ಬರೋಬ್ಬರಿ 2.35 ಕೋಟಿ ರೂಪಾಯಿಗೆ ಸೇಲ್; ಪ್ರೊ ಕಬಡ್ಡಿ ಲೀಗ್‌ನ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡ ಶಾಡ್ಲೋಯಿ
Oct 10, 2023 02:49 PM IST
ಮೊಹಮ್ಮದ್ರೇಜಾ ಶಾಡ್ಲೋಯಿ
- ಇರಾನ್‌ನ ಆಲ್‌ರೌಂಡರ್ ಮೊಹಮ್ಮದ್ರೇಜಾ ಶಾಡ್ಲೋಯಿ, ಪ್ರೊ ಕಬಡ್ಡಿ ಲೀಗ್ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ ವಿದೇಶಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಪುಣೇರಿ ಪಲ್ಟನ್ ಫ್ರಾಂಚೈಸಿಯು ದುಬಾರಿ ಮೊತ್ತಕ್ಕೆ ಅವರನ್ನು ಖರೀದಿ ಮಾಡಿದೆ.
ಪ್ರೊ ಕಬಡ್ಡಿ ಲೀಗ್ ಹರಾಜು (Pro Kabaddi League auction) ಪ್ರಕ್ರಿಯಲ್ಲಿ ಕಬಡ್ಡಿ ಆಟಗಾರರು ದಾಖಲೆಯ ಮೊತ್ತಕ್ಕೆ ಹರಾಜಾಗುತ್ತಿದ್ದಾರೆ. ಸೋಮವಾರ ಮುಂಬೈನಲ್ಲಿ ಆರಂಭವಾದ ಪಿಕೆಎಲ್ ಹರಾಜು ಪ್ರಕ್ರಿಯೆಯಲ್ಲಿ ತೆಲುಗು ಟೈಟಾನ್ಸ್ ತಂಡವು ಬಲಿಷ್ಠ ಆಟಗಾರನನ್ನು ದುಬಾರಿ ಮೊತ್ತಕ್ಕೆ ತೆಕ್ಕೆಗೆ ಹಾಕಿಕೊಂಡಿದೆ. ಬರೋಬ್ಬರಿ 2.6 ಕೋಟಿ ರೂಪಾಯಿ ಮೊತ್ತಕ್ಕೆ ಭಾರತ ಕಬಡ್ಡಿ ತಂಡದ ನಾಯಕ ಪವನ್ ಸೆಹ್ರಾವತ್ ಅವರನ್ನು ಖರೀದಿಸಿದೆ. ಕಳೆದ ವರ್ಷದ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ತಮಿಳು ತಲೈವಾಸ್ ತಂಡಕ್ಕೆ ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದ ಅವರನ್ನು ಈ ಬಾರಿ ತಮಿಳು ತಂಡ ಖರೀದಿಸಿದೆ.
ಸದ್ಯ, ಮತ್ತೊಮ್ಮೆ ತಮ್ಮದೇ ದಾಖಲೆಯನ್ನು ಪವನ್ ಬ್ರೇಕ್ ಮಾಡಿದ್ದಾರೆ. ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ತಮ್ಮದೇ ದಾಖಲೆಯನ್ನು ಉಳಿಸಿಕೊಂಡಿದ್ದಾರೆ.
ಕಳೆದ ಋತುವಿನಲ್ಲಿ, ಸೆಹ್ರಾವತ್ ಅವರನ್ನು ತಮಿಳು ತಲೈವಾಸ್ ತಂಡವು 2.26 ಕೋಟಿ ರೂಪಾಯಿಗೆ ಬಿಡ್ ಮಾಡಿತ್ತು. ಆದರೆ, ಗಾಯದಿಂದಾಗಿ ಸಂಪೂರ್ಣ ಆವೃತ್ತಿಯಲ್ಲಿ ಪವನ್ ಆಟವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಪವನ್ ಅನುಪಸ್ಥಿತಿಯಿಂದ ಫ್ರಾಂಚೈಸಿ ಕೂಡಾ ಬಲಹೀನವಾಯ್ತು. ಈ ಬಾರಿ ತೆಲುಗು ಟೈಟಾನ್ಸ್ ಅದೃಷ್ಟ ಪರೀಕ್ಷೆಗಿಳಿದಿದೆ.
ಶಾಡ್ಲೋಯಿ ದುಬಾರಿ ವಿದೇಶಿ ಆಟಗಾರ
ಇರಾನ್‌ನ ಆಲ್‌ರೌಂಡರ್ ಮೊಹಮ್ಮದ್ರೇಜಾ ಶಾಡ್ಲೋಯಿ, ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ ವಿದೇಶಿ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಚಿಯಾನೆಹ್ ಅವರನ್ನು ಪುಣೇರಿ ಪಲ್ಟನ್ ತಂಡವು 2.35 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಆ ಮೂಲಕ ಅವರು ಪ್ರೊ ಕಬಡ್ಡಿ ಲೀಗ್ ತಂಡಕ್ಕೆ ಖರೀದಿಯಾದ ದುಬಾರಿ ಆಟಗಾರ ಎನಿಸಿಕೊಂಡರು. ಚಿಯಾನೆಹ್ ಅವರ ಸಹ ಆಟಗಾರ ಫಾಜೆಲ್ ಅತ್ರಾಚಲಿ ಅವರು, ಲೀಗ್‌ನಲ್ಲಿ ಈ ಹಿಂದೆ ಮಾರಾಟವಾಗಿದ್ದ ಅತ್ಯಂತ ದುಬಾರಿ ವಿದೇಶಿ ಆಟಗಾರನಾಗಿದ್ದರು. ಈ ಬಾರಿ ಫಾಜೆಲ್ ಅತ್ರಾಚಲಿ 1.60 ಕೋಟಿ ರೂಪಾಯಿಗೆ ಗುಜರಾತ್ ಜೈಂಟ್ಸ್ ಪಾಲಾಗಿದ್ದಾರೆ.
ಸೆಹ್ರಾವತ್ ಮತ್ತು ಶಾಡ್ಲೋಯಿ ಅಲ್ಲದೆ, ಮಣಿಂದರ್ ಸಿಂಗ್ ಕೂಡ ದೊಡ್ಡ ಮೊತ್ತಕ್ಕೆ ಸೇಲಾದರು. 2.12 ಕೋಟಿಗೆ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಖರೀದಿಯಾದರು.
ಮೊದಲ ದಿನ ದುಬಾರಿ ಮೊತ್ತಕ್ಕೆ ಸೇಲಾದ ಆಟಗಾರರು
- ಪವನ್ ಸೆಹ್ರಾವತ್ – 2.60 ಕೋಟಿ – ತೆಲುಗು ಟೈಟಾನ್ಸ್
- ಮೊಹಮದ್ರೆಜಾ ಶಾಡ್ಲೋಯಿ – 2.35 ಕೋಟಿ – ಪುಣೇರಿ ಪಲ್ಟನ್
- ಮಣಿಂದರ್ ಸಿಂಗ್ – 2.12 ಕೋಟಿ – ಬೆಂಗಾಲ್ ವಾರಿಯರ್ಸ್
- ಫಾಜೆಲ್ ಅತ್ರಾಚಲಿ – 1.60 ಕೋಟಿ – ಗುಜರಾತ್ ಜೈಂಟ್ಸ್
- ಸಿದ್ದಾರ್ಥ್ ದೇಸಾಯಿ - 1 ಕೋಟಿ - ಹರಿಯಾಣ ಸ್ಟೀಲರ್ಸ್
ಈ ಬಾರಿ ಒಟ್ಟು 500ಕ್ಕೂ ಅಧಿಕ ಆಟಗಾರರು ಹರಾಜಿನಲ್ಲಿದ್ದಾರೆ. ಆಟಗಾರರನ್ನು ವಿಭಿನ್ನ ಮೂಲ ಬೆಲೆಗಳೊಂದಿಗೆ 4 ವಿಭಿನ್ನ ವಿಭಾಗಗಳಾಗಿ ವಿಂಗಡಿಸಲಾಗಿದೆ. ಆಟಗಾರರನ್ನು ಪ್ರತಿ ವಿಭಾಗದಲ್ಲಿ ‘ಆಲ್ ರೌಂಡರ್ಸ್’, ‘ಡಿಫೆಂಡರ್ಸ್’ ಮತ್ತು ‘ರೈಡರ್ಸ್’ ಎಂದು ವಿಭಾಗ ಮಾಡಲಾಗಿದೆ. ಎ ವರ್ಗದ ಆಟಗಾರರಿಗೆ 30 ಲಕ್ಷ ರೂಪಾಯಿ ಮೂಲ ಬೆಲೆ, ಬಿ ವರ್ಗದಲ್ಲಿರುವ ಆಟಗಾರರಿಗೆ ಮೂಲ ಬೆಲೆ 20 ಲಕ್ಷ ರೂಪಾಯಿ, ಸಿ ವರ್ಗದ ಆಟಗಾರರಿಗೆ ವರ್ಗ 13 ಲಕ್ಷ ರೂಪಾಯಿ, ಡಿ ವರ್ಗದ ಆಟಗಾರರಿಗೆ 9 ಲಕ್ಷ ರೂಪಾಯಿ ಮೂಲ ಬೆಲೆ ನಿಗದಿಪಡಿಸಲಾಗಿದೆ.