Yashasvi Jaiswal: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ನಾನು ಆಯ್ಕೆಯಾಗ್ತಿದ್ದಂತೆ ಅಪ್ಪ ಕಣ್ಣೀರಿಟ್ಟರು; ಸಂತಸ ಹಂಚಿಕೊಂಡ ಯಶಸ್ವಿ ಜೈಸ್ವಾಲ್
Jun 24, 2023 08:21 PM IST
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ನನಗೆ ಅವಕಾಶ ಸಿಗ್ತಿದ್ದಂತೆ ಅಪ್ಪ ಅತ್ತರು; ಸಂತಸ ಹಂಚಿಕೊಂಡ ಯಶಸ್ವಿ ಜೈಸ್ವಾಲ್
- ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಾತನಾಡಿದ್ದು, ಸಂತಸ ಹಂಚಿಕೊಂಡಿದ್ದಾರೆ.
ದೇಶೀಯ ಕ್ರಿಕೆಟ್ ಮತ್ತು 16ನೇ ಆವೃತ್ತಿಯ ಐಪಿಎಲ್ನಲ್ಲಿ ಧಮಾಕ ಸೃಷ್ಟಿಸಿ ಸೆಲೆಕ್ಟರ್ಗಳ ಗಮನ ಸೆಳೆದಿದ್ದ ಎಡಗೈ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್, ಭಾರತ ತಂಡದಲ್ಲಿ ಅವಕಾಶ ಪಡೆಯುವಲ್ಲಿ ಯಶಸ್ಸು ಕಂಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಆಯ್ಕೆಯಾಗಿದ್ದಾರೆ. ಐಪಿಎಲ್ ಮುಗಿದ ಬೆನ್ನಲ್ಲೇ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೂ ಮೀಸಲು ಆಟಗಾರನಾಗಿಯೂ ಆಯ್ಕೆಯಾಗಿದ್ದರು.
ಅಪ್ಪ ಅತ್ತರು
ಸದ್ಯ ಭಾರತ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಮಾತನಾಡಿರುವ ಜೈಸ್ವಾಲ್, ಸಂತಸ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾಗೆ ಆಯ್ಕೆ ಆಗಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ತಂಡಕ್ಕೆ ಆಯ್ಕೆಯಾಗಿದ್ದನ್ನು ತಿಳಿದು ನನ್ನ ಅಪ್ಪ (ಭೂಪೇಂದ್ರ ಜೈಸ್ವಾಲ್) ಅಳಲು ಪ್ರಾರಂಭಿಸಿದರು. ಸದ್ಯ ನಾನು ಪ್ರಾಕ್ಟೀಸ್ ಮಾಡುವುದರಲ್ಲಿ ಬ್ಯುಸಿಯಾಗಿದ್ದೇನೆ. ಮನೆಗೆ ಹೋಗಿಲ್ಲ. ಮನೆಗೆ ಹೋದ ನಂತರ ಅಮ್ಮ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾಯುತ್ತಿದ್ದೇನೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಅವಕಾಶ ಸಿಕ್ಕರೆ ಸಾಮರ್ಥ್ಯ ಸಾಬೀತುಪಡಿಸುವೆ
ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವ ತನ್ನ ಕನಸಿನೊಂದಿಗೆ ಮುಂಬೈಗೆ ಬಂದಿದ್ದ ಜೈಸ್ವಾಲ್, ಆರಂಭಿಕ ದಿನಗಳಲ್ಲಿ ಕಠಿಣ ದಿನಗಳನ್ನು ಎದುರಿಸಿದರು. ಇದೀಗ ತನಗೆ ಅವಕಾಶ ಸಿಕ್ಕರೆ ಮೊದಲ ಪಂದ್ಯದಲ್ಲೇ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಯೋಜನೆ ರೂಪಿಸುತ್ತಿರುವುದಾಗಿ ಜೈಸ್ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿರಿಯ ಆಟಗಾರರಿಂದ ಸಾಕಷ್ಟು ಕಲಿತಿದ್ದೇನೆ
ನಾನು ಡಬ್ಲ್ಯುಟಿಸಿ ಫೈನಲ್ನಲ್ಲಿ ಹಿರಿಯ ಆಟಗಾರರಿಂದ ಸಾಕಷ್ಟು ಕಲಿತಿದ್ದೇನೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಅವರೊಂದಿಗಿನ ಆಟದ ಕುರಿತು ತಾನು ಬಹಳಷ್ಟು ಕಲಿಯಬೇಕು. ಲಂಡನ್ಗೆ ತೆರೆಳಿದ್ದು ನನಗೆ ಅನುಕೂಲ ಕೂಡ ಆಗಿದೆ. ನಾನು ಮೊದಲು ಆತಂಕಕ್ಕೆ ಒಳಗಾಗಿದ್ದೆ. ತಂಡದಲ್ಲಿ ನನ್ನ ಹೆಸರು ಇದೆಯೋ ಇಲ್ಲವೋ ಎಂದು. ಈಗ ಖುಷಿಯಾಗಿದೆ ಎಂದರು.
ಪೂಜಾರ ಸ್ಥಾನದಲ್ಲಿ ಕಣಕ್ಕೆ?
ಸದ್ಯ ಚೇತೇಶ್ವರ್ ಪೂಜಾರ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಹಾಗಾಗಿ ಜೈಸ್ವಾಲ್ 3ನೇ ಕ್ರಮಾಂಕದ ಬ್ಯಾಟರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಬಿಸಿಸಿಐ ಮತ್ತು ಸೆಲೆಕ್ಟರ್ಗಳು ಖಾಲಿಯಾದ ಪೂಜಾರ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂಬುದು ಖಚಿತವಾಗಿದೆ.
ದೇಶಿ ಕ್ರಿಕೆಟ್ನಲ್ಲಿ ಜೈಸ್ವಾಲ್ ಪ್ರದರ್ಶನ
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ತೋರಿದ ಜೈಸ್ವಾಲ್ ದೇಶೀಯ ಕ್ರಿಕೆಟ್ನಲ್ಲೂ ಮಿಂಚಿದ್ದಾರೆ. ಇದೇ ಕಾರಣಕ್ಕಾಗಿ ಅವರಿಗೆ ಮಣೆ ಹಾಕಲಾಗಿದೆ. ಜೈಸ್ವಲ್ 15 ಪ್ರಥಮ ದರ್ಜೆ ಪಂದ್ಯಗಳಲ್ಲಿ 80.21ರ ಬ್ಯಾಟಿಂಗ್ ಸರಾಸರಿಯಲ್ಲಿ 1845 ರನ್ ಗಳಿಸಿದ್ದಾರೆ. 9 ಶತಕ, 2 ಅರ್ಧಶತಕ ಸಿಡಿಸಿದ್ದಾರೆ. ಐಪಿಎಲ್ನಲ್ಲಿ ಆಡಿದ 14 ಪಂದ್ಯಗಳಲ್ಲಿ 5 ಅರ್ಧಶತಕ, 1 ಶತಕದ ನೆರವಿನಿಂದ 625 ರನ್ ಗಳಿಸಿದ್ದರು.
ಭಾರತ ಟೆಸ್ಟ್ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಉನಾದ್ಕತ್, ನವದೀಪ್ ಸೈನಿ.
ಭಾರತ ಏಕದಿನ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್.