Sourav Ganguly: ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿರುವ 5 ತಂಡಗಳನ್ನು ಹೆಸರಿಸಿದ ಗಂಗೂಲಿ; ಈ ಟೀಮ್ಗಳು ಸೆಮೀಸ್ ಆಡಿದರೆ ಸಖತ್ ಎಂದ ದಾದಾ
Jul 09, 2023 03:11 PM IST
ಸೌರವ್ ಗಂಗೂಲಿ
- Sourav Ganguly: ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಲಿರುವ ಐದು ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ತಂಡಗಳ ಆಯ್ಕೆ ತುಂಬಾ ಕಷ್ಟ ಎಂದು , ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಭಾರತದಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಮೆಗಾ ಟೂರ್ನಿ ಏಕದಿನ ವಿಶ್ವಕಪ್ಗೆ (ODI World Cup 2023) ಬಿಸಿಸಿಐ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. 12 ನಗರಗಳಲ್ಲಿ ಈ ಕ್ರಿಕೆಟ್ ಹಬ್ಬವು ನಡೆಯಲಿದೆ. ಈಗಾಗಲೇ ವೇಳಾಪಟ್ಟಿಯೂ ಪ್ರಕಟಗೊಂಡಿದ್ದು, ತಂಡಗಳು ಸಹ ತಯಾರಿಯಲ್ಲಿ ತೊಡಗಿವೆ. ವೇಳಾಪಟ್ಟಿ ಘೋಷಣೆಯಾದ ಬೆನ್ನಲ್ಲೇ ಯಾವ ತಂಡಗಳು ಸೆಮಿಫೈನಲ್, ಫೈನಲ್ ಪ್ರವೇಶಿಸಲಿವೆ ಎಂಬ ಲೆಕ್ಕಾಚಾರಗಳು ಜೋರಾಗಿವೆ.
ಅದರಂತೆ, ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಸೆಮಿಫೈನಲ್ ಪ್ರವೇಶಿಸಲಿರುವ ತಂಡಗಳ ಹೆಸರನ್ನೂ ಆಯ್ಕೆ ಮಾಡಿದ್ದಾರೆ. RevSportz ಜೊತೆ ಮಾತನಾಡಿದ ಸೌರವ್ ಗಂಗೂಲಿ, ಈ ಮೆಗಾ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಹೋಗಲು ಅವಕಾಶವಿರುವ 5 ತಂಡಗಳನ್ನು ಆಯ್ಕೆ ಮಾಡಿದ್ದಾರೆ. ಆದರೆ ತಂಡಗಳ ಆಯ್ಕೆ ತುಂಬಾ ಕಷ್ಟ ಎಂದು ಹೇಳಿದ್ದಾರೆ.
ಆ ಐದು ತಂಡಗಳು ಹೀಗಿವೆ
ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಜೊತೆಗೆ ಪಾಕಿಸ್ತಾನ ತಂಡವನ್ನೂ ಸೆಮಿಫೈನಲ್‌ಗೆ ಆಯ್ಕೆ ಮಾಡುತ್ತೇನೆ. ಯಾವುದನ್ನೂ ಕಡಿಮೆ ಅಂದಾಜು ಮಾಡಲಾಗದು ಎಂದಿರುವ ದಾದಾ, ಈಡನ್ ಗಾರ್ಡನ್ನಲ್ಲಿ ಜರುಗುವ ಸೆಮಿಫೈನಲ್ನಲ್ಲಿ ಪಾಕಿಸ್ತಾನ-ಭಾರತ ಕಾಣಿಸಿಕೊಂಡರೆ ಉತ್ತಮ ಎಂದು ನಗುತ್ತಾ ಹೇಳಿದ್ದಾರೆ.
ಭಾರತವನ್ನು ಬೆಂಬಲಿಸಿದ ಗಂಗೂಲಿ
ಐಸಿಸಿ ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ ಭಾರತದ ವೈಫಲ್ಯದ ಕುರಿತು ಮಾತನಾಡಿದ ಗಂಗೂಲಿ, ಕೆಲವೊಮ್ಮೆ ನಿರ್ಣಾಯಕ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡುವುದಿಲ್ಲ. ಇದು ಮಾನಸಿಕ ಒತ್ತಡ ಎಂದು ನಾನು ಭಾವಿಸುವುದಿಲ್ಲ. ಶೀಘ್ರದಲ್ಲೇ ನಾಕೌಟ್ ಗೆರೆಯನ್ನು ದಾಟುತ್ತಾರೆ. ಉತ್ತಮ ಆಟಗಾರರನ್ನು ಹೊಂದಿದ್ದೇವೆ. ಆಶಾದಾಯಕವಾಗಿ ಈ ಬಾರಿ ಆ ಸಾಧನೆ ಮಾಡುತ್ತೇವೆ ಎಂಬ ವಿಶ್ವಾಸ ಇದೆ. ಡಬ್ಲ್ಯುಟಿಸಿ ಫೈನಲ್ಗೆ ಅರ್ಹತೆ ಪಡೆದಿರುವುದು ಉತ್ತಮ ಸಾಧನೆ ಎಂದು ಗಂಗೂಲಿ, ಭಾರತ ತಂಡವನ್ನು ಬೆಂಬಲಿಸಿದ್ದಾರೆ.
‘ಒತ್ತಡವು ಸಮಸ್ಯೆಯಲ್ಲ’
ಆಟಗಾರರ ಮೇಲೆ ಒತ್ತಡ ಎಂಬುದು ಯಾವಾಗಲೂ ಇರುತ್ತದೆ. ಕಳೆದ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 5 ಶತಕ ಬಾರಿಸಿದ್ದರು. ಆಗ ಅವರ ಮೇಲೆ ಒತ್ತಡವಿರಬೇಕು ಎಂದು ನನಗೆ ಖಾತ್ರಿಯಿದೆ. ಒತ್ತಡವು ಸಮಸ್ಯೆಯಲ್ಲ. ಅದು ಯಶಸ್ವಿಯಾಗಲು ಒಂದು ಮಾರ್ಗ. ರಾಹುಲ್ ದ್ರಾವಿಡ್ ಕ್ರಿಕೆಟ್ ದಿನಗಳಲ್ಲಿ ಒತ್ತಡ ಇತ್ತು. ಈಗ ಮುಖ್ಯಕೋಚ್ ಆಗಿರುವ ಕಾರಣ, ಅವರಿಗೆ ನಿಭಾಯಿಸುವ ಶಕ್ತಿ ಇದೆ. ಆದರೆ, ನನ್ನ ಪ್ರಕಾರ ಒತ್ತಡವೇ ಸಮಸ್ಯೆ ಉಂಟು ಮಾಡುತ್ತದೆ ಎನಿಸುವುದಿಲ್ಲ ಎಂದು ಹೇಳಿದ್ದಾರೆ.
ಪೂರ್ಣ ಪ್ರಮಾಣದ ಆತಿಥ್ಯ
ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ತಂಡಗಳು ಕೂಡ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆದಿದ್ದು, ಅಂತಿಮ 10 ತಂಡಗಳ ಪಟ್ಟಿ ಕೊನೆಗೊಂಡಿದೆ. 13ನೇ ಆವೃತ್ತಿಯ ಕ್ರಿಕೆಟ್ ವಿಶ್ವಕಪ್ ಈ ವರ್ಷ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಇದೇ ಮೊದಲ ಬಾರಿಗೆ ಭಾರತವು ಪೂರ್ಣ ಪ್ರಮಾಣದ ಅತಿಥ್ಯ ವಹಿಸಲಿದೆ. ಭಾರತವು ಈ ಹಿಂದೆ 1987, 1996 ಮತ್ತು 2011ರಲ್ಲಿ ಭಾರತ ಉಪಖಂಡದ ಇತರ ದೇಶಗಳೊಂದಿಗೆ ಜಂಟಿ ಆಯೋಜನೆ ಮಾಡಿತ್ತು.
ಭಾರತದ ಮೇಲೆ ಎಲ್ಲರ ಕಣ್ಣು
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಮುಂಬೈನ ವಾಂಖೆಡೆ ಮತ್ತು ಕೋಲ್ಕತ್ತಾದ ಈಡನ್ ಗಾರ್ಡನ್ ಸೆಮಿಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ಐಸಿಸಿ ಟೂರ್ನಿಗಳಲ್ಲಿ ಅತ್ಯಂತ ನಿರಾಶಾದಯಕ ಪ್ರದರ್ಶನ ನೀಡುತ್ತಿರುವ ಅತಿಥೇಯ ಟೀಮ್ ಇಂಡಿಯಾ ಮೇಲೆಯೇ ಎಲ್ಲರ ಕಣ್ಣು ಬಿದ್ದಿದೆ. ಇತ್ತೀಚೆಗಷ್ಟೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಿತ್ತು.