logo
ಕನ್ನಡ ಸುದ್ದಿ  /  ಕ್ರೀಡೆ  /  Sunil Gavaskar Birthday: ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದ ಬ್ಯಾಟರ್; ಸುನಿಲ್ ಗವಾಸ್ಕರ್ ಕ್ರಿಕೆಟ್ ಬದುಕಿನ ಸ್ಮರಣೀಯ ಸಾಧನೆಗಳ ಮೆಲುಕು

Sunil Gavaskar Birthday: ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದ ಬ್ಯಾಟರ್; ಸುನಿಲ್ ಗವಾಸ್ಕರ್ ಕ್ರಿಕೆಟ್ ಬದುಕಿನ ಸ್ಮರಣೀಯ ಸಾಧನೆಗಳ ಮೆಲುಕು

Jayaraj HT Kannada

Jul 14, 2023 12:19 PM IST

google News

ಸುನಿಲ್‌ ಗವಾಸ್ಕರ್‌ (ಸಂಗ್ರಹ ಚಿತ್ರ)

    • Sunil Gavaskar turns 74: ಕ್ರಿಕೆಟ್‌ ದಿಗ್ಗಜ ಸುನಿಲ್ ಗವಾಸ್ಕರ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇಂದು 74ನೇ ಹುಟ್ಟುಹಬ್ಬ ಆಚರಿಸುತ್ತಿರುವ ಗವಾಸ್ಕರ್‌ ಅವರ ಸ್ಮರಣೀಯ ಸಾಧನೆಗಳು ಹೀಗಿವೆ.
ಸುನಿಲ್‌ ಗವಾಸ್ಕರ್‌ (ಸಂಗ್ರಹ ಚಿತ್ರ)
ಸುನಿಲ್‌ ಗವಾಸ್ಕರ್‌ (ಸಂಗ್ರಹ ಚಿತ್ರ)

ವಿಶ್ವದ ದಿಗ್ಗಜ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಬ್ಯಾಟಿಂಗ್ ದಂತಕಥೆ ಸುನಿಲ್ ಗವಾಸ್ಕರ್ (Sunil Gavaskar), ಭಾರತ ಅತ್ಯುನ್ನತ ಕ್ರಿಕೆಟಿಗರಲ್ಲಿ ಪ್ರಮುಖರು. ತಮ್ಮ ಸುದೀರ್ಘ ವೃತ್ತಿ ಬದುಕಿನಲ್ಲಿ ಹಲವಾರು ದಾಖಲೆಗಳನ್ನು ಮಾಡಿರುವ ಗವಾಸ್ಕರ್‌, ಇಂದಿಗೂ ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಿದ್ದಾರೆ. ಇಂದು (ಜುಲೈ 10) ತಮ್ಮ 74ನೇ ಹುಟ್ಟುಹಬ್ಬ ಆಚರಿಸುತ್ತಿರುವ ದಿಗ್ಗಜ ಕ್ರಿಕೆಟಿಗನ ಕೆಲವೊಂದು ಐತಿಹಾಸಿಕ ಸಾಧನೆಗಳನ್ನು ಮೆಲುಕು ಹಾಕೋಣ.

34 ಟೆಸ್ಟ್ ಶತಕಗಳು

ಗವಾಸ್ಕರ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ದಾಖಲೆ ಹೊಂದಿದ್ದರು. ತಮ್ಮ ವೃತ್ತಿಜೀವನದಲ್ಲಿ ಆಡಿದ 125 ಟೆಸ್ಟ್ ಪಂದ್ಯಗಳಲ್ಲಿ 34 ಸೆಂಚುರಿ ಸಿಡಿಸಿದ್ದಾರೆ. 2005ರಲ್ಲಿ ಭಾರತದ ಮತ್ತೊಬ್ಬ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಈ ದಾಖಲೆಯನ್ನು ಬ್ರೇಕ್‌ ಮಾಡುವವರೆಗೆ, ಸನ್ನಿ ದಾಖಲೆಯೇ ಅಜೇಯವಾಗಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತೀಯರ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ನಂತರ ಗವಾಸ್ಕರ್ ಮೂರನೇ ಸ್ಥಾನದಲ್ಲಿದ್ದಾರೆ.

ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ ಗವಾಸ್ಕರ್ ದಾಖಲೆ

ದಶಕಗಳ ಹಿಂದೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನ ಬಲಿಷ್ಠ ರಾಷ್ಟ್ರವಾಗಿತ್ತು. ಆ ಸಮಯದಲ್ಲಿ ಗವಾಸ್ಕರ್ ವಿಂಡೀಸ್‌ ವಿರುದ್ಧ ದಾಖಲೆ ನಿರ್ಮಿಸಿದರು. ಬಲಿಷ್ಠ ಬೌಲರ್‌ಗಳಾದ ಹೋಲ್ಡಿಂಗ್, ಮಾಲ್ಕಮ್ ಮಾರ್ಷಲ್, ಗಾರ್ನರ್ ಅವರ ಬೆಂಕಿಯಂತಹ ಎಸೆತಗಳಿಗೂ ನಿರಾತಂಕವಾಗಿ ರನ್‌ ಗಳಿಸಿದರು. 1971 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಸರಣಿ ಆಡಿದ ಸನ್ನಿ, ಬರೋಬ್ಬರಿ 774 ರನ್‌ ಕಲೆಹಾಕಿದರು. ಇದು ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಾಗಿದೆ. ಈ ದಾಖಲೆಯನ್ನು ಇನ್ನೂ ಯಾರೂ ಮುರಿದಿಲ್ಲ. ಸುನಿಲ್‌ ಆಟದ ನೆರವಿನಿಂದ ಕೆರಿಬಿಯನ್‌ ನಾಡಿನಲ್ಲಿ ಭಾರತವು ತಮ್ಮ ಮೊದಲ ಸರಣಿ ಗೆಲುವು ಸಾಧಿಸಿತು. ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು, ಅಂದರೆ 27 ಪಂದ್ಯಗಳಿಂದ 13 ಟೆಸ್ಟ್ ಶತಕಗಳನ್ನು ಗವಾಸ್ಕರ್ ಬಾರಿಸಿದ್ದಾರೆ.

10,000 ಟೆಸ್ಟ್ ರನ್‌ ಗಳಿಸಿದ ಮೊದಲ ಕ್ರಿಕೆಟಿಗ

ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಗವಾಸ್ಕರ್. ಇದು ಕ್ರಿಕೆಟ್‌ನ ಮಹತ್ವದ ಮೈಲಿಗಲ್ಲು. ಅವರು 1987ರ ಮಾರ್ಚ್ ತಿಂಗಳಲ್ಲಿ ಈ ಸಾಧನೆ ಮಾಡಿದರು. ಗವಾಸ್ಕರ್ ಅವರು ಮೈಕೆಲ್ ಹೋಲ್ಡಿಂಗ್, ಆಂಡಿ ರಾಬರ್ಟ್ಸ್, ಜೋಯಲ್ ಗಾರ್ನರ್, ಜೆಫ್ ಥಾಂಪ್ಸನ್ ಮತ್ತು ಡೆನಿಸ್ ಲಿಲ್ಲಿ ಅವರಂತಹವರ ದಿಗ್ಗಜ ಹಾಗೂ ಡೇಂಜರಸ್‌ ಬೌಲರ್‌ಗಳ ವಿರುದ್ಧ ರನ್ ಗಳಿಸಿದ್ದಾರೆ. ಒಟ್ಟು 10,122 ರನ್‌ ಗಳಿಸಿ ಗವಾಸ್ಕರ್ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿಯಾದರು.

1983ರ ವಿಶ್ವಕಪ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಗೆಲುವು

ಭಾರತವು 1983ರಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಿತು. ಆಗ ಕಪಿಲ್‌ ದೇವ್‌ ನೇತೃತ್ವದ ಭಾರತ ತಂಡದಲ್ಲಿ ಗವಾಸ್ಕರ್ ಕೂಡಾ ಇದ್ದರು. ಅದಾದ ಒಂದು ವರ್ಷದ ನಂತರ ನಾಯಕನಾಗಿ ಮಿಂಚಿದ ಗವಾಸ್ಕರ್‌, 1984-85ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದರು. ನಾಯಕನಾಗಿ ಗವಾಸ್ಕರ್‌ ಅಬ್ಬರಿಸಿದರೂ, ಉಭಯ ಟೂರ್ನಿಗಳಲ್ಲಿ ಗವಾಸ್ಕರ್ ಬ್ಯಾಟ್ ಸದ್ದು ಮಾಡಿರಲಿಲ್ಲ. ಹೀಗಾಗಿ ವಿಶ್ವಕಪ್‌ ಎಂದಾಗ ಸನ್ನಿ ಹೆಸರು ಮುನ್ನೆಲೆಗೆ ಬರುವುದು ಕಡಿಮೆ.

ಶ್ರೇಷ್ಠ ಫೀಲ್ಡರ್ ಕೂಡಾ ಹೌದು

ಟೆಸ್ಟ್‌ನಲ್ಲಿ ಕ್ಯಾಚ್‌ಗಳ ಶತಕ ಸಾಧಿಸಿದ ಮೊದಲ ಭಾರತೀಯ ‌ಫೀಲ್ಡರ್ ಎಂಬ ದಾಖಲೆಯೂ ಗವಾಸ್ಕರ್‌ ಮಾಡಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಒಟ್ಟು 108 ಕ್ಯಾಚ್‌ಗಳನ್ನು ಪಡೆದಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ