logo
ಕನ್ನಡ ಸುದ್ದಿ  /  ಕ್ರೀಡೆ  /  ನೀರಿಗಿಳಿಯೋಕೆ ಭಯಪಡ್ತಿದ್ದೋಳು ಈಗ ಒಲಿಂಪಿಕ್ಸ್​ನಲ್ಲಿ ಅತ್ಯಂತ ಕಿರಿಯ ಈಜುಪಟು; 14 ವರ್ಷದ ಕನ್ನಡತಿ ಗೆದ್ದಿರೋದು 7 ಚಿನ್ನ!

ನೀರಿಗಿಳಿಯೋಕೆ ಭಯಪಡ್ತಿದ್ದೋಳು ಈಗ ಒಲಿಂಪಿಕ್ಸ್​ನಲ್ಲಿ ಅತ್ಯಂತ ಕಿರಿಯ ಈಜುಪಟು; 14 ವರ್ಷದ ಕನ್ನಡತಿ ಗೆದ್ದಿರೋದು 7 ಚಿನ್ನ!

Prasanna Kumar P N HT Kannada

Jul 24, 2024 11:33 AM IST

google News

ನೀರಿಗಿಳಿಯೋಕೆ ಭಯಪಡ್ತಿದ್ದೋಳು ಒಲಿಂಪಿಕ್ಸ್​ನಲ್ಲಿ ಅತ್ಯಂತ ಕಿರಿಯ ಈಜುಪಟು; 14 ವರ್ಷದ ಕನ್ನಡತಿ ಗೆದ್ದಿರೋದು 7 ಚಿನ್ನ!

    • Dhinidhi Desinghu Profile: ಧಿನಿಧಿ ದೇಸಿಂಗು ನೀರಿಗಿಳಿಯಲು ಭಯಪಡುತ್ತಿದ್ದಳು. ಈಜು ಕೊಳಕ್ಕೆ ಇಳಿಯಲು ಜ್ವರ ಬರುತ್ತಿತ್ತು, ವಾಂತಿ ಮಾಡಿಕೊಳ್ಳುತ್ತಿದ್ದಳು. ಆದರೀಗ ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಲು ಸಜ್ಜಾಗಿದ್ದಾಳೆ. 14 ವರ್ಷದ ಬೆಂಗಳೂರಿನ ಈಜುಪಟು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚೊಚ್ಚಲ ಚಿನ್ನ ಗೆಲ್ಲುವ ತವಕದಲ್ಲಿದ್ದಾಳೆ.
ನೀರಿಗಿಳಿಯೋಕೆ ಭಯಪಡ್ತಿದ್ದೋಳು ಒಲಿಂಪಿಕ್ಸ್​ನಲ್ಲಿ ಅತ್ಯಂತ ಕಿರಿಯ ಈಜುಪಟು; 14 ವರ್ಷದ ಕನ್ನಡತಿ ಗೆದ್ದಿರೋದು 7 ಚಿನ್ನ!
ನೀರಿಗಿಳಿಯೋಕೆ ಭಯಪಡ್ತಿದ್ದೋಳು ಒಲಿಂಪಿಕ್ಸ್​ನಲ್ಲಿ ಅತ್ಯಂತ ಕಿರಿಯ ಈಜುಪಟು; 14 ವರ್ಷದ ಕನ್ನಡತಿ ಗೆದ್ದಿರೋದು 7 ಚಿನ್ನ!

ಧಿನಿಧಿ ದೇಸಿಂಗು.. ಕರ್ನಾಟಕದ ಬೆಂಗಳೂರಿನ ಯುವ ಈಜು ಪಟು. ಆಕೆಗೆ ಈಗಿನ್ನೂ 14 ವರ್ಷ. ತುಂಬಾ ನಾಚಿಕೆ ಮತ್ತು ಮುಜುಗರದ ಸ್ವಭಾವದವಳು. ತಾನು ಮಾತು ಕಲಿತರೂ ಇತರರೊಂದಿಗೆ ಮಾತನಾಡಲು ಹಿಂಜರಿಕೆ. ಅಂದರೆ ಅಂತರ್ಮುಖಿ. ಯಾರೊಂದಿಗೂ ಬೆರೆಯದವರು. ಏಕಾಂತ ಹೆಚ್ಚು ಇಷ್ಟಪಡುವವರು. ಸಂಕೋಚ ಪ್ರವೃತ್ತಿಯ ಧಿನಿಧಿಯನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಲು ತಮ್ಮ ಹೆತ್ತವರು ದೊಡ್ಡ ಸಾಹಸವನ್ನೇ ಮಾಡಿಬಿಟ್ಟಿದ್ದರಂತೆ!

ತಮ್ಮ ಮನೆಯ ಪಕ್ಕದಲ್ಲೇ ಈಜು ಕೊಳ ಇತ್ತು. ಈಜು ಕಲಿಯುವುದು ಧಿನಿಧಿ ನಿರ್ದಿಷ್ಟ ಆಯ್ಕೆಯೂ ಆಗಿತ್ತು. ಆದರೆ, ಅಂತರ್ಮುಖಿಯಾಗಿದ್ದ ಕಾರಣ, ನೀರಿಗಿಳಿಯುವ ಧೈರ್ಯ ಮತ್ತು ಮನಸ್ಸು ಮಾಡಿರಲಿಲ್ಲ. ಧಿನಿಧಿ ಎಲ್ಲರೊಂದಿಗೂ ಬೆರೆಯಬೇಕು. ಸ್ನೇಹಿತರನ್ನು ಹೊಂದಬೇಕು ಎಂಬುದು ಆಕೆಯ ಹೆತ್ತವರ ಕನಸಾಗಿತ್ತು. ಪೋಷಕರು ಎಷ್ಟೇ ಬಲವಂತ ಮಾಡಿದರೂ ಧಿನಿಧಿ ಮಾತ್ರ ನೀರಿಗಿಳಿಯುತ್ತಿರಲಿಲ್ಲವಂತೆ! ಹೀಗಂತ ಪ್ಯಾರಿಸ್​ ಒಲಿಂಪಿಕ್ಸ್​ಗೆ ಆಯ್ಕೆಯಾದ ಭಾರತದ ಅತ್ಯಂತ ಕ್ರೀಡಾಪಟು ಸ್ವತಃ ಧಿನಿಧಿ ಅವರೇ ಈ ಮಾಹಿತಿ ಬಹಿರಂಗಪಡಿಸಿದ್ದಾರೆ.

ನೀರಿಳಿಯಲು ಭಯಪಡುತ್ತಿದ್ದಳು..

ನೀರಿಗಿಳಿಯಲು ಭಯವಾಗುತ್ತಿತ್ತು. ಈಜುಕೊಳದಲ್ಲಿ ಪಾದಗಳನ್ನು ಸ್ಪರ್ಶಿಸಲು ಹೆದರುತ್ತಿದ್ದೆ. ಇದು ನಿಜವಾಗಲೂ ನನಗೆ ದೊಡ್ಡ ಹೋರಾಟವಾಗಿತ್ತು. ನನಗೆ ಆಗ 6 ವರ್ಷ. ಅಚ್ಚರಿ ಏನೆಂದರೆ ನಾನು ಈಜು ಕಲಿಯುವ ಮೊದಲು ನನ್ನ ಪೋಷಕರು, ಈಜಿನ ಕೊಳಕ್ಕೆ ಇಳಿದರು. ಹೆದರುತ್ತಿದ್ದ ನನಗೆ ಇದು ತುಂಬಾ ಸುಲಭ ಎಂಬುದನ್ನು ತೋರಿಸಿಕೊಟ್ಟರು. ನಾನು ನೀರಿಗಿಳಿಯಲು ಅವರು ಪ್ರೇರೇಪಿಸಿದರು ಎಂದು ಧಿನಿಧಿ ಇಂಡಿಯನ್ ಎಕ್ಸ್​​ಪ್ರೆಸ್​ಗೆ ನೀಡಿದ ಸಂದರ್ಶನದಲ್ಲಿ ತಾನು ನೀರಿಳಿಗಿಳಿದಿದ್ಹೇಗೆ ಎಂಬುದನ್ನು ವಿವರಿಸಿದ್ದಾರೆ.

ಭಾರತದ ಅತ್ಯಂತ ಕಿರಿಯ ಕ್ರೀಡಾಪಟು

14 ವರ್ಷದ ಧಿನಿಧಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತೀಯ ತಂಡದ ಅತ್ಯಂತ ಕಿರಿಯ ಸದಸ್ಯರಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ದೇಸಿಂಗು ಭಾರತದ ಎರಡನೇ ಕಿರಿಯ ಈಜುಪಟು. 1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ 11 ವರ್ಷ ವಯಸ್ಸಿನ ಈಜುಗಾರ್ತಿ ಆರತಿ ಸಹಾ ಮಹಿಳೆಯರ 200 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಭಾಗವಹಿಸಿದ್ದರು. ಮಹಿಳೆಯರ 200 ಮೀಟರ್ ಫ್ರೀಸ್ಟೈಲ್‌ನಲ್ಲಿ ಸ್ಥಾನ ಪಡೆದಿರುವ ಕನ್ನಡತಿ, ಭಾರತದ ಈಜು ಪರಿಣತ ಶ್ರೀಹರಿ ನಟರಾಜ್ ಅವರೊಂದಿಗೆ ಸ್ಪರ್ಧಿಸಲಿದ್ದಾರೆ. ಬಹುರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲು ಸನ್ನದ್ಧಗೊಂಡಿದ್ದಾರೆ. ಕಿರಿಯ ವಯಸ್ಸಿನಲ್ಲೇ ಕನಸನ್ನು ನನಸು ಮಾಡಿಕೊಂಡ ಧಿನಿಧಿ, ತನ್ನ ಚೊಚ್ಚಲ ಒಲಿಂಪಿಕ್ಸ್​​ನಲ್ಲೇ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ.

ಧಿನಿಧಿ ಪ್ರತಿಭೆಯ ಕುರಿತು ಮಾತನಾಡಿದ ತಾಯಿ ಜೆಸಿತಾ, ಮಗಳ ಒತ್ತಡ ನಿಭಾಯಿಸಲು ಮಾಡಿದ್ದೇನು? ಧಿನಿಧಿ ನೀರಿಗೆ ಇಳಿದ್ಮೇಲೆ ಏನೆಲ್ಲಾ ಆಗುತ್ತಿತ್ತು ಎಂಬುದರ ಕುರಿತು ವಿವರಿಸಿದ್ದಾರೆ. 'ಅವಳು ಅದ್ಭುತ ಪ್ರತಿಭೆ ಹೊಂದಿದ್ದಾಳೆಂದು ನನಗೆ ತಿಳಿದಿತ್ತು. ಉತ್ತಮವಾಗಿ ಈಜು ಕಲಿತಳು. ಆದರೆ ಸ್ಪರ್ಧೆಗಳು ಆಯೋಜಿಸಿದಾಗ ಹೆಚ್ಚು ಒತ್ತಡಕ್ಕೆ ಒಳಗಾಗುತ್ತಿದ್ದಳು. ಒಂದೋ ಅವಳು ಹಿಂದಿನ ದಿನ ಜ್ವರದಿಂದ ಅಸ್ವಸ್ಥಳಾಗುತ್ತಿದ್ದಳು ಅಥವಾ ಸ್ಪರ್ಧೆಗೆಂದು ಈಜು ಕೊಳಕ್ಕೆ ಬಂದಾಗ ವಾಂತಿ ಮಾಡಿಕೊಳ್ಳುತ್ತಿದ್ದಳು' ಎನ್ನುತ್ತಾರೆ ಜೆಸಿತಾ.

ಆಕೆಯ ಜೀವನ ತಿರುವು ಪಡೆದಿದ್ದು ಮಂಗಳೂರಿನಲ್ಲಿ

'ಆದರೆ, ಅವಳ ಜೀವನ ತಿರುವು ಪಡೆದಿದ್ದೇ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ. ಮಗಳನ್ನು ಈ ಸ್ಫರ್ಧೆಯಲ್ಲಿ ಕಣಕ್ಕಿಳಿಸಿದರೆ, ಧೈರ್ಯ ತಂದುಕೊಳ್ಳುತ್ತಾಳೆ, ಒತ್ತಡ ಮುಕ್ತಳಾಗುತ್ತಾಳೆ ಎಂದು ನಿರ್ಧರಿಸಿದೆ. ಹಾಗಾಗಿ ಮಂಗಳೂರಿಗೆ ಟಿಕೆಟ್ ಬುಕ್ ಮಾಡಿದೆ. ಆದರೆ ನನಗೆ ದೂರದ ಜರ್ನಿ ವೇಳೆ ವಾಂತಿ ಆಗುತ್ತದೆ. ಮಂಗಳೂರು ತಲುಪುವವರೆಗೂ ನನಗೆ ವಾಂತಿ ನಿಂತಿರಲಿಲ್ಲ. ಆದರೆ ಸ್ಫರ್ಧೆಯ ಸ್ಥಳಕ್ಕೆ ಹೋಗುತ್ತಿದ್ದಂತೆ, ಧಿನಿಧಿ ಮತ್ತೆ ಭಯಬಿದ್ದಳು. ನನಗೆ ಈಜಲು ಇಷ್ಟವಿಲ್ಲ ಎಂದು ಹೇಳಿಬಿಟ್ಟಳು'

'ಆದರೆ ನಾವು ಇಲ್ಲಿಗೆ ಬರಲು ತುಂಬಾ ಕಷ್ಟಪಟ್ಟಿದ್ದೇವೆ. ಆದ್ದರಿಂದ ನಾವು ಕೇವಲ ಕೊಳವನ್ನು ನೋಡಿ ಮರಳಿ ಬಂದುಬಿಡೋಣ ಎಂದು ಧಿನಿಧಿಗೆ ತಿಳಿಸಿದೆ. ಪೂಲ್ ನೋಡಿದ ನಂತರ ಇಷ್ಟವಾಗದಿದ್ದರೆ ವಾಪಸ್ ಬರೋಣ ಎಂದು ಹೇಳಿದೆ. ಕೊಳದ ಸುತ್ತಲೂ ಒಂದು ಸುತ್ತು ಹಾಕಿದ ಧಿನಿಧಿ, ನನ್ನತ್ತ ನೋಡಿ ಹೇಳಿದ್ದು ಒಂದೇ ನಾನು ಸಾಧಿಸುತ್ತೇನೆ ಎಂದು. ನನಗೂ ಅವಳ ಧೈರ್ಯ ಕಂಡು ತುಂಬಾ ಸಂತೋಷವಾಯಿತು. ಅವಳ ಆತ್ಮ ವಿಶ್ವಾಸ ದುಪ್ಪಟ್ಟಾಯಿತು. ಚಿನ್ನ ಗೆದ್ದು ಸಂಭ್ರಮಿಸಿದಳು. ಸ್ಫರ್ಧೆ ಮೊದಲು ಅವಳಿಗೆ ಜ್ವರ ಕಾಣಿಸಿಕೊಂಡಿರಲಿಲ್ಲ ಅಥವಾ ವಾಂತಿ ಆಗಿರಲಿಲ್ಲ' ಎಂದು ಜೆಸಿತಾ ನೆನಪಿಸಿಕೊಳ್ಳುತ್ತಾರೆ.

14 ವರ್ಷಕ್ಕೆ 7 ಚಿನ್ನದ ಪದಕ ಗೆದ್ದಿದ್ದಾಳೆ ಧಿನಿಧು

ಸದ್ಯಕ್ಕೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 7 ಚಿನ್ನದ ಪದಕಗಳನ್ನು ಗೆದ್ದ ಅತ್ಯಂತ ಕಿರಿಯ ಮಹಿಳಾ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಧಿನಿಧಿ ಪಾತ್ರರಾಗಿದ್ದಾರೆ. ಧಿನಿಧಿ ಈಗಾಗಲೇ ಮಹಿಳೆಯರ 200 ಮೀ ಫ್ರೀಸ್ಟೈಲ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾಳೆ. 2022 ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ಗೂ ಹೋಗಿದ್ದಳು. ಧಿನಿಧಿ ಬೆಂಗಳೂರಿನ ಡಾಲ್ಫಿನ್ ಅಕ್ವಾಟಿಕ್ಸ್‌ನಲ್ಲಿ ತರಬೇತಿ ಪಡೆಯುತ್ತಿರುವ ಧಿನಿಧಿಗೆ ತರಬೇತಿ ನೀಡುತ್ತಿರುವುದು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ನಿಹಾರ್ ಅಮೀನ್ ಅವರ ನೇತೃತ್ವದಲ್ಲಿ ಮಧು ಕುಮಾರ್ ಅವರು.

ಅಕಾಡೆಮಿಗೆ ಸೇರಿದಾಗ ಈಜುವಿಕೆಯ ಮೂಲಭೂತ ನಿಯಮಗಳೇ ಅರ್ಥವಾಗಿರಲಿಲ್ಲವಂತೆ ಎಂದು ಧಿನಿಧಿ ನೆನಪಿಸಿಕೊಳ್ಳುತ್ತಾಳೆ. ನನಗೆ ಸ್ಟ್ರೋಕ್‌ಗಳು ತಿಳಿದಿತ್ತು. ಬ್ಯಾಕ್‌ಸ್ಟ್ರೋಕ್, ಬ್ರೆಸ್ಟ್‌ಸ್ಟ್ರೋಕ್ ಮತ್ತು (ಬಟರ್) ಫ್ಲೈ. ಆದರೆ ಅದು ಹೇಗೆ ಆಡಬೇಕೆಂದು ನನಗೆ ತಿಳಿದಿರಲಿಲ್ಲ. ಅಲ್ಲಿ 13ರ ಆಸುಪಾಸಿನ ಮಕ್ಕಳಿದ್ದರು. ನನ್ನಂತೆಯೇ ಒಬ್ಬನಿದ್ದ. ಆತನಿಗೆ ಕೇವಲ 9 ವರ್ಷ. ಆದರೆ ಆತನೊಂದಿಗೆ ಸಹಾಯ ಕೇಳಲು ನನಗೆ ಭಯವಾಗಿತ್ತು. ಏನು ಮಾಡಬೇಕೆಂದು ನನಗೆ ತಿಳಿದಿರಲಿಲ್ಲ ಎಂದು ಹೇಳುತ್ತಾಳೆ ಧಿನಿಧಿ.

ಎಲ್ಲಾ ತ್ಯಾಗಕ್ಕೂ ಸಿದ್ಧಳಾಗಿದ್ದಳು…

ಧಿನಿಧಿ ಕಷ್ಟ ಪಟ್ಟ ಕುರಿತು ಕೋಚ್ ಮಧು ವಿವರಿಸಿದ್ದು ಹೀಗೆ.. ಅವಳು ಕಷ್ಟಪಟ್ಟು ಕೆಲಸ ಮಾಡದ ದಿನವೇ ಇಲ್ಲ. ತರಬೇತಿ ಮುಗಿದರೂ ಪೂಲ್​​ನಿಂದ ಹೊರಬರುತ್ತಿರಲಿಲ್ಲ. ಅವಳನ್ನು ಪೂಲ್‌ನಿಂದ ಹೊರಗೆ ಕರೆದ ಸಾಕಷ್ಟು ಸಂದರ್ಭಗಳಿವೆ. ಬಹಳ ಶ್ರದ್ಧೆ ಆಸಕ್ತಿಯ ಜೊತೆಗೆ ಹೆಚ್ಚು ಕಷ್ಟಪಡುತ್ತಿಳು. ಇದು ಆಕೆಗೆ ಈಜುವ ಉತ್ಸಾಹ. ಅದಕ್ಕಾಗಿ ಎಲ್ಲ ತ್ಯಾಗಕ್ಕೂ ಸಿದ್ಧಳಾಗಿದ್ದಳು. ಅವಳು ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡುತ್ತಿರಲಿಲ್ಲ. ಹುಟ್ಟುಹಬ್ಬದ ಪಾರ್ಟಿಗಳಿಗೆ ಹೋಗುತ್ತಿರಲಿಲ್ಲ. ಅವಳ ಗುರಿ ಇದ್ದದ್ದು ಉತ್ತಮ ಈಜು ಪಟು ಆಗುವುದಷ್ಟೆ ಎಂದು ಕೋಚ್ ಹೇಳುತ್ತಾರೆ.

ನೀರಿಗಿಳಿಯಲು ಭಯಪಡುತ್ತಿದ್ದ ಧಿನಿಧಿ, ಇದೀಗ ದೇಶವೇ ಹೆಮ್ಮೆಪಡುವಂತೆ ಮಾಡಲು ಪ್ಯಾರಿಸ್​ಗೆ ಹಾರಿದ್ದಾರೆ. ಭಾರತದ 117 ಕ್ರೀಡಾಪಟುಗಳ ತಂಡ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಪದಕ ಬೇಟೆಗೆ ಸಜ್ಜಾಗಿದೆ. ಈ ಪೈಕಿ ಅತ್ಯಂತ ಕಿರಿಯ ಕ್ರೀಡಾಪಟು ಎನಿಸಿದ ಧಿನಿಧಿ ವಿಶ್ವದಾಖಲೆ ನಿರ್ಮಿಸಲು ಹೊರಟಿದ್ದಾರೆ. ಸಿಟಿ ಆಫ್ ಲವ್ ಖ್ಯಾತಿಯ ಪ್ಯಾರಿಸ್​​ನಲ್ಲಿ ಚಿನ್ನ ಗೆದ್ದು ಭಾರತವನ್ನು ಹೆಮ್ಮೆಪಡುವಂತೆ ಮಾಡಲು ತಯಾರಾಗಿದ್ದಾರೆ. ನಮ್ಮ ಕನ್ನಡತಿ, ಬೆಂಗಳೂರಿನ ಧಿನಿಧಿ ಒಲಿಂಪಿಕ್ಸ್​​ನಲ್ಲಿ ಸ್ವರ್ಣ ಗೆಲ್ಲಲಿ ಎಂದು ಕನ್ನಡಿಗರ ಪರವಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಆಶಿಸುತ್ತಿದೆ. ಆಲ್​ ದಿ ಬೆಸ್ಟ್​​ ಧಿನಿಧಿ ದೇಸಿಂಗು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ