ಕನ್ನಡ ಸುದ್ದಿ  /  Sports  /  Kannada Sports News Arrogant King Is Crushing The Voice Of The Public Rahul Gandhi Jabs Modi Over Wrestlers Protest Prs

Rahul Gandhi: ಪಟ್ಟಾಭಿಷೇಕ ಆಯ್ತು, ಬೀದಿಗಿಳಿದವರ ದನಿ ತುಳಿಯುತ್ತಿರುವ ಅಹಂಕಾರಿ ರಾಜ; ಕುಸ್ತಿಪಟುಗಳ ಬಂಧನಕ್ಕೆ ಮೋದಿ ವಿರುದ್ಧ ರಾಹುಲ್ ಕಿಡಿ

Rahul Gandhi: ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ಪೊಲೀಸರ ನಡೆಯನ್ನು ಖಂಡಿಸಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ಮೋದಿ (PM Modi) ಗುರಿಯಾಗಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಸ್ತಿಪಟುಗಳ ಬಂಧನಕ್ಕೆ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ಕುಸ್ತಿಪಟುಗಳ ಬಂಧನಕ್ಕೆ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

ಭಾರತೀಯ ಕುಸ್ತಿ ಫೆಡರೇಷನ್​ ಮುಖ್ಯಸ್ಥ ಬ್ರಿಜ್​ ಭೂಷನ್​ ಸಿಂಗ್​ (WFI president Brij Bhushan Singh) ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟಗಳನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಅವರಿಗೆ ಬೆಂಬಲ ಸೂಚಿಸಿದ ರೈತ ಮುಖಂಡರನ್ನು ಕೂಡ ವಶಕ್ಕೆ ಪಡೆಯಲಾಗಿದೆ. ದೇಶಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕಾಂಗ್ರೆಸ್​ ಹಿರಿಯ ನಾಯಕ ರಾಹುಲ್​ ಗಾಂಧಿ (Senior Congress leader Rahul Gandhi) ಕೂಡ, ಪ್ರಧಾನಿ ಮೋದಿ (Prime Minister Narenadra Modi) ವಿರುದ್ಧ ಕಿಡಿ ಕಾರಿದ್ದಾರೆ.

ಸಂತ್ರಸ್ತೆ ಸೇರಿ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕುಸ್ತಿಪಟುಗಳಾದ ಬಜರಂಗ್ ಪುನಿಯಾ (Bajrang Punia), ವಿನೇಶ್ ಫೋಗಟ್ (Vinesh Phogat) ಮತ್ತು ಸಾಕ್ಷಿ ಮಲಿಕ್ (Sakshi Malik) ನೇತೃತ್ವದಲ್ಲಿ ದೆಹಲಿಯ ಜಂತರ್​ಮಂತರ್​ನಲ್ಲಿ ತಿಂಗಳಿಗೂ ಹೆಚ್ಚು ಪ್ರತಿಭಟನೆ ನಡೆಸುತ್ತಿದ್ದಾರೆ.​ ಇಂದು (ಮೇ 28ರಂದು) ನೂತನ ಸಂಸತ್​ ಭವನ (New Parliament House) ಉದ್ಘಾಟನೆಯಾಗಿದ್ದು, ಭವನದ ಎದುರು ಹೋರಾಟ ನಡೆಸಲು ಯತ್ನಿಸಿದ ಕುಸ್ತಿಪಟುಗಳನ್ನು ಬಂಧಿಸಿದ್ದಾರೆ.

ನೂತನ ಸಂಸತ್​ ಭವನ ಉದ್ಘಾಟನಾ ದಿನದಂದು ಕುಸ್ತಿಪಟುಗಳು ಮುತ್ತಿಗೆ ಹಾಕುವ ಮುನ್ಸೂಚನೆ ಮೊದಲೇ ಅರಿತಿದ್ದ ಪೊಲೀಸರು, ಸಂಸತ್​ ದಾರಿಗಳನ್ನು ನಿರ್ಬಂಧಿಸಿ ಬ್ಯಾರಿಕೇಡ್​ಗಳನ್ನು ಹಾಕಲಾಗಿತ್ತು. ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿತ್ತು. ಐಟಿಒ ರಸ್ತೆ, ಟಿಕ್ರಿ ಗಡಿ ಮತ್ತು ಸಿಂಘು ಗಡಿ ಪ್ರದೇಶದ ಬಳಿ ಬ್ಯಾರಿಕೇಡ್‌ ಹಾಕಲಾಗಿತ್ತು. ಮುತ್ತಿಗೆ ಹಾಕಲು ಯತ್ನಿಸಿದ ಕುಸ್ತಿಪಟುಗಳನ್ನು ತಡೆದ ದೆಹಲಿ ಪೊಲೀಸರು, ಬಂಧಿಸಲು ಎಳೆದಾಡಿದರು. ಆದರೆ ಈ ವೇಳೆ ಕುಸ್ತಿಪಟುಗಳು ಒಬ್ಬರಿಗೊಬ್ಬರು ಅಪ್ಪಿಕೊಂಡು ಬಂಧಿಸದಂತೆ ಮನವಿ ಮಾಡಿದರು.

ಮೋದಿಯನ್ನು ಸೊಕ್ಕಿನ ರಾಜ ಎಂದ ರಾಹುಲ್

ಪ್ರತಿಭಟನಾ ನಿರತ ಕುಸ್ತಿಪಟುಗಳ ವಿರುದ್ಧ ಪೊಲೀಸರ ನಡೆಯನ್ನು ಖಂಡಿಸಿ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಭಾನುವಾರ ಪ್ರಧಾನಿ ಮೋದಿ ಗುರಿಯಾಗಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ನಲ್ಲಿ ಕುಸ್ತಿಪಟುಗಳನ್ನು ಅಮಾನವೀಯವಾಗಿ ನಡೆದುಕೊಂಡ ವಿಡಿಯೋ ಹಂಚಿಕೊಂಡು, ಮೋದಿಯನ್ನು ಸೊಕ್ಕಿನ ರಾಜ ಎಂದು ಕರೆದಿದ್ದಾರೆ. ಕುಸ್ತಿಪಟುಗಳಿಗೆ ನ್ಯಾಯ ಒದಗಿಸಿಕೊಡುವಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್​ನಲ್ಲಿ ಏನಿದೆ?

ಟ್ವಿಟರ್​ನಲ್ಲಿ 43 ಸೆಕೆಂಡ್​ಗಳ ವಿಡಿಯೋವನ್ನು ರಾಹುಲ್​ ಗಾಂಧಿ ಹಂಚಿಕೊಂಡಿದ್ದಾರೆ. ಕುಸ್ತಿಪಟುಗಳನ್ನು ಬಂಧಿಸುವಾಗ ಪೊಲೀಸರು ನಡೆದುಕೊಂಡ ರೀತಿಯನ್ನು ಖಂಡಿಸಿದ್ದಾರೆ. ಪಟ್ಟಾಭಿಷೇಕ ಮುಗೀತು, ಬೀದಿಗಿಳಿದ ಜನರ ದನಿಯನ್ನು ತುಳಿಯುತ್ತಿರುವ ಅಹಂಕಾರಿ ರಾಜ ಎಂದು ಪ್ರಧಾನಿ ಮೋದಿ ವಿರುದ್ಧ ಟೀಕಿಸಿದ್ದಾರೆ.

ಕ್ರೀಡಾಪಟುಗಳನ್ನು ಎಳೆದಾಡಿದ ಪೊಲೀಸರು

ಕಾಮನ್​ವೆಲ್ತ್​, ಒಲಿಂಪಿಕ್​​​ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಚಿನ್ನ, ಬೆಳ್ಳಿ ಪದಕ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಅಗ್ರಮಾನ್ಯ ಕುಸ್ತಿಪಟುಗಳು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ದೇಶದ ಹೆಮ್ಮೆಯನ್ನು ಹೆಚ್ಚಿಸಿದ ಖ್ಯಾತನಾಮ ಆಟಗಾರರಿಗೆ ಸ್ಪಲ್ಪವೂ ಗೌರವ ತೋರದ ದೆಹಲಿ ಪೊಲೀಸರು ರಸ್ತೆಯಲ್ಲಿ ಎಳೆದಾಡಿದ್ದಾರೆ. ಬಂಧಿಸಲು ದರದರನೇ ಎಳೆದ ಪೊಲೀಸರ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ದೇಶಾದ್ಯಂತ ಆಕ್ರೋಶ

ಕುಸ್ತಿಪಟುಗಳ ಪ್ರತಿಭಟನೆಗೆ ರೈತರಿಂದಲೂ ಬೆಂಬಲ ಸಿಕ್ಕಿದೆ. ಈಗ ಅವರನ್ನೂ ಬಂಧಿಸಲಾಗಿದೆ. ಇದರಿಂದ ಪ್ರತಿಪಕ್ಷಗಳು, ನೆಟ್ಟಿಗರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪದಕ ಗೆದ್ದಾಗ ಸಂಭ್ರಮಿಸುವ ನೀವು, ಈಗವರ ಕಷ್ಟಕ್ಕೆ ಏಕೆ ನಿಲ್ಲುತ್ತಿಲ್ಲ. ಪದಕ ಗೆದ್ದಾಗ ದೇಶದ ಘನತೆ ಗೌರವ ಹೆಚ್ಚಾಗುತ್ತದೆ. ಅವರು ಪ್ರತಿಭಟನೆ ನಡೆಸಿದರೆ, ಅದೇ ಘನತೆ ಕುಗ್ಗುತ್ತದೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ನಿಮ್ಮ ಸಂಸದರನ್ನು ರಕ್ಷಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದೀರಾ ಎಂದು ಕಿಡಿ ಕಾರಿದ್ದಾರೆ ನೆಟ್ಟಿಗರು.