೇಷ್ಠ (2:56.42) ದಾಖಲೆಗಿಂತ 4 ನಿಮಿಷ ಮುಂಚಿತವಾಗಿ ರೇಸ್‌ ಮುಕ್ತಾಯಗೊಳಿಸಿದರು. ಅವರು ಅತ್ಯಾಕರ್ಷಕ ಎನ್ನುವಂತೆ 2 ಗಂಟೆ 52 ನಿಮಿಷ 25 ಸೆಕೆಂಡ್‌ಗಳಲ್ಲಿ ಓಟ ಮುಗಿಸಿ ಚಿನ್ನದ ಪದಕ ಬಾಚಿಕೊಂಡರು. ನಿರ್ಮಾಬೆನ್‌ ಥಾಕೋರ್‌ (2:55.47) ಹಾಗೂ ದಿವ್ಯಾಂಕ ಚೌಧರಿ (2:57.06) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು.

‘ಮ್ಯಾರಥಾನ್‌ ಓಟವು ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಸ್ಪರ್ಧಾತ್ಮಕವಾಗಿತ್ತು. ಪುರುಷ ಅಥ್ಲೀಟ್‌ಗಳು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ’ ಎಂದು ರೇಸ್‌ ನಿರ್ದೇಶಕರೂ ಆದ ಎನ್‌ಇಬಿ ಸ್ಪೋರ್ಟ್ಸ್‌ನ ಮುಖ್ಯಸ್ಥ ನಾಗರಾಜ್‌ ಅಡಿಗ ಹೇಳಿದರು. ‘ಎಲ್ಲಾ ಅಥ್ಲೀಟ್‌ಗಳಿಗೂ ನಮ್ಮ ಸಲ್ಯೂಟ್‌’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಎಲ್ಲಾ ವಿಜೇತರಿಗೂ ಅಭಿನಂದನೆ ಹೇಳಲು ಇಚ್ಛಿಸುತ್ತೇನೆ. ದೆಹಲಿಯ ಜನತೆಗೂ ಧನ್ಯವಾದ ಹೇಳಲು ಬಯಸುತ್ತೇನೆ. 19000ಕ್ಕೂ ಹೆಚ್ಚು ಮಂದಿ ಈ ಓಟದಲ್ಲಿ ಪಾಲ್ಗೊಂಡಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನ ಭಾಗವಹಿಸಿದ್ದನ್ನು ಕಂಡು ಬಹಳ ಸಂತೋಷವಾಯಿತು’ ಎಂದು ಅಪೋಲೋ ಟೈಯರ್ಸ್‌ನ ಏಷ್ಯಾ-ಪೆಸಿಫಿಕ್‌, ಮಧ್ಯ ಪ್ರಾಚ್ಯ ಹಾಗೂ ಆಫ್ರಿಕಾ ಮುಖ್ಯಸ್ಥ ಸತೀಶ್‌ ಶರ್ಮಾ ಸಂತಸ ವ್ಯಕ್ತಪಡಿಸಿದರು.

10 ಕಿ.ಮೀ. ಓಟ ವಿಭಾಗದಲ್ಲಿ ಉಮೇಶ್‌ 32 ನಿಮಿಷ 02 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನದ ಪದಕ ಗೆದ್ದರೆ, ಸಪನ್‌ ಪಾಂಚಲ್‌ (32:50) ಹಾಗೂ ಅಬ್ದುಲ್‌ ರೆಹ್ಮಾನ್‌ (33:00) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆದ್ದರು. ಮಹಿಳೆಯರ ವಿಭಾಗದಲ್ಲಿ ರೋಜಿ (37:28) ಚಿನ್ನಕ್ಕೆ ಮುತ್ತಿಟ್ಟರೆ, ರಿಯಾ ಪಾಂಡೆ (43:04) ಹಾಗೂ ದೀಪಾಲಿ ಮಲ್ಹೋತ್ರಾ (43:44) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು.

ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ಬಾಲಿವುಡ್‌ ನಟಿ ಸೋಹಾ ಅಲಿ ಖಾನ್‌, ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಅವರು ವಿಜೇತರಿಗೆ ಪ್ರಶಸ್ತಿಯನ್ನು ಹಸ್ತಾಂತಿಸಿದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ