ಕಲಬುರಗಿಯಲ್ಲಿ ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿ; ಅರ್ಹತಾ ಸುತ್ತಿನ ಅಂತಿಮ ಹಣಾಹಣಿಗೆ ಅಗ್ರ ಆಟಗಾರರ ಲಗ್ಗೆ
ITF Kalaburagi Open: ಕಲಬುರಗಿ ಓಪನ್ 2023 ಪುರುಷ ಟೆನಿಸ್ ಕ್ರೀಡಾಕೂಟದ ಅರ್ಹತಾ ಪಂದ್ಯಗಳು ಕಲಬುರಗಿ ನಗರದಲ್ಲಿ ಆರಂಭಗೊಂಡಿದೆ.
ಕಲಬುರಗಿ: ಅಲ್ಟ್ರಾಟೆಕ್ ಐಟಿಎಫ್ ಕಲಬುರಗಿ ಓಪನ್-2023 ಪುರುಷ ಟೆನಿಸ್ ಕ್ರೀಡಾಕೂಟದ ಅರ್ಹತಾ ಪಂದ್ಯಗಳು ನವೆಂಬರ್ 26ರ ಭಾನುವಾರ ಆರಂಭಗೊಂಡಿದೆ. ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯುತ್ತಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.
ಟೂರ್ನಿಯ ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಎಲ್ಲ ಆಟಗಾರರು ಸುಲಭ ಜಯದೊಂದಿಗೆ ಎರಡನೇ ಸುತ್ತಿಗೆ ಪ್ರವೇಶ ಪಡೆದರು.
ಅರ್ಹತಾ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಭರತ್ ನಿಶೋಕ್ ಕುಮಾರನ್, ಎರಡನೇ ಶ್ರೇಯಾಂಕದ ರಿಷಿ ರೆಡ್ಡಿ ಮತ್ತು 3ನೇ ಶ್ರೇಯಾಂಕದ ಶಿವಾಂಕ್ ಭಟ್ನಾಗರ್ ಅವರು ತಮ್ಮ ಮೊದಲ ಸುತ್ತಿನಲ್ಲಿ ಬೈ ಪಡೆದರು. ಅಂತಾರಾಷ್ಟ್ರೀಯ ಆಟಗಾರರ ಪೈಕಿ ನೇಪಾಳದ ಅಭಿಷೇಕ್ ಬಸ್ತೋಲಾ ಮತ್ತು ವಿಯೆಟ್ನಾಂನ ಹಾ ಮಿನ್ಹ್ ಡಕ್ ವು ಸೋಮವಾರ ನಡೆಯಲಿರುವ ಅರ್ಹತಾ ಸುತ್ತಿನ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.
ಅರ್ಹತಾ ಪಂದ್ಯಗಳ ಮೊದಲನೇ ಸುತ್ತಿನ ಪಂದ್ಯಗಳ ಫಲಿತಾಂಶಗಳು
ನೇಪಾಳದ ಅಭಿಷೇಕ್ ಬಸ್ತೋಲಾ ಅವರು ಭಾರತದ ರವಿ ಪನ್ಹಾಲ್ಕರ್ ಅವರನ್ನು 6-0, 6-0 ಅಂತರದಿಂದ ಸೋಲಿಸಿದರು. ಇದೇ ವೇಳೆ ಆರ್ಯನ್ ಶಾ ಅವರು ಸಾರ್ಥಕ್ ಸುಡೆನ್ ವಿರುದ್ಧ 6-2, 4-6, 10-7 ಅಂತರದಿಂದ ಜಯ ಗಳಿಸಿದರು. ಅರ್ಜುನ್ ಮಹಾದೇವನ್ ಅವರು ಕಲಬುರಗಿಯ ಈಶಾನ್ ಖದೀರ್ ಅವರನ್ನು 6-0, 6-0; ಪಾರ್ಥ್ ಅಗರ್ವಾಲ್ ಅವರು ದೀಪಕ್ ಅನಂತರಾಮು ಅವರನ್ನು 7-6 (3), 6-2; ಅಜಯ್ ಮಲಿಕ್ ಅವತು ತರುಣ್ ಕರ್ರಾ ಅವರನ್ನು 6-3, 7-5; ಓಗೆಸ್ ಥೇಜೊ ಜಯ ಪ್ರಕಾಶ್ ಅವರು ಲೋಹಿತಾಕ್ಷ ಬತ್ರಿನಾಥ್ ವಿರುದ್ಧ 4-6, 6-1, 10-4; ಮುನಿ ಅನಂತ್ ಮಣಿ ಅವರು ರಿಷಿತ್ ದಖಾನೆ ವಿರುದ್ಧ 6-4, 6-3; ಯಶ್ ಚೌರಾಸಿಯಾ ಅವರು ಅನುರಾಗ್ ಅಗರ್ವಾಲ್ ವಿರುದ್ಧ (ವಾಕ್ ಓವರ್); ಯಶ್ ಯಾದವ್ ಅವರು ಅನುಜ್ ಮಾನ್ ವಿರುದ್ಧ 6-1, 6-2; ವಿಯಟ್ನಾಂನ ಹಾ ಮಿನ್ಹ್ ಡಕ್ ವು ಅವರು ಭಾರತದ ಮೋಹನ್ ಕುಮಾರ್ ಕನಿಕೆ ವಿರುದ್ಧ 6-0, 6-0; ಸಂದೇಶ್ ದತ್ತಾತ್ರೇಯ ಕುರಾಲೆ ಅವರು ಮಾನವ್ ಜೈನ್ ವಿರುದ್ಧ 6-4, 6-3; ತುಷಾರ್ ಮದನ್ ಅವರು ಆದಿತ್ಯ ವರ್ಧನ್ ದುದ್ದುಪುಡಿ ವಿರುದ್ಧ 6-4, 6-1; ಭಾರತದ ಧ್ರುವ್ ಹಿರ್ಪಾರಾ ಅವರು ಬಿಕ್ರಮಜೀತ್ ಸಿಂಗ್ ಚಾವ್ಲಾ (ಯುಎಸ್ಎ) ಅವರನ್ನು 6-3, 7-6 ಅಂತರದಿಂದ ಮಣಿಸಿ ಅಂತಿಮ ಅರ್ಹತಾ ಸುತ್ತಿನ ಪಂದ್ಯಕ್ಕೆ ಮುನ್ನಡೆ ಸಾಧಿಸಿದ್ದಾರೆ.
ಐದನೇ ಬಾರಿಗೆ ಅಂತಾರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗೆ ಕಲಬುರಗಿ ಆತಿಥ್ಯ ವಹಿಸುತ್ತಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಟೆನಿಸ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಮೊದಲ ಸುತ್ತಿನ ಅರ್ಹತಾ ಪಂದ್ಯಗಳು ಭಾನುವಾರ ಮತ್ತು ಅಂತಿಮ ಅರ್ಹತಾ ಸುತ್ತಿನ ಪಂದ್ಯಗಳು ಸೋಮವಾರ ನಿಗದಿಪಡಿಸಲಾಗಿದೆ. ಅರ್ಹತಾ ಸುತ್ತಿನ ಎಂಟು ಆಟಗಾರರು ಮಂಗಳವಾರ ಆರಂಭವಾಗಲಿರುವ ಪ್ರಧಾನ ಸುತ್ತಿಗೆ ಅರ್ಹತೆ ಪಡೆಯಲಿದ್ದಾರೆ. ಟೆನಿಸ್ ಉತ್ಸಾಹಿಗಳಿಗೆ ವಿಶ್ವ ದರ್ಜೆಯ ಪಂದ್ಯಗಳ ರೋಚಕತೆ ಉಣಬಡಿಸುವ ಮುಖ್ಯ ಡ್ರಾ ಪ್ರಕ್ರಿಯೆಯು ಮಂಗಳವಾರ ಪ್ರಾರಂಭವಾಗಲಿದೆ.
ಅಂತಾರಾಷ್ಟ್ರೀಯ ಟೆನಿಸ್ ರಂಗದಲ್ಲಿ ಛಾಪು ಮೂಡಿಸಲು ಉದಯೋನ್ಮುಖ ಪ್ರತಿಭೆಗಳಿಗೆ ಈ ಪಂದ್ಯಾವಳಿಯು ಮಹತ್ವದ ವೇದಿಕೆಯಾಗಿದೆ. ಅರ್ಹತಾ ಸುತ್ತುಗಳು ತೀವ್ರ ಪೈಪೋಟಿಯನ್ನು ಒಳಗೊಂಡಿರುತ್ತವೆ. ಆಟಗಾರರು ಮುಖ್ಯ ಡ್ರಾದಲ್ಲಿ ಎಂಟು ಅಪೇಕ್ಷಿತ ಸ್ಥಾನಗಳಲ್ಲಿ ಒಂದನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.