ಹೆಲ್ಲೋ, ಹೀರೋ ಆಗೋಕೆ ಪ್ರಯತ್ನಿಸಬೇಡ; ಹೆಲ್ಮೆಟ್ ಧರಿಸದೆ ಕ್ಲೋಸ್-ಇನ್ ಫೀಲ್ಡಿಂಗ್ಗೆ ನಿರ್ಧರಿಸಿದ ಸರ್ಫರಾಜ್ಗೆ ಬೈದ ರೋಹಿತ್
Rohit Sharma warns Sarfaraz Khan : ಫೀಲ್ಡಿಂಗ್ ವೇಳೆ ಯುವ ಆಟಗಾರ ಸರ್ಫರಾಜ್ ಖಾನ್ ತೋರಿದ ನಿರ್ಲಕ್ಷ್ಯಕ್ಕೆ ರೋಹಿತ್ ಶರ್ಮಾ ಕಿಡಿ ಕಾರಿದ್ದಾರೆ. ಅದರ ವಿಡಿಯೋ ವೈರಲ್ ಆಗಿದೆ.
ರಾಂಚಿಯಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (India vs England 4th Test) ಗೆಲುವಿನ ಅಂಚಿನಲ್ಲಿದೆ. ಕೇವಲ 192 ರನ್ ಟಾರ್ಗೆಟ್ ಪಡೆದಿರುವ ರೋಹಿತ್ ಪಡೆ, ನಾಲ್ಕನೇ ದಿನದಾಟದಂದು ಗೆಲುವಿಗೆ 152 ರನ್ಗಳ ಅಗತ್ಯ ಇದೆ. ಮೂರನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ಇದಕ್ಕೂ ಮುನ್ನ ಭಾರತೀಯ ಸ್ಪಿನ್ನರ್ಗಳಾದ ಆರ್ ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ಬೆಚ್ಚಿ ಬಿದ್ದ ಇಂಗ್ಲೆಂಡ್, ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 145 ರನ್ಗಳಿಗೆ ಕುಸಿಯಿತು.
ಮೊದಲ ಇನ್ನಿಂಗ್ಸ್ನಲ್ಲಿ 46 ರನ್ಗಳ ಹಿನ್ನಡೆ ಅನುಭವಿಸಿದ ಭಾರತ, ದ್ವಿತೀಯ ಇನ್ನಿಂಗ್ಸ್ನಲ್ಲಿ ಸೊಗಸಾದ ಬೌಲಂಗ್ ಮತ್ತು ಫೀಲ್ಡಿಂಗ್ ನಡೆಸಿತು. ಫೀಲ್ಡಿಂಗ್ ವೇಳೆ ಯುವ ಆಟಗಾರ ಸರ್ಫರಾಜ್ ಖಾನ್ (Sarfaraz Khan) ತೋರಿದ ನಿರ್ಲಕ್ಷ್ಯಕ್ಕೆ ರೋಹಿತ್ ಶರ್ಮಾ (Rohit Sharma) ಕಿಡಿ ಕಾರಿದ್ದಾರೆ. ಮುಂಬೈ ಆಟಗಾರನಿಗೆ ಟೀಮ್ ಇಂಡಿಯಾ ನಾಯಕ ಬೈದಿರುವ ಮಾತುಗಳು ಸ್ಟಂಪ್ಸ್ನ ಮೈಕ್ನಲ್ಲಿ ರೆಕಾರ್ಡ್ ಆಗಿವೆ. ದೊಡ್ಡ ಹೀರೋ ಆಗೋಕೆ ಪ್ರಯತ್ನಿಸಬೇಡ ಎಂದು ಕೋಪ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಬೈದಿದ್ದೇಕೆ ರೋಹಿತ್ ಶರ್ಮಾ?
ಸರ್ಫರಾಜ್ಗೆ ಬೈದ ಘಟನೆ 47ನೇ ಓವರ್ನಲ್ಲಿ ನಡೆಯಿತು. ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಲು ಭಾರತಕ್ಕೆ 2 ವಿಕೆಟ್ ಬೇಕಿತ್ತು. ಈ ವೇಳೆ ತಂತ್ರ ರೂಪಿಸಿದ ನಾಯಕ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಅವರನ್ನು ಬೌಲಿಂಗ್ನಲ್ಲಿ ರೊಟೆಟ್ ಮಾಡುತ್ತಿದ್ದರು. 47ನೇ ಓವರ್ನಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್ ಮಾಡುವ ವೇಳೆ ಡೀಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸರ್ಫರಾಜ್ ಖಾನ್ ಅವರನ್ನು ರೋಹಿತ್ ಅವರು ತಮ್ಮ ಸ್ಥಾನವನ್ನು ಲಾಂಗ್ ಆನ್‌ನಿಂದ ಸಿಲ್ಲಿ ಮಿಡ್-ಆಫ್‌ಗೆ ಬರುವಂತೆ ಹೇಳಿದರು.
ತನ್ನ ನಾಯಕನ ಕರೆಗೆ ಪ್ರತಿಕ್ರಿಯಿಸಿದ ಸರ್ಫರಾಜ್, ಹೆಲ್ಮೆಟ್ ಧರಿಸದೆ ಕ್ಲೋಸ್-ಇನ್ ಸ್ಥಾನದಲ್ಲಿ (ಬ್ಯಾಟ್ಸ್ಮನ್ ಹತ್ತಿರದಲ್ಲಿ) ಫೀಲ್ಡಿಂಗ್ ನಡೆಸಲು ನಿರ್ಧರಿಸಿದರು. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಸರ್ಫರಾಜ್ ನಡೆ, ರೋಹಿತ್ಗೆ ಕೋಪ ತರಿಸಿತು. ಏಕ್ಧಮ್ ಬೈದೇ ಬಿಟ್ಟ ಹಿಟ್ಮ್ಯಾನ್, ಓಯೇ, ಹೀರೋ ನಹಿ ಬನ್ನೇ ಕಾ (ಹಲ್ಲೋ, ಹೀರೋ ಆಗೋಕೆ ಪ್ರಯತ್ನ ಮಾಡಬೇಡ) ಎಂದು ಎಚ್ಚರಿಸಿದ್ದಾರೆ.
ಅಲ್ಲದೆ, ಅಂಪೈರ್ ಸಹ ಸರ್ಫರಾಜ್ಗೆ ಬುದ್ಧಿವಾದ ಹೇಳಿದರು. ಹೀಗಾಗಿ ಕುಲ್ದೀಪ್ 4ನೇ ಎಸೆತ ಬೌಲ್ ಮಾಡಲು ಕಾಯಬೇಕಾಯಿತು. ಆದರೆ ಹೆಲ್ಮೆಟ್ ಧರಿಸುವಂತೆ ಹೇಳಿದ್ದರೂ ಸರ್ಫರಾಜ್, ರೋಹಿತ್ರನ್ನು ಮನವೊಲಿಸಲು ಪ್ರಯತ್ನಿಸಿದರು. ಇದು ಹಿಟ್ಮ್ಯಾನ್ಗೆ ಕೋಪ ತರಿಸಿತು. ಬಳಿಕ ಅಂಪೈರ್ ಕುಮಾರ್ ಧರ್ಮಸೇನಾ ಮಧ್ಯಪ್ರವೇಶಿಸಿ, 'ಇಲ್ಲ, ನೀವು ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಬುದ್ಧಿವಾದ ಹೇಳಿದರು. ಕ್ಲೋಸ್-ಇನ್ ಸ್ಥಾನಗಳಲ್ಲಿ ಫೀಲ್ಡಿಂಗ್ ಮಾಡುವಾಗ ಹೆಲ್ಮೆಟ್ ಕಡ್ಡಾಯ ಎಂದು ತಿಳಿ ಹೇಳಿದರು. ಆಗ ಹೆಲ್ಮೆಟ್ ತರಿಸಿಕೊಂಡರು.
ಘಟನೆ ವಿವರಿಸಿದ ದಿನೇಶ್ ಕಾರ್ತಿಕ್
ರೋಹಿತ್ ಶರ್ಮಾ ಸರ್ಫರಾಜ್ಗೆ ಹೇಳಿದ್ದನ್ನು ಕಾಮೆಂಟರಿ ಮಾಡುತ್ತಿದ್ದ ದಿನೇಶ್ ಕಾರ್ತಿಕ್ ವಿವರಿಸಿದ್ದಾರೆ. ‘ಏ ಭಾಯ್ ಹೀರೋ ನಹೀ ಬನ್ನೆ ಕಾ, ನಿನ್ನ ಹೆಲ್ಮೆಟ್ಗಾಗಿ ಕಾಯಿ’ (ಸಹೋದರ ಹೀರೋ ಆಗೋಕೆ ಪ್ರಯತ್ನಿಸಬೇಡ, ಹೆಲ್ಮೆಟ್ ಬರೋವರೆಗೆ ಕಾಯಿ) ಎಂದು ರೋಹಿತ್ ಹೇಳಿದ್ದರು ಎಂದು ದಿನೇಶ್ ವಿವರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.