ಸತತ 4 ಸೋಲುಗಳ ನಂತರ ಕೊನೆಗೂ ಗೆಲುವಿನ ಖಾತೆ ತೆರೆದ ಬೆಂಗಳೂರು ಬುಲ್ಸ್; ಎಲ್ಲಾ ‘ಜೈ ಭಗವಾನ್’ ಮಹಿಮೆ
Oct 30, 2024 12:01 AM IST
ಸತತ 4 ಸೋಲುಗಳ ನಂತರ ಕೊನೆಗೂ ಗೆಲುವಿನ ಖಾತೆ ತೆರೆದ ಬೆಂಗಳೂರು ಬುಲ್ಸ್
- ಅಕ್ಟೋಬರ್ 29ರಂದು ಪ್ರೊ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ದಬಾಂಗ್ ಡೆಲ್ಲಿ ವಿರುದ್ಧ 34-33 ಅಂಕಗಳಿಂದ ರೋಚಕ ಗೆಲುವು ಸಾಧಿಸಿದೆ. ಪುಣೇರಿ ಪಲ್ಟನ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳ ನಡುವಿನ ಮತ್ತೊಂದು ಪಂದ್ಯ 32-32 ಅಂಕಗಳಿಂದ ರೋಚಕ ಡ್ರಾಗೊಂಡಿತು.
ಸತತ 4 ಸೋಲುಗಳೊಂದಿಗೆ ಕಂಗೆಟ್ಟಿದ್ದ ಬೆಂಗಳೂರು ಬುಲ್ಸ್, 2024ರ ಪ್ರೊ ಕಬಡ್ಡಿ ಲೀಗ್ನಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ಅದು ಕೂಡ ರೋಚಕ ಗೆಲುವಾಗಿರುವುದು ವಿಶೇಷ. ಒಂದೇ ಒಂದು ಅಂಕದ ಅಂತದಿಂದ ಜಯದ ನಗೆ ಬೀರಿದೆ. ಆದರೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಅಕ್ಟೋಬರ್ 29ರಂದು ನಡೆದ 2ನೇ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ವಿರುದ್ಧ 34-33 ಅಂಕಗಳಿಂದ ದಿಗ್ವಿಜಯ ಸಾಧಿಸಿದೆ. ಈ ಪಂದ್ಯವು ಹೈದರಾಬಾದ್ನ ಗಚ್ಚಿಬೋಲಿ ಇಂದೋರ್ ಸ್ಟೇಡಿಯಂನಲ್ಲಿ ನಡೆಯಿತು.
ಬುಲ್ಸ್ ಪರ ಜೈ ಭಗವಾನ್ ನೀಡಿದ ಅದ್ಭುತ ಪ್ರದರ್ಶನಕ್ಕೆ ಎದುರಾಳಿ ತಂಡವು ಸೋಲೊಪ್ಪಿಕೊಳ್ಳದೆ ವಿಧಿ ಇರಲಿಲ್ಲ. ಕೊನೆ ಹಂತದವರೆಗೂ ಉಭಯ ತಂಡಗಳು ಹೋರಾಟ ನಡೆಸಿದರು. ಒಂದೊಂದು ನಿಮಿಷವೂ ತೀವ್ರ ಕುತೂಹಲ ಮೂಡಿಸಿತ್ತು. ಇದು ಲೀಗ್ ಪಂದ್ಯವಾದರೂ ಫೈನಲ್ನಂತೆ ರೋಚಕತೆ ಮೂಡಿಸಿತ್ತು. ಭಗವಾನ್ 11 ಅಂಕ ಸಂಪಾದಿಸಿದರೆ ನಾಯಕ ಪರ್ದೀಪ್ ನರ್ವಾಲ್ 7 ಅಂಕ ಪಡೆದರು. ನಿತಿನ್ ರಾವಲ್ 5 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಷ್ಟೆ ಡೆಲ್ಲಿ ತಂಡದ ಆಟಗಾರರು ಅದ್ಭುತ ಫೈಟ್ ನೀಡಿದರು.
ಅಂಕಪಟ್ಟಿಯಲ್ಲಿ ಬುಲ್ಸ್ ಅಂಕವೆಷ್ಟು?
ದಬಾಂಗ್ ಡೆಲ್ಲಿ ಪರ ಆಶು ಮಲಿಕ್ 13 ಅಂಕ ಪಡೆದರು. ವಿನಯ್ ವಿರೇಂದರ್ 6, ಸಂದೀಪ್ ದೇಸ್ವಾಲ್ 4 ಅಂಕ ಪಡೆದರು. ಬೆಂಗಳೂರು ತನ್ನ ಐದನೇ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದರೂ ಪಾಯಿಂಟ್ಸ್ ಟೇಬಲ್ನಲ್ಲಿ ಮೇಲೇರಲು ಸಾಧ್ಯವಾಗಲಿಲ್ಲ. ಆಡಿರುವ 5 ಪಂದ್ಯಗಳಲ್ಲಿ 1 ಗೆಲುವು, 4 ಸೋಲಿನೊಂದಿಗೆ 6 ಅಂಕ ಪಡೆದಿದೆ. ಮತ್ತೊಂದೆಡೆ ಸೋತಿರುವ ಡೆಲ್ಲಿ 5ನೇ ಸ್ಥಾನದಲ್ಲಿದೆ. ಡೆಲ್ಲಿ ಆಡಿರುವ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲಿನೊಂದಿಗೆ 13 ಅಂಕ ಪಡೆದಿದೆ.
ಅಕ್ಟೋಬರ್ 29ರಂದು ನಡೆದ ಮತ್ತೊಂದು ಪಂದ್ಯವು ರೋಚಕ ಡ್ರಾ ನೊಂದಿಗೆ ಅಂತ್ಯಗೊಂಡಿದೆ. ಪುಣೇರಿ ಪಲ್ಟನ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ಸಮಬಲದ ಹೋರಾಟ ನಡೆಸಿದವು. ಅಂತಿಮವಾಗಿ 32-32 ಅಂಕ ಪಡೆದು ಡ್ರಾ ಸಾಧಿಸಿದವು. ಈ ಪಂದ್ಯವು ಸಹ ಗಚ್ಚಿಬೋಲಿ ಇಂದೋರ್ ಸ್ಟೇಡಿಯಂನಲ್ಲೇ ನಡೆಯಿತು. ಪ್ರಸ್ತುತ ಅಂಕಪಟ್ಟಿಯಲ್ಲಿ ಪುಣೇರಿ 19 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಬೆಂಗಾಲ್ 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.
ಅಕ್ಟೋಬರ್ 30 ರಂದು ನಡೆಯುವ ಪಂದ್ಯಗಳು
ರಾತ್ರಿ 8 - ಗುಜರಾತ್ ಜೈಂಟ್ಸ್ vs ತಮಿಳ್ ತಲೈವಾಸ್, ಗಚ್ಚಿಬೋಲಿ ಇಂದೋರ್ ಸ್ಟೇಡಿಯಂ
ರಾತ್ರಿ 9 - ಯುಪಿ ಯೋಧಾಸ್ vs ಹರಿಯಾಣ ಸ್ಟೀಲರ್ಸ್, ಗಚ್ಚಿಬೋಲಿ ಇಂದೋರ್ ಸ್ಟೇಡಿಯಂ
ಪ್ರೊ ಕಬಡ್ಡಿ ಲೀಗ್ 2024 ಪಾಯಿಂಟ್ಸ್ ಟೇಬಲ್
1. ಪುಣೇರಿ ಪಲ್ಟನ್ - 5 ಪಂದ್ಯಗಳಲ್ಲಿ 19 ಅಂಕ
2. ಯುಪಿ ಯೋದಾ - 4 ಪಂದ್ಯಗಳಲ್ಲಿ 16 ಅಂಕ
3. ತಮಿಳ್ ತಲೈವಾಸ್ - 4 ಪಂದ್ಯಗಳಲ್ಲಿ 14 ಅಂಕ
4. ಜೈಪುರ ಪಿಂಕ್ ಪ್ಯಾಂಥರ್ಸ್ - 4 ಪಂದ್ಯಗಳಲ್ಲಿ 13 ಅಂಕ
5. ದಬಾಂಗ್ ಡೆಲ್ಲಿ - 5 ಪಂದ್ಯಗಳಲ್ಲಿ 13 ಅಂಕ
6. ಬೆಂಗಾಲ್ ವಾರಿಯರ್ಸ್ - 4 ಪಂದ್ಯಗಳಲ್ಲಿ 12 ಅಂಕ
7. ತೆಲುಗು ಟೈಟಾನ್ಸ್ - 5 ಪಂದ್ಯಗಳಲ್ಲಿ 11 ಅಂಕ
8. ಹರಿಯಾಣ ಸ್ಟೀಲರ್ಸ್ - 3 ಪಂದ್ಯಗಳಲ್ಲಿ 10 ಅಂಕ
9. ಯು-ಮುಂಬಾ – 3 ಪಂದ್ಯಗಳಲ್ಲಿ 8 ಅಂಕ
10. ಗುಜರಾತ್ ಜೈಂಟ್ಸ್ - 3 ಪಂದ್ಯಗಳಲ್ಲಿ 7 ಅಂಕ
11. ಪಾಟ್ನಾ ಪೈರೇಟ್ಸ್ - 3 ಪಂದ್ಯಗಳಲ್ಲಿ 6 ಅಂಕ
12. ಬೆಂಗಳೂರು ಬುಲ್ಸ್ - 5 ಪಂದ್ಯಗಳಲ್ಲಿ 6 ಅಂಕ