Meenakshi Lekhi: ಅಪಖ್ಯಾತಿ ನಾಯಕರ ಬೆಂಬಲ ಪಡೆದ ಕುಸ್ತಿಪಟುಗಳಿಂದ ಪ್ರತಿಭಟನೆಯ ವಿಶ್ವಾಸಾರ್ಹತೆಗೆ ಧಕ್ಕೆ; ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
May 29, 2023 05:08 PM IST
ಕುಸ್ತಿಪಟುಗಳ ಕುರಿತು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಪ್ರತಿಕ್ರಿಯೆ
- ಸದ್ಯ ಬೆಂಗಳೂರು ಪ್ರವಾಸ ಕೈಗೊಂಡಿದ್ದ ಕೇಂದ್ರ ಸಂಸ್ಕೃತಿ ಇಲಾಖೆ ಸಚಿವೆ ಮೀನಾಕ್ಷಿ ಲೇಖಿ ಅವರು ಕುಸ್ತಿಪಟುಗಳ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್ (WFI President Brij Bhushan Sharan Singh) ಅವರನ್ನು ಬಂಧಿಸುವಂತೆ ಒತ್ತಾಯಿಸಿ ಭಾರತದ ಅಗ್ರಮಾನ್ಯ ಕುಸ್ತಿಪಟುಗಳು (Wrestlers Protest) 35 ದಿನಗಳಿಂದಲೂ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ರಿಜ್‌ಭೂಷಣ್ ಸಿಂಗ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದು ಕೊಟ್ಟಿದ್ದ ಮಹಿಳಾ ಕುಸ್ತಿಪಟುಗಳು ನ್ಯಾಯಕ್ಕಾಗಿ ಬೀದಿಯಲ್ಲಿ ಅಂಗಲಾಚುತ್ತಿದ್ದಾರೆ. ಇದರ ನಡುವೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ (Union minister Meenakshi Lekhi) ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದು, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಪ್ರತಿಭಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಕನಿಷ್ಠ ಪಕ್ಷ ಅವರಿಗೆ ನ್ಯಾಯ ದೊರಕಿಸಿಕೊಡುವ ಧೈರ್ಯ ಹೇಳುವ ಗೋಜಿಗೂ ಹೋಗುತ್ತಿಲ್ಲ. ಮೇ 28ರಂದು ನೂತನ ಸಂಸತ್ ಭವನ (New Parliament Building) ಉದ್ಘಾಟನೆಯಾಯಿತು. ಹಾಗಾಗಿ ಕುಸ್ತಿಪಟುಗಳು ಜಂತರ್ ಮಂತರ್ನಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಆದರೆ ಅವರನ್ನು ಮೆರವಣಿಗೆ ಕೈಗೊಳ್ಳದಂತೆ ತಡೆದರು. ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಕುಸ್ತಿಪಟುಗಳನ್ನು ದೆಹಲಿ ಪೊಲೀಸರು ಎಳೆದಾಡಿ ದೌರ್ಜನ್ಯ ಎಸೆಗಿದರು. ಕೊನೆಗೆ ಬಂಧಿಸಿದರು.
ಭಾರತದ ತಾರಾ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ (Wrestlers Bajrang Punia), ಸಾಕ್ಷಿ ಮಲಿಕ್ (Sakshi Malik), ವಿನೇಶ್ ಫೋಗಾಟ್ (Vinesh Phogat) ಸೇರಿದಂತೆ ಹಲವಾರು ಕುಸ್ತಿಪಟುಗಳು ಕಳೆದ 35 ದಿನಗಳಿಂದ ನವದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ. ಬ್ರಿಜ್‌ಭೂಷಣ್ ಸಂತ್ರಸ್ತೆ ಸೇರಿ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಅವರನ್ನು ಬಂಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಅವರ ಮಾತಿಗೆ ಕಿವಿಗೊಡುತ್ತಿಲ್ಲ. ಬಿಜೆಪಿ ಸಂಸದನೆಂಬ ಕಾರಣಕ್ಕೆ ಬ್ರಿಜ್‌ಭೂಷಣ್ ಸಿಂಗ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಕುಸ್ತಿಪಟುಗಳು ಆರೋಪ ಮಾಡಿದ್ದಾರೆ.
ಕಾನೂನು ಪ್ರಕಾರವೇ ಎಲ್ಲಾ ಮಾಡುತ್ತಿದ್ದೇವೆ
ಸದ್ಯ ಬೆಂಗಳೂರು ಪ್ರವಾಸ ಕೈಗೊಂಡಿದ್ದ ಕೇಂದ್ರ ಸಂಸ್ಕೃತಿ ಇಲಾಖೆ ಸಚಿವೆ ಮೀನಾಕ್ಷಿ ಲೇಖಿ ಅವರು ಕುಸ್ತಿಪಟುಗಳ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ಪ್ರತಿಕ್ರಿಯಿಸಿದ್ದಾರೆ. ನಾನು ಇದಕ್ಕೆ ಸಂಬಂಧಿಸಿ ಹೆಚ್ಚು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಸರ್ಕಾರವು ಕುಸ್ತಿಪಟುಗಳು ಮತ್ತು ಮಹಿಳೆಯರ ಬಗ್ಗೆ ಅತ್ಯಂತ ಸೂಕ್ಷ್ಮವಾದ ವಿಧಾನ ಹೊಂದಿದೆ. ನಾವು ಈ ಕಾರಣಕ್ಕೆ ಬಹಳ ಸಂವೇದನಾಶೀಲರಾಗಿದ್ದೇವೆ.. ಕಾನೂನಿನ ಪ್ರಕಾರ ಮಾಡಬೇಕಾದ ಎಲ್ಲವನ್ನೂ ನಾವು ಮಾಡುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.
ರಾಜನಿಗೂ ಒಂದೇ ಕಾನೂನು
ಈ ಬಗ್ಗೆ ಕಾನೂನು ಪ್ರಕಾರ ಉತ್ತಮ ರೀತಿಯಲ್ಲಿ ಕ್ರಮ ಆಗಲಿದೆ. ಈ ಸಮಸ್ಯೆಗಳಿಗೆ ಅಂತಾನೇ ನ್ಯಾಯಾಲಯ, ಕಾನೂನು ವ್ಯವಸ್ಥೆ ಇದೆ. ಒಬ್ಬ ರಾಜನಿಗೂ ದೇಶದ ಕಾನೂನು ಅನ್ವಯವಾಗಲಿದೆ. ಎಲ್ಲವೂ ಕಾನೂನಿನ ಪ್ರಕಾರವೇ ನಡೆಯಲಿದೆ. ಹಾಗಾಗಿ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಕುಸ್ತಿಪಟುಗಳಿಗೆ ಪ್ರತಿಪಕ್ಷಗಳ ರಾಜಕೀಯ ನಾಯಕರು ಬೆಂಬಲ ನೀಡುತ್ತಿರುವುದಕ್ಕೆ ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಸ್ತಿಪಟುಗಳು 'ಅಪಖ್ಯಾತ' ನಾಯಕರ ಬೆಂಬಲ ಪಡೆಯುತ್ತಿದ್ದಾರೆ. ಇದರಿಂದ ಪ್ರತಿಭಟನೆ ವಿಶ್ವಾಸಾರ್ಹತೆಗೆ ಧಕ್ಕೆ ತರುತ್ತಿದ್ದಾರೆ ಎಂದು ರಾಜಕೀಯ ನಾಯಕರು ಬೆಂಬಲಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಡಬ್ಲ್ಯುಎಫ್ಐ ಮುಖ್ಯಸ್ಥರ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ 2 ಪ್ರಕರಣಗಳು ದಾಖಲಾಗಿವೆ. ಆದರೂ ಅವರನ್ನು ಇನ್ನೂ ಬಂಧಿಸಿಲ್ಲ. ಹಾಗಾಗಿ ಬಂಧಿಸದಿರುವುದನ್ನು ಪ್ರಶ್ನಿಸಿ ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಕುಸ್ತಿಪಟುಗಳ ಪ್ರಯತ್ನಿಸಿದರು. ಆದರೆ ಇದು ಭಾರೀ ಹೈಡ್ರಾಮಾಕ್ಕೆ ಕಾರಣವಾಯಿತು. ಒಲಿಂಪಿಕ್ ಸಾಧಕರನ್ನು ನಡು ರಸ್ತೆಯಲ್ಲೇ ಬಂಧಿಸಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.