ಮುಂದಿನ ಸಲ ನಿಮ್ಮನ್ನು ತಲೆ ಎತ್ತಿ ಹೆಮ್ಮೆಯಿಂದ ಇರುವಂತೆ ಮಾಡುತ್ತೇವೆ; ಬೆಂಗಳೂರು ಬುಲ್ಸ್ ಸಿಇಒ ಕೀರ್ತಿ ಭರವಸೆಯ ಮಾತು
Feb 24, 2024 12:16 PM IST
ಬೆಂಗಳೂರು ಬುಲ್ಸ್ ಸಿಇಒ ಕೀರ್ತಿ ಭರವಸೆಯ ಮಾತು
- Bengaluru Bulls : ಪ್ರೊ ಕಬಡ್ಡಿ ಲೀಗ್ ಪ್ಲೇ ಆಫ್ಗೆ ಪ್ರವೇಶಿಸಿದ ಹಿನ್ನೆಲೆ ಅಭಿಮಾನಿಗಳಿಗಾಗಿ ಬೆಂಗಳೂರು ಬುಲ್ಸ್ ಸಿಇಒ ಕೀರ್ತಿ ಮುರಳೀಕೃಷ್ಣನ್ ಅವರು ಭರವಸೆಯ ಸಂದೇಶ ರವಾನಿಸಿದ್ದಾರೆ.
ಪ್ರೊ ಕಬಡ್ಡಿ ಲೀಗ್-10 (PKL 2024) ಮುಕ್ತಾಯದ ಹಂತಕ್ಕೆ ತಲುಪಿದೆ. ಮೂರು ತಿಂಗಳ ನಾನ್ಸ್ಟಾಪ್ ಮನರಂಜನೆಗೆ ಮಾರ್ಚ್ 1ಕ್ಕೆ ತೆರೆ ಬೀಳಲಿದೆ. ಪ್ಲೇ ಆಫ್ಗೆ ಆರು ತಂಡಗಳು ಪ್ರವೇಶಿಸಿದ್ದು ಟ್ರೋಫಿಗಾಗಿ ಕಾದಾಟ ನಡೆಸಲಿವೆ. ಸದ್ಯ ಎರಡು ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶ ಮಾಡಿವೆ. ಉಳಿದ 4 ತಂಡಗಳು ಎಲಿಮಿನೇಟರ್ ಪಂದ್ಯದ ಮೂಲಕ ಸೆಮೀಸ್ಗೆ ಅರ್ಹತೆ ಪಡೆಯಲಿವೆ. ಆದರೆ ಬೆಂಗಳೂರು ಬುಲ್ಸ್ ತಂಡ (Bengaluru bulls) ಪ್ಲೇ ಆಫ್ಗೆ ಕ್ವಾಲಿಫೈ ಆಗದೆ ಇರುವುದು ಕನ್ನಡಿಗರನ್ನು ಹೆಚ್ಚು ಕಾಡುವಂತೆ ಮಾಡಿದೆ.
ಫೆಬ್ರವರಿ 21ರಂದು ನಡೆದ ಲೀಗ್ನ ಹಾಗೂ ತನ್ನ ಕೊನೆ ಪಂದ್ಯದಲ್ಲಿ ಗೆದ್ದು ಬೀಗಿದ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಅಭಿಮಾನಿಗಳು ಇಟ್ಟುಕೊಂಡಿದ್ದ ನಿರೀಕ್ಷೆ ಮಣ್ಣು ಪಾಲಾಯಿತು. ಘಟಾನುಘಟಿ ಆಟಗಾರರೇ ಇದ್ದರೂ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಇದು ಬೆಂಗಳೂರು ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತು. ಸದ್ಯ ಬುಲ್ಸ್ ತಂಡದ ಸಿಇಒ ಕೀರ್ತಿ ಮುರಳೀಕೃಷ್ಣನ್ ಅವರು ಫ್ಯಾನ್ಸ್ಗೆ ಧನ್ಯವಾದ ತಿಳಿಸಿದ್ದು, ಮುಂದಿನ ಸಲ ಕಂಬ್ಯಾಕ್ ಮಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳಿಗೆ ನಾವು ಎಂದೆಂದಿಗು ಚಿರಋಣಿ ಎಂದ ಸಿಇಒ
ಕೀರ್ತಿ ಮುರಳೀಕೃಷ್ಣನ್ ಅವರು ಧನ್ಯವಾದ ಸಲ್ಲಿಸಿರುವ ಪೋಸ್ಟ್ ಅನ್ನು ಬೆಂಗಳೂರು ಬುಲ್ಸ್ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ‘ನಮ್ಮ ಅಭಿಮಾನಿಗಳಿಗೆ ನಾವು ಎಂದೆಂದಿಗೂ ಚಿರಋಣಿ. ಈ ಸೀಸನ್ ನಮಗೆ ಅಂದುಕೊಂಡ ಫಲಿತಾಂಶ ದೊರಕದಿದ್ದರೂ ನಮ್ಮ ದೃಢ ವಿಶ್ವಾಸ ಅಚಲ. ಮುಂದಿನ ಸೀಸನ್ ಇನ್ನೂ ಬಲಿಷ್ಠವಾಗಿ ಮರಳುತ್ತೇವೆ. ನಿಮ್ಮನ್ನು ತಲೆ ಎತ್ತಿ ಹೆಮ್ಮೆಯಿಂದ ಇರುವಂತೆ ಮಾಡುತ್ತೇವೆ. ಮೇಲು-ಬೀಳುಗಳ ನಡುವೆಯ ಈ ನಿಮ್ಮ ಬೆಂಬಲಕ್ಕಿಂತ ಮಿಗಿಲಾದು ನಮಗೇನಿಲ್ಲ. ನಮ್ಮ ಬುಲ್ಸ್ ಸೇನೆಗಾಗಿ ನಾವು ಮತ್ತೆ ಬಂದು ಹೋರಾಡುತ್ತೇವೆ ಎಂದು ಕೀರ್ತಿ, ಅಭಿಮಾನಿಗಳಿಗೆ ಭರವಸೆ ಕೊಟ್ಟಿದ್ದಾರೆ.
ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿ
ಬೆಂಗಳೂರು ಬುಲ್ಸ್ ಟೂರ್ನಿ ಆರಂಭಕ್ಕೂ ಮುನ್ನವೇ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಲೀಗ್ ಆರಂಭದಲ್ಲೇ ಸತತ ಸೋಲುಗಳಿಂದ ಅಭಿಮಾನಿಗಳನ್ನು ನಿರಾಸೆಗೊಳಿಸಿತು. ಒಂದು ಹಂತದಲ್ಲಿ ಸತತ ಗೆಲುವು ದಾಖಲಿಸಿ ಪ್ಲೇ ಆಫ್ ಪ್ರವೇಶಿಸುವ ಭರವಸೆ ಮೂಡಿಸಿತ್ತು. ಆದರೆ, ಮತ್ತೆ ಸೋಲಿನ ಹಳಿಗೆ ಮರಳಿ ಪ್ಲೇ ಆಫ್ರೇಸ್ನಿಂದ ಹೊರ ಬಿತ್ತು. ಲೀಗ್ನ ಕೊನೆಯ ಪಂದ್ಯದಲ್ಲಿ ಜಯದ ನಗೆ ಬೀರಿದ ಬೆಂಗಳೂರು ಒಟ್ಟಾರೆ 22 ಪಂದ್ಯಗಳಲ್ಲಿ 8 ಗೆಲುವು, 12 ಸೋಲು, 2 ಟೈ ಆಯಿತು. ಒಟ್ಟು 53 ಅಂಕ ಪಡೆದು ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ತೃಪ್ತಿ ಪಡೆಯಿತು.
ಪ್ಲೇ ಆಫ್ ಪ್ರವೇಶಿಸಿರುವ ಟಾಪ್-6 ತಂಡಗಳು
1. ಪುಣೇರಿ ಪಲ್ಟನ್ - 22 ಪಂದ್ಯ, 17 ಗೆಲುವು, 2 ಸೋಲು, 3 ಟೈ, 96 ಅಂಕ
2. ಜೈಪುರ ಪಿಂಕ್ ಪ್ಯಾಂಥರ್ಸ್ - 22 ಪಂದ್ಯ, 16 ಗೆಲುವು, 3, ಸೋಲು, 3 ಟೈ, 92 ಅಂಕ
3. ದಬಾಂಗ್ ಡೆಲ್ಲಿ - 22 ಪಂದ್ಯ, 13 ಗೆಲುವು, 6 ಸೋಲು, 3 ಟೈ, 79 ಅಂಕ.
4. ಗುಜರಾತ್ ಜೈಂಟ್ಸ್ - 22 ಪಂದ್ಯ, 13 ಗೆಲುವು, 9 ಸೋಲು, 70 ಅಂಕ
5. ಹರಿಯಾಣ ಸ್ಟೀಲರ್ಸ್ - 22 ಪಂದ್ಯ, 13 ಗೆಲುವು, 8 ಸೋಲು, 1 ಟೈ, 70 ಅಂಕ
6. ಪಾಟ್ನಾ ಪೈರೇಟ್ಸ್ - 22 ಪಂದ್ಯ, 11 ಗೆಲುವು, 8 ಗೆಲುವು, 3 ಟೈ, 69 ಅಂಕ.