ತುಮಕೂರಿನಲ್ಲಿ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್; ವಿವಿಧ ರಾಜ್ಯಗಳ 1500ಕ್ಕೂ ಹೆಚ್ಚು ಮಕ್ಕಳು ಭಾಗಿ
Nov 27, 2023 11:22 AM IST
ತುಮಕೂರಿನಲ್ಲಿ 7ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್
- Tumkur National Karate Championship: ತುಮಕೂರಿನಲ್ಲಿ ಆಯೋಜಿಸಲಾದ 7ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಹರಿಯಾಣ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳ ಸುಮಾರು 1500ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡರು.
ತುಮಕೂರು: ನಗರದ ತುಮಕೂರು ವಿಶ್ವವಿದ್ಯಾಲಯದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳ ಸಭಾಂಗಣದಲ್ಲಿ ಲಯನ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾದ 7ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ಗೆ ಸಹಕಾರ ಸಚಿವ ಕೆಎನ್ ರಾಜಣ್ಣ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕರಾಟೆ ಇನ್ನೊಬ್ಬರ ಮೇಲೆ ದಾಳಿ ಮಾಡಲು ಉಪಯೋಗಿಸುವಂಥ ಕಲೆಯಲ್ಲ. ನಮ್ಮ ಸ್ವಯಂರಕ್ಷಣೆಗೆ ಇರುವಂತಹ ಕಲೆ. ಇದನ್ನು ಪ್ರತಿಯೊಬ್ಬರು ಕಲಿಯುವುದರಿಂದ ನಮ್ಮ ಮೇಲಾಗುವ ದಬ್ಬಾಳಿಕೆ, ದೌರ್ಜನ್ಯ ತಡೆಗಟ್ಟಬಹುದು ಎಂದು ತಿಳಿಸಿದರು.
ಕರಾಟೆಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ. ಇದು ಒಂದು ಪ್ರದೇಶಕ್ಕೆ ಸಿಮೀತವಾಗಿಲ್ಲ. ಕ್ರೀಡೆ ಭಾತೃತ್ವ ಬೆಸೆಯುವ ಆಟವಾಗಿದೆ. ಕರಾಟೆ ಒಂದು ಶಿಸ್ತು ಬದ್ದ ಅಟ. ಕರಾಟೆ ಕಲಿಯುವುದರಿಂದ ಮನುಷ್ಯನಲ್ಲಿ ಶಿಸ್ತು ಮತ್ತು ಸಂಯಮ ಅಳವಡಿಸಿಕೊಳ್ಳಲು ಸಾಧ್ಯ. ಶಿಸ್ತು ಇರುವ ಮನುಷ್ಯ ಜೀವನದಲ್ಲಿ ಉತ್ತರೋತ್ತರಕ್ಕೆ ಬೆಳೆಯಲು ಸಹಕಾರಿ. ಸೋಲು-ಗೆಲುವು ಕ್ರೀಡೆಯಲ್ಲಿ ಸಹಜ. ಕ್ರೀಡೆಯು ಆಟದ ಜೊತೆಗೆ ಇನ್ನೊಬ್ಬರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬ ಗುಣಗಳನ್ನು ಕಲಿಸುತ್ತದೆ. ಭವಿಷ್ಯ ಉತ್ತಮವಾಗಿರಲು ಕ್ರೀಡೆ ಸಹಕಾರಿಯಾಗಲಿದೆ ಎಂದು ಸಚಿವ ಕೆಎನ್ ರಾಜಣ್ಣ ತಿಳಿಸಿದರು.
11ಕ್ಕೂ ಹೆಚ್ಚು ರಾಜ್ಯಗಳ 1500ಕ್ಕೂ ಹೆಚ್ಚು ಮಕ್ಕಳು ಭಾಗಿ
ನಗರಪಾಲಿಕೆ 19ನೇ ವಾರ್ಡ್ ಸದಸ್ಯೆ ರೂಪಾಶೆಟ್ಟಾಳಯ್ಯ ಮಾತನಾಡಿ, ಕರ್ನಾಟಕ ಮಾತ್ರವಲ್ಲದೆ ದೇಶದ 11ಕ್ಕೂ ಹೆಚ್ಚು ರಾಜ್ಯಗಳ 1500ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಪಾಲ್ಗೊಂಡಿದ್ದಾರೆ. ಅವರ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಕ್ರೀಡಾಕೂಟದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಹಾಗೂ ಕ್ರೀಡಾ ಪ್ರೋತ್ಸಾಹಕ ಧನಿಯಕುಮಾರ್, ಲಯನ್ ಮಾರ್ಷಲ್ ಆರ್ಟ್ ಸಂಸ್ಥೆ ಕಳೆದ ಹತ್ತಾರು ವಷಗಳಿಂದ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳನ್ನು ನಡೆಸುತ್ತ ಜಿಲ್ಲೆಯಲ್ಲಿ ಕರಾಟೆಯನ್ನು ಜನಪ್ರಿಯಗೊಳಿಸಿದೆ. ಶಿಕ್ಷಣದ ಜೊತೆ ಜೊತೆಗೆ ಕ್ರೀಡೆ ಒಂದು ಒಳ್ಳೆಯ ಬೆಳವಣಿಗೆ. ಇತ್ತೀಚಿನ ಕುಲುಷಿತ ವಾತಾವರಣದಲ್ಲಿ ಹೆಣ್ಣು ಮಕ್ಕಳು ತಮ್ಮ ಪ್ರಾಣ ಮತ್ತು ಮಾನ ರಕ್ಷಣೆಗೆ ಕರಾಟೆಯನ್ನು ಕಲಿಸಲು ಸರ್ಕಾರವೇ ಮುಂದಾಗಿದೆ. ಹಾಗಾಗಿ ಎಲ್ಲಾ ಹೆಣ್ಣು ಮಕ್ಕಳು ಇದನ್ನು ಕಲಿತು ಸಬಲರಾಗಬೇಕು. ಕರಾಟೆ, ಶೂಟಿಂಗ್ ಸೇರಿದಂತೆ ಒಳಾಂಗಣ ಕ್ರೀಡೆಗಳ ಅಭ್ಯಾಸಕ್ಕೆ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಭ್ಯಾಸಕ್ಕೆ ಅವಕಾಶ ಕಲ್ಪಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ | ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿ; ಅರ್ಹತಾ ಸುತ್ತಿನ ಅಂತಿಮ ಹಣಾಹಣಿಗೆ ಅಗ್ರ ಆಟಗಾರರ ಲಗ್ಗೆ
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ,ಸ್ವಯಂ ರಕ್ಷಣೆಯ ಕಲೆಯಾದ ಕರಾಟೆಯನ್ನು ಪ್ರತಿಯೊಬ್ಬರು ಕಲಿತು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಹರಿಯಾಣ, ಚಂಡೀಘಡ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ 11 ರಾಜ್ಯಗಳ ಸುಮಾರು 1500ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಕತಾ ಮತ್ತು ಕುಮಿತೆಯಲ್ಲಿ ಪ್ರದರ್ಶನ ನೀಡಿದರು.