logo
ಕನ್ನಡ ಸುದ್ದಿ  /  ಕ್ರೀಡೆ  /  ಗಾಳಿಯಲ್ಲಿ ಸರ್ಫಿಂಗ್! ಒಲಿಂಪಿಕ್ ಫೋಟೊ ಜರ್ನಲಿಸ್ಟ್ ಬ್ರೌಲೆಟ್ ಕ್ಲಿಕ್‌ಗೆ ಮೆಚ್ಚಿದ ಜಗತ್ತು; ವೈರಲ್ ಫೋಟೊ ಹಿಂದಿನ ಕಥೆ ಇದು

ಗಾಳಿಯಲ್ಲಿ ಸರ್ಫಿಂಗ್! ಒಲಿಂಪಿಕ್ ಫೋಟೊ ಜರ್ನಲಿಸ್ಟ್ ಬ್ರೌಲೆಟ್ ಕ್ಲಿಕ್‌ಗೆ ಮೆಚ್ಚಿದ ಜಗತ್ತು; ವೈರಲ್ ಫೋಟೊ ಹಿಂದಿನ ಕಥೆ ಇದು

Jayaraj HT Kannada

Aug 01, 2024 08:00 PM IST

google News

ಗಾಳಿಯಲ್ಲಿ ಸರ್ಫಿಂಗ್! ಒಲಿಂಪಿಕ್ ಫೋಟೊ ಜರ್ನಲಿಸ್ಟ್ ಬ್ರೌಲೆಟ್ ಕ್ಲಿಕ್‌ಗೆ ಮೆಚ್ಚಿದ ಜಗತ್ತು

    • ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಫೋಟೋ ಜರ್ನಲಿಸ್ಟ್ ಬ್ರೌಲೆಟ್ ಈ ಫೋಟೋ ಸೆರೆಹಿಡಿದಿದ್ದಾರೆ. ಬ್ರೆಜಿಲ್‌ನ ಸರ್ಫರ್ ಗೇಬ್ರಿಯಲ್ ಮೆಡಿನಾ ಅವರು ಸಮುದ್ರದ ಮಧ್ಯಭಾಗದಲ್ಲಿ ಗಾಳಿಯಲ್ಲಿ ತೇಲುತ್ತಿದ್ದಾಗ, ಬ್ರೌಲೆಟ್ ಅವರು ಈ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಚಿತ್ರ ಜಾಗತಿಕ ಮಟ್ಟದಲ್ಲಿ ವೈರಲ್‌ ಆಗಿದೆ.
ಗಾಳಿಯಲ್ಲಿ ಸರ್ಫಿಂಗ್! ಒಲಿಂಪಿಕ್ ಫೋಟೊ ಜರ್ನಲಿಸ್ಟ್ ಬ್ರೌಲೆಟ್ ಕ್ಲಿಕ್‌ಗೆ ಮೆಚ್ಚಿದ ಜಗತ್ತು
ಗಾಳಿಯಲ್ಲಿ ಸರ್ಫಿಂಗ್! ಒಲಿಂಪಿಕ್ ಫೋಟೊ ಜರ್ನಲಿಸ್ಟ್ ಬ್ರೌಲೆಟ್ ಕ್ಲಿಕ್‌ಗೆ ಮೆಚ್ಚಿದ ಜಗತ್ತು (Jerome Brouillet, AFP)

ಚತುವಾರ್ಷಿಕ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ ಆಡಬೇಕು ಎಂಬುದು ಆಟಗಾರರ ಆಸೆ-ಕನಸು. ಜಗತ್ತಿನ ಅತಿ ದೊಡ್ಡ ಕ್ರೀಡಾಹಬ್ಬದಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಸಾಧನೆ. ಆಟಗಾರರು ಭಾಗವಹಿಸುವ ಗುರಿ ಇಟ್ಟುಕೊಂಡರೆ; ಅತ್ತ ಪತ್ರಕರ್ತರು, ಫೋಟೋ ಜರ್ನಲಿಸ್ಟ್‌ಗಳಿಗೆ ಒಲಿಂಪಿಕ್ಸ್‌ ಅನ್ನು ಕವರ್‌ ಮಾಡಬೇಕೆಂಬ ಇರಾದೆಯಿರುತ್ತದೆ. ಆದರೆ, ಕೆಲವೊಬ್ಬರಿಗೆ ಮಾತ್ರ ಈ ಅವಕಾಶ ಸಿಗುತ್ತದೆ. ಒಲಂಪಿಕ್ ಕ್ರೀಡಾಕೂಟದಲ್ಲಿ ಫೋಟೊಗ್ರಫಿಗೆ ಅವಕಾಶ ಸಿಗುವ ಎಲ್ಲಾ ಫೋಟೋಗ್ರಾಫರ್‌ಗಳಿಗೂ ತಾವು ಬಯಸಿದ ಅಥವಾ ನಿರೀಕ್ಷೆಯಂತಹ ಫೋಟೋಗಳನ್ನು ಸೆರೆಹಿಡಿಯಲು ಸಾಧ್ಯವಾಗದೆ ಇರಬಹುದು. ಒಂದು ವೇಳೆ ‌'ಪರ್ಫೆಕ್ಟ್' ಎನ್ನುವಂಥ ಫೋಟೋ ತಮ್ಮ ಕ್ಯಾಮೆರಾದಲ್ಲಿ ಸೆರೆಹೆಡಿಯಲು ಸಾಧ್ಯವಾದರೆ ಅದು ಅವರ ಜೀವನದಲ್ಲಿ ಎಂದಿಗೂ ನೆನಪಿರುವ ಚಿತ್ರವಾಗಲಿದೆ. ಈ ಬಾರಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಫ್ರೆಂಚ್‌ ಛಾಯಾಗ್ರಾಹಕರೊಬ್ಬರು ಅಮೋಘ ಚಿತ್ರವೊಂದನ್ನು ಸೆರೆಹಿಡಿದಿದ್ದಾರೆ.

ಈ ಚಿತ್ರ ನೋಡಿ. ಸರ್ಫಿಂಗ್‌ ಆಟಗಾರ (ಬ್ರೆಜಿಲ್‌ನ ಗೇಬ್ರಿಯಲ್ ಮೆಡಿನಾ) ನೀರನ್ನು ಬಿಟ್ಟು ಗಾಳಿಯಲ್ಲಿ ಹಾರುತ್ತಿರುವಂತೆ ಕಾಣುತ್ತಿದ್ದಾರೆ. ಸಮುದ್ರದಲ್ಲಿ ಭಾರಿ ಅಲೆಯಿಂದಾಗಿ ಮೇಲಕ್ಕೆ ಚಿಮ್ಮಿದ ಸರ್ಫರ್‌ ಗಾಳಿಯಲ್ಲಿ ಹಾರಿದಂತಾಗಿದ್ದಾರೆ. ಇದೇ ವೇಳೆ ಅವರ ಬೋಟ್‌ ಮತ್ತೊಂದು ಕಡೆ ಗಾಳಿಯಲ್ಲಿ ಹಾರುತ್ತಿದೆ. ಇಂಥಾ ಅಪರೂಪದ ಚಿತ್ರವನ್ನು ಕ್ಲಿಕ್‌ ಮಾಡಿದವರೇ ಜೆರೋಮ್ ಬ್ರೌಲೆಟ್.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 3ನೇ ದಿನದಂದು ಫ್ರೆಂಚ್ ಫೋಟೋ ಜರ್ನಲಿಸ್ಟ್ ಬ್ರೌಲೆಟ್ ಈ ಫೋಟೋ ಸೆರೆಹಿಡಿದಿದ್ದಾರೆ. ಬ್ರೆಜಿಲ್‌ನ ಸರ್ಫರ್ ಗೇಬ್ರಿಯಲ್ ಮೆಡಿನಾ ಅವರು ಸಮುದ್ರದ ಮಧ್ಯಭಾಗದಲ್ಲಿ ಗಾಳಿಯಲ್ಲಿ ತೇಲುತ್ತಿದ್ದಾಗ, ಬ್ರೌಲೆಟ್ ಅವರು ಈ ಫೋಟೋ ಕ್ಲಿಕ್ಕಿಸಿದ್ದಾರೆ. ಸದ್ಯ ಪ್ಯಾರಿಸ್‌ ಕ್ರೀಡಾಕೂಟದಲ್ಲಿ ಈ ಚಿತ್ರ ಭಾರಿ ಗಮನ ಸೆಳೆದಿದೆ.

ಫೋಟೋಗ್ರಫಿ ಎಲ್ಲರೂ ಮಾಡಬಹುದು. ಕೇವಲ ಅಪರ್ಚರ್‌, ಶಟರ್‌ ಸ್ಪೀಡ್‌ ಸೆಟ್‌ ಮಾಡಿಕೊಂಡು ಫೋಟೋ ಕ್ಲಿಕ್ ಮಾಡಲು ಹೋದರೆ ನಿರೀಕ್ಷಿತ ಫಲಿತಾಂಶ ಸಿಗದು. ಫೋಟೋಗ್ರಫಿ ಒಂದು ಕಲೆ. ಸರಿಯಾದ ಫ್ರೇಮಿಂಗ್‌ ಬರಲು ತಾಳ್ಮೆ ಬೇಕು. ಟೈಮಿಂಗ್‌ ಕೂಡಾ ತುಂಬಾ ಮುಖ್ಯ. ಮುಖ್ಯವಾಗಿ ಕ್ರೀಡೆಯಂಥಾ ಆಕ್ಷನ್‌ ಫೊಟೋಗ್ರಫಿ ಸಮಯದಲ್ಲಿ ಹತ್ತಾರು ಫೋಟೊ ಕ್ಲಿಕ್‌ ಮಾಡಿದಾಗ ಕೆಲವೊಂದು ಫೋಟೋ ಮಾತ್ರ ಛಾಯಾಗ್ರಾಹಕನಿಗೆ ಸಮಾಧಾನ ತರಿಸಬಹುದು. ಹೀಗಾಗಿಯೇ ನಿಖರ ಫ್ರೇಮಿಂಗ್‌, ಟೈಮಿಂಗ್‌ ಜೊತೆಗೆ ತಾಳ್ಮೆಯಿಂದ ಕಾದು ಫೋಟೊ ಕ್ಲಿಕ್‌ ಮಾಡಬೇಕಾಗುತ್ತದೆ.

ಜಾಗತಿಕ ಗಮನ ಸೆಳೆದಿರುವುದಕ್ಕೆ ಬ್ರೌಲೆಟ್ ಖುಷಿ

ತಮ್ಮ ಅದ್ಭುತ ಫೋಟೋಗ್ರಫಿ ಕುರಿತು ಮಾತನಾಡಿರುವ ಬ್ರೌಲೆಟ್, ತಾವು ಕ್ಲಿಕ್ಕಿಸಿದ ಛಾಯಾಚಿತ್ರವು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ 'ಟೈಮ್‌' ಜೊತೆಗೆ ಮಾತನಾಡಿರುವ ಅವರು, “ನಿಜ ಹೇಳಬೇಕೆಂದರೆ ಹವಾಮಾನ, ಸಮುದ್ರದ ಅಲೆಗಳು, ಬೆಳಕಿನ ಜೊತೆಗೆ ಕ್ಯಾಮೆರಾವನ್ನು ಬಳಸುವುದು ಹೇಗೆ ಎಂಬುದು ತಿಳಿದಿದ್ದರೆ ಸರ್ಫಿಂಗ್‌ನ ಉತ್ತಮ ಚಿತ್ರಗಳನ್ನು ತೆಗೆದುಕೊಳ್ಳಬಹುದು,” ಎಂದು ಹೇಳಿದ್ದಾರೆ.

ಅನುಭವದೊಂದಿಗೆ ಅದೃಷ್ಟವೂ ಬೇಕು

ನೀರಿನಲ್ಲಿ ನಡೆಯುವ ಸರ್ಫಿಂಗ್ ಈವೆಂಟ್‌ಗಳ ಫೋಟೋಗ್ರಫಿಗಾಗಿ ಮಾಧ್ಯಮಗಳಿಗಾಗಿ ಎರಡು ದೋಣಿಗಳಿರುತ್ತವೆ. ಹೀಗಾಗಿ ತಾವು ಇರುವ ದೋಣಿಯನ್ನು ಅದರ ಚಾಲಕ ಸರಿಯಾಗಿ ನಡೆಸಿದರೆ ಫೋಟೋ ಸರಿಯಾಗಿ ಬರುತ್ತದೆ ಎಂದು ತಿಳಿಸಿದ್ದಾರೆ. “ಉಳಿದಂತೆ ಅನುಭವ, ಸಮಯ ಮತ್ತು ಸ್ವಲ್ಪ ಅದೃಷ್ಟವೂ ಬೇಕು,” ಎಂದು ಫೋಟೊ ಜರ್ನಲಿಸ್ಟ್‌ ಹೇಳಿದ್ದಾರೆ. ಕವರೇಜ್‌ ಮಾಡುವ ಎಲ್ಲಾ ಛಾಯಾಗ್ರಾಹಕರು ಪ್ರತಿ ಸೆಕೆಂಡಿಗೆ 20ಕ್ಕೂ ಹೆಚ್ಚು ಚಿತ್ರಗಳನ್ನು ಸೆರೆಹಿಡಿಯುತ್ತಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಫೋಟೋ ಜರ್ನಲಿಸ್ಟ್‌ ಜೆರೋಮ್ ಬ್ರೌಲೆಟ್

ಬ್ರೌಲೆಟ್ ಅವರು ಫೋಟೋ ಜರ್ನಲಿಸ್ಟ್‌ ಆಗಿ ಹಲವಾರು ವರ್ಷಗಳಿಂದ ಸುದ್ದಿಸಂಸ್ಥೆ AFPಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬ್ರೌಲೆಟ್ ಅವರು ಕೂಡಾ ಒಬ್ಬ ಸರ್ಫರ್. ಹೀಗಾಗಿ ಕ್ರೀಡೆಯ ಕುರಿತು ಅವರಿಗೆ ಚೆನ್ನಾಗಿ ಗೊತ್ತಿದೆ. ಒಲಿಂಪಿಕ್ ಕ್ರೀಡಾಕೂಟದ ಉತ್ಸಾಹವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಅವರು ಈಗ ತಮ್ಮ ಕ್ಯಾಮೆರಾದಲ್ಲೂ ಸೆರೆಹಿಡಿಯುತ್ತಿದ್ದಾರೆ. ಫೋಟೋಗ್ರಫಿಯಲ್ಲಿ ಆಸಕ್ತಿಯೊಂದಿಗೆ ಅದೊಂದು ಪ್ಯಾಶನ್‌ ಆಗಿ ಇದ್ದರೆ ಮಾತ್ರ, ಸಮುದ್ರದ ಅಲೆಗಳ ನಡುವೆ ನಡೆಯುವ ಸರ್ಫಿಂಗ್‌ನಂಥಾ ಫೋಟೋಗ್ರಫಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ