JIO Cinema: ದಾಖಲೆಯ ಮಟ್ಟದಲ್ಲಿ ಉದ್ಘಾಟನಾ ಪಂದ್ಯ ವೀಕ್ಷಣೆ; ಇದು ಧೋನಿ ಖದರ್ ಎಂದ ನೆಟ್ಟಿಗರು
Apr 01, 2023 03:23 PM IST
ಎಂಎಸ್ ಧೋನಿ
- ಐಪಿಎಲ್ ಡಿಜಿಟಲ್ ಪ್ರಸಾರದ ಹಕ್ಕನ್ನು ಪಡೆದಿದ್ದ ಜಿಯೋ ಸಿನಿಮಾದಲ್ಲಿ ಪಂದ್ಯ ಪ್ರಸಾರವಾಗಿದೆ. IPL 2023ರ ಆರಂಭಿಕ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ನಡುವಿನ ಪಂದ್ಯದ ವೇಳೆ ದಾಖಲೆಯ ಮಟ್ಟದಲ್ಲಿ ವೀಕ್ಷಕರನ್ನು ಸೆಳೆದಿದೆ.
ಐಪಿಎಲ್ ಉದ್ಘಾಟನಾ ಪಂದ್ಯ ನಡೆಯುವಾಗಲೆಲ್ಲಾ ಅಭಿಮಾನಿಗಳಲ್ಲಿ ಕುತೂಹಲ, ಕಾತರ ತುಸು ಹೆಚ್ಚೇ ಇರುತ್ತದೆ. ಯಾವುದೇ ಆರಂಭಿಕ ಪಂದ್ಯವಾದರೂ ಕೆಲ ನಿಮಿಷಗಳಲ್ಲೇ ಟಿಕೆಟ್ ಸೋಲ್ಡ್‌ಔಟ್ ಆಗುವುದರ ಜೊತೆಗೆ ವಿಶ್ವದಾದ್ಯಂತ ಪಂದ್ಯವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ದಾಖಲೆಯ ಮಟ್ಟದಲ್ಲಿ ವೀಕ್ಷಣೆ ಪಡೆಯುತ್ತದೆ. ವರ್ಷದಿಂದ ವರ್ಷಕ್ಕೆ ಅದರ ಸಂಖ್ಯೆ ಹೆಚ್ಚಾಗುತ್ತದೆ.
ಇದೀಗ ಅದರ ಸಾಲಿಗೆ ಶುಕ್ರವಾರ ನಡೆದ 16ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯ ಡಿಜಿಟಲ್‌ನಲ್ಲಿ ಹೊಸ ದಾಖಲೆ ಬರೆದಿದೆ. ಕ್ರಿಕೆಟ್ ಜಗತ್ತಿನ 'ಐಪಿಎಲ್ ಜಾತ್ರೆ' (IPL) ಕ್ರೀಡಾಕೂಟದ ಮೊದಲ ದಿನವೇ 1.6 ಕೋಟಿ ವೀಕ್ಷಕರನ್ನು ಸೆಳೆದಿರುವ ಜಿಯೋ ಸಿನಿಮಾ (JIO Cinema) ಅಪ್ಲಿಕೇಶನ್ ಮತ್ತೊಂದು ದಾಖಲೆ ಸೃಷ್ಟಿಸಿದೆ
ಧೋನಿ ಆಡ್ತಿದ್ದಾಗ 1.6 ಕೋಟಿ ವೀಕ್ಷಣೆ
ಐಪಿಎಲ್ ಡಿಜಿಟಲ್ ಪ್ರಸಾರದ ಹಕ್ಕನ್ನು ಪಡೆದಿದ್ದ ಜಿಯೋ ಸಿನಿಮಾದಲ್ಲಿ ಪಂದ್ಯ ಪ್ರಸಾರವಾಗಿದೆ. ಏಕ ಕಾಲದಲ್ಲಿ ಹೆಚ್ಚು ಮಂದಿ ವೀಕ್ಷಿಸಿದ ಐಪಿಎಲ್ ಪಂದ್ಯ ಎಂಬ ದಾಖಲೆ ಬರೆದಿದೆ. ಪಂದ್ಯದ ಆರಂಭದಲ್ಲೇ 50 ಲಕ್ಷ ಲಕ್ಷ ಇದ್ದ ವೀಕ್ಷಕರ ಸಂಖ್ಯೆ, ಧೋನಿ ಬ್ಯಾಟಿಂಗ್ ಬರುತ್ತಿದ್ದಂತೆ, ಅದರ ಸಂಖ್ಯೆ 1.6 ಕೋಟಿ ದಾಟಿತ್ತು. ಅದರಲ್ಲೂ 20ನೇ ಓವರ್ನಲ್ಲಿ ಧೋನಿ ಅಖಾಡದಲ್ಲಿರುವಾಗ ಗಣನೀಯ ಏರಿಕೆ ಕಂಡಿತ್ತು.
ಒಂದೇ ದಿನ 2.5 ಕೋಟಿ ಡೌನ್ಲೋಡ್
ಭಾರತದಲ್ಲಿ ಜಿಯೋ ಬಳಕೆದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಿಯೋ ಸಿಮ್ ಬಳಕೆದಾರರಿಗೆ ಐಪಿಎಲ್ ಉಚಿತವಾಗಿ ವೀಕ್ಷಿಸಲು ಅವಕಾಶ ನೀಡಲಾಗಿದೆ. ಹಾಗಾಗಿ ಶ್ರೀಮಂತ ಲೀಗ್ ಆರಂಭವಾದ ದಿನವೇ ಬರೋಬ್ಬರಿ 2.5 ಕೋಟಿ ಜಿಯೋ ಸಿನಿಮಾ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಲಾಗಿದೆ ಎಂದು ವರದಿಯಾಗಿದೆ. ಮಹಿಳಾ ಪ್ರೀಮಿಯರ್ ಲೀಗ್ ಅನ್ನೂ ಜಿಯೋ ಸಿನಿಮಾದಲ್ಲೇ ಪ್ರಸಾರ ಮಾಡಲಾಗಿತ್ತು. ಆದರೆ ಇಷ್ಟರ ಮಟ್ಟಿಗೆ ಪರಿಣಾಮ ಬೀರಿರಲಿಲ್ಲ. ಜಿಯೋ ಸಿನಿಮಾ ಅಪ್ಲಿಕೇಶನ್ನಲ್ಲಿ 4K ರೆಸಲ್ಯೂಶನ್‌ನಲ್ಲಿ (UltraHD) ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಬಹುದು.
ಟ್ರೋಲ್ ಆಗ್ತಿದೆ ಜಿಯೋ ಸಿನಿಮಾ
ಜಿಯೋ ಬಳಕೆದಾರರು ಜಿಯೋ ಸಿನಿಮಾ ಆ್ಯಪ್ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯ ವೀಕ್ಷಿಸುವ ಸಂದರ್ಭದಲ್ಲಿ ಹೆಚ್ಚು ಕಿರಿಕಿರಿ ಉಂಟಾಗಿದೆ ಎಂದು ವೀಕ್ಷಕರು ಕಿಡಿ ಕಾರಿದ್ದಾರೆ. ನೆಟ್ವರ್ಕ್ ಸಮಸ್ಯೆ ಕಾಡದಿದ್ದರೂ ಪಂದ್ಯದ ಮಧ್ಯೆ ಲೋಡಿಂಗ್ ಆಗುತ್ತಿತ್ತು. ಲೈವ್ ಸ್ಟ್ರೀವ್ ಸರಿಯಾಗಿ ಆಗುತ್ತಿರಲಿಲ್ಲ ಎಂಬ ದೂರುಗಳು ಬಂದಿವೆ.
ಕತಾರ್ ವಿಶ್ವಕಪ್
2022ರ ಕತಾರ್ ಫಿಫಾ ವಿಶ್ವಕಪ್ ಟೂರ್ನಿ ಪರಿಣಾಮ ಜಿಯೋ ಒಡೆತನದ ಜಿಯೋ ಸಿನಿಮಾ ಅಪ್ಲಿಕೇಶನ್ ದೇಶದಲ್ಲಿ ಮೊದಲ ಬಾರಿಗೆ ಇತಿಹಾಸ ಬರೆದಿತ್ತು. ದೇಶದಲ್ಲಿ ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್‌ಗಳ ಮೂಲಕ ಅತಿ ಹೆಚ್ಚು ಡೌನ್ಲೋಡ್ ಮಾಡಿಕೊಂಡ ಉಚಿತ ಅಪ್ಲಿಕೇಶನ್‌ಗಳಲ್ಲಿ ನಂ.1 ಅಪ್ಲಿಕೇಶನ್ ಎಂಬ ಖ್ಯಾತಿ ಜಿಯೋ ಸಿನಿಮಾ ಅಪ್ಲಿಕೇಶನ್ ಪಾಲಾಗಿತ್ತು.
ಉದ್ಘಾಟನಾ ಪಂದ್ಯದಲ್ಲಿ ಚೆನ್ನೈಗೆ ಸೋಲು
ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು, 4 ಬಾರಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ ರೋಚಕ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.