ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಗೌತಮ್ ಗಂಭೀರ್ ಭಾರತ ತಂಡದ ಹೆಡ್ಕೋಚ್ ಅಲ್ಲ; ನ್ಯೂಜಿಲೆಂಡ್ ವಿರುದ್ದ ಸರಣಿ ಸೋತಿದ್ದಕ್ಕೆ ಈ ಶಿಕ್ಷೆಯೇ?
Gautam Gambhir: ನವೆಂಬರ್ 8 ರಿಂದ ಪ್ರಾರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 4 ಪಂದ್ಯಗಳ ಸರಣಿಗೆ ಗೌತಮ್ ಗಂಭೀರ್ ಹೆಡ್ಕೋಚ್ ಆಗಿರುವುದಿಲ್ಲ. ಅವರ ಬದಲಿಗೆ ಎನ್ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಹೆಡ್ಕೋಚ್ ಜವಾಬ್ದಾರಿ ವಹಿಸಲಿದ್ದಾರೆ. ಅದಕ್ಕೆ ಕಾರಣ ಹೀಗಿದೆ ನೋಡಿ.
ನ್ಯೂಜಿಲೆಂಡ್ ವಿರುದ್ದ ಟೆಸ್ಟ್ ಸರಣಿಯನ್ನು ಸೋತಿರುವ ಟೀಮ್ ಇಂಡಿಯಾ, ತನ್ನ ಕೊನೆಯ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ನವೆಂಬರ್ 8ರಿಂದ ಪ್ರಾರಂಭವಾಗುವ ಸೌತ್ ಆಫ್ರಿಕಾ ವಿರುದ್ಧದ ಟಿ20ಐ ಸರಣಿಗೂ (India vs South Africa T20Is) ಸಿದ್ಧತೆ ನಡೆಸುತ್ತಿದೆ. ಆದರೆ ಈ ಸರಣಿಗೆ ಕಾಯಂ ಕೋಚ್ ಗೌತಮ್ ಗಂಭೀರ್ (Gautam Gambhir) ಮಾರ್ಗದರ್ಶನ ನೀಡುವುದಿಲ್ಲ. ಬದಲಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು (VVS Laxman) ಕಾರ್ಯನಿರ್ವಹಿಸಲಿದ್ದಾರೆ.
ನವೆಂಬರ್ 8ರಿಂದ ಶುರುವಾಗಲಿರುವ ಸರಣಿಯಲ್ಲಿ ಭಾರತ ತಂಡ 4 ಟಿ20ಗಳಲ್ಲಿ ಕಣಕ್ಕಿಳಿಯಲಿದ್ದು, ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಲಿದ್ದಾರೆ. ಕ್ರಿಕ್ಬಜ್ ವರದಿಯ ಪ್ರಕಾರ, ಸೌತ್ ಆಫ್ರಿಕಾ ಪ್ರವಾಸಕ್ಕೆ ಲಕ್ಷ್ಮಣ್ ಅವರನ್ನು ಸ್ಟ್ಯಾಂಡ್-ಇನ್ ಮುಖ್ಯ ಕೋಚ್ ಆಗಿ ಹೆಸರಿಸಲಾಗುವುದು ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಗೌತಮ್ ಗಂಭೀರ್ ಬದಲಿಗೆ ಲಕ್ಷ್ಮಣ್ಗೆ ಅವಕಾಶ ನೀಡಲು ಪ್ರಮುಖ ಕಾರಣ ಇದೆ. ಅದಕ್ಕೆ ಉತ್ತರ ಇಲ್ಲಿದೆ.
ಮೂರು ಪಂದ್ಯಗಳ ಸರಣಿಯಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್, 2-0 ಮುನ್ನಡೆ ಸಾಧಿಸಿದ ಬೆನ್ನಲ್ಲೇ ತನ್ನ ಮಾರ್ಗದರ್ಶನದಲ್ಲಿ ಮೊದಲ ಸೋಲನ್ನು ಅನುಭವಿಸಿದ ಗೌತಮ್ ಗಂಭೀರ್ ಅವರು ಈ ಪ್ರವಾಸದ ಭಾಗವಾಗಿರುವುದಿಲ್ಲ. ಏಕೆಂದರೆ ರೋಹಿತ್ ಶರ್ಮಾ ನೇತೃತ್ವದ ತಂಡವು ಆಸ್ಟ್ರೇಲಿಯಾ ವಿರುದ್ಧದ 5 ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಸರಣಿಗೆ ನವೆಂಬರ್ 10 ರಂದು ಪರ್ತ್ಗೆ ತೆರಳುವ ನಿರೀಕ್ಷೆ ಇದೆ. ಹೀಗಾಗಿ ಗಂಭೀರ್ ಆಸೀಸ್ ತೆರಳುವ ಕಾರಣ ಲಕ್ಷ್ಮಣ್ಗೆ ಮಣೆ ಹಾಕಲಾಗುತ್ತಿದೆ.
ಲಕ್ಷ್ಮಣ್ ಅವರೊಂದಿಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ಇತರ ಸದಸ್ಯರಾದ ಸಾಯಿರಾಜ್ ಬಹುತುಲೆ, ಹೃಷಿಕೇಶ್ ಕಾನಿಟ್ಕರ್ ಮತ್ತು ಶುಭದೀಪ್ ಘೋಷ್ ಅವರು ಕೂಡ ಪ್ರಯಾಣ ಬೆಳೆಸಲಿದ್ದಾರೆ. ಈ ಮೂವರು ಇತ್ತೀಚೆಗೆ ಒಮಾನ್ನಲ್ಲಿ ನಡೆದ ಏಷ್ಯಾ ಎಮರ್ಜಿಂಗ್ ಕಪ್ ಟೂರ್ನಿಯಲ್ಲಿ ಭಾರತದ ಕೋಚ್ಗಳಾಗಿ ಸೇವೆ ಸಲ್ಲಿಸಿದ್ದರು. ಟಿ20 ಸರಣಿಯು ಕ್ರಮವಾಗಿ ನವೆಂಬರ್ 8, 10, 13, 15 ರಂದು ಡರ್ಬನ್, ಗ್ಕೆಬರ್ಹಾ, ಸೆಂಚೂರಿಯನ್ ಮತ್ತು ಜೋಹಾನ್ಸ್ಬರ್ಗ್ನಲ್ಲಿ ನಡೆಯಲಿದೆ. ನವೆಂಬರ್ 4ರಂದು ಭಾರತ ತಂಡ ಡರ್ಬನ್ ಗೆ ತೆರಳಲಿದೆ.
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸರಣಿ ಸೋತ ಕಾರಣ ಗೌತಮ್ ಗಂಭೀರ್ಗೆ ಶಿಕ್ಷೆ ನೀಡುವ ಸಲುವಾಗಿ ಸೌತ್ ಆಫ್ರಿಕಾ ಸಿರೀಸ್ನಿಂದ ಹೊರಗಿಡಲಾಗಿದೆ ಎಂದು ವರದಿಯಾಗಿದೆ. ಆದರೆ ಇದು ಸುಳ್ಳು ಸುದ್ದಿ. ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಸಿದ್ದತೆ ನಡೆಸಲು ಮತ್ತು ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು 12 ದಿನಗಳ ಮುಂಚೆಯೇ ಭಾರತ ಟೆಸ್ಟ್ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಸೂರ್ಯಕುಮಾರ್ ಮುನ್ನಡೆಸುವ ತಂಡಕ್ಕೆ ಲಕ್ಷ್ಮಣ್ ಮಾರ್ಗದರ್ಶನ ನೀಡಲಿದ್ದಾರೆ.
'ಅನಗತ್ಯ' ಟಿ 20ಐ ಸರಣಿ?
ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಭಾರತ ಮತ್ತು ಸೌತ್ ಆಫ್ರಿಕಾ ಸರಣಿ ಅನಗತ್ಯ ಎಂದು ಹೇಳಿದ್ದಾರೆ. ಪ್ರಸ್ತುತ ನಡೆಯುತ್ತಿರುವ ದೇಶೀಯ ಋತುವಿನ ನಡುವೆ ಈ ಸರಣಿಯನ್ನು ನಡೆಸುವುದರ ಹಿಂದಿರುವ ತರ್ಕವನ್ನು ಪ್ರಶ್ನಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ದಕ್ಷಿಣ ಆಫ್ರಿಕಾದಲ್ಲಿ 4 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಮುಂದಿನ ತಿಂಗಳು 'ಎ' ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ, ಆದ್ದರಿಂದ ಪ್ರಮುಖ ರಾಷ್ಟ್ರೀಯ ಪಂದ್ಯಾವಳಿಯಾದ ರಣಜಿ ಟ್ರೋಫಿಯಲ್ಲಿ ಸುಮಾರು 50 ರಿಂದ 60 ಆಟಗಾರರು ತಮ್ಮ ರಾಜ್ಯ ತಂಡಗಳಿಗೆ ಲಭ್ಯವಿರುವುದಿಲ್ಲ ಎಂದಿದ್ದಾರೆ.